ಶರ್ಮನೆಂದರೆ ಮಕ್ಕಳ ಹಕ್ಕುಗಳ ವಿಶ್ವಕೋಶ ಮತ್ತು – ಶಿವರಾಂ ಪೈಲೂರು
ಮೈಸೂರಿನ ಮಹಾರಾಜ ಕಾಲೇಜು ದಿನಗಳಲ್ಲಿ ಶರ್ಮನೆಂದರೆ ಜುಬ್ಬಾ ಅಥವಾ ತುಂಬು ತೋಳಿನ ಅಂಗಿ, ಸಾದಾ ಪ್ಯಾಂಟು, ಕ್ರಾಸ್ ಆಗಿ ಇಳಿಬಿಡುತ್ತಿದ್ದ ಬಟ್ಟೆ ಚೀಲ, ಮೂಗಿನ ಮೇಲೆ ಆಗಾಗ ಸರಿಪಡಿಸುತ್ತಿದ್ದ ತುಸು ದಪ್ಪನೆಯ ಗಾಜಿನ ಕನ್ನಡಕ, ಹೀರೋ ಅಥವಾ ಅಂಥದ್ದೇ ಯಾವುದೋ ಬ್ರಾಂಡಿನ ಸೈಕಲ್. ಮೊದಮೊದಲು `ವೇದಿಕೆ’ ಬಳಗದಲ್ಲಿ ಸಕ್ರಿಯ. ನಂತರ `ನೆಳಲು ಬೆಳಕು’ ಅವನುಸಿರು.
ಎಂ.ಎಸ್.ಡಬ್ಲ್ಯು. ನಂತರ ಶರ್ಮನೆಂದರೆ ಸಮಾಜಮುಖಿ ಹೆಜ್ಜೆಗಳು. ಪ್ರಮುಖವಾಗಿ ಅವನು ಆರಿಸಿಕೊಂಡದ್ದು ಮಕ್ಕಳ ಹಕ್ಕುಗಳ ಕ್ಷೇತ್ರ. ಹಗಲಿರುಳು, ವರ್ಷಪೂರ್ತಿ ಎಂಬಂತೆ ಅದರದೇ ಧ್ಯಾನ; ಬಹುಮುಖಿ ಕೆಲಸಕಾರ್ಯಗಳು. ಮಕ್ಕಳ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿ ಸರಕಾರದ ಮಟ್ಟದಲ್ಲಿ ಸೂಕ್ತ ನೀತಿ ನಿರೂಪಣೆಗಾಗಿ ಒತ್ತಾಯ-ಒತ್ತಡದಿಂದ ಹಿಡಿದು ಅವುಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಅಗತ್ಯವಿರುವ ಭೂಮಿಕೆ ಸಿದ್ಧಪಡಿಸುವ ತನಕ ಒಂದೇ ಎರಡೇ ಹತ್ತು ಹಲವಾರು ಜವಾಬ್ದಾರಿಗಳು. ಎಲ್ಲವನ್ನೂ ಜಾಣ್ಮೆಯಿಂದ ಸಮರ್ಥವಾಗಿ ನಿಭಾಯಿಸುವುದರಲ್ಲಿ ಶರ್ಮನದು ಎತ್ತಿದ ಕೈ.
`ಎಲ್ಲ ಹಕ್ಕುಗಳು ಎಲ್ಲ ಮಕ್ಕಳಿಗೂ’ ಘೋಷವಾಕ್ಯವಿರುವ ಬ್ಯಾಡ್ಜ್ ಹಾಕದೆ ಶರ್ಮ ಮನೆಯ ಗೇಟು ದಾಟುವುದಿಲ್ಲವೇನೊ! ಈ ಬ್ಯಾಡ್ಜ್ ಇಲ್ಲದ ಶರ್ಮನ ಫೊಟೋ ಸಿಗಲಾರದು.
ಶರ್ಮನೆಂದರೆ ಓರ್ವ ಆಕ್ಟಿವಿಸ್ಟ್. ಅಪ್ರತಿಮ ಸಂಘಟಕ. ಪ್ರತಿಭಾವಂತ ಸಂಪನ್ಮೂಲ ವ್ಯಕ್ತಿ. ತನ್ನ ಆಸಕ್ತಿಯ ರಂಗಭೂಮಿ ಮತ್ತು ತಾನು ಓದಿದ ಪತ್ರಿಕೋದ್ಯಮ ಈ ಎರಡರ ಹಿನ್ನೆಲೆಯಿಂದಾಗಿ ಅತ್ಯುತ್ತಮ ಸಂವಹನಕಾರ. ಸದಾ ನಗುಮುಖ ಮತ್ತು ತಿಳಿ ಹಾಸ್ಯದ ಲೇಪವಿರುವ ಮಾತುಗಾರಿಕೆ.
