vasu-blog-1-main

ವಾಸು ಎಂಬ ಅರಳಿಮರ – ಡಾ ಜಿ. ರಾಮಕೃಷ್ಣ

Last Updated: February 21, 2026By

ಭಗವದ್ಗೀತೆಯಲ್ಲಿ ಮಹತ್ತಾದ ಸತ್ತ್ವವನ್ನು ʻಊರ್ಧ್ವಮೂಲʼ ಮತ್ತು ʻಅಧಃಶಾಖʼ ಎಂದು ಹೆಸರಿಸಲಾಗಿದೆ: ಬೇರು ಮೇಲೆ ಮತ್ತು ಕೊಂಬೆಗಳು ಕೆಳಗೆ. ನಮ್ಮ ವಾಸು ಅಂಥವನು. 

ಒಂದು ಲೇಖನದಲ್ಲಿ ಯಾರನ್ನಾದರೂ ಏಕವಚನದಲ್ಲಿ ಪರಿಚಯಿಸಬಹುದೆ? ಅದೂ ಅಷ್ಟು ಬೃಹತ್ತಾಗಿ ಬೆಳೆದ ವ್ಯಕ್ತಿತ್ವ ಉಳ್ಳವನನ್ನು ನಾನು ಬಹುವಚನದಲ್ಲಿ ವ್ಯವಹರಿಸ ಹೊರಟರೆ ಅದು ಅವನಿಗೆ ಅಪಚಾರವೆಸಗಿದಂತೆ. ಏಕೆಂದರೆ ಅವನು ಕಣ್ಣು ಬಿಡುವ ವೇಳೆಗೆ ನನಗೆ ಇಪ್ಪತ್ತಾರು ವರ್ಷ ವಯಸ್ಸು. ನನ್ನ ಅಕ್ಕನ ಮೊಮ್ಮಗನಾದ್ದರಿಂದ ನಾನೂ ಅವನಿಗೆ ತಾತನೇ! ಕೀರ್ತಿಯಲ್ಲಿ ಮತ್ತು ಮಾನವ ಕಾಳಜಿಯಲ್ಲಿ ಅವನೂ ಒಂದು ವಿಧದ ತಾತನೇ ಆಗಿದ್ದಾನೆ. 

ಅನೇಕ ವರ್ಷಗಳ ಹಿಂದಿನ ಒಂದು ಸಂಗತಿ: ಆಗ್ಗೆ ಅವನಿಗೆ ನಾಲ್ಕೈದು ವರ್ಷ ಇರಬಹುದು. ಬೆಂಗಳೂರಿನ ಸುಂಕೇನಳ್ಳಿಯಲ್ಲಿ ಅಪ್ಪ-ಅಮ್ಮ ಮತ್ತು ಮೂವರು ಸೋದರಿಯರು. ನಾನಾಗ ಮಹಾರಾಷ್ಟ್ರದಲ್ಲೋ ಎಲ್ಲೋ ಇರುತ್ತಿದ್ದವನು. ನನ್ನದಲ್ಲದ ಒಂದು ಕ್ಯಾಮರಾ ನನ್ನಲ್ಲಿರುತ್ತಿತ್ತು. ಅದರಲ್ಲಿ ಆ ಮೂರು ಸೋದರಿಯರ ಒಂದು ಸುಂದರವಾದ ಫೋಟೋ ಕ್ಲಿಕ್ಕಿಸಿದ್ದೆ. ʻನನ್ನದೂ ತೆಗಿʼ ಎಂದು ಹೇಳುವಷ್ಟು ದೊಡ್ಡವನೂ ಆಗಿರಲಿಲ್ಲ ಈ ವಾಸು. 

