ಮುಗ್ಧ ಪ್ರೀತಿಯ ಶ್ರಮಜೀವಿ ವಾಸು – ಉಮಾಶಂಕರ್ ಪೆರಿಯೋಡಿ
೧೯೯೧ ಇರಬೇಕು. ಅರಸಿಕೆರೆಯ ಕೆ.ಜಿ.ಎನ್.ಎಂ.ಟಿ.ಯಲ್ಲಿ ನಮಗೆ ಡಿ.ಆರ್.ಯು. (District Resource Unit) ಶುರು ಮಾಡೋದಿತ್ತು. ಡಿಸ್ಟ್ರಿಕ್ ರಿಸೋರ್ಸ್ ಯೂನಿಟ್, ಇದು central govtನ ಒಂದು ಕಾರ್ಯಕ್ರಮ. ಇದನ್ನು ಪ್ರಾರಂಭಿಸುವ ಜವಾಬ್ದಾರಿ ನನಗಿತ್ತು. ಹಾಗೆ ನಾನು ಕೆಜಿಎನ್ಎಂಟಿಗೆ ಹೋಗಿದ್ದೆ. ಅಲ್ಲಿಗೆ ಒಬ್ಬ ಯುವಕ ಬಂದ. ತುಂಬಾ ಮುಗ್ಧ. ತುಂಬಾ ಉತ್ಸಾಹ. ಯಾವ ಜವಾಬ್ದಾರಿ ಕೊಟ್ಟರೂ, ಏನನ್ನಾದರೂ ಮಾಡಲು ಸಿದ್ಧ. ಹೊಸ ಅನುಭವಕ್ಕೆ ಹಾತೊರೆಯುವ ಹುಡುಗ. ಮಾತಾಡಿ ಸ್ವಲ್ಪ ಕಂಫರ್ಟೆಬಲ್ ಮಾಡಿ ನಾನು ಈ ಕಡೆ ಬಂದೆ. ಆ ಹುಡುಗ ಬೇರೆ ಯಾರೂ ಅಲ್ಲ ನಮ್ಮ ವಾಸು, ಕಾಲೇಜು ಮುಗಿಸಿ ಆಗ ಅಷ್ಟೇ ಕೆಲಸಕ್ಕೆ ಸೇರಿದ್ದು. ಡಿ.ಆರ್.ಯು. ಅನ್ನು ನಾವು ತುಂಬಾ ಚೆನ್ನಾಗಿ ಕಟ್ಟಿದ್ವಿ, ಬೆಳೆಸಿದ್ವಿ. ಅದನ್ನು ಬೆಳೆಸಿದ್ದು ಕಟ್ಟಿದ್ದು ಅದನ್ನ ನಡೆಸಿದ್ದು ಎಲ್ಲವೂ ಆ ತಂಡ. ಹಿಂದೆ ತಿರುಗಿ ಇವತ್ತು ನೋಡಿದಾಗ ವಾಸುದ್ದು ಆ ತಂಡವನ್ನು ಕಟ್ಟಲಿಕ್ಕೆ ತುಂಬಾ ದೊಡ್ಡ ಕೊಡುಗೆ ಇದೆ ಅನ್ನಿಸುತ್ತಿದೆ.