ಶರ್ಮನೆಂದರೆ ನಿರಂತರ ಅಪ್ಡೇಟ್ ಆಗುತ್ತಿರುವ ಒಳ್ಳೆಯ ಮೇಷ್ಟ್ರು. ಕಾಲಿಗೆ ಚಕ್ರ, ಬೆನ್ನಿಗೆ ರೆಕ್ಕೆ ಕಟ್ಟಿಕೊಂಡವನಂತೆ ಸದಾ ರಾಜ್ಯದೆಲ್ಲೆಡೆ, ದೇಶದ ಉದ್ದಗಲ ಓಡಾಡುತ್ತ ಮಕ್ಕಳ ಹಕ್ಕುಗಳ ಬಗ್ಗೆ ಬೇರೆಬೇರೆ ಮಟ್ಟದಲ್ಲಿ ಪ್ರತಿಪಾದಿಸುತ್ತ ಬಂದಿರುವ ಶರ್ಮನಿಗೆ ಅವನೇ ಸಾಟಿ. ಚೈಲ್ಡ್ ರೈಟ್ಸ್ ಟ್ರಸ್ಟ್ ಇಂದು ಇಷ್ಟು ಗಟ್ಟಿಯಾಗಿ ಬೆಳೆದು ನಿಂತಿರುವುದರ ಹಿಂದೆ ಶರ್ಮನ ಪರಿಶ್ರಮ ಬಲು ದೊಡ್ಡದು.
ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿ ಶರ್ಮ ಸಿದ್ಧಪಡಿಸಿರುವ ಸಾಹಿತ್ಯ ಕೂಡ ಅಗಾಧವಾದುದು. ವಿಚಾರಗಳು ಸಾಧ್ಯವಾದಷ್ಟೂ ಸರಳವಾಗಿರಬೇಕು, ಸ್ಪಷ್ಟವಾಗಿರಬೇಕು ಮತ್ತು ಸುಲಭವಾಗಿ ಅರ್ಥವಾಗುವಂತಿರಬೇಕು ಎಂಬ ಉದ್ದೇಶದಿಂದಲೆ ರಚನೆಗೊಂಡ ಸಚಿತ್ರ ಪಾಠಗಳ ಅಮೂಲ್ಯ ಪಠ್ಯಗಳಿವು.
ಈ ಎಲ್ಲ ಉಸಾಬರಿಗಳ ನಡುವೆಯೆ ಶರ್ಮ ಅದು ಹೇಗೋ ಸಮಯ ಹೊಂದಿಸಿಕೊಂಡು ಡಾಕ್ಟರೇಟ್ ಮಾಡಿರುವುದು ಕೂಡ ಹೆಗ್ಗಳಿಕೆಯೆ. ಜತೆಜತೆಗೆ ಕವನ, ಲಲಿತ ಪ್ರಬಂಧ, ಇತ್ಯಾದಿ ಕೂಡ. ಮಾತಿನಷ್ಟೇ ಪ್ರೌಢಿಮೆ ಬರವಣಿಗೆಯಲ್ಲೂ.
ಶರ್ಮನೆಂದರೆ ಕನ್ನಡದ ಕಟ್ಟಾಳು. ರಾಜ್ಯದಲ್ಲಿ ಸಾರ್ವಜನಿಕ ಸೇವೆಯನ್ನು ನೀಡುವ ಯಾರೇ ಆಗಲಿ, ಅವರಿಗೆ ಕನ್ನಡ ಗೊತ್ತಿರಲೇಬೇಕು ಎಂಬುದು ಅವನ ಇರಾದೆ. ಕನ್ನಡ ಬಲ್ಲವರಾಗಿದ್ದೂ ಇಂಗ್ಲಿಷಿನಲ್ಲಿ ವ್ಯವಹರಿಸಿದರೆ ಅದನ್ನು ಸುತರಾಂ ಒಪ್ಪದ ಜಾಯಮಾನ. ಶರ್ಮನ ಉತ್ಕಟ ಕನ್ನಡಪ್ರೇಮ ತೋರಿಕೆಯದ್ದಲ್ಲ. ಅದು ಅವನ ಸಹಜಗುಣ.