ನನಗೆ ನೆನಪಿರುವಂತೆ ಮುಂದಿನ ಒಂದು ಮುಖ್ಯ ಘಟನೆ ಅವನು ಮೈಸೂರಿನಲ್ಲಿ ಕಾಲೇಜು ವಿದ್ಯಾರ್ಥಿಯಾಗಿದ್ದ ಕಾಲದ್ದು. ಆಗ್ಗೆ ನಾನು ಬೆಂಗಳೂರಿನಲ್ಲಿ ತಳ ಊರಿದ್ದೆ. ಒಂದು ಬೆಳಗ್ಗೆ ಅವರ ಮನೆಗೆ ಹೋಗಿದ್ದಾಗ ಈ ಬಾಲಕ ಗೆಳೆಯರೊಡಗೂಡಿ ಎನ್.ಸಿ.ಸಿ. ಕ್ಯಾಂಪಿನ ಸಿದ್ಧತೆಗೆಂದು ಹೇಳಿ ಹೋದ. ನಾನೂ ಅವರಪ್ಪನೂ ಇನ್ನೂ ಮಾತನಾಡುತ್ತಾ ಕುಳಿತಿದ್ದೆವು. ಅಷ್ಟು ಹೊತ್ತಿಗೆ ಒಬ್ಬ ಸ್ನೇಹಿತನೊಂದಿಗೆ ಅಷ್ಟೇನೂ ಘೋರವಾಗಿ ಅಳದೆ ಹಿಂದಿರುಗಿದ್ದ. ಹಗ್ಗ ಹಿಡಿದು ಮೇಲಕ್ಕೇರುವ ಸಾಹಸದಲ್ಲಿ ಎಡಗೈ ಮುರಿದುಕೊಂಡು ಬಂದಿದ್ದ! 

“ಹೋಯಿತು. ಅದಿನ್ನು ಯಥಾಸ್ಥಿತಿಗೆ ಬರಲಾರದು. ಮೇಲಕ್ಕೆ ಏರುತ್ತಿದ್ದಾಗ ʻಫಟ್‌ʼ ಎಂಬ ಶಬ್ದ ಕೇಳಿ ಬಂತು. ಮೊದಲೇ ಈ ಹಿಂದೆ ಫ್ರಾಕ್ಚರ್‌ ಆಗಿ ದುರವಸ್ಥೆಯಲ್ಲಿ ಇದ್ದ ಕೈ ಈಗ ಪೂರ್ತಿ ಹೋಗಿಬಿಟ್ಟಿತು” ಎಂದು ಈ ಹುಡುಗ ನೋವಿನ ಬಗ್ಗೆ ಏನೂ ಹೇಳದೆ ಮುಂದೆಲ್ಲಾ ಮುರಿದ ಕೈಯಿಂದಾಗಿ ಮರುಗಬೇಕಾಗುತ್ತದೆ ಎಂದು ಪರಿತಪಿಸುತ್ತಿದ್ದ! ಎಲ್ಲರಿಗೂ ತಿಳಿದಂತೆ ಈಗಲೂ ಅವನ ಕೈ ಲಕ್ಷಣವಾಗಿಯೇ ಇದೆ. ತಲೆ ಅದನ್ನು ಮೀರಿ ಶೋಭಿಸುತ್ತಿದೆ. 

ಅವನ ತಂದೆ ಶ್ರೀ ವಿಶ್ವನಾಥ್‌, ನಾನು ಮತ್ತು ಅವನು ಮೈಸೂರು ಸಯ್ಯಾಜಿ ರಾವ್‌ ರಸ್ತೆಯಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಧಾವಿಸಿದೆವು. ಯಾರೋ ಮೂಳೆ ತಜ್ಞರನ್ನು ಭೇಟಿಯಾದೆವು. ಆತನಾದರೋ ತುಟಿ ಬಿಚ್ಚಲು ಸಹ ದಕ್ಷಿಣೆ ನಿರೀಕ್ಷಿಸುತ್ತಿದ್ದ. ಭಾರೀ ಆದರ್ಶಗಳ ಮಂಗಳಮೂರ್ತಿ ವಿಶ್ವನಾಥ್‌, ಲಂಚ ಕೊಡುವುದುಂಟೆ ಎಂದು ಹುಡುಗನನ್ನು ಮನೆಗೆ ಕರೆದುಕೊಂಡು ಹೊರಟುಬಿಟ್ಟರು. ಅಲ್ಲೇನು ಚಿಕಿತ್ಸೆ ಸಾಧ್ಯ! ಸರಿ, ಮಧ್ಯಾಹ್ನ ಮತ್ತೆ ಆಸ್ಪತ್ರೆಗೆ ಹೋಗಿ ಅದೇ ಮಹಾತಜ್ಞನ ಕೈ ಬಿಸಿ ಮಾಡಿದ ನಂತರ ಶಸ್ತ್ರ ಚಿಕಿತ್ಸೆ ನಡೆಯಿತು. ಅವನ ಆಸ್ಪತ್ರೆ ಅನುಭವವನ್ನು ಖುದ್ದಾಗಿ ನೋಡದೆ ನಾನು ಬೆಂಗಳೂರಿಗೆ ಹಿಂದಿರುಗಿದೆ. ಅವನ ಕೈಗಳು ಈಗ ವಜ್ರದಂತಿವೆಯೆಂದು ತೋರುತ್ತದೆ. ಯಾರನ್ನೆಲ್ಲಾ ಎದುರಿಸಿ ʻಹೋರಾಟʼ ಮಾಡುತ್ತಿರುತ್ತಾನೆಂಬುದನ್ನು ವೃತ್ತಪತ್ರಿಕೆಗಳ ಮುಖಾಂತರ ತಿಳಿದುಕೊಳ್ಳುತ್ತಿರುತ್ತೇನೆ. ಮನದುಂಬಿ ಅವನಿಗೆ ಶ್ರೇಯಸ್ಸು ಕೋರುತ್ತೇನೆ. 

