ananda-raje-urus

ವಾಸು ಎಂಬ ಬೆಳಕಿಗೆ 60 – ಎಂ.ಕೆ. ಆನಂದ ರಾಜೇ ಅರಸ್

Last Updated: February 21, 2026By

ಮೈಸೂರಿನಲ್ಲಿರುವ ಚಾಮುಂಡಿಪುರಂನ ಪ್ರಧಾನ ವೃತ್ತ ಮೈಸೂರಿನ ಪ್ರಮುಖ ತಾಣಗಳಲ್ಲಿ ಒಂದು. ೮೦ರ ದಶಕದಲ್ಲಿ ಈ ವೃತ್ತ ಚಟುವಟಿಕೆಗಳ ಆಗರವಾಗಿತ್ತ್ತು. ಈ ವೃತ್ತದಲ್ಲಿ ರಾಷ್ಟ್ರಮಟ್ಟದ ನಾಯಕರು ಬಂದು ಭಾಷಣ ಮಾಡಿದ್ದಾರೆ. ಗಣೇಶೋತ್ಸವ ಹಾಗೂ ರಾಜ್ಯೋತ್ಸವದಂತಹ ಸಂದರ್ಭಗಳಲ್ಲಿ ನಾಡಿನ ಹಾಗೂ ದೇಶದ ಪ್ರತಿಷ್ಠಿತ ಸಂಗೀತ ವಿದ್ವಾಂಸರು ಕಛೇರಿ ನಡೆಸಿದ್ದಾರೆ. ಈ ವೃತ್ತಕ್ಕೆ ಹೊಂದಿಕೊಂಡಂತೆ ಒಂದು ತ್ರಿಕೋನಾಕಾರದ ಉದ್ಯಾನವಿದೆ. ಅದೇನು ಅಷ್ಟು ದೊಡ್ಡದಾದ ಉದ್ಯಾನವಲ್ಲ. ಆದರೂ ಅಲ್ಲಿ ಒಂದಷ್ಟು ಮಕ್ಕಳ ಆಟಕ್ಕೆ ಬೇಕಾದ ಜಾರುಗುಪ್ಪೆಯಂತಹ ಆಟದ ಪರಿಕರಗಳು, ಅಡ್ಡಾಡಲು ಒಂದಷ್ಟು ಜಾಗವಿದೆ. 

ಮೈಸೂರಿನ ಈ ಭಾಗದ ಒಂದಷ್ಟು ಯುವಕರು ಜೊತೆಗೂಡಿ ನಾ. ಶ್ರೀನಿವಾಸ್ (ಪಾಪು) ನೇತೃತ್ವದಲ್ಲಿ ʻಅಂಕ’ ಎಂಬ ಹೆಸರಿನ ಬೀದಿನಾಟಕ ತಂಡವನ್ನು ರಚಿಸಿಕೊಂಡಿದ್ದರು. (ನಾ. ಶ್ರೀನಿವಾಸ್ ನಾಡಿನ ಪ್ರಮುಖ ರಂಗಕರ್ಮಿಗಳಲ್ಲಿ ಒಬ್ಬರಾಗಿದ್ದಾರೆ.) ‘ಅಂಕ’ ಪ್ರಚಲಿತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಬೀದಿ ನಾಟಕಗಳನ್ನು ಚಾಮುಂಡಿಪುರಂನ ಈ ಉದ್ಯಾನದಲ್ಲಿ ನಿರಂತರವಾಗಿ ಪ್ರದರ್ಶನ ಮಾಡುತಿತ್ತು. ನನಗಾಗ ೧೭ ವರ್ಷವಿರಬಹುದು. ಈ ನಾಟಕದ ತಂಡದಲ್ಲಿ ನೀಳಕಾಯದ, ನೋಡಲು ಆಕರ್ಷಕವಾಗಿದ್ದ ಕನ್ನಡಕಧಾರಿ ಯುವಕನೊಬ್ಬ ತನ್ನ ಎತ್ತರದ ದನಿಯಿಂದ, ಸಂಕೋಚವಿಲ್ಲದ ಅಭಿನಯದಿಂದ ಎಲ್ಲರ ಗಮನ ಸೆಳೆಯುತ್ತಿದ್ದ. ಅದು ವಾಸು.