ಶರ್ಮನೆಂದರೆ ಅಕ್ಕರೆಯ ಚಿಲುಮೆ. ಸ್ನೇಹದ ಬುತ್ತಿ. ಬಸ್ಸೇರುವ ಗಡಿಬಿಡಿಯಲ್ಲಿಯಲ್ಲಿರಲಿ, ರೈಲು ನಿಲ್ದಾಣದ ಗಜಿಬಿಜಿಯಲ್ಲಿರಲಿ, ಏರ್ಪೋರ್ಟಿನಲ್ಲಿ ಬೋರ್ಡಿಂಗ್ ಮಾಡುತ್ತಲಿರಲಿ ಅಥವಾ ಬೆಂಗಳೂರಿನ ಟ್ರಾಫಿಕ್ಕಿನಲ್ಲಿ ಕಾರು ಚಲಾಯಿಸುತ್ತಿರಲಿ, ಶರ್ಮ ಮೊಬೈಲ್ ಕರೆ ಸ್ವೀಕರಿಸದಿರುವುದಿಲ್ಲ.
ಸದಾ ಬ್ಯುಸಿಯಾಗಿರುವವರು ಹೇಗೋ ಬಿಡುವು ಮಾಡಿಕೊಳ್ಳುತ್ತಾರೆ ಎಂಬುದಕ್ಕೆ ಶರ್ಮನೇ ಉದಾಹರಣೆ.
ಅರವತ್ತು ತುಂಬಿರುವ ಶರ್ಮನಿಗೆ ಪ್ರೀತಿಯ ಶುಭಾಶಯಗಳು.
ಡಾ. ವಾಸುದೇವ ಶರ್ಮಾ ಅವರನ್ನು ಏಕವಚನದಲ್ಲೇ ಸಂಬೋಧಿಸಿದ್ದಕ್ಕೆ ಕ್ಷಮೆಯಿರಲಿ. ಬಹುವಚನ ಬಳಸಿದರೆ ಅದು ಕೃತಕವೆನಿಸೀತು ಎಂಬ ಕಾರಣಕ್ಕೆ ಹಾಗೆ ಬರೆದಿದ್ದೇನೆ. ಶರ್ಮ ನನಗಿಂತ ಎರಡು ತಿಂಗಳು ಹಿರಿಯ.)
ಮೇಲಿನ ಸಂಗತಿಗಳನ್ನು ಬರೆಯುವಾಗ ಮಹಾರಾಜಾ ಕಾಲೇಜಿನ ಅಧ್ಯಾಪಕರು, ಗೆಳೆಯಗೆಳತಿಯರು, ವಿಶೇಷವಾಗಿ ನೆಬೆ ಬಳಗ, ಬೆಂಗಳೂರಿನ ಸಿ ಆರ್ ಟಿ ಮತ್ತು ಶರ್ಮನ ಕುಟುಂಬ ಕಣ್ಮುಂದೆ ಬರುತ್ತಿದೆ.
ಪತ್ರಕರ್ತೆಯಾಗಿರುವ ನನ್ನ ಸಂಗಾತಿ ಅನಿತಾ ನನ್ನ ಮಾತುಗಳಿಗೆ ದನಿಗೂಡಿಸಿದ್ದಾಳೆ. ಇತ್ತೀಚಿನ ವರ್ಷಗಳಲ್ಲಿ ನಾನಾ ಮಾಹಿತಿಗಳಿಗಾಗಿ ಅವಳು ಆಗಾಗ ಶರ್ಮನನ್ನು ಸಂಪರ್ಕಿಸುವುದಿದೆ
- ಡಾ. ಶಿವರಾಂ ಪೈಲೂರು (ನಿವೃತ್ತ ವಾರ್ತಾಧಿಕಾರಿ, ಆಕಾಶವಾಣಿ ಮತ್ತು ದೂರದರ್ಶನ) ಅಂಚೆ: ಕುಕ್ಕುಜಡ್ಕ, ಸುಳ್ಯ ತಾಲೂಕು, ದಕ್ಷಿಣ ಕನ್ನಡ. ಕೃಷಿ ಪತ್ರಿಕೋದ್ಯಮಿ. ಅಶೋಕ ಇನ್ನೊವೇಟರ್ಸ್ ಫಾರ್ ದಿ ಪಬ್ಲಿಕ್ ಫೆಲೋ ಆಗಿದ್ದವರು. CAAM Centre for Agriculture and Alternative Media ಸಂಸ್ಥಾಪಕರಾಗಿದ್ದವರು.