ಕೆಲವು ವರ್ಷಗಳ ಹಿಂದೆ ನಾನೆಲ್ಲಾದರೂ ನಡೆದುಹೋಗುತ್ತಿದ್ದರೆ ಹಿಂದಿನಿಂದ ಸ್ಕೂಟರ್‌ ಮೇಲೆ ಬಂದು ʻಕುಳಿತುಕೋ. ಎಲ್ಲಿಗೆ ಹೋಗಬೇಕು ಹೇಳು, ಕರೆದುಕೊಂಡು ಹೋಗುತ್ತೇನೆʼ ಎನ್ನುತ್ತಿದ್ದ. ಈಗ ಅವನದು ನಾಲ್ಕು ಚಕ್ರದ ಗಾಡಿ. ಒಮ್ಮೆಯಾದರೂ ಹಿಂದಿನಿಂದ ಬಂದು ನಿಲ್ಲಿಸಿ ಕರೆದೊಯ್ದಿಲ್ಲ.  ನಾನು ನಡೆದಾಡುವ ಸ್ಥಿತಿಯನ್ನು ಮೀರಿ ಬೆಳೆದಿರುವುದೇ ಕಾರಣ ಇರಬೇಕು!  ನನ್ನ ಸ್ನೇಹಿತರೂ ಇವನ ಶಿಕ್ಷಕರೂ ಆಗಿದ್ದ ಡಾ. ಮರುಳಸಿದ್ದಯ್ಯನವರನ್ನು ಕಾಣಲು, ಒಮ್ಮೊಮ್ಮೆ ಯಾವುದಾದರೂ ಕಾರ್ಯಕ್ರಮಗಳಲ್ಲಿ ಇವನು ಕಂಡಾಗ ಕಾರು ಸವಾರಿ ಸಿಕ್ಕಿರುವುದುಂಟು!

