ತರಕಾರಿ, ಸೊಪ್ಪು ನೀಡುವ ಶರ್ಮಾ ಸರ್ – ಮಂಜುನಾಥ ಅಮಲಗೊಂದಿ
ಮಕ್ಕಳ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದಂತಹ ಮಹನೀಯರಲ್ಲಿ ವಾಸುದೇವ ಶರ್ಮಾ ರವರು ಮೊದಲ ಪಂಕ್ತಿಯಲ್ಲಿ ನಿಲ್ಲುವರೆಂಬ ಭಾವನೆ ನನ್ನಲ್ಲಿದೆ. ನಾನು ಸ್ನಾತಕೋತ್ತರ ಸಮಾಜಕಾರ್ಯ ಅಧ್ಯಯನ ಮಾಡುವಾಗ ಕ್ಷೇತ್ರ ಕಾರ್ಯಕ್ಕಾಗಿ ಸಿ ಆರ್ ಟಿ ಸಂಸ್ಥೆಯ ಕಚೇರಿಗೆ ಭೇಟಿ ನೀಡಿದ್ದೆ. ಈ ಸಂದರ್ಭದಲ್ಲಿ ಸರ್ ಅವರು ಚೇಂಬರಲ್ಲಿ ಕುಳಿತಿದ್ದನ್ನು ಹೊರಗಡೆಯಿಂದ ನೋಡಿದ್ದು ಮೊದಲ ಭೇಟಿಯಾಗಿತ್ತು. ಆದರೆ ದುರಾದೃಷ್ಟಕ್ಕೆ ನನ್ನ ಕ್ಷೇತ್ರಕಾರ್ಯ ಸಿ ಆರ್ ಟಿ ಸಂಸ್ಥೆಯಲ್ಲಿ ಮಾಡುವುದಕ್ಕೆ ಸಾಧ್ಯವಾಗಲಿಲ್ಲ. ಹಾಗಾಗಿ ಅವರ ಸಂಪರ್ಕ ಮಾಡುವುದಕ್ಕೆ ಮತ್ತೆ ತಡ ಆಗಿತ್ತು. ಸಿಆರ್ಟಿ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿದ್ದ ಸ್ನೇಹಿತರಾದ ಸತ್ಯನಾರಾಯಣ್ ರವರು ಶರ್ಮಾ ಸರ್ ಬಗ್ಗೆ ಆಗಾಗ ಮಾತನಾಡುತ್ತಿದ್ದರು. ಆದರೆ ಅವರನ್ನು ಮಾತನಾಡಿಸುವ ಸುಸಂದರ್ಭ ಶೀಘ್ರದಲ್ಲಿ ಮತ್ತೆ ದೊರೆಯಲೇ ಇಲ್ಲ. ಒಮ್ಮೆ ಸಿಎಂಸಿಎ ಸಂಸ್ಥೆಯಲ್ಲಿ ನಾನು ಕಾರ್ಯ ನಿರ್ವಹಿಸುತ್ತಿದ್ದಾಗ ನಮ್ಮ ವಾಲೆಂಟೀಯರ್ಸ್ ಗಳಿಗೆ ಮಕ್ಕಳ ಹಕ್ಕುಗಳ ಬಗ್ಗೆ ಎರಡು ದಿನಗಳ ಕಾರ್ಯಗಾರ ಮಾಡಬೇಕೆಂದು ನಿರ್ಧರಿಸಲಾಯಿತು. ಆಗ ಡಾ. ತಿಪ್ಪೇಸ್ವಾಮಿ ಕೆ. ಟಿ. ರವರೊಂದಿಗೆ ಸಂಪರ್ಕಿಸಿ ಕಾರ್ಯಾಗಾರವನ್ನು ಯಶಸ್ವಿಗೊಳಿಸಲಾಯಿತು. ಆನಂತರ ಶರ್ಮಾ ಸರ್ ಅವರು ನಮ್ಮೊಂದಿಗೆ ನಿಕಟ ಸಂಪರ್ಕವನ್ನು ಮುಂದುವರಿಸಿದರು.