ಆ ಕಾಲದಲ್ಲಿ ನಮಗೆ ಕೆಲಸಕ್ಕೆ ನಿಗದಿತ ಸಮಯ ಎಂದು ಇರಲಿಲ್ಲ. ಎಲ್ಲ ಸಮಯದಲ್ಲೂ ಕೆಲಸ. ಯಾವುದೇ ಕೆಲಸವನ್ನು ಬೇಡ ಎಂದು ಹೇಳಿದವರು ಅಲ್ಲ ನಾವು. ಈ ಕೆಲಸ ನಮ್ಮಿಂದ ಆಗುವುದಿಲ್ಲ ಎಂದು ಹೇಳಿದವರು ಅಲ್ಲ ನಾವು. ಕೆಲಸವನ್ನ ಮಾಡೋದು ಮಾತ್ರ ಅಲ್ಲದೆ ಕೆಲಸ ಹುಡುಕಿ ಮಾಡಿದ ತಂಡ. ಅದಕ್ಕಾಗಿ ಡಿ.ಆರ್.ಯು.ವನ್ನು ಯಶಸ್ವಿಯಾಗಿ ನಡೆಸಲಿಕ್ಕೆ ಆಯ್ತು. ಸರ್ಕಾರ ಆಮೇಲೆ ಇದರ ಅನುಭವವನ್ನು ಕರ್ನಾಟಕದಲ್ಲಿ ಎಲ್ಲ ಜಿಲ್ಲೆಗಳಲ್ಲೂ ವಿಸ್ತರಿಸಿತು. ಇದು ಪ್ರಯೋಗ ಆದುದರಿಂದ ತುಂಬಾ ಮುಖ್ಯ ಪ್ರಯೋಗ. ನಮ್ಮ ತಂಡದಲ್ಲಿ ಇದ್ದವರು ಎಲ್ಲರೂ ಅದ್ಭುತ ಕೆಲಸಗಾರರು. ಹಾಗೆ ಅಲ್ಲಿಂದ ಶುರುವಾದ ನಮ್ಮ ಗೆಳೆತನ ಇಲ್ಲಿ ತನಕ ಬೆಳೆಯುತ್ತಾ ಬಂದಿದೆ, ಗಟ್ಟಿಗೊಳ್ಳುತ್ತಾ ಬಂದಿದೆ.
ವಾಸು ಡಿ.ಆರ್.ಯು.ಗೆ ಬರುವಾಗಲೇ ಮೈಸೂರಲ್ಲಿ ನಾಟಕ ತಂಡದಲ್ಲಿ ತುಂಬಾ ಸಕ್ರಿಯವಾಗಿ ಭಾಗವಹಿಸಿದ್ದ, ಹಾಗೇನೆ ಸಾಹಿತ್ಯದ ತುಂಬಾ ಒಳ್ಳೆಯ ವಿದ್ಯಾರ್ಥಿ. ತುಂಬಾ ಕವನ ಬರೆಯುತ್ತಿದ್ದ. ಡಿ.ಆರ್.ಯು.ನಲ್ಲಿ ಕೂತದಕ್ಕೆ ನಿಂತದ್ದಕ್ಕೆ ಕವನ ಬರೆಯುತ್ತಿದ್ದ. ನಾವು ತಂಡದವರೆಲ್ಲ ಕೂತು ವಾಸುವಿನ ಕವನ ವಾಚನವನ್ನು ತುಂಬಾ ಪ್ರಾಮಾಣಿಕವಾಗಿ ಆಸಕ್ತಿಯಿಂದ ಕೇಳುತ್ತಿದ್ದೆವು. ಇದೇ ಸಂದರ್ಭದಲ್ಲಿ ಡಿ.ಆರ್.ಯು. ಜೆಂಡರ್ ಕೆಲಸಕ್ಕಾಗಿ ಒಂದು ಪುಟ್ಟ TLM ಮಾಡಿತ್ತು ʻಹೀಗೇಕೆ ಹೀಗಿರಲಿʼ. ಇದು ಇವತ್ತಿಗೂ ತುಂಬಾ ಜನಪ್ರಿಯವಾದಂತ ಒಂದು ಟಿಎಲ್ಎಂ. ಎಲ್ಲಾ ತರಬೇತಿಯಲ್ಲಿ ಬಳಸುವ ಒಂದು ಸಾಮಗ್ರಿ. ಬೇರೆ ಬೇರೆ ಕಡೆಯಲ್ಲಿ ಇದನ್ನ ಹೊರ ತರುವುದರಲ್ಲಿ ವಾಸುನ ಭಾರಿ ದೊಡ್ಡ ಕೊಡುಗೆ ಇದೆ. ಎಲ್ಲರೂ ತಂಡದವರು ಇದಕ್ಕೆ ಶ್ರಮಿಸಿದ್ದಾರೆ, ಆದ್ರೆ ವಾಸುನ ಕೊಡುಗೆ ತುಂಬಾ ಪ್ರಮುಖವಾದದ್ದು. ಯಾಕಂದ್ರೆ ವಾಸೂಗೆ ಸಾಹಿತ್ಯದಲ್ಲಿ ಆಸಕ್ತಿಯೂ ಇತ್ತು, ಅದಕ್ಕೆ ಬೇಕಾದ ಸಾಮಗ್ರಿಗಳನ್ನು ಸೃಷ್ಟಿಸುವ ಸಾಮರ್ಥ್ಯ ಇತ್ತು. DRU ನ ಇಡೀ ಮೂರು ವರ್ಷ ನನ್ನ ಅನುಭವದಲ್ಲಿ ವಾಸು ನನ್ನ ಮೇಲೆ ತುಂಬಾ ಪ್ರಭಾವ ಬೀರಿದ್ದು, ಅವರ ಮುಗ್ಧತೆಯಿಂದ ಅವರ ಪ್ರಾಮಾಣಿಕತೆಯಿಂದ ಹಾಗೂ ಎಡಬಿಡದೆ ಕೆಲಸ ಮಾಡುವುದರಿಂದ.
ವಾಸುವಿನ ಜೀವನದ ಕೆಲವು ಮುಖ್ಯ ಮೈಲುಗಲ್ಲುಗಳಲ್ಲಿ ನಾವು ಭಾಗಿಗಳು. ವಾಸೂಗೆ ಮದುವೆ ಆಗುವ ಸಂದರ್ಭದಲ್ಲಿ ಲಕ್ಷ್ಮಿಯನ್ನು ನಾವು ಒಟ್ಟು ಸೇರಿ ಲಾಲ್ಬಾಗಲ್ಲಿ ಸುಮ್ಮನೆ ಮಾತಾಡಲಿಕ್ಕೆ ಪರಿಚಯ ಮಾಡಿಕೊಳ್ಳಲಿಕ್ಕೆ ಕರೆದಿದ್ದೆವು. ಅದೊಂದು ತುಂಬಾ ಸುಂದರವಾದ ಕ್ಷಣ. ಮದುವೆ ಆಗಲಿಕ್ಕೆ ಇರುವ ಇಬ್ಬರು ಪರಸ್ಪರ ಮಾತಾಡಿಕೊಂಡ ಕ್ಷಣ. ಅದೆಷ್ಟು ಚೆನ್ನಾಗಿತ್ತು ಅಂದ್ರೆ, ಆ ಮಾತುಕತೆ ಆ ಪರಸ್ಪರ ತಿಳಿದುಕೊಳ್ಳುವ ಪ್ರಯತ್ನ ಇದೆಲ್ಲವೂ ಇಂದಿಗೂ ನಮಗೆ ಅಷ್ಟೇ ತಾಜಾ ತಾಜಾ ನೆನಪು, ಆ ಸುದ್ದಿ ಮಾತಾಡುವಾಗ ನಾವು ಇಂದು ಎಮೋಷನಲ್ ಆಗ್ತೀವಿ. 34 ವರ್ಷದ ಮೇಲೆ ಇನ್ನೊಮ್ಮೆ ನಾವು ನಾಲ್ಕು ಜನ ಲಾಲ್ಬಾಗಿ ಹೋಗಬೇಕು ಎಂದು ಪ್ಲಾನ್ ಕೂಡ ಮಾಡ್ತಾ ಇದ್ದೇವೆ. ಶ್ರದ್ಧಾ ಹುಟ್ಟಿದಾಗ, ಶ್ರದ್ಧಾ ಬೆಳೆಯುತ್ತಿದ್ದಾಗ ನಮ್ಮ ಮಕ್ಕಳ ಜೊತೆಗೆ ತುಂಬಾ ಒಡನಾಟ. ಒಟ್ಟಿಗೆ ಕಾಲೇಜ್ ಮಾಡಿದ್ರು. ಹಾಗೂ ಈಗಲೂ ಅವರು ಒಳ್ಳೆ ಫ್ರೆಂಡ್ಸ್.
