60ರ ಹರೆಯದ ವಾಸುದೇವ ಶರ್ಮನಿಗೆ ಗೆಳೆಯ ಸಚ್ಚಿತ್‌ನ ಶುಭಾಶಯ – ಸಚಿತ್ ಶರ್ಮಾ
ಆಗಷ್ಟೆ ಪದವಿ ಪೂರ್ವ ಶಿಕ್ಷಣ ಮುಗಿಸಿ ಪದವಿ ಕಾಲೇಜು ರಂಗಕ್ಕೆ ಕಾಲಿಟ್ಟ ಆ ದಿನಗಳಲ್ಲಿ ಸ್ನೇಹ ಸಂಪಾದಿಸಿಕೊಳ್ಳುವ ಕಾತುರ ಆತುರ ಗ್ರಾಮಾಂತರದ ಪಡ್ಡೆ ಹುಡುಗರಿಗೆ ಅನಿವಾರ್ಯ. ಆ ದಿಕ್ಕಿನಲ್ಲಿ ನಾನೂ ಒಬ್ಬನಾಗಿ ಮಹಾರಾಜ ಕಾಲೇಜಿನಲ್ಲಿ ಪ್ರವೇಶ ಪಡೆದ ನಂತರದಲ್ಲಿ, ಸ್ನೇಹಿತರಿಗಾಗಿ ಹಾತೊರೆಯುತ್ತಿದ್ದ ಮನಸ್ಸಿಗೆ ಗೆಳೆಯರ ಬಳಗ ಅವಶ್ಯಕವಿತ್ತು.
ಕಾಲೇಜು ಪ್ರವೇಶಿಸಿ ಕೆಲವು ದಿನಗಳ ನಂತರದಲ್ಲಿ ಕಾಲೇಜಿನ ಕಾರಿಡಾರಿನಲ್ಲಿ ಮುಖಕ್ಕಿಂತ ದೊಡ್ಡದಾದ ಕನ್ನಡಕ, ಹೆಗಲಿಗೊಂದು ಜೋಳಿಗೆ ಧರಿಸಿದ ನವಯುವಕ ಎದುರಾಗಿದ್ದು, ಈಗಲೂ ಹಚ್ಚಹಸಿರಾಗಿ ನೆನಪಿದೆ. ನೀನು ಜರ್ನಲಿಸಂ ಹುಡುಗನಾ… ಎಂದು ತನ್ನದೇ ಹಾವಭಾವದಲ್ಲಿ ಮಾತಿಗಿಳಿದು ಸ್ನೇಹ ಸಂಪಾದಿಸಿಕೊಂಡ ಶರ್ಮಾ ಇಂದಿಗೂ ನಿರಂತರ ಸಂಪರ್ಕದಲ್ಲಿರುವುದು ಸುಲಭದ ಮಾತಲ್ಲ.
ಗೆಳೆಯರ ನಡುವೆ ಅನೇಕ ವಿಷಯಗಳಿಗೆ ಗೊಂದಲ ಮನಸ್ತಾಪ ಉದ್ಭವಿಸಿ, ಸ್ನೇಹ ಸಂಪರ್ಕದ ಕೊಂಡಿ ಮುರಿದು ಹೋಗುವುದು ಸಾಮಾನ್ಯ ಆದರೆ ವಾಸು ಎಲ್ಲರನ್ನು ಒಗ್ಗೂಡಿಸಿ ತನ್ನೊಂದಿಗೆ ಕರೆದುಕೊಂಡು ಹೋಗುವ ಮನಸ್ಥಿತಿ ಉಳ್ಳ ವ್ಯಕ್ತಿತ್ವದಿಂದ ಇಂದಿಗೂ ಕಾಲೇಜು ಗೆಳೆಯರು ನಿರಂತರ ಸಂಪರ್ಕದಲ್ಲಿದ್ದೇವೆ ಎಂದರೆ ಅತಿಶಯೋಕ್ತಿ ಅಲ್ಲ…
ನೆಬೆ ಮತ್ತು ನಾವೂ: ಕಾಲೇಜು ದಿನದಲ್ಲಿ ವಾಸು ಮತ್ತು ಸಂಗಡಿಗರ ಮುಂದಾಳತ್ವದಲ್ಲಿ ಮಹಾರಾಜ ಕಾಲೇಜು ಶತಮಾನೋತ್ಸವ ಭವನದ ಮುಂಭಾಗದ ಪುಟ್ಟ ಉದ್ಯಾನದಲ್ಲಿ ಸಂಜೆ ಸೇರುವ ಮೂಲಕ ಹುಟ್ಟು ಪಡೆದ ʻನೆಳಲು ಬೆಳಕುʼ (ನೆಬೆ) ಇಂದಿಗೂ ಲವಲವಿಕೆಯಿಂದ ಕೂಡಿರುವುದು. ಆ ದಿನಗಳಲ್ಲಿ ಹಾಕಿದ ಅಡಿಪಾಯ. ನೆಬೆ ಕಟ್ಟಲು ಹಲವು ಮನಸ್ಸುಗಳು ಹಲವು ಕೈಗಳು ಒಗ್ಗೂಡಿ ಒಂದೊಂದು ಹಂತದಲ್ಲಿ ತಮ್ಮದೇ ಪಾತ್ರನಿರ್ವಹಿಸಿ ಕಟ್ಟುವ ಕೆಲಸ ಇಂದಿಗೂ ನಡೆಯುತ್ತಲೇ ಇದೆ.
