vasu-blogs-2-2

ವಾಸು ಅಂದರೆ ಏನು? – ಡಾ. ಕಮಲಾಕರ ಕಡವೆ

Last Updated: February 21, 2026By

ವಾಸುದೇವ ಶರ್ಮಾ ಅವರೊಂದಿಗೆ ನನ್ನ ಒಡನಾಟ ಇದ್ದದ್ದು ಕೇವಲ ಒಂದು ವರುಷ ಮಾತ್ರ: ಮೈಸೂರಿನ ಮಹಾರಾಜ ಕಾಲೇಜಿನಲ್ಲಿ, 1985-86 ರ ಅವಧಿಯಲ್ಲಿ. ಪತ್ರಿಕೋದ್ಯಮದಲ್ಲಿ ಪದವಿ ಕಲಿಯಲು ಶಿರಸಿಯಿಂದ ನಾನು ʻಫಾರ್ಮ್ ಫ್ರೆಶ್’ ಹುಡುಗನಾಗಿ ಬಂದಿದ್ದೆ. ವಾಸು ಪದವಿಯ ಅಂತಿಮ ವರುಷದ ವ್ಯಾಸಂಗ ನಡೆಸಿದ್ದರು. ಮಹಾರಾಜ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳ ಸಂಘ, ʻನೆಳಲು ಬೆಳಕುʼ ರಂಗ ತಂಡ ಹಾಗೂ ನಾವೇ ಶುರುಮಾಡಿಕೊಂಡಿದ್ದ “ನುಡಿ” ಎಂಬ ಸೈಕಲೋಸ್ಟೈಲ್ ಕಾಲೇಜು ವಿದ್ಯಾರ್ಥಿಗಳ ಪತ್ರಿಕೆಗಳ ಮೂಲಕ ಆ ವರುಷದುದ್ದಕ್ಕೂ ನಾನು ಮತ್ತು ವಾಸು ಗಳಸ್ಯ ಕಂಠಸ್ಯ. ವಾಸು ಮತ್ತು ನನ್ನ ವಾಸ ಅಕ್ಕಪಕ್ಕದ ಕಾಲೋನಿಗಳಲ್ಲಿ ಇದ್ದುದರಿಂದ ಒಡನಾಟಕ್ಕೆ ಹೆಚ್ಚು ಅವಕಾಶ. 

ನಾಟಕದಲ್ಲಿ ಭಾಗವಹಿಸುವ ಮೊದಲ ಅವಕಾಶ ನನಗೆ ದೊರಕಿದ್ದು ವಾಸು ನಿರ್ದೇಶನದ ಒಂದು ಬೀದಿ ನಾಟಕದಲ್ಲಿ. ಮುಂದೆ ಜಯರಾಂ ರಾಯಪುರ ನಿರ್ದೇಶನದ “ಆಸ್ಫೋಟ” ನಾಟಕದಲ್ಲಿ ನಾವಿಬ್ಬರೂ ಜೊತೆಗೆ ನಟಿಸಿದ್ದೆವು. “ನುಡಿ”ಯ ಸೈಕ್ಲೋಸ್ಟೈಲ್‌ ಟೈಪ್‌ ಮಾಡಿಸಿ ಪ್ರತಿಗಳನ್ನು ಮಾಡಿಸುವಾಗ ವಾಸು ಜೊತೆ ಇರ್ತಾ ಇದ್ರು. ಅಂತೂ, ಆ ಒಂದು ವರ್ಷ ವಾಸು ಅವರನ್ನ ಬೆನ್ನತ್ತಿದ ಪಿಶಾಚಿ ನಾನು. ನಾವೆಷ್ಟು ಅಲೆಯುತ್ತಿದ್ದೆವೆಂದರೆ ವಾಸು ಅವರ ತಂದೆ ನಮಗೆ ಒಂದು ನಾಣ್ಣುಡಿ ಹೇಳುತ್ತಿದ್ದರು: “ಕೂರೋದಕ್ಕೆ ಪುರುಸೊತ್ತು ಇಲ್ಲ. ಮಾಡೋದಕ್ಕೆ ಕೆಲಸ ಇಲ್ಲ”. ನಮಗಂತೂ ನಾವು ಅದೆಷ್ಟು ಪ್ರಾಮುಖ್ಯದ ಕೆಲಸಗಳಲ್ಲಿ ತೊಡಗಿದ್ದೆವು ಎಂಬ ಭ್ರಮೆ ಇತ್ತು ಎಂದರೆ, ನಾಳೆಯೇ ಜಗತ್ತು ಬದಲಾಯಿಸಿ ಬಿಡುವಷ್ಟು. ವರುಷದ ಕೊನೆಯಲ್ಲಿ ನೆಳಲು ಬೆಳಕು ತಂಡದ ಕುರಿತಾದ ತಮ್ಮ ಆತಂಕ ಆಕಾಂಕ್ಷೆಗಳ ಬಗ್ಗೆ ವಾಸು ಒಂದು ಕವಿತೆ ಬರೆದಿದ್ದರು. ಅದನ್ನು ಓದಿ, ನಾನೂ ಸಹ ಕಾವ್ಯುತ್ತರ ಕೊಟ್ಟಿದ್ದೆ.

