ನೇರ, ನಿಷ್ಠೂರ ನುಡಿಗಳಿಂದಲೇ ಪ್ರಿಯವಾಗುವ ವಾದೇಶ – ಡಾ ಗಂಗಾಧರ ರೆಡ್ಡಿ ಎನ್.
ಆಗಷ್ಟೇ ಸ್ನಾತಕೋತ್ತರ ಪದವಿ ಮುಗಿಸಿ ಉದ್ಯೋಗ ಹುಡುಕುತ್ತಿದ್ದ ಸಮಯದಲ್ಲಿ ಗೆಳೆಯ ವೀರೇಶನಿಂದ ಸಂಪರ್ಕಕ್ಕೆ ಬಂದ ವಾಸುದೇವ ಶರ್ಮಾರವರು ಮೊದಲ ದೂರವಾಣಿ ಸಂಪರ್ಕದಿಂದಲೇ ಆಪ್ತರೆನಿಸಿದರು. ಕರೆಯನ್ನು ಸ್ವೀಕರಿಸುತ್ತಿದ್ದಂತೆಯೇ ನಮಸ್ಕಾರ, ಹೇಳಿ ಎಂದು ಆರಂಭವಾದ ಅಂದಿನ ಅವರ ಸಂಭಾಷಣೆ ನನ್ನ ಹೆಸರು ಗಂಗಾಧರ ರೆಡ್ಡಿ ಎಂದು ತಿಳಿಸಿದ ಕೂಡಲೇ ತೆಲುಗಿನಲ್ಲಿ ಮಾತು ಮುಂದುವರಿಸಿದರು.
ನನಗೂ ತೆಲುಗು ಮಾತನಾಡಲು ಬರುತ್ತಿದ್ದರಿಂದಲೇನೋ ಮೊದಲ ಸಂಭಾಷಣೆಯಲ್ಲೇ ಅವರು ನನಗೆ ಆಪ್ತರೆನಿಸಿಬಿಟ್ಟರು. ಆ ಆಪ್ತತೆ ಎಷ್ಟರ ಮಟ್ಟಿಗೆ ಮುಂದುವರಿದಿದೆಯೆಂದರೆ ಈಗೀಗ ನಾನು ಅವರಿಗೆ ಕರೆ ಮಾಡಿದಾಗಲೆಲ್ಲಾ ನನ್ನನ್ನು ಹೇಳೋ ಗಂಗಾ ಅಥವಾ ಗಂಗಾಧರ ಎಂದೇ ಸಂಭೋದಿಸಿ ಸಂಭಾಷಣೆಯನ್ನು ಮುಂದುವರಿಸುತ್ತಾರೆ. ದೂರವಾಣಿಯಲ್ಲಿ ಮಾತನಾಡುವ ಪ್ರತೀ ಸಂದರ್ಭದಲ್ಲಿಯೂ ಅವರ ಧ್ವನಿಯಲ್ಲಿ ಮೊದಲ ಬಾರಿಗೆ ನಾನು ಗ್ರಹಿಸಿದ ಆಪ್ತತೆ ಎದ್ದು ಕಾಣುತ್ತದೆ. ಕಳೆದೊಂದು ದಶಕದ ನಮ್ಮ ಒಡನಾಟದಲ್ಲಿ ಶರ್ಮಾರವರು ಎಂದಿಗೂ ಲವಲವಿಕೆ ಕಳೆದುಕೊಂಡಿಲ್ಲ. ಉತ್ತಮ ಬರಹಗಾರರು ಹಾಗೂ ವಾಗ್ಮಿಗಳೂ ಆದ ವಾದೇಶ ತಮ್ಮ ಆಲೋಚನೆಗಳನ್ನು ಸ್ಪಷ್ಟವಾಗಿ, ನೇರವಾಗಿ ಮತ್ತು ನಿರ್ದಿಷ್ಟವಾಗಿ ಮಂಡಿಸುವ ಮೂಲಕ ಎಲ್ಲರಿಗೂ ಪ್ರಿಯವಾಗುತ್ತಾರೆ. ಕೆಲಸದ ವಿಚಾರಕ್ಕೆ ಬಂದಾಗ ರಾಜೀ ಎನ್ನುವ ಪದ ಅವರ ಶಬ್ದಕೋಶದಲ್ಲಿ ಇಲ್ಲವೇ ಇಲ್ಲ ಎಂಬುದನ್ನು ನಾನು ಗ್ರಹಿಸಿದ್ದೇನೆ. ನನಗೆ ಪ್ರಿಯವಾಗುವ ಬೆರಳೆಣಿಕೆಯ ನಿರ್ದಿಷ್ಟ ಹಾಗೂ ನಿಷ್ಠೂರವಾದಿಗಳಲ್ಲಿ ಶರ್ಮಾರವರೂ ಒಬ್ಬರು ಎಂದು ಘಂಟಾಘೋಷವಾಗಿ ಹೇಳುತ್ತೇನೆ.