ಅಂಕದವರು ಬೀದಿನಾಟಕ ಮಾಡುತ್ತಿದ್ದ, ಮಕ್ಕಳ ಆಟದ ಉದ್ಯಾನದ ಪಕ್ಕದಲ್ಲೇ ಒಂದು ಟೆಲಿಫೋನ್ ಬೂತ್ ಇತ್ತು. ಅದನ್ನು ನಡೆಸುತ್ತಿದ್ದವರು ಹೆಚ್. ಎನ್. ವಿಜಯಕುಮಾರ್ ಎಂಬ ವಿಶೇಷಚೇತನರು. ಅವರಿಗೆ ಸಾಹಿತ್ಯದಲ್ಲಿ ಅಪಾರ ಆಸಕ್ತಿ. ಸ್ವಲ್ಪ ಸಮಯ ಒಂದು ಗ್ರಂಥಾಲಯವನ್ನು ಸಹ ನಡೆಸುತ್ತಿದ್ದರು. ನನಗೆ ಇಂಗ್ಲಿಷ್ ಹೇಳಿಕೊಟ್ಟವರು ಹಾಗೂ ಕಥೆಗಳನ್ನು ಹೇಳುತ್ತಾ ಸಾಹಿತ್ಯದಲ್ಲಿ ಆಸಕ್ತಿ ಮೂಡಿಸಿದವರು. ಅವರ ಮನೆಯಲ್ಲಿ ‘ಅಂಕʼ ತಂಡದ ಸದಸ್ಯರು ಬಿಡುವಿನ ವೇಳೆಯಲ್ಲಿ ಸೇರಿ, ಸಾಹಿತ್ಯ, ನಾಟಕ, ಇತ್ಯಾದಿ ಚರ್ಚಿಸುತ್ತಿದ್ದರು. ವಾಸುವಿನ ಹಾಜರಿ ಅಲ್ಲಿರುತ್ತಿತ್ತು. ಆಗೆಲ್ಲಾ ಹಲವಾರು ಬಾರಿ ವಾಸು ಭೇಟಿ ಮಾಡಿದ ನೆನಪುಗಳಿವೆ.  

ವಾಸು ನನಗಿಂತ ಒಂದು ವರ್ಷ ಹಿರಿಯ ವಿದ್ಯಾರ್ಥಿ. ನಾನು ಮಹಾರಾಜ ಕಾಲೇಜು ಸೇರಿದಾಗ (೧೯೮೫-೮೬) ಅವರು ಬಿ.ಎ ಎರಡನೇ ವರ್ಷದಲ್ಲಿದ್ದರು. ಆಗಲೇ ವಾಸು, ಶಶಿಧರ್ ಭಾರಿಘಾಟ್, ಕವಿತಾ ರತ್ನ ಜೊತೆಗೂಡಿ ನೆಳಲು ಬೆಳಕು (ನೆಬೆ) ನಾಟಕ ತಂಡ ಆರಂಭಿಸಿದರು. ಆಗಾಗಲೇ ಸಾಕಷ್ಟು ಸಾಹಿತ್ಯ ಓದಿಕೊಂಡಿದ್ದ ನಾನು ಸ್ವಾಭಾವಿಕವಾಗಿಯೇ ನೆಳಲು ಬೆಳಕಿನ ಸೆಳೆತಕ್ಕೆ ಬಿದ್ದೆ. ವಾಸು ಯಾವಾಗಲೂ ಚಟುವಟಿಕೆಯ ಜೇನುಗೂಡಾಗಿರುತ್ತಿದ್ದರು. ವಿದ್ಯಾರ್ಥಿಗಳನ್ನು ಆಕರ್ಷಿಸುವ, ಅವರನ್ನು ಕ್ರಿಯಾಶೀಲ-ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಕಲೆ ಅವರಿಗೆ ಸಹಜವಾಗಿಯೇ ಇತ್ತು. ಎಲ್ಲಾ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಆಯೋಜಿಸುತ್ತಿದ್ದರು. ಅವರ ಬಳಿ ಒಂದು ಸೈಕಲ್ ಇತ್ತು. ಆ ಸೈಕಲ್ ಹತ್ತಿದರೆ, ಅವರು ಬೇರೆ ಬೇರೆ ಚಟುವಟಿಕೆಗಳಿಗೆ, ಕಾರ್ಯಕ್ರಮಗಳಿಗೆ, ಸಂಘಟನೆ ಕೆಲಸಗಳಿಗೆ ಎಲ್ಲೆಲ್ಲಿ ಪ್ರದಕ್ಷಿಣೆ ಹಾಕುತ್ತಿದ್ದರೋ ಅವರಿಗೇ ಗೊತ್ತು. ಆ ಸೈಕಲನ್ನು ನನಗೆ ನೆನಪಿರುವಂತೆ ಮೈಸೂರು ನಗರದಲ್ಲಿ ಅವರು ಗರಿಷ್ಟ ಮಟ್ಟದಲ್ಲಿ ಉಪಯೋಗಿಸಿಕೊಂಡಿದ್ದರು. 