ವಾಸು ಪ್ರೊಫೆಷನಲ್ ಆಗಿ ತುಂಬಾ ಎತ್ತರಕ್ಕೆ ಬೆಳೆದರು. ಕರ್ನಾಟಕದಲ್ಲಿ ಮಕ್ಕಳ ರಕ್ಷಣೆ ಬಗ್ಗೆ ಬಹುಶ: ವಾಸುವಿನಷ್ಟು ಕೆಲಸ ಮಾಡಿದವರು ಇನ್ನೊಬ್ಬರು ಇಲ್ಲ ಎಂದು ಖಂಡಿತ ಹೇಳಬಹುದು. ವಾಸು ಮಾಡಿರುವ ಕ್ಷೇತ್ರದ ಕೆಲಸ, ವಾಸು ಓದಿ ಮಕ್ಕಳ ರಕ್ಷಣೆಯ ಸುತ್ತ ಬಿಲ್ಡ್ ಮಾಡಿರುವ ತನ್ನ ಜ್ಞಾನ, ಮಕ್ಕಳ ರಕ್ಷಣೆ ಬಗ್ಗೆ ಅವರಲ್ಲಿ ಇರುವಂತಹ ಮಾಹಿತಿ, ಅವರು ಸಂಗ್ರಹಿಸಿರುವಂತಹ ಮಾಹಿತಿ ಹಾಗೂ ತನ್ನದೇ ನಿಲುವುಗಳಿಂದ ಅವರು ಪ್ರತಿಪಾದಿಸುವ ತಾತ್ವಿಕ ನೆಲೆಗಟ್ಟು,ಇದು ಬೇರೆ ಯಾರಲ್ಲೂ ಇಲ್ಲ ಎಂದು ನಾನು ಭಾವಿಸುತ್ತೇನೆ. ಸರಕಾರದ ಅನೇಕ ಕಮಿಟಿಗಳಲ್ಲಿ ಇದ್ದ ಅನುಭವ ವಾಸೂಗೆ ಇದೆ.
ಹಾಗೆ ನೋಡಿದ್ರೆ ವಾಸು ತುಂಬಾ ನೇರ. ಇದ್ದದನ್ನೇ ಇದ್ದಹಾಗೆ ಹೇಳುವ ಪವರ್ಫುಲ್ ವ್ಯಕ್ತಿ ಯಾವುದನ್ನು ಬಚ್ಚಿಟ್ಟಿಕೊಳ್ಳಲ್ಲ. ಇದ್ದದ್ದು ಇದ್ದ ಹಾಗೆ ಹೇಳಿದರೆ ಅನೇಕರಿಗೆ ಕೋಪ ಬರುತ್ತದೆ ಅಂತ ವಾಸುಗೆ ಗೊತ್ತು. ಆದ್ರೂ ಇದು ಹಾಗೆ ಹಾಗೇನೆ ಎಂದು ಹೇಳುವ ಛಲ ನನಗನಿಸುತ್ತದೆ ವಾಸುಗೆ ತುಂಬಾ ಇದೆ. ತುಂಬಾ ಫ್ರೆಂಡ್ಶಿಪ್ ಮಾಡಿರೋದು ಈ ಸ್ಟ್ಯಾಂಡಿಂದಾಗಿ ಎಂದು ನನಗನಿಸುತ್ತದೆ. ಅನೇಕರು ಇನಿಷಿಯಲ್ ಸ್ಟೇಜಲ್ಲಿ ವಾಸುನ ಈ ದಿಟ್ಟ ನಿಲುವಿಂದ ಕೋಪಗೊಂಡರೂ, ಆಮೇಲೆ ಅಂತವರೇ ತುಂಬಾ ಒಳ್ಳೆ ಮಿತ್ರರಾಗಿದ್ದಾರೆ, ಸಂಗಾತಿಗಳಾಗಿದ್ದಾರೆ. ಇದು ವಾಸುವಿನ ಪರ್ಸನಾಲಿಟಿಯ ತುಂಬಾ ದೊಡ್ಡ ಶಕ್ತಿ ಎಂದು ನನಗನಿಸುತ್ತದೆ.