ಮಕ್ಕಳ ಹಕ್ಕುಗಳ ಬಗ್ಗೆ ನನಗಿದ್ದ ದೃಷ್ಟಿಕೋನ ಸಂಪೂರ್ಣವಾಗಿ ಬದಲಾಗಲು ಶರ್ಮಾವರವರ ನಡುವಿನ ಒಡನಾಟ ಹಾಗೂ ಅವರೊಂದಿಗೆ ಕೆಲಸ ನಿರ್ವಹಿಸಲು ಲಭಿಸಿದ ಅವಕಾಶವೂ ಕಾರಣ. ಇಂತಹ ರೂಪಾಂತರ ನನ್ನೊಬ್ಬನಲ್ಲಿ ಮಾತ್ರ ಆಗಿಲ್ಲ ಬದಲಿಗೆ ನನ್ನಂತೆ ಅವರೊಂದಿಗೆ ಕಾರ್ಯನಿರ್ವಹಿಸಿದ ನೂರಾರು ಮತ್ತು ಅವರ ಗೋಷ್ಠಿಗಳಲ್ಲಿ ಭಾಗವಹಿಸಿದ ಲಕ್ಷಾಂತರ ಜನರಲ್ಲೂ ಆಗಿದೆಯೆಂದು ನಾನು ಭಾವಿಸುತ್ತೇನೆ. ಸಮಾಜಕಾರ್ಯ ವಿಷಯದಲ್ಲಿ ಪದವಿ ಪಡೆದ ನಂತರದ ದಿನಗಳಲ್ಲಿ ನನಗೆ ಉದ್ಯೋಗ ನೀಡಿ ಪ್ರೋತ್ಸಾಯಿಸಿದ ಡಾ. ಮಹೇಂದ್ರ ರಾಜಾರಾಂ ಹಾಗೂ ಆ ಸಮಯದಲ್ಲಿ ಸಂಪರ್ಕಕ್ಕೆ ಬಂದ ಪ್ರಕಾಶ್ ಕಾಮತ್, ಅರುಣ್ ಸರ್ರಾವೋ, ವಿಕ್ಟರ್ ಥಾವ್ರೋ, ಮ್ಯಾಥ್ಯೂಸ್ ಫಿಲಿಪ್, ರಾಘವೇಂದ್ರ ಭಟ್, ವಾಸುದೇವ ಶರ್ಮಾ, ನಾಗಸಿಂಹ ಜಿ. ರಾವ್, ರವಿಮಣಿಯವರಂತಹ ನೈಜ ಸಮಾಜಕಾರ್ಯ ವೃತ್ತಿಪರರು ನನ್ನ ಸದ್ಯದ ಪ್ರಗತಿಗೆ ಬಲಿಷ್ಠವಾದ ಅಡಿಪಾಯ ಹಾಕಿದರು. ಇವರೆಲ್ಲರ ವಿಭಿನ್ನವಾದ ಆಲೋಚನೆಗಳು ನನ್ನ ಮೂಲ ದೃಷ್ಟಿಕೋನಗಳನ್ನೇ ಬದಲಿಸಿ, ಮಕ್ಕಳ ಹಾಗೂ ಮಾನವ ಹಕ್ಕುಗಳನ್ನು ಗ್ರಹಿಸುವ ವಿಧಾನವನ್ನೇ ರೂಪಾಂತರ ಮಾಡಿದ್ದವು. ಬರವಣಿಗೆಯಲ್ಲಿ ಆಗಷ್ಟೇ ಅಂಬೆಗಾಲಿಡುತ್ತಿದ್ದ ನನ್ನನ್ನು ತಿದ್ದಿ ತೀಡಿದ ಕೆಲವೇ ವ್ಯಕ್ತಿಗಳಲ್ಲಿ ಶರ್ಮಾರವರೂ ಒಬ್ಬರು.
ಕಮ್ಯೂನಿಟಿ ಡೆವಲಪ್ಮೆಂಟ್ ಫೌಂಡೇಷನ್ ಸಂಸ್ಥೆಯಲ್ಲಿ ಸುಮಾರು ಒಂದೂವರೆ ವರ್ಷ ಕಾರ್ಯನಿರ್ವಹಿಸಿ ಉನ್ನತ ವ್ಯಾಸಂಗಕ್ಕೆ ಪಾಂಡಿಚೆರಿಗೆ ತೆರಳುವುದಕ್ಕೂ ಮುನ್ನ ಎರಡು ತಿಂಗಳುಗಳ ಕಾಲ ಸಿ.ಆರ್.ಟಿ. ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಅವಕಾಶ ಕಲ್ಪಿಸಿದ ವಾದೇಶ ಹಲವಾರು ಸದಾವಕಾಶಗಳನ್ನು ನನಗಾಗಿ ಸೃಷ್ಠಿಸಿದರು. ಅಂದು ಅವರು ಸೃಷ್ಠಿಸಿಕೊಟ್ಟ ಸದಾವಕಾಶಗಳೇ ಇಂದು ನನ್ನ ವೃತ್ತಿ ಜೀವನಕ್ಕೆ ಅಡಿಪಾಯಗಳಾಗಿವೆ. ಸಿ.ಆರ್.ಟಿ.ಯಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿದ ಮೊದಲ ವಾರದಲ್ಲಿಯೇ ಗ್ರಾಮಪಂಚಾಯಿತಿಗೆ ಆಯ್ಕೆಯಾದ ಜನ ಪ್ರತಿನಿಧಿಗಳಿಗೆ ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ನೀಡಲು ನನ್ನನ್ನು ಮೂಡಬಿದಿರೆಗೆ ಕಳುಹಿಸಿದರು. ಅಲ್ಲಿಯವರೆಗೂ ಅಂತಹ ಯಾವುದೇ ಸಭೆಗಳನ್ನು ಉದ್ದೇಶಿಸಿ ಮಾತನಾಡದ ನಾನು ಒಲ್ಲದ ಮನಸ್ಸಿನಿಂದಲೇ ಮೂಡಬಿದಿರೆಗೆ ಹೊರಟೆ. ತಯಾರಿಗಳಿಲ್ಲದೇ ಮಾತನಾಡುವ ನನ್ನ ಹುಚ್ಚುತನಕ್ಕೆ ಅದು ಯಜ್ಞಪರೀಕ್ಷೆ ಎಂದೇ ಭಾವಿಸಿ ಸ್ಥಳಕ್ಕೆ ತೆರಳಿದರೆ ಅಲ್ಲಿ ನೆರೆದಿದ್ದವರೆಲ್ಲರೂ ವಯಸ್ಸಿನಲ್ಲಿ ನನಗಿಂತಲೂ ಹಿರಿಯರು. ಪುರುಷ ಹಾಗೂ ಮಹಿಳಾ ಪ್ರತಿನಿಧಿಗಳನ್ನೊಳಗೊಂಡ ಗುಂಪಿನ ಮಧ್ಯೆ ಕುಳಿತು ಮುಂಜಾನೆಯಿಂದ ಮಧ್ಯಾಹ್ನದವರೆಗೂ ಜರುಗಿದ ಗೋಷ್ಠಿಯನ್ನು ಆಲಿಸಿದೆ. ಊಟದ ನಂತರ ನನ್ನ ಸರದಿಯೆಂದು ಮೊದಲೇ ತಿಳಿಸಿದ್ದರಿಂದ ಮಾತನಾಡಬೇಕಿರುವ ವಿಷಯಗಳನ್ನು ಪಟ್ಟಿ ಮಾಡಿಕೊಂಡಿದ್ದೆ. ಕೊನೆಗೂ ನನ್ನ ಸರದಿ ಬಂದೇ ಬಿಟ್ಟಿತು. ಗಡಿಬಿಡಿಯಿಂದಲೇ ವೇದಿಕೆಯೇರಿ ಮಾತನಾಡಲಾರಂಭಿಸಿದೆ. ವಿಷಯಗಳನ್ನು ಒಂದಾದ ಮೇಲೋಂದರಂತೆ ಮಂಡಿಸುತ್ತಿರಬೇಕಾದರೆ ಇಡೀ ಸಭೆಯಲ್ಲಿ ನೀರವ ಮೌನ ಆವರಿಸಿತ್ತು. ಎಲ್ಲರೂ ತದೇಕಚಿತ್ತದಿಂದ ವಿಷಯಗಳನ್ನು ಆಲಿಸುತ್ತಿದ್ದರು, ಎದುರಾದ ಪುಂಖಾನುಪುಂಕ ಪ್ರಶ್ನೆಗಳಿಗೆ ಸ್ಥಳದಲ್ಲಿಯೇ ಅವರಿಗೆ ಸಮಾಧಾನವಾಗುವಂತೆ ಉತ್ತರಿಸುತ್ತಿರಬೇಕಾದರೆ ಆಯೋಜಕರು ಬಂದು ಸರ್ ಬೆಂಗಳೂರಿಗೆ ಹಿಂತಿರುಗಲು ಕಾಯ್ದಿರಿಸಿರುವ ನಿಮ್ಮ ಬಸ್ಸು ಬರಲು ಇನ್ನು ಒಂದು ಗಂಟೆ ಮಾತ್ರ ಸಮಯವಿದ್ದು, ನೀವಿನ್ನು ಸಮಾಪ್ತಿ ಮಾಡುವುದು ಸೂಕ್ತ ಎಂದಾಗ ನಾನು ನಿಜಕ್ಕೂ ಶಾಕ್ ಆಗಿದ್ದೆ. ಅಂದರೆ ಸುಮಾರು ಮೂರುವರೆ ಗಟೆಗಳ ಕಾಲ ನಿರಂತರವಾಗಿ ವಿಷಯವನ್ನು ಮಂಡಿಸಿ ಸಭಿಕರಿಂದ ಮೆಚ್ಚುಗೆಗೆ ಅಂದು ನಾನೂ ಪಾತ್ರನಾಗಿದ್ದೆ. ವ್ಯಕ್ತಿಯೊಬ್ಬರಲ್ಲಿರುವ ಸಾಮರ್ಥ್ಯವನ್ನು ಗುರುತಿಸಿ ಪೂರಕ ಅವಕಾಶಗಳನ್ನು ಅವರಿಗಾಗಿಯೇ ಸೃಷ್ಟಿಸುವುರ ಮೂಲಕ ಅವರ ಪ್ರಗತಿಯನ್ನು ಎಂದಿಗೂ ಶರ್ಮಾರವರು ಪ್ರೋತಾಹಿಸುತ್ತಾರೆ ಎಂಬುದಕ್ಕೆ ಇದೊಂದು ಉತ್ತಮ ನಿದರ್ಶನ. ಅವರ ಸಂಗಡ ಕಾರ್ಯನಿರ್ವಹಿಸಿದ ಪ್ರತಿಯೊಬ್ಬರೂ ಇಂತಹ ಅವಕಾಶಗಳಿಗೆ ಹಲವಾರು ಬಾರಿ ಸಾಕ್ಷಿಯಾಗಿರುತ್ತಾರೆ.