ಒಮ್ಮೆ ದಕ್ಷಿಣ ಭಾರತ ಮಟ್ಟದ ಅಂತರವಿಶ್ವವಿದ್ಯಾಲಯ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಮಹಾರಾಜ ಕಾಲೇಜಿನಿಂದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಬೇಕಿತ್ತು. ನಾನು ಹಲವಾರು ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಗೆದ್ದಿದ್ದರಿಂದ ನನ್ನನ್ನು ಆಯ್ಕೆ ಮಾಡುವಂತೆ ವಾಸು ನನ್ನ ಪರ ಆಯ್ಕೆ ಸಮಿತಿಯೆದುರು ವಕಾಲತ್ತು ಮಾಡಿದ್ದರು. ನೆಬೆಯ ಪ್ರತಿಭಾವಂತ ಸದಸ್ಯರನ್ನು ವಾಸು ಎಂದೂ ಬಿಟ್ಟುಕೊಡುತ್ತಿರಲಿಲ್ಲ. ಇದರೊಂದಿಗೆ ನ್ಯಾಯಕ್ಕಾಗಿ ಹೋರಾಡುವ ಮನೋಭಾವ ಅವರಲ್ಲಿ ಮೈಗೂಡಿತ್ತು.  ವಾಸು ಎಂದೂ ಉತ್ಸಾಹ ಕಳೆದುಕೊಂಡಿದ್ದನ್ನು, ಖಿನ್ನತೆಯಲ್ಲಿ ಕುಳಿತಿದ್ದನ್ನು ನಾನು ಇದುವರೆಗೆ ನೋಡಿಲ್ಲ. ಅವರಿಗೆ ಅತಿಯಾದ ಸಿಟ್ಟು ಬಂದಿರುವುದನ್ನು ನೋಡಿಲ್ಲ. ಕೆಲವೊಮ್ಮೆ ತಾತ್ವಿಕ ವಿಷಯಗಳಿಗೆ ಸಂಬಂಧಿಸಿದಂತೆ ಸಾತ್ವಿಕ ಸಿಟ್ಟು ಇರುತ್ತಿತ್ತು. ಯಾವಾಗಲೂ ನಗು ಮುಖ. ದೊಡ್ಡದಾಗಿ ನಕ್ಕಾಗ ಸುತ್ತಮುತ್ತಲಿನವರಿಗೂ ಅದು ಸಾಂಕ್ರಾಮಿಕವಾಗಿರುತ್ತಿತ್ತು. 

ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಪತ್ರಿಕೋದ್ಯಮ, ಅಪರಾಧಶಾಸ್ತ್ರ ಮತ್ತು ಸಾರ್ವಜನಿಕ ಆಡಳಿತ ವಿಷಯಗಳೊಡನೆ ಬಿ.ಎ ಅಧ್ಯಯನ ನಡೆಸುತ್ತಲೇ ನಮ್ಮೆಲ್ಲರನ್ನು ನಾಟಕದೊಡನೆ ಸಂಘಟಿಸುತ್ತಿದ್ದ ವಾಸು ಪದವಿ ಮುಗಿಸಿ, ಬೆಂಗಳೂರು ವಿಶ್ವವಿದ್ಯಾಲಯದ ಸೆಂಟ್ರಲ್ ಕಾಲೇಜಿನಲ್ಲಿ ಎಂ.ಎಸ್.ಡಬ್ಲೂ. ಮಾಡಲು ಹೊರಟರು (೧೯೮೭). 

ಮುಂದೆ ನಾನು ಮೈಸೂರು ವಿವಿಯಲ್ಲಿ ಪತ್ರಿಕೋದ್ಯಮ ಎಂ.ಎ. ಪದವಿಯೊಡನೆ ಬೆಂಗಳೂರಿಗೆ ಉದ್ಯೋಗವನ್ನರಸಿ ಬಂದಾಗ ವಾಸು ಅವರನ್ನು ಆಗಾಗ್ಗೆ ಭೇಟಿ ಮಾಡಿದ ನೆನಪುಗಳಿವೆ. ಒಮ್ಮೆ ಹಲವಾರು ನೆಬೆ ಗೆಳೆಯರನ್ನು ಅವರ ಒಬ್ಬ ಚಿಕ್ಕಪ್ಪನ ಮನೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಬಂಧುಗಳೊಡನೆ ನಾವೆಲ್ಲ ಸೇರಿ ಊಟ ಮಾಡಿದ್ದೆವು. ಮುಂದಿನ ದಿನಗಳಲ್ಲಿ ನಾನು ಉದ್ಯೋಗವರಿಸಿ ಮುಂಬೈಗೆ ತೆರಳಿದೆ. ಮುಂಬೈನ ಪ್ರೋಕ್ಟರ್ ರಸ್ತೆಯ ಬಳಿಯ ಎಲೆಕ್ಟ್ರಾನಿಕ್ಸ್‌ ಬಜಾರ್‌ನಲ್ಲಿ ನನ್ನ ವಾಸ.

ವಾಸುವಿನ ಜೀವನ ಸಂಗಾತಿಯಾದ ಲಕ್ಷ್ಮಿ, ಮಾನಸ ಗಂಗೋತ್ರಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ತತ್ರಿಕೋದ್ಯಮದಲ್ಲಿ ನಾನು ಎಂ.ಎ. ಮಾಡುತ್ತಿದ್ದಾಗ ನನ್ನ ಸಹಪಾಠಿ. ಲಕ್ಷ್ಮಿಯ ಸಂಬಂಧಿಕರು ಮುಂಬೈಯ ದಹಿಸರ್‌ನಲ್ಲಿದ್ದರು. ವಾಸು ಲಕ್ಷ್ಮಿ ಮದುವೆಗೆ ಮುನ್ನ ಒಮ್ಮೆ ವಾಸು ಕಾರ್ಯನಿಮಿತ್ತ ಮುಂಬೈಗೆ ಬಂದಿದ್ದಾಗ, ವಾಸುವಿಗೆ ನನ್ನನ್ನು ಹಾಗೂ ಅವರ ಸಂಬಂಧಿಕರನ್ನು ನೋಡಿಕೊಂಡು ಬರುವಂತೆ ಲಕ್ಷ್ಮಿ ಹೇಳಿದ್ದರಂತೆ. ವಾಸು ಮುಂಬೈ ಮಹಾನಗರಿಯಲ್ಲಿ ನನ್ನನ್ನು ಹುಡುಕಿಕೊಂಡು ಬಂದರು. ಅದೊಂದು ಖುಷಿಯ ವಿಚಾರ. ನಂತರ ನಾನು ವಾಸು ಒಟ್ಟಿಗೆ ದಹಿಸರ್‌ಗೆ ಪ್ರಯಾಣ ಬೆಳೆಸಿ ಲಕ್ಷ್ಮಿಯ ಅಜ್ಜಿ ತಾತ ಹಾಗೂ ಮಾವನನ್ನು ಭೇಟಿ ಮಾಡಲು ಹೋಗಿ ಬಂದೆವು. ದಾರಿಯುದ್ದಕ್ಕೂ ನಾವು ಸಾಕಷ್ಟು ಹರಟೆ ಹೊಡೆದ ನೆನಪು.  