ವಾಸು ಅವರ ಜೊತೆಗೆ ಕಾಲೇಜಿನಲ್ಲಿ ಒಂದು ವರುಷ ಮಾತ್ರ ಒಡನಾಟ. ಆಮೇಲೆ ಆಗೀಗ ನಮ್ಮ ಆತ್ಮೀಯ ಭೇಟಿ. ಶಶಿಧರ ಭಾರಿಘಾಟ್ ಅವರೊಂದಿಗೆ ನನ್ನ ಊರು ಕಡವೆಗೆ ಬಂದಿದ್ದು; ಪುಣೆಯಲ್ಲಿರುವಾಗ ಮತ್ತು ಅದೆಷ್ಟೋ ವರುಷಗಳ ನಂತರ ಅಹಮದ್‌ ನಗರಕ್ಕೆ ಒಮ್ಮೆ ಅವರು ಭೇಟಿ ನೀಡಿದ್ದು. ಅಲ್ಲದೇ, ನಾನು ಬೆಂಗಳೂರಿಗೆ ಹೋದಾಗ ಒಮ್ಮೊಮ್ಮೆ ಅವರ ಭೇಟಿ. ಫೋನು ಪತ್ರ ವ್ಯವಹಾರವೂ ಸತತವಾಗಿ ನಮ್ಮ ನಡುವೆ ಇರಲಿಲ್ಲ. ಹಾಗೆ ನೋಡಿದರೆ, ಅಷ್ಟು ಕಡಿಮೆ ಕಾಲ ಜೊತೆಗಿದ್ದು ಇಷ್ಟು ದೀರ್ಘಕಾಲ ಗೆಳೆತನ ಉಳಿದು ಬೆಳೆದಿರುವುದು ನನಗೊಂದು ಸೋಜಿಗ. ನನ್ನೊಂದಿಗೆ ಅದಕ್ಕಿಂತ ಹೆಚ್ಚು ವರುಷ ಜೊತೆಗೆ ಓದಿದ ಹಲವರ ಹೆಸರೂ ನೆನಪಿಲ್ಲದಿರುವಾಗ!      

