ನಾಟಕದಿಂದ ನನ್ನನ್ನು ಮಕ್ಕಳ ಕ್ಷೇತ್ರಕ್ಕೆ ಎಳೆತಂದವರು ವಾಸು – ಅಶ್ವತ್ಥನಾರಾಯಣ

Last Updated: February 21, 2026By

ಮಹಾರಾಜ ಕಾಲೇಜಿಗೆ ಸೇರಿದ ಪ್ರಾರಂಭದಲ್ಲಿ ನನಗೆ ಅಕ್ಷರಶಃ ಆತಂಕ ಶುರುವಾಗಿತ್ತು. ಆ ದೊಡ್ಡ ಕಟ್ಟಡದ ತುಂಬಾ ಸಾವಿರಾರು ವಿದ್ಯಾರ್ಥಿಗಳು. ಯಾರಿಗೆ ಯಾರು ಗೊತ್ತೋ ಗೊತ್ತಿಲ್ಲವೋ? ನನಗೆಲ್ಲರೂ ಅಪರಿಚಿತರು. ಗ್ರಾಮೀಣ ಭಾಗಗಳಿಂದ ಉನ್ನತ ಶಿಕ್ಷಣದ ಆಶೆಯೊಂದಿಗೆ ಬಂದಿದ್ದ ಪ್ರತಿಯೊಬ್ಬ ವಿದ್ಯಾರ್ಥಿಗೂ ಆರಂಭದ ದಿನಗಳಲ್ಲಿ ಇಂತಹ ಅನುಭವವಾಗುವುದು ಸಾಮಾನ್ಯವೇ ಎನಿಸುತ್ತದೆ. ನನಗಂತೂ ಒಂದು ರೀತಿ ದಿಕ್ಕು ತೋಚದಂತಾಗಿತ್ತು. 

ಇಂತಹ ಆತಂಕದ ದಿನಗಳಲ್ಲಿ ಹೊಸ ಬೆಳಕಿನಂತೆ ಕಂಡದ್ದು ಕಾಲೇಜಿನ ನೋಟೀಸ್‌ ಬೋರ್ಡಿನಲ್ಲಿ ಒಂದು ಭಿತ್ತಿಚಿತ್ರ. ನನಗಂತೂ ಮಹದಾನಂದವಾಯಿತು. ʻನೆಬೆ ನೆಳಲು ಬೆಳಕುʼ, ಮಹಾರಾಜ ಕಾಲೇಜಿನ ಸಾಂಸ್ಕೃತಿಕ ತಂಡ ಇಂದು ಸಂಜೆ ೪ ಗಂಟೆಗೆ ಶತಮಾನೋತ್ಸವ ಭವನದ ಮುಂಭಾಗದಲ್ಲಿ ಸಭೆ ಸೇರುವುದು. ಆಸಕ್ತ ವಿದ್ಯಾರ್ಥಿಗಳು ಭಾಗವಹಿಸಲು ಆಹ್ವಾನʼ. ಅದನ್ನು ನೋಡಿ ನನಗೆ ಖುಷಿಯೋ ಖುಷಿ. ಶಾಲಾ ದಿನಗಳಿಂದಲೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದ ನನಗೆ ಈ ಆಹ್ವಾನ ನೋಡಿ ಇದು ನನಗೇ ಕೊಟ್ಟಿರುವುದು ಎಂದು ಭಾವಿಸಿದೆ. ಎಂತಹ ವರದಾನವಿದು ಎಂದುಕೊಂಡೆ. ನನ್ನ ಓರಗೆಯ ಗೆಳೆಯರಿಗೆ ನೀವೂ ಬನ್ನಿ, ಹೋಗೋಣ ಎಂದು ಕರೆ ಕೊಟ್ಟೆ. 

ʻನೆಬೆʼಯೊಂದಿಗಿನ ಆ ಸಂಜೆಯ ಸಭೆ, ಮುಂದೆ ಮೂರು ವರ್ಷಗಳ ಕಾಲ ಆ ತಂಡದೊಡನೆ ಒಡನಾಟ ಮುಂದೆ ನನ್ನ ಬದುಕಿನ ದಿಕ್ಸೂಚಿಯಾಗುತ್ತದೆ, ಭವಿಷ್ಯದಲ್ಲಿ ಈ ತಂಡ, ತಂಡದ ಸದಸ್ಯರು ನನ್ನ ಒಡನಾಡಿ ಆಗುತ್ತಾರೆ ಎಂದು ನಾನಂದು ಎಣಿಸಿರಲೇಯಿಲ್ಲ. 