ವಾಸು ನಿಮ್ಮ ಕಾಲಿನಲ್ಲಿ ಚಕ್ರವಿದೆ ಎಂದು ನಾನು ಹೇಳುತ್ತಿರುತ್ತೇನೆ. ತಿಂಗಳಲ್ಲಿ ಅರ್ಧ ಸಮಯ ಬೆಂಗಳೂರಿನಿಂದ ಹೊರಗೆ ಇರುತ್ತಿದ್ದರು. ರಾಜ್ಯದ ವಿವಿಧ ಜಿಲ್ಲೆಗಳಿಗೆ ಹಾಗೂ ರಾಜ್ಯದಿಂದಾಚೆ ಒಂದು ತರಬೇತಿ ಕಾರ್ಯಕ್ರಮಕ್ಕೋ, ಕಮ್ಮಟಕ್ಕೋ ಅಥವಾ ಇನ್ಯಾವುದೋ ಕಾರಣಕ್ಕಾಗಿ ಹೋಗುತ್ತಿರುತ್ತಾರೆ. ನನಗೆ ಗೊತ್ತಿರುವಂತೆ ಇದನ್ನು ಕಳೆದ ಮೂರೂವರೆ ದಶಕಗಳಿಂದ ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ. ಇದಕ್ಕೆ ಸಾಕಷ್ಟು ಚೈತನ್ಯ ಬೇಕು. ಆ ಶಕ್ತಿ ವಾಸುವಿಗಿದೆ. 

ವಾಸು ಮಕ್ಕಳ ಹಕ್ಕುಗಳ ಪರವಾಗಿ ಹೋರಾಡಲು ತಮ್ಮ ವೃತ್ತಿ ಬದುಕನ್ನು ಮುಡುಪಾಗಿಟ್ಟಿದ್ದಾರೆ. ಸುಮಾರು ಮೂರು ವರ್ಷಗಳ ಹಿಂದೆ ನಿಧನರಾದ ಡಾ. ಪದ್ಮಿನಿ, ವಾಸು ಅವರಿಗೆ ಒತ್ತಾಸೆಯಾಗಿದ್ದರು. ವಾಸು ಪ್ರತಿ ವರ್ಷ ಡಾ. ಪದ್ಮಿನಿಯವರ ಸ್ಮರಣಾರ್ಥ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸುತ್ತಿದ್ದಾರೆ. ಅವರ ಹೆಸರಿನಲ್ಲಿ ಮಕ್ಕಳ ಹಕ್ಕುಗಳ ಕೆಲಸ ಮಾಡುವವರಿಗೆ ಪ್ರಶಸ್ತಿ ಹಾಗೂ ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ಕೆಲಸ ಮಾಡುವ ಯುವಜನರಿಗೆ ಫೆಲೋಶಿಪ್‌ ಕೊಡುತ್ತಿದ್ದಾರೆ. ಇಂದು ರಾಜ್ಯದಲ್ಲಿ ಜಿಲ್ಲಾ ಮಟ್ಟದಲ್ಲಿ, ತಾಲ್ಲೂಕು ಮಟ್ಟದಲ್ಲಿ ಹಾಗೂ ಇನ್ನೂ ತಳಮಟ್ಟಗಳಲ್ಲಿ ಹಾಗೂ ವಿಧಾನಸೌಧದಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಅರಿವಿದ್ದರೆ, ಆ ಕುರಿತು ಚರ್ಚೆಯಾಗುತ್ತಿದ್ದರೆ ಅದರಲ್ಲಿ ವಾಸುವಿನ ಪಾತ್ರ ಪ್ರಮುಖವಾಗಿರುತ್ತದೆ. ಎಲ್ಲರೂ ʻಇಂದಿನ ಮಕ್ಕಳೇ ಮುಂದಿನ ಪ್ರಜೆಗಳುʼ ಎಂದರೆ, ಅದ್ಯಾಕೆ ಹಾಗೆ ಹೇಳುತ್ತೀರಿ? ʻಇಂದಿನ ಮಕ್ಕಳು ಇಂದೇ ಪ್ರಜೆಗಳಲ್ಲವೇʼ ಎಂದು ವಾದ ಮಂಡಿಸುತ್ತಾ ಒಂದು ಪರಿಕಲ್ಪನಾ ಬದಲಾವಣೆಗೆ ವಾಸು ಕಾರಣರಾಗಿದ್ದಾರೆ. ನಾನು ವಾಸುವಿನ ಹಲವಾರು ಚಟುವಟಿಕೆಗಳನ್ನು ಬಹಳ ಹತ್ತಿರದಿಂದ ನೋಡಿರುವುದರಿಂದ ಈ ಕುರಿತು ಇಷ್ಟು ದೃಢವಾಗಿ ಹೇಳಬಲ್ಲೆ.  