ಇವನು ಬಿ. ಎ ಓದಿದ್ದು ಮೈಸೂರು ಮಹಾರಾಜ ಕಾಲೇಜಿನಲ್ಲಿ. ಆದರೆ ಎಂ.ಎಸ್.‌ಡಬ್ಲ್ಯು. ಮಾಡಲು ಬೆಂಗಳೂರಿಗೆ ಬಂದ. ಇಲ್ಲಿನ ವಿಶ್ವವಿದ್ಯಾನಿಲಯದಲ್ಲಿ ಎಂಥದೋ ಪದ್ಧತಿ ಇದ್ದಿತು. ಇವನು ಅರ್ಜಿ ಹಾಕಿ, ಪರೀಕ್ಷೆ ಬರೆದ ಮೇಲೆ ತಿಳಿದದ್ದು ಹೊರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಒಂದೋ ಎರಡೋ ಸ್ಥಾನಗಳು ಮಾತ್ರ ಮೀಸಲು ಎಂದು. ಆ ಎರಡು ಸ್ಥಾನಗಳಿಗೆ ಸಾಕಷ್ಟು ಪೈಪೋಟಿ. ಶ್ರೀ ವಿಶ್ವನಾಥ್‌ ಮತ್ತು ನಾನು ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾಗಿದ್ದ ಡಾ.ಮರುಳಸಿದ್ಧಯ್ಯನವರಿಗೆ ಇವನ ಬಿ.ಎ ದಿನಗಳ ಪ್ರತಾಪಗಳನ್ನು ಹೇಳಿ ನಿಯಮದಲ್ಲಿರುವಂತೆಯೇ ಏನೂ ಸಡಿಲ ಮಾಡದೆ ಅವಕಾಶ ಕೊಡಲು ಕೇಳಿಕೊಂಡೆವು. ಇವನಿಗೆ ಅವಕಾಶ ಸಿಕ್ಕಿತು. ವಾಸು ಅವರ ವಿದ್ಯಾರ್ಥಿಯಾಗಿ ಅಚ್ಚುಮೆಚ್ಚಿನವನಾಗಿಬಿಟ್ಟ. ಉತ್ತಮ ದರ್ಜೆಯಲ್ಲಿ ತೇರ್ಗಡೆಯಾದ. ಅಲ್ಲಿಂದ ಅವನು ಎಷ್ಟು ಪ್ರಸಿದ್ಧಿ ಗಳಿಸಿದ್ದಾನೆಂಬುದು ದಿನಪತ್ರಿಕೆಗಳಿಂದ ತಿಳಿದುಕೊಳ್ಳುತ್ತಾ ಬಂದಿದ್ದೇನೆ. ಮಾನ್ಯ ಡಾ.ಮರುಳಸಿದ್ದಯ್ಯನವರು ಅನಾರೋಗ್ಯದಿಂದ ಇದ್ದಾಗ ಗೆಳೆಯರೊಡಗೂಡಿ ಅವರ ಸೇವೆಯನ್ನು ನಿಷ್ಠೆಯಿಂದ ಮಾಡಿದನೆಂಬುದು ತಿಳಿದಿದೆ. ಅಂತಹ ಸಂದರ್ಭದಲ್ಲಿ ಒಮ್ಮೆ ಅವರ ಭೇಟಿ ಮಾಡಿಸಲು ನನ್ನನ್ನು ಅವರ ಮನೆಗೆ ಕರೆದುಕೊಂಡು ಹೋಗಿದ್ದ ಕೂಡ. ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆಯಲಿಲ್ಲವೆಂದು ಅವರಿಗಿಂತಲೂ ಇವನಿಗೇ ಹೆಚ್ಚು ವ್ಯಥೆ!  

ಅದೆಷ್ಟು ಮಂದಿ ಇವನ ಸೇವೆಯಿಂದಾಗಿ ಹಲವು ವಿಧಗಳಲ್ಲಿ ಉಪಕೃತರಾಗಿದ್ದಾರೆಂಬುದು ಜನಜನಿತವಾದ ಸಮಾಚಾರ. ನಾನೂ ಸಹ ಕೆಲ ವೇಳೆ ಇವನಿಂದ ಬೇರೆಯವರಿಗಾಗಿ ಸಹಾಯ ಕೇಳಿ ಪಡೆದಿದ್ದೇನೆ. ಅದರ ಯಾದಿ ಅಪ್ರಸ್ತುತ. ಪ್ರಸ್ತುತವಲ್ಲದಿದ್ದರೂ ಬೇರೊಂದು ಪ್ರಸಂಗವನ್ನು ಹೇಳುತ್ತೇನೆ. ವಾಸು ಆಗ್ಗೆ ಬೆಂಗಳೂರಿನಲ್ಲಿ ಎಂ.ಎಸ್.ಡಬ್ಲ್ಯೂ ವಿದ್ಯಾರ್ಥಿ ಆಗಿದ್ದಿರಬೇಕು. ನನ್ನ ಒಬ್ಬ ಅಕ್ಕನ ಮಗನ ಮದುವೆ; ಶಿವಮೊಗ್ಗೆಯಲ್ಲಿ. ವಾಸು ಮತ್ತು ಅವನ ಇಬ್ಬರು ಅಕ್ಕಂದಿರು ಬಂದಿದ್ದರು. ಮದುವೆಯ ತಾಣದಿಂದ ಸಂಜೆ ಆರರ ಸಮಯದಲ್ಲಿ ಸಾಗರ ರಸ್ತೆಯಲ್ಲಿ ನಾವು ನಾಲ್ಕೈದು ಜನ ನಡೆದು ಹೋದೆವು. ದಾರಿಯಲ್ಲಿ ಸಮಾಜಕಾರ್ಯ ವಿದ್ಯಾರ್ಥಿ ವಾಸು ಬಹಳ ಹುರುಪಿನಿಂದ ಅವನು ಯಾರಿಗೋ, ಎಂಥದೋ ಸೇವೆ ಮಾಡಿದ್ದನ್ನು ನಮಗೆಲ್ಲ ಸುದೀರ್ಘವಾಗಿ ದೊಡ್ಡ ಗಂಟಲಲ್ಲಿ ವರದಿ ಮಾಡುತ್ತಿದ್ದಾನೆ. ತದೇಕಚಿತ್ತದಿಂದ ಮತ್ತು ಅಭಿಮಾನದಿಂದ ನಾವೆಲ್ಲಾ ಕೇಳುತ್ತಾ ಹೆಜ್ಜೆ ಹಾಕುತ್ತಿದ್ದೇವೆ. ವಾಸು ಹೇಳಿದ್ದ ಅನುಭವದ ಕಥನ ನನಗೆ ಈಗ ಎಳ್ಳಷ್ಟೂ ನೆನಪಿನಲ್ಲಿಲ್ಲ. ಆದರೆ ಅವನ ಉತ್ಸಾಹ, ಪರರ ಸೇವೆ ಬಗೆಗಿನ ಆಸ್ಥೆ, ರಸವತ್ತಾಗಿ ತನ್ನ ಮಧ್ಯಪ್ರವೇಶದ ವರ್ಣನೆ, ಮನೋಜ್ಞವಾಗಿದ್ದಿರಬೇಕು. ನಂತರದ ವರ್ಷಗಳಲ್ಲಿ ಅಂತಹ ಪ್ರಸಂಗಗಳಲ್ಲಿ ಲೆಕ್ಕವಿಲ್ಲದಷ್ಟು ಮಂದಿ ಅವನಿಂದ ಹಲವು ರೀತಿಯಲ್ಲಿ ಉಪಕೃತರಾಗಿದ್ದಾರೆಂಬುದು ವಾಸ್ತವ. ಹೆಮ್ಮೆಯ ವಿಷಯ ಸಹ. 