ಮಹಾರಾಜ ಕಾಲೇಜು ಬಿಟ್ಟು ವಾಸು ಬೆಂಗಳೂರಿಗೆ ಹೋದ ಮೇಲೂ ನನ್ನ ಜೊತೆಗೇ ಇದ್ದರು ಮನಸ್ಸಿನಲ್ಲಿ, ನನ್ನ ಕಲ್ಪನೆಯ ಜಗತ್ತಿನ ಸ್ಥಾಯಿ ಸದಸ್ಯನಾಗಿ. ನನ್ನ ಆಂತರಿಕ ಸಂಭಾಷಣೆಗಳಲ್ಲಿ, ನನ್ನ ಮನಸ್ಸಿನಲ್ಲಿ ನಡೆಯುವ ಹಲವಾರು ಮಾತುಗಳಲ್ಲಿ ವಾಸು ಯಾವಾಗಲೂ ಇರುತ್ತಿದ್ದರು. ಯಾವುದೋ ಕವಿತೆ ಬರೆದಾಗ, ಯಾವುದೋ ಪುಸ್ತಕ ಓದಿದಾಗ, ಯಾವುದೋ ಘಟನೆಗೆ ಸಾಕ್ಷಿಯಾದಾಗ, ಯಾವುದೋ ಒಳಿತು-ಕೆಡುಕನ್ನು ಎದುರಿಸಿದಾಗ ವಾಸು ನನ್ನ ಮನಸ್ಸಿನಲ್ಲಿ ಹಾಜರಾಗುವುದು. ನನ್ನ ಮನಸ್ಸಿನಲ್ಲಿ ನಡೆಯುತ್ತಿದ್ದ ಯುದ್ಧಗಳಲ್ಲಿ, ವಾಗ್ವಾದಗಳಲ್ಲಿ, ವಾಸು ಪ್ರವೇಶಿಸುವುದು. ಪುಣೆಯಲ್ಲಿ ಓದುವಾಗ, ಅತುಲ್ ಲೊಂಢೆ ಎಂಬ ಸ್ನೇಹಿತನಲ್ಲಿ ಹುಬೇಹೂಬ್ ವಾಸು ಪ್ರಕಟವಾದರು.      

ವಾಸು ಅಂದರೆ ಯಾರು ಎನ್ನುವ ಬದಲು ವಾಸು ಅಂದರೆ ಏನು ಎಂದು ನಾನು ಯೋಚಿಸಲು ಕಾರಣ ಹೀಗೆ ಅವರು ಮಾನಸಸಂಚಾರಿಯಾಗಿ ಸ್ಥಿತಗೊಂಡು ನನ್ನ ಪ್ರಜ್ಞೆಯ ಭಾಗವಾಗಿ ಹೋಗಿರುವುದು. ನನ್ನ ಪ್ರಜ್ಞೆಯಲ್ಲಿ ನೈತಿಕತೆಯ ಒರೆಗಲ್ಲಾಗಿ, ಸರಿ ತಪ್ಪುಗಳ ಕುರಿತು ವ್ಯವಧಾನ ಇಟ್ಟುಕೊಂಡು ವ್ಯವಹರಿಸುವಂತೆ ನೆನಪಿಸುವ ನೈತಿಕ ಧೀಶಕ್ತಿಯ ಸಂಕೇತವಾಗಿ ಬಿಟ್ಟರು ವಾಸು. ನಾನು ಬೆಳೆಯುತ್ತಾ, ನನ್ನ ವ್ಯಕ್ತಿತ್ವ ವಿಕಾಸಗೊಳ್ಳುತ್ತಾ ಇರುವಾಗಿನ ಪ್ರಯಾಣದ ಉದ್ದಕ್ಕೂ ವಾಸು ನನ್ನ ಪ್ರಜ್ಞೆಯಲ್ಲಿ ಖಾಯಂ ಇದ್ದಾರೆ. ಅವರದೊಂದು ವಿಶೇಷ ನಗು ಇದೆ. ಕಣ್ಣ ಮಿಂಚಲ್ಲಿ ಶುರುವಾಗುವ ಅದು ಅವರ ಕೆನ್ನೆಯ ಗುಳಿಯಲ್ಲಿ ಬಂದು ಕೂರುತ್ತದೆ. ಆ ನಗು ನನ್ನನ್ನು ಹಿಂಬಾಲಿಸುತ್ತ, ವಿಚಾರಿಸುತ್ತ, ಎಚ್ಚರಿಸುತ್ತ ಇರುತ್ತದೆ. ಹೀಗೆ, ವಾಸು ಹಲವು ಪ್ರಶ್ನೆಗಳನ್ನು ಮತ್ತೆ ಮತ್ತೆ ಕೇಳಿದರು. ಹಲವು ಪ್ರಶ್ನೆಗಳಿಗೆ ಉತ್ತರವಾದರು. ಹಲವು ಬಾರಿ ಅರ್ಧ ದಾರಿಯಲ್ಲಿ ನಿಲ್ಲಿಸಿ, ಪುನರವಲೋಕಿಸುವಂತೆ ಒತ್ತಾಯ ಮಾಡಿದರು.