ಆ ದಿನ ಸಭೆಯಲ್ಲಿ ಚಂದ್ರಶೇಖರ ಬೆಳಗೆರೆ, ಕಮಲಾಕರ ಭಟ್ಟ, ಜಯರಾಮ ರಾಯಪುರ, ಮಂದಾಕಿನಿ, ಹೀಗೆ ಬಹಳಷ್ಟು ಹಿರಿಯ ವಿದ್ಯಾರ್ಥಿಗಳು ಇದ್ದರು. ಕಮಲಾಕರ ಭಟ್ಟ ʻನೆಬೆ ನೆಳಲು ಬೆಳಕು ಸಾಂಸ್ಕೃತಿಕ ತಂಡʼ ಎಂದರೇನು, ಯಾಕೆ ನಾವು ಜೊತೆಗೂಡುವುದು ಎಂಬ ಪರಿಚಯವನ್ನು ಸಮಗ್ರವಾಗಿ ಕೊಟ್ಟರು. ಈ ತಂಡ ಹೇಗೆ ವಿದ್ಯಾರ್ಥಿಗಳಿಗ ನಾಟಕ, ಹಾಡು, ನೃತ್ಯ, ಕತೆ, ಕವನ, ಕಲೆ, ಮತ್ತಿತರ ಚಟುವಟಿಕೆಗಳಿಗೆ ಬೆಂಬಲ ನೀಡುವ ವೇದಿಕೆಯಾಗಿದೆ ಎಂದು ತಿಳಿಸಿದರು. ನೆಬೆಯ ಸಭೆಗಳು, ವಿವಿಧ ಚಟುವಟಿಕೆಗಳ ತಾಲೀಮು ಶತಮಾನೋತ್ಸವ ಭವನದೆದುರು ಕಾಲೇಜಿನ ಪಾಠದ ಅವಧಿಗಳು ಮುಗಿದ ಮೇಲೆ ಸಂಜೆ ೪ ಗಂಟೆಗೆ ನಡೆಯುತ್ತದೆ. ಆಸಕ್ತರಿಗೆಲ್ಲಾ ಆಹ್ವಾನವಿದೆ. ನಿಮ್ಮ ಪ್ರತಿಭೆ ತೋರಲು, ಬೆಳೆಯಲು ಬರಬಹುದು ಎಂದರು. ನನಗೋ ಒಳಗೊಳಗೆ ಪುಳಕ. 

ಇಷ್ಟು ಹೇಳಿದ ಕಮಲಾಕರ ʻನಾಳಿನ ಸಭೆಗೆ ನೆಬೆಯ ಸ್ಥಾಪಕರಲ್ಲಿ ಒಬ್ಬರಾದ ವಾಸುದೇವ ಶರ್ಮಾ ಬರುತ್ತಾರೆ, ಅವರು ನಮ್ಮೊಂದಿಗೆ ಇನ್ನೂ ಹೆಚ್ಚಿನ ಸಂಗತಿಗಳನ್ನು ತಿಳಿಸುತ್ತಾರೆʼ ಎಂದರು. ಮರುದಿನ ವಾಸುದೇವ ಶರ್ಮಾ ಸಭೆಗೆ ಬಂದರು. ನಮ್ಮೊಂದಿಗೆ ವೃತ್ತದಲ್ಲಿ ಕುಳಿತು, ಬೆರೆತು ಮಾತನಾಡಿದರು. ಏನೋ ಕಲಿಯುವಂತಹದು ಇಲ್ಲಿದೆ ಎಂದು ನನಗೆ ಅನ್ನಿಸಿತು. ಅವರ ವ್ಯಕ್ತಿತ್ವ, ನಡವವಳಿಕೆ, ಮಾತು ನನ್ನನ್ನೂ, ನನ್ನೊಡನೆ ಬಂದಿದ್ದ ಹೊಸ ಹುಡುಗ ಹುಡುಗಿಯರನ್ನು ಆಕರ್ಷಿಸಿತು. ಅವರ ಸರಳವಾದ ಮಾತುಕತೆ, ನಮ್ಮೊಡನೆ ನಡೆದುಕೊಂಡ ರೀತಿ ವಾಸುದೇವ ಶರ್ಮಾ, ಮುಂದೆ ಅವರು ನಮ್ಮಂತಹವರಿಗೆ ʻವಾಸು ಅಣ್ಣʼನಾದರು. ನನ್ನನ್ನೂ ಒಳಗೊಂಡು ನೆಬೆಯ ಬಳಗದವರನ್ನೆಲ್ಲಾ ಅತ್ಯಂತ ಆತ್ಮೀಯತೆಯಿಂದ, ಅದ್ಭುತವಾಗಿ ಪ್ರೀತಿಸುವವರಾದರು, ಬೆಂಬಲಿಸುವವರಾದರು.