ಸಭೆಯನ್ನು ಉದ್ದೇಶಿಸಿ ಮಾತನಾಡಲೂ ಅಂಜುತ್ತಿದ್ದ ನಾನು ಅಂದು ಸುಮಾರು ಮೂರೂವರೆ ಗಂಟೆಗಳ ಕಾಲ ನಿರರ್ಗಳವಾಗಿ ಮಾತನಾಡಿ ಎಲ್ಲರಿಂದ ಮೆಚ್ಚುಗೆ ಪಡೆದದ್ದು ನನ್ನ ಅತ್ಮವಿಶ್ವಾಸವನ್ನು ಮತ್ತಷ್ಟು ಇಮ್ಮಡಿಗೊಳಿಸಿತು. ನಂತರದ ಕೆಲವೇ ದಿನಗಳಲ್ಲಿ ಇಂತಹದ್ದೇ ಹಲವಾರು ಕಾರ್ಯಕ್ರಮಗಳನ್ನು ಸಮರ್ಥವಾಗಿ ರಾಜ್ಯದ ಬೇರೆಬೇರೆ ಕಡೆ ನಿಭಾಯಿಸಿ ಶರ್ಮಾರವರಿಂದ ಮೆಚ್ಚುಗೆಯನ್ನೂ ಗಿಟ್ಟಿಸಿಕೊಂಡಿದ್ದೆ. ಉನ್ನತ ಶಿಕ್ಷಣಕ್ಕೆ ತೆರಳುವ ಸಲುವಾಗಿ ಅನಿವಾರ್ಯವಾಗಿ ಸಂಸ್ಥೆಯ ಕಾರ್ಯವನ್ನು ಬಿಡಬೇಕಾದಾಗ ಒಂದು ತಿಂಗಳ ಸಂಬಳವನ್ನು ಕಡಿತಗೊಳಿಸಿದ್ದರಿಂದ ನಾನು ವಾಸುದೇವರವರನ್ನು ದ್ವೇಷಿಸಿದ್ದೆ. ಪಾಂಡಿಚೆರಿಗೆ ತೆರಳಿದ ನಂತರ ಒಂದೆರಡು ಬಾರಿ ಕರೆ ಮಾಡಿ ಸಂಬಳವನ್ನು ನೀಡಿರೆಂದು ಕೇಳಿದ್ದು, ಅಡ್ವಾನ್ಸ್ ಪಡೆದ ಹಣಕ್ಕೆ ಪೂರಕ ಲೆಕ್ಕವನ್ನು ಒಪ್ಪಿಸಿ ಸಂಬಳ ಪಡೆಯುವಂತೆ ತಿಳಿಸಿದ್ದರು. ಅದೇ ಕಾರಣಕ್ಕೆ ಕಛೇರಿಗೆ ತೆರಳಿ ಲೆಕ್ಕವನ್ನೂ ನೀಡಿದ್ದೆ. ಆದಾಗ್ಯೂ ಆ ಒಂದು ತಿಂಗಳ ಸಂಬಳವನ್ನು ನೀಡಲಿಲ್ಲ. ಅಂದು ನನ್ನ ಉನ್ನತ ಶಿಕ್ಷಣಕ್ಕಾಗಿ ಹಣದ ಅವಶ್ಯಕತೆ ಬಹಳಷ್ಟಿದ್ದ ಕಾರಣ ಹಲವು ಬಾರಿ ನಾಗಸಿಂಹರವರಿಗೆ ಕರೆ ಮಾಡಿ ಕೇಳಿದ್ದೆ. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಈ ವಿಷಯವೊಂದರಿಂದಲೇ ನಾನು ಶರ್ಮಾರವರನ್ನು ಒಂದಷ್ಟು ದಿನಗಳ ಕಾಲ ದ್ವೇಷಿಸಿದ್ದೆ. ಬಹುಶಃ ಅಂದಿನ ನನ್ನ ಪರಿಸ್ಥಿತಿ ಅವರನ್ನು ದ್ವೇಷಿಸುವಂತೆ ಪ್ರೇರೇಪಿಸಿದರಬಹುದೆಂದು ನಾನು ಭಾವಿಸುವೆ.
ಎಂ.ಫಿಲ್. ಪದವಿ ಪಡೆದು ರಾಜ್ಯಕ್ಕೆ ಮರಳಿದ ನಂತರ ಸಿಕ್ರಂ ಸಂಸ್ಥೆಯಲ್ಲಿ ಶಿಕ್ಷಣ ಹಕ್ಕು ಕಾಯ್ದೆಯನ್ನು ಅನುಷ್ಠಾನಗೊಳಿಸುವ ಕಾರ್ಯಕ್ರಮದ ಸಂಯೋಜಕನಾಗಿ ನಿಯೋಜನೆಗೊಂಡ ನಂತರ ಶರ್ಮಾರವರಿಗೆ ಮಗದಷ್ಟು ಹತ್ತಿರವಾದೆ. ಕರ್ನಾಟಕ ಮತ್ತು ಆಂದ್ರ ಪ್ರದೇಶಗಳಲ್ಲಿ ಶಿಕ್ಷಣ ಹಕ್ಕು ಕಾಯ್ದೆಗೆ ಸಂಬಂಧಪಟ್ಟ ಹಾಗೆ ಆಯೋಜನೆಗೊಂಡ ಹಲವು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾರ್ಯನಿರ್ವಹಿಸುವ ಅವಕಾಶಗಳು ಆಗಾಗ್ಗೆ ಲಭಿಸುತ್ತಿದ್ದು, ಶರ್ಮಾರವರನ್ನು ಮತ್ತಷ್ಟು ಸಮೀಪದಿಂದ ಗ್ರಹಿಸುವ ಅವಕಾಶ ಲಭಿಸಿತು. ಈ ಮಧ್ಯೆ ಭಾರತೀಯ ವಿದ್ಯಾಭವನದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಮಧ್ಯಾಹ್ನದ ಊಟ ಬಡಿಸುತ್ತಿದ್ದ ಬಾಲಕನನ್ನು ಗಮನಿಸಿ ಅಡುಗೆ ಗುತ್ತಿಗೆದಾರರ ಮೇಲೆ ಕೆಂಡಾಮಂಡಲವಾದ ವಾದೇಶ ಕೂಡಲೇ ಬಾಲಕನನ್ನು ರಕ್ಷಿಸಲು ಕ್ರಮ ಕೈಗೊಂಡಿದ್ದರು. ಅಂದು ಬಾಲಕ ಪಲಾಯನ ಮಾಡಲು ಯತ್ನಿಸಿದಾಗ ಅವನ ಎರಡೂ ಕೈಗಳನ್ನು ಹಿಡಿದಿದ್ದ ಸಿ.ಆರ್.ಟಿ. ಸಿಬ್ಬಂದಿಯನ್ನು ಹಿಗ್ಗಾಮುಗ್ಗ ಜಾಡಿಸಿದ್ದ ಪ್ರಸಂಗ ಇನ್ನೂ ನನ್ನ ಕಣ್ಮುಂದಿದೆ. ಅಲ್ಲಿಯವರೆಗೂ ನೇರ ಹಾಗೂ ನಿಷ್ಠೂರವಾಗಿ ಮಾತನಾಡಿದರೂ ಕೋಪಿಸಿಕೊಳ್ಳದ ಶಾಂತಚಿತ್ತ ಶರ್ಮಾರವರನ್ನು ಮಾತ್ರ ಕಂಡಿದ್ದ ನಾನು ಅಂದು ಕೋಪಿಷ್ಠ ವಾದೇಶನನ್ನೂ ಕಂಡೆ. ಸಂಕಷ್ಟದಲ್ಲಿರುವ ಮಕ್ಕಳನ್ನು ರಕ್ಷಿಸುವ ಭರದಲ್ಲಿ ಅವರನ್ನು ಅಪರಾಧಿಗಳಂತೆ ಹಿಡಿದುಕೊಳ್ಳಬಾರದೆಂದು ಸಿಬ್ಬಂದಿಗೆ ಕಛೇರಿಯಲ್ಲಿ ತಿಳಿಹೇಳಿದ ಪರಿ ನನಗೆ ಬಹಳ ಇಷ್ಟವಾಯಿತು. ಇಂತಹ ಸನ್ನಿವೇಶಗಳು ನಂತರದ ದಿನಗಳಲ್ಲಿ ಸಾಕಷ್ಟು ಸಂಭವಿಸಿದರೂ ಅಂದು ವಾದೇಶ ಪ್ರದರ್ಶಿಸಿದ ಪರಶುರಾಮನ ಕೋಪ ನಂತರದ ದಿನಗಳಲ್ಲಿ ಕಂಡು ಬರಲಿಲ್ಲ.