ನೆಳಲು ಬೆಳಕು ರಂಗ ತಂಡದ ತಿಂಗಳ ಬೆಳಕು ನನ್ನ ಬದುಕನ್ನು ಆವರಿಸಿರುವ ರೀತಿ ಅದ್ಭುತವಾದುದು. ಕೇವಲ ನಾಟಕ ಆಡಿ ಮೋಜು ಮಾಡಿ ಮನೆಗೆ ಹೋಗಿ ಮರೆಯುವ ಪಟಾಲಂ ಅದಾಗಿರಲಿಲ್ಲ. ಅದಕ್ಕೊಂದು ಸಾಂಸ್ಕೃತಿಕ ನೆಲೆ ಇತ್ತು, ನೈತಿಕ ಧೈರ್ಯ ಇತ್ತು, ಕ್ರಿಯಾಶೀಲ ಕ್ಷಿತಿಜ ಇತ್ತು. ಅಲ್ಲಿ ಜೊತೆಯಾದ ಅದೆಷ್ಟೋ ಗೆಳೆಯ ಗೆಳತಿಯರು ಇಂದಿಗೂ ಸಂಪರ್ಕದಲ್ಲಿರುವುದು ವಿಶೇಷವಲ್ಲ ಬಿಡಿ. ಎಲ್ಲ ಗೆಳೆತನಕ್ಕೂ ಅಂತಹ ಆಪ್ತತೆ ಇರುತ್ತದೆ. ಆದರೆ ನೆಳಲು ಬೆಳಕು ರಂಗದಿನಗಳ ನೆನಪು ಹಲವರಿಗೆ ದಾರಿಯಾಗಿ, ಹಲವರಿಗೆ ದೀಪವಾಗಿ, ಹಲವರಿಗೆ ದಿಕ್ಕಾಗಿ ತೋರಿದ್ದು ವಿಶೇಷ. ಅದರಲ್ಲಿ, ನೆಳಲು ಬೆಳಕಿನ ರೂವಾರಿಗಳಲ್ಲಿ ಒಬ್ಬರಾದ ವಾಸು ತಮ್ಮ ವಿಶಿಷ್ಟ ಪ್ರಭಾವದಿಂದ ನನ್ನ ಬೆಳವಣಿಗೆಯನ್ನು ಪ್ರಚೋದಿಸಿದ್ದಾರೆ.

