ವಾಸುದೇವ ಶರ್ಮಾ: ನಾಲ್ಕು ದಶಕಗಳ ನಂಟು – ನಿರಂಜನ ವಾನಳ್ಳಿ
ವಾಸುದೇವ ಶರ್ಮನಿಗೆ ಅರವತ್ತು ಆಯಿತು ಎಂದು ಅವನ ಮಡದಿ ಲಕ್ಷ್ಮಿ ನೆನಪು ಮಾಡಿದಾಗ ವಾಸುವಿನ ಜೊತೆಗೆ ನನಗೂ ಅರವತ್ತಾದುದು ನೆನಪಾಯ್ತು! ಈ ಜೊತೆಯ ಪಯಣಕ್ಕೇ ಅರವತ್ತು ಆಯ್ತೇನೋ ಎನ್ನುವಷ್ಟು ಹಳೆಯದು. ವಾಸ್ತವವಾಗಿ ಇದು ಯಾವಾಗ ಶುರುವಾಯ್ತೋ ನೆನಪಿಲ್ಲ. ಹಾಗಂತ ನಾವು ದಿನಾ ಮಾತಾಡಿಕೊಳ್ಳುವ ಸ್ನೇಹಿತರೂ ಅಲ್ಲ. ಜೊತೆಗೆ ಸೈದ್ಧಾಂತಿಕವಾಗಿ ನಮ್ಮ ನಡುವೆ ಅನೇಕ ಭಿನ್ನತೆಗಳಿರುವುದು ಈಗ ನನ್ನ ಅರಿವಿಗೆ ಬಂದಿದೆ. ಆದರೂ ನಮ್ಮ ಸ್ನೇಹಕ್ಕೆ ಅದು ಚ್ಯುತಿ ತಂದಿಲ್ಲ. ಪರಸ್ಪರ ವಿಶ್ವಾಸಕ್ಕೆ ಭಂಗ ಬಂದಿಲ್ಲ.
ವಾಸುವಿಗಿಂತ ಅವರ ಅಪ್ಪ- ಅಮ್ಮನೇ ನನಗೆ ಹೆಚ್ಚು ಬಳಕೆಯೆಂದು ಅನೇಕ ಬಾರಿ ವಾಸುವಿಗೇ ಹೇಳಿದ್ದೇನೆ. ಮಹರಾಜ ಕಾಲೇಜಿನಲ್ಲಿ ಓದುವಾಗ ಅದೆಷ್ಟು ದಿನ ಮಧ್ಯಾಹ್ನ ಅವರ ಮನೆಯಲ್ಲಿ ಠಿಕಾಣಿ ಹೂಡಿದ್ದೇವೋ ನೆನಪಿಲ್ಲ. ಆಗ ಅವರ ಬಾಡಿಗೆ ಮನೆ ಚಿಕ್ಕದು. ಆದರೆ ಮನ ತುಂಬ ದೊಡ್ಡದು. ಅವರಮ್ಮ ಮಾಡುತ್ತಿದ್ದ ಅಡುಗೆಯ ರುಚಿ ಇನ್ನೂ ನನ್ನ ಮನಸ್ಸಲ್ಲಿ ಇದೆ. ಅವರ ತಂದೆ ನೆ. ವಿಶ್ವನಾಥರು ಖಾದಿ ಮಂಡಳಿಯಲ್ಲಿ ಜಿಲ್ಲಾಧಿಕಾರಿಯಾಗಿ ಇದ್ದವರು. ಅವರ ನಿಷ್ಠುರ ವ್ಯಕ್ತಿತ್ವಕ್ಕೆ ಖಾದಿ ಮಂಡಳಿಯ ಆಡಳಿತ ಹೊಂದುತ್ತಿರಲಿಲ್ಲ. ವಾಸುವಿನ ಅಪ್ಪ ಒಳ್ಳೆಯ ಬರಹಗಾರರು- ಪ್ರಬಂಧಕಾರರು. ಹೀಗಾಗಿ ನನ್ನೊಡನೆ ಹೆಚ್ಚು ಸಲುಗೆ. ಅವರು ನಿವೃತ್ತರಾದ ಅನೇಕ ವರ್ಷಗಳ ಮೇಲೆ ಕುವೆಂಪುನಗರದ ಪಾರ್ಕಿನಲ್ಲಿ ಅವರ ಜೊತೆ ಸುತ್ತು ಹಾಕುತ್ತಿದ್ದೆ. ಆ ಸಮಯ ಜಗತ್ತಿನ ವಿಷಯಗಳೆಲ್ಲ ಸುತ್ತಿ ಬರುತ್ತಿದ್ದವು.