ಮಹಾರಾಜ ಕಾಲೇಜು ಶಿಕ್ಷಣ ಮುಗಿಸಿದ ಮೇಲೂ ನನ್ನೊಡನೆ, ನೆಬೆಯ ನನ್ನ ಗೆಳೆಯರೆಲ್ಲರೊಡನೆ ವಾಸುದೇವ ಶರ್ಮಾ ಒಡನಾಟ ಮುಂದುವರಿಸಿದರು. ನನ್ನಂತೆ ನೆಬೆಯೊಡನೆ ಕಂಡುಕೊಂಡಿದ್ದ ಬಹುತೇಕ ಗೆಳೆಯರು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡೆವು. ಸಮಾಜದ ಒಳಿತಿಗಾಗಿ ವಿವಿಧ ರೀತಿಯ ಕೆಲಸಗಳನ್ನು ಪ್ರಾರಂಭಿಸಿದೆವು. ಸಮಾಜವನ್ನು ಕುರಿತು ನಮ್ಮ ಕೆಲವರ ಗಮನಿಸುವಿಕೆ ಕಷ್ಟದಲ್ಲಿರುವ ಮಕ್ಕಳಿಗೆ ಆಶ್ರಯದ ಆವಶ್ಯಕತೆಯನ್ನು ಗುರುತಿಸಿತು. ಈ ಗಮನಿಸುವಿಕೆ ಮತ್ತು ಚರ್ಚೆಯಲ್ಲಿ ತೊಡಗಿಕೊಂಡ ʻನೆಬೆʼಯ ಅನುಭವದ ನಾವು ಕೆಲವರು ಒಂದು ವಿಶಿಷ್ಟವಾದ ಮಕ್ಕಳ ಆಶ್ರಯತಾಣವನ್ನು ಮೈಸೂರಿನಲ್ಲಿ ಆರಂಭಿಸಿದೆವು. ನಮ್ಮ ಕಲ್ಪನೆಗೆ ವಾಸು ಮಾಡಿದ ಸಹಾಯವನ್ನು ನಾವು ಮರೆಯಲು ಸಾಧ್ಯವಿಲ್ಲ. ಆ ಸಮಯದಲ್ಲಿ ವಾಸು ಕ್ರೈ ಚೈಲ್ಡ್‌ ರಿಲೀಫ್‌ ಅಂಡ್‌ ಯೂ ನಲ್ಲಿ ಮಕ್ಕಳ ಹಕ್ಕುಗಳನ್ನು ಕುರಿತು ಕೆಲಸ ಮಾಡುತ್ತಿದ್ದರು. ಕ್ರೈ ಸಂಸ್ಥೆಯಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶದ ಚಟುವಟಿಕೆಗಳ ನಿರ್ವಹಣೆ ಮಾಡುತ್ತಿದ್ದರು. ನಮ್ಮ ಕಲ್ಪನೆಗಳೊಡನೆ ಅವರ ಸಲಹೆಗಳು ಒಗ್ಗೂಡಿ ಸಂಸ್ಥೆಗೆ ಅತ್ಯಾವಶ್ಯಕವಾದ ಮತ್ತು ದೀರ್ಘಾವಧಿ ಹಣಕಾಸು ಬೆಂಬಲ ಕ್ರೈ ಸಂಸ್ಥೆಯಿಂದ ಬಂದಿತು. ೯೦ರ ದಶಕದ ಆ ದಿನಗಳಲ್ಲಿ ಸಿಕ್ಕಿದ ಮೊದಲ ಬೆಂಬಲದೊಂದಿಗೆ ಸಂಸ್ಥೆ ಸಮರ್ಥವಾಗಿ ಬೆಳೆದಿದೆ. ಮಕ್ಕಳ ಹಕ್ಕುಗಳನ್ನು ಎತ್ತಿಹಿಡಿಯುವ ಕೆಲಸದಲ್ಲಿ ತೊಡಗಿದೆ. ನಾನು ಅದಕ್ಕೆ ಒಂದು ಸಾಕ್ಷಿ ಪ್ರಜ್ಞೆ ಮಾತ್ರ. 