ವಾಸು ಅವರ ಬರವಣಿಗೆಯ ಕುರಿತು ಒಂದು ಮಾತು ಇಲ್ಲಿ ಹೇಳಲೇ ಬೇಕು. ಮಕ್ಕಳ ಹಕ್ಕುಗಳ ಕುರಿತ ಜಾಗೃತಿ ಅವರ ವೃತ್ತಿ ಮತ್ತು ಅದರಲ್ಲಿ ತೊಡಗಿಕೊಂಡು ಬರವಣಿಗೆಗೆ ಅವರಿಗಿದ್ದ ಅವಕಾಶಗಳು ಬಹುಶಃ ಸೀಮಿತ. ಆದರೆ, ಅವರು ಏನೇ ಬರೆದರೂ ಕಣ್ಣಿಗೆ ಕಟ್ಟುವ ವಿವರಗಳಲ್ಲಿ, ನಾಟಕೀಯತೆಯಲ್ಲಿ, ಪ್ರಸ್ತುತ ಪಡಿಸುತ್ತಾರೆ. ಓದುಗರನ್ನು ಮುಟ್ಟುವ, ಓದುಗರ ಆಸಕ್ತಿಯನ್ನು ಉಳಿಸಿಕೊಳ್ಳುವ ಗುಣ ಅವರ ಬರಹಗಳಲ್ಲಿರುತ್ತದೆ. ಅವರ ಕೆಲವು ಕಾಲಂ ಬರಹಗಳು ತುಂಬಾ ಹ್ರಸ್ವವಿದ್ದರೂ, ಪರಿಣಾಮಕಾರಿಯಾಗಲು ಈ ನಾಟಕೀಯ ಗುಣವೇ ಕಾರಣ ಎಂದು ನನಗನಿಸಿದೆ. ಅವರ ಕಾವ್ಯ ಕತೆಗಳಲ್ಲೂ ಹಾಗಾಗಿಯೇ ಸಹಜ-ಸುಲಲಿತ ಲಕ್ಷಣ ಇರುತ್ತದೆ. ಅವರು ಇನ್ನಾದರೂ ಬರವಣಿಗೆಗೆ ಸಮಯ ಕೊಡಲಿ ಎಂದು ನಾನು ಆಶಿಸುತ್ತೇನೆ. ಕನ್ನಡ ಕಾಣದ ಅದ್ಬುತ ನಾಟಕಕಾರ ವಾಸು ಹಾಗಾಗದೇ ಅವರು ಇನ್ನಾದರೂ ಕತೆ-ಕಾವ್ಯ-ನಾಟಕಗಳನ್ನು ಬರೆಯಲಿ, ಪ್ರಕಟಿಸಲಿ ಎಂದು ನಾನು ಆಶಿಸುವೆ. 

ವಾಸು ಎಂದರೆ ಏನು ಎಂದು ನಾನು ಮತ್ತೆ ಕೇಳಿಕೊಳ್ಳುತ್ತೇನೆ. ಆಗ, ಸರಿ ತಪ್ಪುಗಳ ಕುರಿತು ಪ್ರತಿ ಹೆಜ್ಜೆಯಲ್ಲೂ ಸತತ ಎಚ್ಚರ ಇಟ್ಟುಕೊಳ್ಳಬಯಸುವ ಪ್ರಜ್ಞೆ ನೆನಪಾಗುತ್ತದೆ. ಆ ಪ್ರಜ್ಞೆಗೆ ತನ್ನ ಸುತ್ತಲೂ ಸರಿ ದಾರಿಯಲ್ಲಿ ಸಾಗುವ ಹಂಬಲವುಳ್ಳ ಸಮುದಾಯ ಸೃಜಿಸುವ ಮಹತ್ವಾಕಾಂಕ್ಷೆ. ಆ ಪ್ರಜ್ಞೆಗೆ ನಾಗರಿಕ ಕರ್ತವ್ಯಗಳ ಕುರಿತು, ವೈಯುಕ್ತಿಕ ಜವಾಬ್ದಾರಿಯ ಕುರಿತು ಅಷ್ಟೇ ಕಾಳಜಿ. ನನ್ನ ಅಂತರಂಗದಲ್ಲಿರುವ ವಾಸು, ತಮ್ಮ ಬರಹಗಳಲ್ಲಿ ಕಾಣಿಸಿಕೊಳ್ಳುವ ವಾಸು, ತಮ್ಮ ವೃತ್ತಿಯ ಕ್ರಿಯಾಶೀಲ ವಾಸು ಇವೆಲ್ಲವೂ ಆ ಪ್ರಜ್ಞೆಯ ರೂಪಗಳೇ ಹೌದು. ಹಾಗಾಗಿಯೇ ವಾಸು ಅವಿಸ್ಮರಣೀಯರು. 

  • ಡಾ. ಕಮಲಾಕರ ಕಡವೆ  ಪ್ರೊ. ಮತ್ತು ಮುಖ್ಯಸ್ಥರು, ಇಂಗ್ಲಿಷ್‌ ವಿಭಾಗ, ಅಹಮದ್‌ ನಗರ ಕಾಲೇಜು, ಅಹಮದ್‌ ನಗರ, ಮಹಾರಾಷ್ಟ್ರ, ಕವಿ, ಅನುವಾದಕ, ವಿಮರ್ಶಕ.