ಆ ದಿನಗಳಲ್ಲಿ ಆಶೀರ್ವಾದ್ ಮತ್ತು ಎಸ್.ಸಿ.ಎಂ. ಹೌಸ್ಗಳಲ್ಲಿ ಸ್ವಯಂಸೇವಾ ಸಂಸ್ಥೆಗಳ ಕಾರ್ಯಕ್ರಮಗಳು ಮತ್ತು ಕಾರ್ಯಾಗಾರಗಳು ಸಾಮಾನ್ಯವಾಗಿ ಆಯೋಜನೆಗೊಳ್ಳುತ್ತಿದ್ದವು. ಅಂತಹ ಕಾರ್ಯಕ್ರಮ ಅಥವಾ ಕಾರ್ಯಾಗಾರಗಳಲ್ಲಿ ಭಾಗವಹಿಸಲು ಸಂಸ್ಥೆಗಳ ಪ್ರತಿನಿಧಿಗಳನ್ನೂ ಒಳಗೊಂಡಂತೆ ಪತ್ರಕರ್ತರಿಗೆ ಮುಕ್ತ ಅವಕಾಶವಿರುತ್ತಿತ್ತು. ಆದರೆ ಪತ್ರಕರ್ತರ ಸೋಗಿನಲ್ಲಿ ಕೆಲವರು ಸರಿಯಾಗಿ ಊಟದ ಸಮಯಕ್ಕೆ ಕಾರ್ಯಾಗಾರ ಜರುಗುತ್ತಿದ್ದ ಸ್ಥಳಕ್ಕೆ ಪ್ರವೇಶಿಸುತ್ತಿದ್ದವರನ್ನು ವಾದೇಶ ಮುಲಾಜಿಲ್ಲದೆ ಜಾಡಿಸುತ್ತಿದ್ದರು. ಒಮ್ಮೊಮ್ಮೆ ಊಟದ ತಟ್ಟೆ ಹಿಡಿದು ಸರತಿ ಸಾಲಿನಲ್ಲಿ ನಿಂತವರನ್ನೂ ಪ್ರಶ್ನಿಸಿ ಆಚೆ ಕಳಿಸಿದ ಹಲವು ಪ್ರಸಂಗಳನ್ನು ನಾನು ಕಂಡಿದ್ದೇನೆ. ಅವರ ಸ್ಥಾನದಲ್ಲಿ ನಾನಿದ್ದಿದ್ದರೆ ಪ್ರಾಯಶಃ ಹೋಗಲಿ ಬಿಡು ಎಂದು ಸುಮ್ಮನಿದ್ದುಬಿಡುತ್ತಿದ್ದೆ. ಆದರೆ ಅವರು ಹಾಗೆ ಮಾಡದೇ ದಾನಿಗಳು ನಮಗೆ ನೀಡುವ ಪ್ರತೀ ರೂಪಾಯಿ ನಿರ್ಧರಿಸಿದ ಕಾರ್ಯಕ್ಕೆ ಮಾತ್ರ ಬಳಕೆಯಾಗಬೇಕೆಂದು ಅಂತಹವರನ್ನು ಹೊರಗೆ ಕಳುಹಿಸಿದ್ದು, ದಾನಿ ಸಂಸ್ಥೆಗಳ ನೀಡುವ ದೇಣಿಗೆಯ ಬಗೆಗಿನ ಅವರ ಕಾಳಜಿಯನ್ನು ಎತ್ತಿ ತೋರಿಸುತ್ತದೆ. ಹೀಗೆ ಮಧ್ಯದಲ್ಲಿ ಒಂದೂವರೆ ವರ್ಷ ಹೊರತುಪಡಿಸಿದರೆ ೨೦೦೭ ರಿಂದ ೨೦೧೩ ರವರೆಗೆ ಇಂತಹ ಸಾಕಷ್ಟು ಪ್ರಸಂಗಗಳಿಗೆ ಸಾಕ್ಷಿಯಾಗಿದ್ದೆ. ಮೇಲ್ನೋಟಕ್ಕೆ ಸೌಮ್ಯವಾಗಿ ಕಂಡುಬರುವ ವಾದೇಶ ತಮ್ಮ ಮಾತುಗಳಿಂದ ಕಠೋರವಾಗಿ ಕಾಣುತ್ತಾರೆ. ಆದರೆ ಅವರ ಕಠೋರತೆಯಲ್ಲೂ ಒಂದು ಉದಾತ್ತ ಚಿಂತನೆ ಇರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಅವರನ್ನು ಹತ್ತಿರದಿಂದ ಬಲ್ಲವರಿಗೆ ಮಾತ್ರ ಸಾಧ್ಯ.