ಡಾ. ಪದ್ಮಿನಿ ಮಕ್ಕಳ ಫೆಲೋಶಿಪ್ ನ ಮೊದಲ ವರ್ಷ 2023 ರಲ್ಲಿ ನಾನು ಅರ್ಜಿ ಸಲ್ಲಿಸಿ ಫೆಲೋ ಆಗಿ ಕಾರ್ಯ ನಿರ್ವಹಿಸಲು ಪ್ರಾರಂಭಿಸಿದೆ. ಒಂದು ವರ್ಷದಲ್ಲಿ ಅವರ ಮಾರ್ಗದರ್ಶನ ಸಲಹೆ ಸೂಚನೆಗಳು ಸಮುದಾಯದಲ್ಲಿ ಕೆಲಸ ಮಾಡಲು ಸಹಕಾರಿಯಾಯಿತು. ಸುಸ್ಥಿರ ಅಭಿವೃದ್ಧಿ ಗುರಿಗಳ ಬಗ್ಗೆ ಅವರು ವಿವರಿಸುವುದು ನನಗೆ ತುಂಬಾ ಇಷ್ಟವಾಗುತ್ತದೆ. ಸಮ ಸಮಾಜದ ನಿರ್ಮಾಣದಲ್ಲಿ ಒಬ್ಬ ಪ್ರಜೆಯ ಪಾತ್ರ ಏನೆಂಬುದನ್ನು ಸರಳವಾಗಿ ಅರ್ಥೈಸುವುದನ್ನು ನಾನು ಅವರಲ್ಲಿ ಕಂಡಿದ್ದೇನೆ. ಅವರ ಪರಿಸರದ ಬಗೆಗಿನ ಕಾಳಜಿ ನನಗೆ ಪ್ರೇರಣೆಯಾಗಿದೆ. ಸಮಾರಂಭಗಳಲ್ಲಿ ಹೂಗುಚ್ಚ, ಶಾಲು, ನೆನಪಿನ ಕಾಣಿಕೆ, ಏಕೋಪಯೋಗಿ ಕೊಡುಗೆಗಳನ್ನು ನೀಡುವ ಬದಲು ಆರೋಗ್ಯಕರ ಜೀವನಕ್ಕೆ ಸಹಕಾರಿಯಾಗಲು ಪೌಷ್ಟಿಕಾಂಶವುಳ್ಳ ತರಕಾರಿಗಳನ್ನು ಅವರು ಕೊಡುವುದು ನನಗೆ ತುಂಬಾ ಇಷ್ಟಕರವಾದ ಸಂಗತಿ. ನಾನು ಸಹ ಇದೇ ರೀತಿಯಲ್ಲಿ ಕೆಲವು ಬೀಳ್ಕೊಡುಗೆ ಸಂದರ್ಭಗಳಲ್ಲಿ ತರಕಾರಿಗಳನ್ನು, ಗಿಡಗಳನ್ನು ನೀಡಲು ಪ್ರೇರಣೆಯಾಯಿತು. ಇವರಿಂದ ಕಲಿತಿದ್ದು, ಕಲಿಯಬೇಕಾದದ್ದು ಸಾಗರದಷ್ಟಿದೆ. ಶರ್ಮಾ ಸರ್ ಮಕ್ಕಳ ಹಕ್ಕುಗಳ ಬಗ್ಗೆ ತಿಳಿದಿರುವ ಮಹಾಸಾಗರ. ಈ ಸಾಗರದಲ್ಲಿ ನಾನೊಂದು ಮೀನಾಗಿ ಸದಾ ಅವರೊಂದಿಗೆ ಜೀವಿಸುತ್ತೇನೆಂಬ ಆಶಾವಾದದಿಂದ ಅವರಿಗೆ ಹ್ಯಾಪಿ ಹುಟ್ದಬ್ಬ ಹೇಳಲು ಬಯಸುತ್ತೇನೆ.
ಮಂಜುನಾಥ ಅಮಲಗೊಂದಿ, ಪರಿಸರ ಸಮಾಜ ಕಾರ್ಯಕರ್ತ, ಸಿರಾ ತಾಲ್ಲೂಕು, ತುಮಕೂರು ಜಿಲ್ಲೆ