ನಾನು ಕಂಡ ಹಾಗೆ ವಾಸುವಿನ ಇನ್ನೊಂದು ದೊಡ್ಡ ಗುಣ ಇತರರನ್ನು ಬೆಳೆಸುವುದು. ಇತರ ಸಂಘ-ಸಂಸ್ಥೆಗಳನ್ನು ಬೆಳೆಸುವುದು. ಕರ್ನಾಟಕದ ಉದ್ದಗಲಕ್ಕೆ ಹೋದರೆ ನಮಗೆ ವಾಸುವಿನ ಅನೇಕ ಶಿಷ್ಯರು ಸಿಗುತ್ತಾರೆ. ವಾಸು ಸರ್, ವಾಸು ಸರ್ ಅಂತ ಹೇಳ್ತಾ ಅವರಿಂದ ಪ್ರಭಾವಿತರಾದನ್ನು ತುಂಬಾ ಮುಖ್ಯವಾಗಿ ಹೇಳಿಕೊಳ್ಳುವ ಅನೇಕರು ಸಿಕ್ತಾರೆ. ಹಾಗೆ ನೋಡಿದ್ರೆ ಅನೇಕ ಚಿಕ್ಕ ಚಿಕ್ಕ ಸಂಸ್ಥೆಗಳು ಇದ್ದಾವೆ. ಕರ್ನಾಟಕದ ಉದ್ದಗಲಕ್ಕೆ ಸಂಸ್ಥೆಗಳು ಕೂಡ ವಾಸುವಿನ ಸಹಾಯ ಪಡೆದವರು ಅಂತ ಹೇಳುತ್ತಾ ಇರುತ್ತಾರೆ. ನಮಗೆ ಈ ಸಂಸ್ಥೆ ಕಟ್ಟಲಿಕ್ಕೆ ಪ್ರೇರಣೆ ವಾಸು. ನಾವು ಸಂಸ್ಥೆ ಕಟ್ಟಿ ಬೇಜಾರಾದಾಗ ನಮಗೆ ಸಹಾಯ ಮಾಡಿದ್ದು ವಾಸು. ನಮಗೆ ಸದಾ ಮಾರ್ಗದರ್ಶಕರಾಗಿರುವವರು. ಲೆಕ್ಕಕ್ಕಿಲ್ಲದಷ್ಟು ಸಂಸ್ಥೆಗಳು ವಾಸು ಬಗ್ಗೆ ಮಾತಾಡ್ತಾರೆ.