ಸ್ವಯಂಸೇವಾ ಸಂಸ್ಥೆಗಳ ಸಹವಾಸ ಸಾಕೆನ್ನಿಸಿ ವ್ಯವಸಾಯದತ್ತ ಮುಖ ಮಾಡಿದ ನಾನು ಅವಕಾಶ ಸಿಕ್ಕಿದ್ದರಿಂದ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕನಾಗಿ ವೃತ್ತಿ ಮುಂದುವರೆಸಿದ್ದರಿಂದ ಅವರ ನಡುವಿನ ಒಡನಾಟ ವಿರಳವಾಯಿತು. ಆದಾಗ್ಯೂ, ಆಗೊಮ್ಮೆ ಈಗೊಮ್ಮೆ ಅವರನ್ನು ಸಂಧಿಸುವ ಅವಕಾಶ ಲಭಿಸುತ್ತಿತ್ತು. ಈ ಮಧ್ಯೆ ಪಿ.ಎಚ್.ಡಿ ಕಾರ್ಯನಿಮಿತ್ತ ಅವರು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡುತ್ತಿದ್ದರು ಮತ್ತು ಅದಾಗಲೇ ನಾನು ಶುರು ಮಾಡಿದ್ದ ಉಸಿರಿಗಾಗಿ ಹಸಿರು ಸಂಸ್ಥೆಯ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡುತ್ತಿದ್ದರು. ಸಿಕ್ಕಾಗಲೆಲ್ಲಾ ಕಾಫಿ ಕುಡಿಯುತ್ತಾ ಸಮಾಜಕಾರ್ಯ ಶಿಕ್ಷಣದ ಪರಿಸ್ಥಿತಿಗಳನ್ನು ಅವಲೋಕಿಸುವ ಬಗ್ಗೆ ಹಾಗೂ ಸಮಾಜಕಾರ್ಯಕರ್ತರ ಸಂಘಟನೆಯನ್ನು ಬಲಪಡಿಸುವ ಬಗ್ಗೆ ನಮ್ಮ ಮಾತುಕತೆಗಳು ಜರುಗುತ್ತಿದ್ದವು. ಅವರು ಡಾಕ್ಟರಲ್ ಪದವಿಯನ್ನು ಪೂರೈಸಿದ ದಿನ ನಮ್ಮೆಲ್ಲರನ್ನೂ ಊಟಕ್ಕೆ ಆಹ್ವಾನಿಸಿ, ಅವರ ಇಡೀ ಕುಟುಂಬ ಸಸ್ಯಾಹಾರಿಗಳಾಗಿದ್ದರೂ ಮಾಂಸಾಹಾರ ಸೇವಿಸುವ ನಮ್ಮೊಂದಿಗೆ ಕುಳಿತು ಆಹಾರ ಸೇವಿಸಿದ ಕ್ಷಣ ಆಹಾರದ ಹಕ್ಕಿನ ಬಗ್ಗೆ ಅವರಿಗಿದ್ದ ಧೋರಣೆಯನ್ನು ಸಾಬೀತುಪಡಿಸಿತು. ತಮ್ಮ ಸ್ವಂತ ಮಗಳೂ ಮಾಂಸಾಹಾರ ಸೇವಿಸುವುದರ ಬಗ್ಗೆ ಯಾವುದೇ ಆಕ್ಷೇಪಣೆ ವ್ಯಕ್ತಪಡಿಸದಂತಹ ಧೋರಣೆ ನನಗೆ ಬಹಳಷ್ಟು ಪ್ರಿಯವೆನಿಸಿತು. ವ್ಯಕ್ತಿಯ ಆಹಾರದ ಹಕ್ಕನ್ನು ಗೌರವಿಸುವ ಅವರ ವ್ಯಕ್ತಿತ್ವ ನನಗೆ ಬಹಳ ಹಿಡಿಸಿತು. ಬರೀ ಮಾತುಗಳಿಂದಷ್ಟೇ ಅಲ್ಲದೇ ನಡೆಯಿಂದಲೂ ತಾನು ವಿಭಿನ್ನ ಎಂಬುದನ್ನು ಶರ್ಮಾರವರು ಸಾಕಷ್ಟು ಬಾರಿ ನಿರೂಪಿಸಿದ್ದರು.