ಅನಿವಾರ್ಯ ಕಾರಣಗಳಿಂದಾಗಿ ನಾನು ಮೈಸೂರನ್ನೂ ಆ ಸಂಸ್ಥೆಯನ್ನೂ ತೊರೆಯಬೇಕಾಯಿತು. ನಾನು ಪಾಂಡವಪುರದಲ್ಲಿನ ನನ್ನ ಮನೆ, ಊರನ್ನು ಬಿಟ್ಟು ಬಹಳ ಕಾಲವಾಗಿತ್ತು. ನನ್ನ ಆರೋಗ್ಯ ಹದಗೆಟ್ಟಿತ್ತು. ಕಷ್ಟದ ದಿನಗಳು. ಬದುಕು ದಿಕ್ಕಾಪಾಲಾಗಿತ್ತು. ನಮ್ಮ ದಿನಸಿ ಅಂಗಡಿಯಲ್ಲಿ ಕುಳಿತು ವ್ಯಾಪಾರ ಮಾಡಲು ಅದೇಕೋ ಮನಸ್ಸೇ ಇರಲಿಲ್ಲ. ಖಿನ್ನತೆಯತ್ತ ಜಾರುತ್ತಿರುವೆನೇನೋ ಎಂಬ ಭಯ ಕಾಡುತ್ತಿತ್ತು. ಆ ಸಮಯದಲ್ಲಿ ನನ್ನ ಪರಿಚಯದ ಒಬ್ಬ ಶಿಕ್ಷಕರು ತಮ್ಮ ತಾಲೂಕಿನಲ್ಲಿ ಶಾಲೆ ಬಿಡುವ ಮಕ್ಕಳ ಸಂಖ್ಯೆ ಅತಿಯಾಗಿದೆ, ವರ್ಷದಿಂದ ವರ್ಷಕ್ಕೆ ಇದು ಹೆಚ್ಚುತ್ತಿದೆ ಎಂಬ ಆತಂಕಕಾರಿ ವಿಚಾರವನ್ನು ಎದುರಿಟ್ಟರು. ಸ್ಥಳೀಯ ಬಿಆರ್‌ಸಿ ಕಛೇರಿಗೆ ಒಯ್ದು ಅಂಕಿಸಂಖ್ಯೆಯನ್ನು ಒಳಗೊಂಡು, ನಿರ್ದಿಷ್ಟವಾಗಿ ಶಾಲೆ ಬಿಟ್ಟಿರುವ ಮಕ್ಕಳ ಪಟ್ಟಿಯನ್ನೂ ನೀಡಿದರು. ಆ ಸಂಖ್ಯೆ, ಶಾಲೆ ಬಿಟ್ಟಿರುವ ಮಕ್ಕಳ ಪ್ರಮಾಣ ನೋಡಿ ನಿಜವಾಗಿಯೂ ನನಗೆ ಗಾಬರಿ ಆಯಿತು. ʻಏನಾದರೂ ಮಾಡಿ ನಮ್ಮ ಮಕ್ಕಳನ್ನು ಶಾಲೆಗೆ ಮತ್ತೆ ತರಲು ನಿಮ್ಮಂತಹವರ ನೆರವು ಬೇಕುʼ ಎಂದು ಸರ್ಕಾರದ ಅಧಿಕಾರಿಗಳು ಹೇಳಿದರು. 

ನನಗೆ ತಿಳಿದಿದ್ದುದು ವಾಸು ಅವರನ್ನು ಸಂಪರ್ಕಿಸುವುದು. 