ವಾಸುಗೆ ಯಾವುದೇ ಒಂದು ವಿಷಯ ಕೊಟ್ರು ಆ ವಿಷಯವನ್ನು ಕರಗತ ಮಾಡಿಕೊಂಡು ಸಮರ್ಪಕವಾಗಿ ನಿಭಾಯಿಸಬಲ್ಲ ಸಾಮರ್ಥ್ಯ ಉಳ್ಳವರು. ಇದು ಸೆಮಿನಾರಿಗೆ ಇರಬಹುದು, ಭಾಷಣಕ್ಕೆ ಇರಬಹುದು, ತರಬೇತಿಗೆ ಇರಬಹುದು ಒಂದು ವಿಷಯ ವಾಸುವಿಗೆ ಕೊಟ್ಟರೆ ರಾತ್ರಿ ಹಗಲು ಅದರ ಬಗ್ಗೆ ಹುಡುಕಿ ಓದಿ ಬೇರೆಯವರ ಹತ್ರ ಮಾತಾಡಿ ತಜ್ಞರನ್ನು ಸಂಪರ್ಕಿಸಿ ತಯಾರಿ ಮಾಡಿಕೊಳ್ಳುತ್ತಾರೆ. ಆಮೇಲೆ ಅಭ್ಯಾಸ ಮಾಡಿ ತರಬೇತಿಯನ್ನು ನಿಭಾಯಿಸುತ್ತಾರೆ. ಅದು ತುಂಬಾ ಯಶಸ್ವಿಯಾಗಿ ನಿಭಾಯಿಸುತ್ತಾರೆ. ಎಷ್ಟೋ ಸಂದರ್ಭದಲ್ಲಿ ವಾಸುವಿಗೆ ಹೊಸ ವಿಷಯ ಕೊಟ್ಟು ಮಾತಾಡಿಸಿ ಭೇಷ್ ಭೇಷ್ ಅನಿಸಿದ್ದು ಇದೆ. ವಾಸು ತುಂಬಾ ಹಾರ್ಡ್ ವರ್ಕರ್ ಅವರ ಹಾರ್ಡ್ ವರ್ಕಿನಿಂದಾಗಿ ಅವರ ಕೆಲಸ ಸುಗಮವಾಗಿ ಯಶಸ್ವಿಯಾಗಿ ನಡೆಯೋದು.
ಸಂಸಾರ ತಂದೆ ತಾಯಿ ಸಂಬಂಧಿಕರು ಹಾಗೂ ಸ್ನೇಹಿತರ ಬಳಗ ಇದೆಲ್ಲವನ್ನು ಒಟ್ಟಾಗಿ ಇಟ್ಟುಕೊಂಡು ನಿಭಾಯಿಸುವುದು ಸ್ವಲ್ಪ ಕಷ್ಟವೇ, ಆದ್ರೂ ಅವರು ಅವರ ಶಕ್ತಿ ಮೀರಿ ಒಂದು ಸಮನ್ವಯ ತರಲಿಕ್ಕೆ ಮಾಡುತ್ತಾರೆ ಅಂತ ನನಗೆ ಅನಿಸುತ್ತದೆ. ಆದರೆ ಅದು ಅಷ್ಟು ಸುಲಭದ ಮಾತು ಅಲ್ಲ. ಇದರಲ್ಲಿ ವಾಸು ಸಂಪೂರ್ಣವಾಗಿ ಯಶಸ್ವಿಯಾಗಿದ್ದಾರೆ ಅಂತ ನಾನು ಹೇಳುವುದಿಲ್ಲ. ಸ್ವಲ್ಪ ಕಷ್ಟನೇ ಇದೆ.
ಅಂದಿನಿಂದ ಇಂದಿನವರೆಗೆ ವಾಸುವಿನ ಬದ್ಧತೆ ಇರುವುದು ಮಕ್ಕಳ ರಕ್ಷಣೆ ಮೇಲೆ. ಅದು ಬದಲಾಗಲಿಲ್ಲ, ಡಿಸ್ರ್ಯಾಕ್ಟ್ ಆಗಲೂ ಇಲ್ಲ. ಅದರ ಜೊತೆಗೆ ಬೇರೆ ಬೇರೆಯದನ್ನ ಸೇರಿಸಿಕೊಂಡದ್ದು ಇಲ್ಲ. ವಾಸು purely ಚೈಲ್ಡ್ ಪ್ರೊಟೆಕ್ಷನ್ ಪರ್ಸನ್. ಅದಕ್ಕಾಗಿ ಅವರು ಎಲ್ಲಿ ತನಕ ಹೋಗಲಿಕ್ಕೂ ಸಿದ್ಧರು.