ವಾಸುವಿನ ಲಘು ಹಾಸ್ಯ ಬರಹಗಳು, ಕವಿತೆಗಳು ಅವರಲ್ಲಿರುವ ಒಬ್ಬ ಒಳ್ಳೆಯ ಸಾಹಿತಿಯನ್ನು ಆಗಾಗ್ಗೆ ನಮಗೆ ಬಯಲು ಮಾಡುತ್ತಿರುತ್ತವೆ. ಅವರ ಹಾಸ್ಯ ಬರಹಗಳು ಕುತೂಹಲದಿಂದ ಓದಿಸಿಕೊಂಡು ಹೋಗುತ್ತವೆ. ಅವರ ಎಡತೋಳಿನ ಮೂಳೆ ಮುರಿತದ ಬಗ್ಗೆ ಅವರೇ ಬರೆದುಕೊಂಡ ಪ್ರಹಸನ, ನಾಗೇಶ್‌ ಹೆಗಡೆಯವರ ನಿರೂಪಣೆಯ ಕುರಿತು ʻಕಾಳಿ ನದಿ ಕಪ್ಪು ಏಕೆ ಗೊತ್ತಾ?ʼ ಎಂದು ಬರೆದ ಲೇಖನ, ʻನದಿಯ ನೆನೆಯುವುದೇನು…ʼ ಕವನ ಅವರಲ್ಲಿನ ಉತ್ತಮ ಬರಹಗಾರ ಇನ್ನೂ ಯಾಕೆ ಹೆಚ್ಚು ಮುಖ ತೋರಬಾರದು, ಹೆಚ್ಚು ಬರೆಯಬಾರದು ಎಂಬ ಭಾವನೆಯನ್ನು ಯಾರಲ್ಲಾದರೂ ಮೂಡಿಸುತ್ತದೆ. ನಿಜಕ್ಕೂ ವಾಸು ಇನ್ನು ಮುಂದೆ ಹೆಚ್ಚು ಹೆಚ್ಚು ಸೃಜನಶೀಲ ಸಾಹಿತ್ಯ ರಚನೆಯಲ್ಲಿ ತೊಡಗಿಕೊಳ್ಳಬೇಕು. ಅವರ ಬರವಣಿಗೆಯಲ್ಲಿ ಸರಾಗ ಹರಿವಿದೆ. ಅಲ್ಲಿ ಯಾವುದೇ ಪ್ರಯಾಸ ಕಾಣುವುದಿಲ್ಲ. ಅವರೊಬ್ಬ ಸ್ವಾಭಾವಿಕ ಲೇಖಕ. ವಾಸುವಿನ ವೈಯಕ್ತಿಕ ಬದುಕಿನಲ್ಲಿ ಸಾಕಷ್ಟು ಏರುಪೇರುಗಳನ್ನು ನೋಡಿರುವ ಸಾಧ್ಯತೆಗಳಿವೆ. ವಾಸು ಎಲ್ಲವನ್ನು ಹೇಳಿಕೊಳ್ಳುವುದಿಲ್ಲ. ಆದರೆ ಎಲ್ಲವನ್ನು ಅತ್ಯಂತ ಸಕಾರಾತ್ಮಕವಾಗಿ ಸ್ವೀಕರಿಸಿದ್ದಾರೆ. ಅದಕ್ಕೊಂದು ಅಂತಃಶಕ್ತಿ ಬೇಕು. ಅದು ವಾಸುವಿನಲ್ಲಿದೆ. 