ಕೆಲವು ವರ್ಷಗಳ ಹಿಂದೆ ʻಶಿಕ್ಷಣ ಹಕ್ಕು ಕಾಯಿದೆʼ ಎಂಬುದೊಂದು ಪ್ರಸಿದ್ಧಿಗೆ ಬಂದಿತ್ತು. ಖಾಸಗಿ ಶಾಲೆಗಳಲ್ಲಿ ʻಸಾಮಾನ್ಯ ಕುಟುಂಬಗಳ  ಮಕ್ಕಳಿಗೆʼ ತಥಾಕಥಿತ ʻಉತ್ತಮʼ ಶಾಲೆಗಳಲ್ಲಿ ಪ್ರವೇಶ ದೊರಕಿಸುವುದೂ ಒಂದು ಉದ್ದೇಶ ಈ ಕಾಯಿದೆಯಲ್ಲಿ. ಹೀಗೆ ಪ್ರವೇಶ ಪಡೆದ ಮಕ್ಕಳನ್ನು ಎರಡನೇ ದರ್ಜೆ ವಿದ್ಯಾರ್ಥಿಗಳು ಎಂಬ ರೀತಿಯಲ್ಲಿ ತಗಡು ಮುಚ್ಚಿದ ಕೊಟ್ಟಿಗೆಗಳಲ್ಲಿ ಕೂಡಿಸಿದ್ದ ಶಾಲೆಗಳೂ ಇವೆ. ಕಾಯಿದೆಯ ಸಾಧಕ-ಬಾಧಕಗಳನ್ನು ಚರ್ಚಿಸಲು ವಾಸು ಮತ್ತು ಆತನ ಸಹಕಾರ್ಯಕರ್ತರು ಒಂದು ಕಾಲೇಜಿನ ಸಭಾಂಗಣದಲ್ಲಿ ಒಂದು ಸಭೆ ಕರೆದಿದ್ದರು. ಅನಿರೀಕ್ಷಿತವಾಗಿ ನನ್ನನ್ನು ಅದರಲ್ಲಿ ಭಾಗವಹಿಸಲು ಕರೆದಿದ್ದರು. ಸಭೆಯಲ್ಲಿ ನಾನು ಹೇಳಿದೆ, “ನನ್ನನ್ನೇಕೆ ಕರೆದಿರಿ? ನಾನು ಈ ಕಾಯಿದೆಯ ಕಟ್ಟಾ ವಿರೋಧಿ. ಈ ತೇಪೇದಾರಿ ಪ್ರಕ್ರಿಯೆಯನ್ನು ಹಸನುಗೊಳಿಸಲು ನೀವು ಸೂಚನೆಗಳನ್ನು ನೀಡುತ್ತಿದ್ದೀರಿ”, ಇತ್ಯಾದಿಯಾಗಿ ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೆ. ವಾಸು ಅಸಮಾಧಾನ ವ್ಯಕ್ತಪಡಿಸುತ್ತಾನೇನೋ ಎಂಬ ಅಳುಕು ನನಗಿತ್ತು. ಆದರೆ ಅವನೇನೂ ಟೀಕೆ ಮಾಡದೆ ಯೋಜನೆ ಫಲಪ್ರದವಾಗಿಸಲು ಏನೆಲ್ಲಾ ಮಾಡಬಹುದೆಂಬುದನ್ನು ವಿವರಿಸಿದ. “ರಾಮಕೃಷ್ಣ ಅವರ ಅಭಿಪ್ರಾಯ ಸಕಾರಣವೇ ಹೌದು, ಆದರೆ ಸದ್ಯದಲ್ಲಿ ದೊರಕುವ ಸವಲತ್ತನ್ನು ನಿರಾಕರಿಸುವುದು ಹಿನ್ನಡೆಯಾಗುತ್ತದೆ”, ಎಂದು ವಾದ ಮಂಡಿಸಿದ.