ನೆಬೆ ಕೇವಲ ನಾಟಕ ಅಭಿರುಚಿ ಹೊಂದಿರುವವರಿಗೆ ಸೀಮಿತಗೊಂಡ ವೇದಿಕೆ ಆಗದೆ, ವಿವಿಧ ಕ್ಷೇತ್ರದಲ್ಲಿ ಅಭಿರುಚಿ ಹೊಂದಿರುವ ಕಲೆ ಸಂಸ್ಕೃತಿ ಮನಸ್ಸುಗಳನ್ನು ಒಂದೇ ದಾರಿಯಲ್ಲಿ ಸಾಗಲು ಹಾಕಿಕೊಂಡ ಸಾಂಸ್ಕೃತಿಕ ನಗರಿಯ ಮತ್ತೊಂದು ಮೈಲಿಗಲ್ಲು. ಈ ತಂಡದಲ್ಲಿ ಹಿರಿಯ ಕಿರಿಯ ಎಂಬುದಿಲ್ಲದೆ ನಾವೆಲ್ಲರೂ ಒಂದು ಎಂಬ ಮನಸ್ಥಿತಿಯಲ್ಲಿ ಬಣ್ಣ ಹಚ್ಚುವುದರೊಂದಿಗೆ ನಾಟಕೋತ್ಸವದಲ್ಲಿ ಹೊರತರುತ್ತಿದ್ದ ʻನೆಬೆʼಯ ಪತ್ರಿಕೆ ʻನುಡಿʼ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಬರೆಯುವ ಅವಕಾಶವನ್ನು ಕಲ್ಪಿಸಿತ್ತು.
ನಾನು ಮತ್ತು ವಾಸು ಇಬ್ಬರು ಅದೆಷ್ಟು ಬಾರಿ ಅಂದಿನ ಲ್ಯಾಂಡ್ ಸ್ಟೋನ್ ಬಿಲ್ಡಿಂಗ್‌ನಲ್ಲಿ ಕೈನಲ್ಲಿ ಕುಟ್ಟುವ ಟೈಪ್‌ರೈಟರ್ ಮೂಲಕ ಸ್ಟೆನ್ಸಿಲ್ ಕಟ್ ಮಾಡುವವರ ಮುಂದೆ ನಿಂತು ಆತನಿಗೆ ದುಂಬಾಲು ಬಿದ್ದು, ನಮ್ಮ ಕಲ್ಪನೆಯಂತೆ ಪುಟ ವಿನ್ಯಾಸ ಮಾಡಿ ಅವರಿಂದ ಕೆಲಸ ಮಾಡಿಸಿ, ಆಮೇಲೆ ಸ್ಟೆನ್ಸಿಲ್ ಯಂತ್ರದಲ್ಲಿ ಅಚ್ಚು ಹಾಕಿಸುತ್ತಿದ್ದ ಸಮಯಗಳು ಇಂದಿಗೂ ಸ್ಮೃತಿಪಟಲದಲ್ಲಿ ಹಾಗೇ ಅಚ್ಚಾಗಿ ಉಳಿದಿದೆ. ನಾಟಕೋತ್ಸವಕ್ಕೆ ಬರುವ ಪ್ರೇಕ್ಷಕರಿಗೆ ಮಾರಾಟ ಮಾಡುವ “ಸೇಲ್ಸ್ ಬಾಯ್”ಗಳೂ ನಾವೇ ಆಗಿ, ಮಾರಾಟ ಮಾಡಿ ಬಂದ ಹಣದಲ್ಲಿ ಮರುದಿನದ ಪತ್ರಿಕೆ ಹೊರತರುವ ಲೆಕ್ಕಾಚಾರ ನಡೆದಿತ್ತು.