ಈ ಮಧ್ಯೆ ನಾನು ಡಾಕ್ಟರಲ್ ಪದವಿಯ ಪ್ರಬಂಧ ಬರೆಯುವಾಗ ಹಲವಾರು ಬಾರಿ ವಾದೇಶರನ್ನು ದೂರವಾಣಿ ಮೂಲಕ ಹಾಗೂ ಕೆಲವೊಮ್ಮೆ ವೈಯಕ್ತಿಕವಾಗಿ ಸಂಪರ್ಕಿಸಿ ಮಾರ್ಗದರ್ಶನ ಪಡೆದಿದ್ದೆ. ಹೀಗೆ ಭೇಟಿಯಾದಗಲೆಲ್ಲಾ “ಗಂಗಾ ಹುಷಾರು” ಎಂಬ ಎಚ್ಚರಿಕೆ ನೀಡುತ್ತಿದ್ದರು. ಕಾರಣ ಸಂಶೋಧನೆಗೆ ನಾನು ಆಯ್ಕೆ ಮಾಡಿಕೊಂಡಿದ್ದ ವಿಷಯ ಮರಳು ದಂಧೆಗೆ ಸಂಬಂಧಿಸಿದ್ದಾಗಿದ್ದು ದತ್ತಾಂಶ ಸಂಗ್ರಹಣೆ ಅಷ್ಟೊಂದು ಸುಲಭದ ಕೆಲಸವಲ್ಲ ಎಂಬುದನ್ನು ಪದೇ-ಪದೇ ಹೇಳುತ್ತಿದ್ದರು. ಅಂತಿಮ ವರದಿ ಸಿದ್ಧಪಡಿಸುವಾಗಲಂತೂ ನನ್ನ ಆಲೋಚನೆಗಳನ್ನು ಅವರೊಂದಿಗೆ ಸಾಕಷ್ಟು ಬಾರಿ ಚರ್ಚಿಸಿ ಅವರ ತೀರ್ಥರೂಪ ತಂದೆಯವರಿಂದಲೂ ಕೆಲ ನಿರ್ದಿಷ್ಟ ಕನ್ನಡ ಪದಗಳಿಗೆ ಆಂಗ್ಲ ಅವತರಣಿಕೆಯನ್ನು ಪಡೆದುಕೊಂಡಿದ್ದೆ. ಪದವಿ ಪೂರ್ಣಗೊಂಡಾಗ, ಯಾವುದೇ ಹೊಸ ಲೇಖನ ಪ್ರಕಟಗೊಂಡಾಗ ಮತ್ತು ಪದವಿಯ ನಂತರ ಮುಂದೇನು ಎಂಬ ಕಾರ್ಯಕ್ರಮ ಆಯೋಜಿಸಿದಾಗ ಶರ್ಮಾರವರು ಮನಸ್ಪೂರ್ತಿಯಾಗಿ ಹರಸಿದ್ದರು. ಪುಸ್ತಕ ಬರೆಯಲು ಆರಂಭಿಸಿದ ಸಮಯದಲ್ಲಿ ಬರವಣಿಗೆಯನ್ನು ಪ್ರೋತ್ಸಾಹಿಸಿ, ಪೂರಕ ಸಲಹೆಗಳನ್ನು ನೀಡುವುದರ ಜೊತೆಗೆ ಮತ್ತಷ್ಟು ಬರೆಯಲು ಹುರಿದುಂಬಿಸಿದ್ದೂ ಇದೇ ವಾದೇಶ. ಪ್ರಕಟಗೊಂಡ ಪುಸ್ತಕಗಳನ್ನು ಓದಿ ವಸ್ತುನಿಷ್ಠವಾಗಿ ಹಿಮ್ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದ ಕೆಲವೇ ಅಪರೂಪದ ವ್ಯಕ್ತಿಗಳಲ್ಲಿ ಇವರೂ ಒಬ್ಬರು.
ಸದಾ ಲವಲವಿಕೆಯಿಂದ ಕಾಣುತ್ತಿದ್ದ ಶರ್ಮಾರವರು ಎರಡು ಸಂದರ್ಭಗಳಲ್ಲಿ ನನಗೆ ಬಹಳ ಸಪ್ಪೆಯಾಗಿ ಕಂಡರು. ಡಾಕ್ಟರಲ್ ಪದವಿಯ ಅಂತಿಮ ಹಂತದಲ್ಲಿ ವಿಶ್ವವಿದ್ಯಾಲಯ ತಕರಾರು ಎತ್ತಿದಾಗ ಅವರ ಮುಖದಲ್ಲಿ ಕಾಣುತ್ತಿದ್ದ ಲವಲವಿಕೆ ಕಾಣೆಯಾಗಿತ್ತು. ಇಡೀ ರಾಜ್ಯವನ್ನು ಸುತ್ತಿ ಬಹಳ ಪ್ರೀತಿಯಿಂದ ಸಂಶೋಧನೆ ಕೈಗೊಂಡು ತಯಾರಿಸಿದ್ದ ಮಹಾ ಪ್ರಬಂಧವನ್ನು ವಿಶ್ವವಿದ್ಯಾಲಯಕ್ಕೆ ಸಲ್ಲಿಸಲು ಸಿದ್ಧರಾದಾಗ ಎದುರಾದ ಅನಿರೀಕ್ಷಿತ ಸಂಕಷ್ಟಗಳಿಂದ ಅಕ್ಷರಶಃ ಕುಗ್ಗಿಹೋದಂತೆ ಕಾಣುತ್ತಿದ್ದರು. ನಂತರದ ದಿನಗಳಲ್ಲಿ ಪ್ರಬಂಧವನ್ನು ಸಲ್ಲಿಸಿ ಪದವಿಯನ್ನು ಪಡೆದರೂ ವಿಶ್ವವಿದ್ಯಾನಿಲಯದ ವ್ಯವಸ್ಥೆಯ ಬಗ್ಗೆ ಅವರಿಗಿದ್ದ ಅಸಹನೆಯನ್ನು ಹೊರಹಾಕಿದ್ದರು. ಕರ್ನಾಟಕ ರಾಜ್ಯ ಸಮಾಜಕಾರ್ಯ ವೃತ್ತಿನಿರತರ ಸಂಘಟನೆಗೆ ಮರುಜೀವ ನೀಡಲು ಮುಂದಾದಾಗ ಎದುರಾದ ಸುಳ್ಳು ಅಪವಾದಗಳಿಂದ ಬಹಳ ನೋವುಂಡಿದ್ದರು ಎಂಬುದಕ್ಕೆ ಅವರಾಡಿದ ಮಾತುಗಳೇ ಸಾಕ್ಷಿ. ನಿಸ್ವಾರ್ಥತೆಗೆ ಪ್ರತೀಕದಂತಿದ್ದ ವ್ಯಕ್ತಿಯ ಮೇಲೆ ನಿರಂತರವಾಗಿ ಆರೋಪಗಳನ್ನು ಹೊರಿಸುವ ತಮ್ಮದೇ ವೃತ್ತಿಪರರ ಗುಂಪೊಂದು ಮುಂದಾದಾಗ ಯಾವುದೇ ವ್ಯಕ್ತಿ ಕುಸಿದು ಹೋಗುತ್ತಾರೆ. ಅಂತಹದೊಂದು ಸುಳ್ಳು ಅಪವಾದದ ನಡುವೆಯೂ ವೃತ್ತಿ ಅಭಿವೃದ್ಧಿಗಾಗಿ ಕಟಿಬದ್ಧರಾಗಿರುವ ಪ್ರಾಮಾಣಿಕತೆ ಶರ್ಮಾರಲ್ಲಿ ಎದ್ದುಕಾಣುತ್ತಿತ್ತು. ಇಂತಹ ಒಂದೆರಡು ಸನ್ನಿವೇಶಗಳನ್ನು ಹೊರತುಪಡಿಸಿದರೆ ಉಳಿದ ಎಲ್ಲಾ ಸಮಯದಲ್ಲಿ ಶರ್ಮಾರವರು ಸಮಾಜಕಾರ್ಯ ವೃತ್ತಿಗೆ ಬದ್ಧರಾಗಿ ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ಅಸಾಧಾರಣ ವ್ಯಕ್ತಿಯಂತೆ ಕಾಣುತ್ತಾರೆ.
ಕಾಲ ಎಲ್ಲದಕ್ಕೂ ಉತ್ತರಿಸಲಿದೆ. ಸಮಾಜಕಾರ್ಯ ವೃತ್ತಿಯ ಬಗ್ಗೆ ಅವರಿಗಿರುವ ಬದ್ಧತೆ ಹಾಗೂ ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ಅವರ ಕಾರ್ಯ ಎಂದಿಗೂ ಶ್ಲಾಘನೀಯ. ಮಕ್ಕಳ ಹಕ್ಕುಗಳ ಬಗೆಗಿನ ಸಾಹಿತ್ಯ ಸೃಷ್ಟಿಯಲ್ಲಿ ಅವರನ್ನು ಮೀರಿಸುವ ಮತ್ತೊರ್ವ ಸಮಾಜಕಾರ್ಯಕರ್ತ ರಾಜ್ಯದಲ್ಲಿ ಇಲ್ಲ ಎಂಬುದನ್ನು ಯಾವುದೇ ಅಂಜಿಕೆಯಿಲ್ಲದೆ ಹೇಳಬಹುದು. ಮಕ್ಕಳ ಹಕ್ಕುಗಳ ಸಂರಕ್ಷಣೆಗಾಗಿ ಅವರು ತಯಾರಿಸಿ ಸಮುದಾಯಕ್ಕೆ ನೀಡಿರುವ ಸಾಧನಗಳು (ಸಮಾಜಕಾರ್ಯಕರ್ತರು) ಭವಿಷ್ಯದಲ್ಲಿಯೂ ಶರ್ಮಾರವರ ಹೆಸರನ್ನು ಅಜರಾಮರವನ್ನಾಗಿಸುತ್ತವೆ. ವಾದೇಶನ ನೇರ ಹಾಗೂ ನಿಷ್ಠೂರ ನುಡಿಗಳನ್ನು ತಾಳ್ಮೆಯಿಂದ ಕೇಳಿಸಿಕೊಂಡವರಿಗೆ ಮಾತ್ರ ಅವರ ವ್ಯಕ್ತಿತ್ವ ಅನಾವರಣಗೊಳ್ಳುತ್ತದೆ. ಸಮಾಜಕಾರ್ಯ ಹಾಗೂ ಮಕ್ಕಳ ಹಕ್ಕುಗಳ ಕ್ಷೇತ್ರಗಳಿಗೆ ಶರ್ಮಾರವರು ನೀಡಿದ ಅಪಾರ ಕೊಡುಗೆ ಅವರ ಘನತೆಯನ್ನು ಮತ್ತಷ್ಟು ಉತ್ತುಂಗಕ್ಕೆ ಕೊಡೊಯ್ಯುತ್ತಿದ್ದು, ಪೂರ್ವಾಗ್ರಹ ಪೀಡಿತರಾದ ಕೆಲವರು ಅವರ ವ್ಯಕ್ತಿತ್ವವನ್ನು ಹರಣ ಮಾಡಲು ಸಾಕಷ್ಟು ಪ್ರಯತ್ನಿಸಿದರೂ ಅದು ವಿಫಲವಾಗುತ್ತಿದೆ.
ಅಂತಿಮವಾಗಿ, ಅರವತ್ತು ತುಂಬು ವಸಂತಗಳನ್ನು ಪೂರೈಸಿರುವ ಈ ಶುಭ ಸಂದರ್ಭದಲ್ಲಿ ಶರ್ಮಾರವರಿಗೆೆ ಮನಸ್ಪೂರ್ತಿಯಾಗಿ ಶುಭಾಶಯಗಳನ್ನು ಕೋರುತ್ತಾ, ಶ್ರೀಯುತರ ಭವಿಷ್ಯದ ಜೀವನ ಆರೋಗ್ಯಕರವಾಗಿ ಸದಾ ಹಸಿರಾಗಿರಲೆಂದು ಆಶಿಸುವೆ. ಮಕ್ಕಳ ಸಂರಕ್ಷಣಾ ಕ್ಷೇತ್ರಕ್ಕೆ ಮಗದಷ್ಟು ಸಾಧನಗಳನ್ನು ತಯಾರಿಸಿ ಸಮುದಾಯಕ್ಕೆ ಕಳುಹಿಸುವ ಅವಕಾಶ ಶ್ರೀಯುತರಿಗೆ ಲಭಿಸಲಿ ಮತ್ತು ಅಂತಹ ಶಕ್ತಿಯನ್ನು ನಿಸರ್ಗ ಪ್ರಾಪ್ತಿಸಲೆಂದು ಆಶಿಸುವೆ.
ಡಾ. ಗಂಗಾಧರ ರೆಡ್ಡಿ ಎನ್.
ಸಂಸ್ಥಾಪಕ, ಉಸಿರಿಗಾಗಿ ಹಸಿರು