ನಾಲ್ಕು ದಶಕಗಳ ಹಿಂದೆ ಮಹಾರಾಜಾ ಕಾಲೇಜಿನಲ್ಲಿ ʻನೆಳಲು ಬೆಳಕುʼ ನಾಟಕ ತಂಡವನ್ನು ಆರಂಭಿಸಿದ ವಾಸು, ಅವರ ಜೊತೆಗಿನ ಮತ್ತಿತರ ಹಿರಿಯರು ಹಾಗೂ ಅದರ ಅಂದಿನ ಸದಸ್ಯರು ಎಲ್ಲರೂ ಈಗ ವ್ಹಾಟ್ಸ್ಅಪ್ ಗುಂಪಿನಲ್ಲಿ ಮತ್ತೆ ಒಂದಾಗಿದ್ದಾರೆ. ವಾಸು ಈ ಗುಂಪಿನ ಚೌಕಿದಾರರಾಗಿ ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ಅಂದಿನ ʻನೆಬೆʼಯ ಸಾಕಷ್ಟು ಸದಸ್ಯರನ್ನು ಗುಂಪಿನಲ್ಲಿ ಒಟ್ಟುಗೂಡಿಸಿರುವುದು ಮಾತ್ರವಲ್ಲ, ಯಾರೂ ಗುಂಪು ಬಿಟ್ಟು ಹೋಗದಂತೆ, ಹಿರಿಯಣ್ಣನಾಗಿ ಕೆಲಸ ಮಾಡುತ್ತಿದ್ದಾರೆ. ಗುಂಪಿನಲ್ಲಿ ಎಲ್ಲರೂ ಒಂದೇ ರೀತಿ ಇರುವುದಿಲ್ಲ. ಅವರೆಲ್ಲರೊಡನೆ ಸಮನ್ವಯ ಮಾಡುವುದು ಸುಲಭವಲ್ಲ. ವಾಸು ಎಲ್ಲವನ್ನು ಚಾಕಚಕ್ಯತೆಯಿಂದ ಮಾಡುತ್ತಿದ್ದಾರೆ.  