ವಾಸು ನನ್ನ ಸರೀಕನೇ. ಆದರೆ ಮಹರಾಜಾ ಕಾಲೇಜಲ್ಲಿ ಒಂದು ವರ್ಷ ಹಿಂದೆ ಇದ್ದ. ಆಗ ಯಾರ್ಯಾರಿಗೆ ವಿಜ್ಞಾನ ಹತ್ತುತ್ತಿರಲಿಲ್ಲವೋ, ಇಷ್ಟವಾಗಲಿಲ್ಲವೋ ಪತ್ರಿಕೋದ್ಯಮ ಕೈಬೀಸಿ ಕರೆಯುತ್ತಿತ್ತು!. ನಮ್ಮ ತರಗತಿಯಲ್ಲೂ ನಾನು, ಪೈಲೂರು, ಇನ್ನೂ ಅನೇಕರು ವಿಜ್ಞಾನದಿಂದ ಬಂದವರೇ! ವಾಸುವಿನ ತರಗತಿ ಬೇರೆಯಾದರೂ ಸದಾ ನಮ್ಮ ಜೊತೆಗೇ ಇರುತ್ತಿದ್ದ. ನಾವು ನಾಕೈದು ಜನ ಸೇರಿ ಕಾಲೇಜಿನಲ್ಲಿ ‘ಧ್ವನಿ’ ಎಂಬ ಗೋಡೆ ಪತ್ರಿಕೆ ತರುವಾಗ ಅವರ ಕ್ಲಾಸಿನಿಂದ ಅವನೊಬ್ಬನೇ ನಮ್ಮ ಸಂಪಾದಕ ಮಂಡಳಿಯಲ್ಲಿ ಇದ್ದುದು. ಇನ್ನೊಮ್ಮೆ ನಾನು ಶಶಿ, ವಾಸು, ಅಡಕಳ್ಳಿ ನಮ್ಮೂರಿಗೆ ಪ್ರವಾಸ ಹೋಗಿದ್ದೆವು. ಆಗ ನಾವು ಚರ್ಚಿಸುತ್ತಿದ್ದ ಹದಿಹರೆಯದ ವಿಷಯಗಳು, ನೆನೆದುಕೊಂಡರೆ ಇನ್ನೂ ರೋಮಾಂಚನ!
ವಾಸುವಿನಲ್ಲಿ ನಾನು ಕಂಡ ಒಂದು ವಿಲಕ್ಷಣ ಪ್ರತಿಭೆ- ಅವನು ಸುಮ್ಮನಿರುವ ವ್ಯಕ್ತಿಯೇ ಅಲ್ಲ. ಗುಂಪಲ್ಲಿ ಇರುವಾಗ ಅವನ ಕೂಗಾಟ- ಹಾರಾಟಗಳಿಂದ ಎದ್ದು ಕಾಣುವ ವ್ಯಕ್ತಿತ್ವ. ಮಕ್ಕಳ ಹಕ್ಕುಗಳಿಗಾಗಿ ಜೀವ ಸವೆಸಿದ್ದಾನೆ. ಅವನ ಕಲ್ಪನೆಯಂತೆ ಟ್ರಸ್ಟ್ ಸ್ಥಾಪಿಸಿ ದೇಶಾದ್ಯಂತ ಕೆಲಸ ಮಾಡಿದ್ದಾನೆ. ಎಲ್ಲೋ ಒಂದು ಕಡೆ ಸಂಬಳದ ಕೆಲಸಕ್ಕೆ ಒಗ್ಗಿಕೊಂಡು ಹಾಯಾಗಿ ಐಷಾರಾಮಿಯಾಗಿ ಆತ ಬದುಕಬಹುದಿತ್ತು ಎನ್ನುವಾಗ ವಾಸುವಿನ ಸೇವೆಯ ಮಹತ್ವ ಸಾಬೀತಾಗುತ್ತದೆ. ಇಂಥ ಅಸಾಂಪ್ರದಾಯಿಕ ಹೋರಾಟಗಾರರೇ ಸಮಾಜದಲ್ಲಿ ಎಲ್ಲ ವ್ಯತ್ಯಾಸವನ್ನು ಉಂಟುಮಾಡುವವರು!
ನೆಳಲು-ಬೆಳಕು ವಾಸು ಅತಿಯಾಗಿ ಹಚ್ಚಿಕೊಂಡ ಸಂಸ್ಥೆ. ಮಹಾರಾಜಾ ಕಾಲೇಜಿನ ಗೆಳೆಯರು ಸೇರಿ ಕಟ್ಟಿಕೊಂಡ ತಂಡವಿದು, ಇಂದು ೪೦ ವರ್ಷ ಪೂರೈಸಿದೆ. ಈ ನಲವತ್ತು ವರ್ಷ ಅದು ಉಸಿರಾಡಲು ವಾಸುವಿನಂಥವರ ಹಠ ಕಾರಣ. ರಂಗಭೂಮಿ ಅವನ ಜೀವನದ ಅವಿಭಾಜ್ಯ ಅಂಗ. ಅವನೂ ನಾಟಕಗಳನ್ನು ಬರೆದುದು, ನಾಟಕ ಮಾಡಿದ್ದು ಎಲ್ಲಾ ಸವಿನೆನಪು. ವಾಸುವಿನಲ್ಲಿ ಒಬ್ಬ ನಾಟಕಕಾರನಿದ್ದಾನೆ, ಪತ್ರಕರ್ತನಿದ್ದಾನೆ, ಹೋರಾಟಗಾರನಿದ್ದಾನೆ, ಬರಹಗಾರನಿದ್ದಾನೆ, ಶಿಕ್ಷಣವೇತ್ತನಿದ್ದಾನೆ, ಪ್ರೇಮಿಯಿದ್ದಾನೆ, ಈ ಎಲ್ಲಾ ಮುಖಗಳಿಗೆ ನಾನು ಸಾಕ್ಷಿ ಎಂದು ಹೆಮ್ಮೆಯಿಂದ ಹೇಳಬಲ್ಲೆ!
- ಡಾ. ನಿರಂಜನ ವಾನಳ್ಳಿ, ಪ್ರೊಫೆಸರ್, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಮಾನಸ ಗಂಗೋತ್ರಿ, ಮೈಸೂರು.