ಕೇಂದ್ರ ಸ್ಥಾನ: ಮೈಸೂರಿನ ಲಕ್ಷ್ಮೀಪುರಂನಲ್ಲಿ ವಾಸು ಮನೆ ಇತ್ತು, ನಾನು ಶಾರದಾನಿಕೇತನ ವಿದ್ಯಾರ್ಥಿನಿಲಯದಲ್ಲಿ ಇದ್ದ ಕಾರಣ ಕೂಗಳತೆ ದೂರವಿದ್ದ ಈತನ ಮನೆಗೆ ಆಗಿಂದ್ದಾಗೆ ಹೋಗುವ ಅಭ್ಯಾಸ. ಕಾಲೇಜಿಗೆ ಹೋಗುವಾಗ ವಾಸು ಮನೆಗೆ ಹೋಗಿ ಜೊತೆಯಲ್ಲಿ ಸೈಕಲ್ ಮೇಲೆ ಹೋಗುವ ಅಭ್ಯಾಸ. ಈ ರೂಢಿ ಎರಡು ವರ್ಷಗಳವರೆಗೆ ವಾಸು ಮೈಸೂರಿನಿಂದ ಬೆಂಗಳೂರಿಗೆ ಹೋಗುವ ದಿನದವರೆಗೂ ಇತ್ತು.
ವಾಸು ತಾಯಿ ಸುಬ್ಬಲಕ್ಷ್ಮಮ್ಮ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ತಂದೆ ವಿಶ್ವನಾಥ್ ಏನೋ…ಎಲ್ಲಿಗೆ ಹೊರಟ್ರಿ? ಹೀಗೆ ಅನೇಕ ಪ್ರಶ್ನಾವಳಿಗಳನ್ನು ಎದುರಿಸಬೇಕಿತ್ತು.
ಕೈ ತುತ್ತು: ನಾಟಕೋತ್ಸವ ನಡೆಯುವ ಸಮಯದಲ್ಲಿ ಎಲ್ಲಾ ಕೆಲಸ ಮುಗಿಸಿ ಹಾಸ್ಟಲ್‌ಗೆ ಬರುತ್ತಿದ್ದ ನನಗೆ ಊಟ ಮಿಸ್. ಆ ಸಮಯದಲ್ಲಿ ಅದೆಷ್ಟೋ ದಿನ ವಾಸು ಮನೆಯಲ್ಲಿ ಕೈ ತುತ್ತು ಹಾಕಿದ್ದಾರೆ. ಆ ದಿನಗಳನ್ನು ಎಂದಿಗೂ ಮರೆಯುವಂತಿಲ್ಲ.
ವಾಸು ಎಷ್ಟು ನಗುಮುಖದವನಾಗಿದ್ದರೂ, ನಾಟಕ ಕಲಿಕೆ ಸಮಯದಲ್ಲಿ ಅಥವಾ ನೀಡಿದ ಜವಾಬ್ದಾರಿ ನಿರ್ವಹಿಸದಿದ್ದಾಗ ಆತನಿಗೆ ಬರುತ್ತಿದ್ದ ಕೋಪ ಓಹ್…ಹೇಳತೀರದು.
ಹೋದ ವರ್ಷ ಹುಣಸೂರಿನಲ್ಲಿ ಲಕ್ಷ್ಮಿ ಮತ್ತು ವಾಸು ಇಬ್ಬರನ್ನೂ ಭೇಟಿ ಮಾಡಿ, ಬೈಟು ಟೀ ಹೀರಿದ ಕ್ಷಣ ಹಲವು ವರ್ಷಗಳ ಹಿಂದಿನ ನೆನಪುಗಳ ಮೆಲುಕು ಜೀವ ಪಡೆದುಕೊಂಡಿತ್ತು.
ಸ್ನೇಹ ಸಂಬಂಧಗಳನ್ನು ಅಕ್ಷರ ರೂಪದಲ್ಲಿ ಕಟ್ಟಿಕೊಳ್ಳಲು ಅವಕಾಶ ನೀಡಿದ ಲಕ್ಷ್ಮಿವಾಸುಗೆ ಧನ್ಯವಾದ …
ಸಚಿತ್ ಶರ್ಮಾ, ನಿರ್ದೇಶಕರು, ಶಾಸ್ತ್ರಿ ಪಬ್ಲಿಕ್ ಸ್ಕೂಲ್ ಮತ್ತು ಕಾಂಪೊಸಿಟ್ ಕಾಲೇಜು, ಹುಣಸೂರು