ಈಚಿನ ವರ್ಷಗಳಲ್ಲಿ ಕುಟುಂಬದಲ್ಲಿ ಇನ್ನೊಂದು ಪ್ರಕರಣವು ನಮ್ಮನ್ನೆಲ್ಲಾ ತೀರಾ ಘಾಸಿಗೊಳಿಸಿತ್ತು. ಅದನ್ನು ವಾಸು ನಿಭಾಯಿಸಿದ ರೀತಿ ಅನನ್ಯವಾಗಿತ್ತು. ಸರ್ವಥಾ ಫಲಪ್ರದವಾಗಿತ್ತು. ಅದನ್ನಿಲ್ಲಿ ವಿಸ್ತರಿಸ ಹೋಗುವುದಿಲ್ಲ. ಅವನ ಕಾಳಜಿ, ನಿಷ್ಠೆ, ಯೋಜನಾ ಚಾತುರ್ಯ, ಇವನ್ನೆಲ್ಲಾ ನಮ್ಮ ಕುಟುಂಬಗಳಲ್ಲಿ ಎಲ್ಲರೂ ಶ್ಲಾಘಿಸಿದ್ದೇವೆ. ಅವನಿಗೆ ತಲೆಬಾಗಿದ್ದೇವೆ. ಅವನ ಬಹುಮುಖೀ ಚಟುವಟಿಕೆಗಳು ನಾಟಕದ ಕ್ಷೇತ್ರವನ್ನೂ ಒಳಗೊಂಡಿದೆ. ಮೈಸೂರಿನ ಹಿರಿಯ ನಟರು, ನಿರ್ದೇಶಕರೊಡನೆ ಮತ್ತು ಕಾಲೇಜು ರಂಗಭೂಮಿಯಲ್ಲೂ ಇವನು ಕೆಲಸ ಮಾಡಿದ್ದಾನೆ. ಅವನ ಸಹಾಯಹಸ್ತದ ವ್ಯಾಪ್ತಿ ಹಿಗ್ಗಲಿ, ಇನ್ನೂ ಹೆಚ್ಚಿನ ಸಾಫಲ್ಯ ಪಡೆಯಲೆಂದು ಆಶಿಸುತ್ತೇನೆ. 

“ಮಾ ಕಶ್ಚಿತ್‌ ದುಃಖ ಭಾಗ್ಭವೇತ್‌” ಎಂಬ ಅವನ ಮೌಲಿಕ ಆಶಯವು ನಮ್ಮೆಲ್ಲರ ಆಶಯವೂ ಹೌದು. ಅವನಷ್ಟು ಶ್ರಮಿಸದಿದ್ದರೂ ನಾವೆಲ್ಲಾ ಅವನ ಅಭಿಮಾನಿಗಳು ಮತ್ತು ಹಿತೈಷಿಗಳು. ಅವನ ಯಶಸ್ಸನ್ನು ನಮ್ಮ ಯಶಸ್ಸೆಂದೂ ನಾವು ಭಾವಿಸಿಕೊಂಡರೆ ಅದನ್ನವನು ಮನ್ನಿಸುತ್ತಾನೆಂದು ಆಶಿಸುತ್ತೇವೆ. 

  • ಡಾ ಜಿ. ರಾಮಕೃಷ್ಣ ನಾಡಿನ ಹಿರಿಯ ಚಿಂತಕರು, ಬರಹಗಾರರು, ಶಿಕ್ಷಣತಜ್ಞರು.