ವಾಸು ಅವರು ನೀಡಿದ ಸಲಹೆ, ಮಾರ್ಗದರ್ಶನದಲ್ಲಿ ನಾನು ನನ್ನ ತಾಲೂಕಿನಲ್ಲಿ ೨೦ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡೆ. ಕಾರ್ಯಪ್ರವೃತ್ತನಾದೆ. ವಾಸು ಅವರು ಬೆಂಬಲ ಇದ್ದೇ ಇತ್ತು. ಕ್ರೈ ಮೂಲಕ ಆರ್ಥಿಕ ಸಹಾಯವನ್ನೂ ಒದಗಿಸಿದರು. ಸಮುದಾಯ, ಮಕ್ಕಳು, ಶಿಕ್ಷಣ ಇಲಾಖೆ, ಸ್ವಯಂಸೇವಾ ಸಂಸ್ಥೆಗಳೊಡನೆ ಕೆಲಸದಲ್ಲಿ ತೊಡಗಿಕೊಂಡೆ. ನನ್ನ ಖಿನ್ನತೆ ದೂರವಾಯಿತು.  ಮನಸ್ಸು ಅರಳಿತು. ಆರೋಗ್ಯವೂ ಸುಧಾರಿಸಿತು.   

ನನ್ನ ಕೆಲಸಗಳ ಮೂಲಕ ಮುಂದಿನ ಮೂರು ವರ್ಷಗಳಲ್ಲಿ ನಮ್ಮ ಪ್ರಾಂತದಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಮತ್ತೆ ತರುವ ಕೆಲಸಗಳು ಫಲ ಕೊಟ್ಟಿತು.  ಹಾಗೆಯೇ ಶಾಲೆ ಬಿಡುವ ಮಕ್ಕಳ ಸಂಖ್ಯೆಯಲ್ಲಿ ಇಳಿತ ಕಂಡುಬಂದಿತು. ನನಗೆ, ನನ್ನ ಕೆಲಸಕ್ಕೆ ಮನ್ನಣೆ, ಗುರುತು ಸಿಕ್ಕಿತು. ನಾನು ನನ್ನ ಸಮುದಾಯ ಮತ್ತು ಜನರ ನಡುವೆ ಅಸ್ತಿತ್ವ ಕಂಡುಕೊಂಡೆ. ಗೌರವಕ್ಕೂ ಪಾತ್ರನಾದೆ. ಮುಂದೆ ವಾಸು ಅವರ ಮಾರ್ಗದರ್ಶನದಲ್ಲಿ ಮಕ್ಕಳ ನ್ಯಾಯ ಕಾಯಿದೆ ಜಾರಿ ವ್ಯವಸ್ಥೆಯಾದ, ಮಂಡ್ಯ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿಯಲ್ಲೂ ಕಾರ್ಯ ನಿರ್ವಹಿಸಿದೆ. ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳ ಕಾರ್ಯಕರ್ತರ ನಡುವೆ ಒಬ್ಬನಾಗಿ ಬೆಳೆದೆ. 

ಸ್ನೇಹಜೀವಿಯೂ, ಮಕ್ಕಳ ಹಕ್ಕುಗಳು, ಕಾನೂನುಗಳನ್ನು ಕುರಿತು ಮಾಹಿತಿ ಹಂಚಿಕೆಯಲ್ಲಿ ಸದಾ ಮುಂದಾಗುತ್ತಿರುವ ವಾಸು ಅವರನ್ನು ಪ್ರೀತಿಸುವ, ಸದಾಕಾಲಕ್ಕೂ ಜೊತೆಯಾಗುವ ಅನೇಕ ಗೆಳೆಯರು, ವೃತ್ತಿಶೀಲರು ರಾಜ್ಯದಾದ್ಯಂತ ಇದ್ದಾರೆ. ವಾಸು ನಾನು ಕಂಡಿರುವಂತೆ ಕೀರ್ತಿಶನಿಯ ಹಿಂದೆ ಓಡುವುದಿಲ್ಲ. ಯಾರಿಗೂ ತನಗೆ ಅಧಿಕಾರ, ಪ್ರಶಸ್ತಿ ಕೊಡಿ ಎಂದು ಬೇಡುವುದಿಲ್ಲ. ಸ್ವಾಭಿಮಾನಿಗಳು ನಮ್ಮ ವಾಸು. 

ಅಶ್ವತ್ಥನಾರಾಯಣ, ಪಾಂಡವಪುರ, ನಿಕಟಪೂರ್ವ ಅಧ್ಯಕ್ಷರು, ಮಕ್ಕಳ ಕಲ್ಯಾಣ ಸಮಿತಿ, ಮಂಡ್ಯ ಜಿಲ್ಲೆ