ವಾಸುವಿನ ಹೃದಯಕ್ಕೆ ತುಂಬಾ ಹತ್ತಿರ ಇರುವ ಇನ್ನೊಂದು ಕೆಲಸ ಸೋಶಿಯಲ್ ವರ್ಕ್ ಪ್ರೊಫೆಷನ್. ಅವರು ಎಂ.ಎಸ್.ಡಬ್ಲ್ಯೂ ಹಾಗೂ ಪ್ರೊಫೆಷನಲ್ ವರ್ಕ್‌ಗೆ ಬದ್ಧರು. ಹಾಗಾಗಿ ಪ್ರೊಫೆಷನಲ್ ಸೋಶಿಯಲ್ ವರ್ಕಿಗೆ ಬೇಕಾಗುವ ಬೇರೆ ಬೇರೆ ಕೆಲಸ ಮಾಡುತ್ತಾರೆ. ಅವರ ಈ ಕೆಲಸದಲ್ಲಿ ಅವರಿಗೆ ಯಶಸ್ಸು ಸಿಕ್ಕಿದೆ ಸಾಕಷ್ಟು ಅಘಾತ ಕೂಡ ಆಗಿದೆ. ಆದ್ರೂ ಅವರು ಛಲ ಬಿಡದ ವಿಕ್ರಮನಂತೆ ಅದರಲ್ಲಿ ಕೆಲಸ ಮುಂದುವರಿಸ್ತಾ ಇದ್ದಾರೆ.
ದೊಡ್ಡ ದೊಡ್ಡ ರಾಷ್ಟ್ರೀಯ ಮಟ್ಟದ, ಅಂತರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳನ್ನು ಹಲವರ ಜೊತೆಗೂಡಿ ಮಾಡ್ತಾರೆ ವಾಸು. ಇವನ್ನೆಲ್ಲ ಮಾಡುವಾಗ, ವಾಸು ಒಂದು ಚಿಕ್ಕ ಕಾರ್ಯಕ್ರಮ ಒಂದು ಹಳ್ಳಿಯಲ್ಲಿ ಪುಟ್ಟ ಬಾಲಕನ ಜೊತೆಗೆ ಮಾತುಕತೆ, ಇದನ್ನೂ ತುಂಬಾ ಆನಂದಿಸುತ್ತಾರೆ ಇಷ್ಟಪಡುತ್ತಾರೆ. ಈ ಗುಣ ವಾಸುವನ್ನು ತುಂಬಾ ವಿಶಿಷ್ಟ ಮಾಡುತ್ತದೆ. ದಾರಿಯಲ್ಲಿ ಸಿಕ್ಕಿದ ಒಂದು ಪುಟ್ಟ ಬಾಲೆ ಒಟ್ಟಿಗೆ ಮಾತುಕತೆ ನಡೆಸುತ್ತಾರೆ ವಾಸು. ತುಂಬಾ ಆತ್ಮೀಯವಾದ ಮಾತು ಕಥೆ. ವಾಸು ಮಾತಾಡಿ ಆದಾಗ ಆ ಬಾಲೆಗೆ ಒಂದು ಆತ್ಮವಿಶ್ವಾಸ ಬರುತ್ತದೆ, self esteem ಹೆಚ್ಚಾಗುತ್ತದೆ. ಇದನ್ನು ನಾನು ವಾಸುವಿನಲ್ಲಿ ತುಂಬಾ ಗಮನಿಸಿದ್ದೇನೆ. ನನಗೆ ವಾಸು ಇಷ್ಟ ಆಗೋದು ಇದಕ್ಕೆ. ಬೇರೆ ಬೇರೆ ಕಾರಣಕ್ಕೆ ವಾಸು ಬೇರೆಬೇರೆ ಜನರಿಗೆ ಇಷ್ಟ ಆಗ್ತಾರೆ. ಮುಗ್ಧತೆಯನ್ನ ಇಷ್ಟಪಡುವವರು ತುಂಬಾ ಜನ. ಅವರ ನಿಷ್ಕಲ್ಮಶ ಮನಸ್ಸನ್ನು ಇಷ್ಟಪಡುವವರು ತುಂಬಾ ಜನ. ಅವರು ಶ್ರಮ ಹಾಕಿ ಕೆಲಸ ಮಾಡುವುದನ್ನು ಇಷ್ಟಪಡುವವರು ಕೆಲವು ಜನ. ಇದ್ದದನ್ನ ಇದ್ದ ಹಾಗೆ ಹೇಳುವುದನ್ನು ಇಷ್ಟಪಡುವವರು ಕೆಲವು ಜನ. ಅವರ Dedication, commitment ಅನ್ನು ಇಷ್ಟಪಡುವವರು ಇನ್ನೂ ಅನೇಕರು. ಅವರು ಸದಾ ಹೊಸತನ ಕಲಿಯುವುದನ್ನು ಇಷ್ಟಪಡುವವರು ಇನ್ನು ಕೆಲವರು. ಅವರ ಸಾಹಿತ್ಯದ ಕೃಷಿಯನ್ನು ಇಷ್ಟಪಡುವವರು ಅನೇಕರು. ಹಾಗೆ ಕೆಲವರು ಸುಮ್ಮನೆ ವಾಸುವನ್ನೇ ಇಷ್ಟಪಡುತ್ತಾರೆ! ಹೀಗೆ ವಾಸು ಅಂದ್ರೆ ಎಲ್ಲರಿಗೂ ಇಷ್ಟ. ಈ ಎಲ್ಲಾ ಪದರಗಳನ್ನು ಒಂದೊಂದಾಗಿ ತೆಗೆದರೆ ವಾಸುವಿನ ಕೋರ್ ಇರೋದು ನನ್ನ ಲೆಕ್ಕದಲ್ಲಿ ಮುಗ್ಧ ಪ್ರೀತಿ ಹಾಗೂ ಶ್ರಮ!
60 ವರ್ಷ ತುಂಬುವ ಈ ಹೊತ್ತಿಗೆ ವಾಸುವಿಗೆ ನಮ್ಮೆಲ್ಲರ ಪ್ರೀತಿಯ ಹಾರೈಕೆಗಳು. ಸಮೃದ್ಧವಾದ ಅವರ ಜೀವನ ಇನ್ನೂ ಶ್ರೀಮಂತ ವಾಗಲಿ, ಇನ್ನು ಹೆಚ್ಚು ಅರ್ಥಪೂರ್ಣವಾಗಲಿ, ಇನ್ನು ಮಾನವೀಯವಾಗಿ ಹೆಚ್ಚೆಚ್ಚು ಜನರನ್ನ ವಾಸು ತಲುಪಲಿ. ಹೆಚ್ಚೆಚ್ಚು ಜನರನ್ನ ಹುರಿದುಂಬಿಸಲಿ, ಈ ಸಮಾಜದ ಬದಲಾವಣೆಗೆ ಕೆಲಸ ಮಾಡುವ ಹಾಗೆ ಪ್ರೇರೇಪಿಸಲಿ, ಹೊಸ ಸಮಾಜವನ್ನು ಕಟ್ಟುವತ್ತ ಅವರ ಕೊಡುಗೆಯನ್ನು ಕೊಡಲಿ ಎಂದೇ ನಮ್ಮ ಹಾರೈಕೆ.
- ಉಮಾಶಂಕರ್ ಪೆರಿಯೋಡಿ, ಹೆಡ್, ಚೈಲ್ಡ್ ಫ್ರೆಂಡ್ಲಿ ಸ್ಕೂಲ್ ಇನಿಷಿಯೇಟಿವ್, ಅಜೀಂ ಪ್ರೇಮ್‌ಜಿ ಫೌಂಡೇಶನ್