ಹೋರಾಟದ, ಸಂಘಟನೆಯ ಶಕ್ತಿ ವಾಸುವಿನ ಧಮನಿಗಳಲ್ಲಿದೆ. ಅವರು ಜೀವನದಲ್ಲಿ ಏನನ್ನು ಪಡೆದುಕೊಂಡಿದ್ದಾರೋ ಅದೆಲ್ಲಾ ಹೋರಾಟದಿಂದಲೇ. ಲಕ್ಷ್ಮಿ ಒಬ್ಬರು ಇದಕ್ಕೆ ಅಪವಾದವಿರಬಹುದು! ಒಂದು ಸರ್ಕಾರೇತರ, ಲಾಭದ ಉದ್ದೇಶವಿಲ್ಲದ ಸಂಸ್ಥೆಯನ್ನು ಸುಮಾರು ಎರಡೂವರೆ ದಶಕಗಳ ಕಾಲ ಮುನ್ನೆಡೆಸಿಕೊಂಡು ಬರುವುದು ಸುಲಭದ ಮಾತಲ್ಲ. ಆದರೆ ವಾಸು ಏಕಾಗ್ರತೆಯಿಂದ ಆ ಕೆಲಸ ಮಾಡಿದ್ದಾರೆ. ಅವರ ಬದ್ಧತೆ, ಪರಿಶ್ರಮ ಹಾಗೂ ಹೋರಾಟದ ಮನೋಭಾವ ಈ ಸಾಧನೆಗೆ ಕಾರಣವಾಗಿವೆ. ವಾಸುವಿನ ಸಂಶೋಧನಾ ಅಧ್ಯಯನ ಒಂದು ವಿಶಿಷ್ಟ ವಿಷಯವಾಗಿದೆ. ಆ ಅಧ್ಯಯನಕ್ಕೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿಯನ್ನು ಪಡೆಯಲು ನಡೆಸಿದ ನ್ಯಾಯಯುತ ಹೋರಾಟವನ್ನು ಗಮನಿಸಿದ್ದ ನಾನು, ವಾಸು ಅವರಿಗೆ, “ನೀವು ಹೋರಾಟವಿಲ್ಲದೆ ಪಿಎಚ್.ಡಿ. ಪಡೆದರೆ, ಅದಕ್ಕೆ ಅರ್ಥವೆಲ್ಲಿರುತ್ತದೆ?” ಎಂದು ಹಾಸ್ಯ ಮಾಡಿದ್ದೆ.  

ಈಗ ವಾಸುವಿಗೆ ಅರವತ್ತು ತುಂಬಿದೆ. ಇದು ಜೈವಿಕವಾದ, ಕಾಲಕ್ರಮವಾಗಿ ಲೆಕ್ಕ ಹಾಕಿದ ವಯಸ್ಸು. ವಿಪ್ರೋನ ಅಜೀಮ್‌  ಪ್ರೇಮ್‌ಜಿಯವರಿಗೆ ಸಂವಾದವೊಂದರಲ್ಲಿ ಒಬ್ಬ ಪುಟ್ಟ ಬಾಲಕಿ ಕೇಳುತ್ತಾಳೆ, “ಎಲ್ಲರೂ ಅರವತ್ತು ದಾಟಿದಾಗ ಅವರ ಚಟುವಟಿಕೆಯಿಂದ ನಿವೃತ್ತರಾಗುತ್ತಾರೆ. ಆದರೆ ನೀವು ಹೇಗೆ ಈ ವಯಸ್ಸಿನಲ್ಲಿ ಹೊಸದಾಗಿ ಯೋಚಿಸುತ್ತೀರಾ ಹಾಗೂ ಚಟುವಟಿಕೆಯಿಂದ ಇರುತ್ತೀರಾ?” ಅದಕ್ಕೆ ಪ್ರೇಮ್‌ಜಿ, “ಅದು ನಿಮ್ಮ ಮನಸ್ಸು ಹೇಗೆ ಕೆಲಸ ಮಾಡುತ್ತದೋ ಅದರ ಮೇಲೆ ಅವಲಂಬಿತವಾಗಿರುತ್ತದೆ. ನಿಮ್ಮ ಮನಸ್ಸು ಚೈತನ್ಯದಿಂದ ಇದ್ದರೆ, ನಿಮ್ಮ ದೇಹವೂ ಚೈತನ್ಯದಿಂದ ಇರುತ್ತದೆ.” ವಾಸುವಿನ ಇದುವರೆಗಿನ ಹಾಗೂ ಮುಂದಿನ ಬದುಕಿಗೆ ಪ್ರೇಮ್‌ಜಿ ಅವರ ಉತ್ತರ ಶೇಕಡ ನೂರರಷ್ಟು ಅನ್ವಯವಾಗುತ್ತದೆ.‌

  • ಎಂ.‌ ಕೆ. ಆನಂದ ರಾಜೇ ಅರಸ್, ಸಿ.ಇ.ಓ. ಸ್ಪೋರಿ ಪ್ರೈ. ಲಿ., ಜಯನಗರ, ಬೆಂಗಳೂರು.