ಸಡಗರದ ಓಡಾಟದ ವಾಸು – ವಾಣಿ ಪೆರಿಯೋಡಿ
- ವಾಣಿ ಪೆರಿಯೋಡಿ
“ನಾನು ವಾಸು… ಉಮಾ ಅವರ ಜೊತೆಗೆ ಕೆಲಸ ಮಾಡುತ್ತಿದ್ದೇನೆ..” ಲವಲವಿಕೆಯ ಯುವಕನೊಬ್ಬ ಬಂದು ತನ್ನ ಪರಿಚಯ ಹೇಳಿಕೊಂಡರು. ವಾಸು ಹೆಸರು ಅಷ್ಟರಲ್ಲಿ ಕೇಳಿದ್ದೆ. ಅರಸೀಕರೆಯ ಕಸ್ತೂರಬಾ ಆಶ್ರಮದಲ್ಲಿ ಜಿಲ್ಲಾ ಸಂಪನ್ಮೂಲ ಘಟಕದ ಕೆಲಸ ಶುರುವಾಗಿದ್ದು, ನನ್ನ ಸಂಗಾತಿ ಉಮಾಶಂಕರ್, ಜೊತೆಗೆ ವಾಸು ಅಲ್ಲಿ ಕೆಲಸಕ್ಕೆ ಸೇರಿದ್ದು ಗೊತ್ತಿತ್ತು. ಮೊದಲ ಭೇಟಿಯಾಗಿದ್ದು ಮಂಗಳೂರಿನ ಫಾತಿಮಾ ರಿಟ್ರೀಟ್ ಹೌಸಿನಲ್ಲಿ. ಏನೋ ಒಂದು ಕಾರ್ಯಾಗಾರ ನಡೆದಿತ್ತು. ಸದಾ ಮುಖದಲ್ಲಿ ಬೆಳಗುವ ನಗು, ಲವಲವಿಕೆಯ ಮಾತುಕತೆ, ಕುತೂಹಲ ತುಂಬಿದ ನಡವಳಿಕೆ, ಸಡಗರದ ಓಡಾಟ – ಇದು ವಾಸು. ಆ ಮೊದಲ ಭೇಟಿಯ ನೆನಪು ಹಸಿರಾಗಿ ಇದೆ. ಖುಶಿಯ ವಿಷಯವೆಂದರೆ ವಾಸು ಅರುವತ್ತರ ಹರಯದಲ್ಲೂ ಹಾಗೆಯೇ ಇರುವುದು. ಮತ್ತೊಂದು ಖುಶಿಯ ವಿಷಯವೆಂದರೆ ಈ ಸುಮಾರು 35 ವರುಷಗಳಿಂದಲೂ ವಾಸುವಿನ ಜೊತೆಗಿನ ಒಡನಾಟ ಸ್ನೇಹ ಹಾಗೆಯೇ ಬೆಚ್ಚಗೆ ಉಳಿದಿರುವುದು. ಈ ಸ್ನೇಹ ಸಂಬಂಧ ವಾಸು ಜೊತೆಗೆ ಮಾತ್ರವಲ್ಲದೆ, ಅವರ ಸಂಗಾತಿ ಲಕ್ಷ್ಮಿ, ಮಗಳು ಶ್ರದ್ಧಾ ಜೊತೆಗೆ ವಿಸ್ತರಿಸಿಕೊಂಡಿರುವುದು ದಿನನಿತ್ಯದ ಒಡನಾಟ ಅಷ್ಟಾಗಿ ಇಲ್ಲದೇ ಹೋದರೂ ನಮ್ಮ ಆಪ್ತವಲಯದಲ್ಲಿ ಇವರು ಇದ್ದಾರೆ. ಸುಖ, ದುಃಖ, ಸಂಭ್ರಮಗಳನ್ನು ಹಂಚಿಕೊಳ್ಳುವುದು ಇದ್ದೇ ಇದೆ.
ಅರಸೀಕೆರೆಯಿಂದ ಆಚೆ ಹೋದ ಮೇಲೆ, ಬೇರೆ ಬೇರೆ ಕಡೆ ಕೆಲಸ ಮಾಡಿ ನಿಧಾನವಾಗಿ ಚೈಲ್ಡ್ ರೈಟ್ಸ್ ಟ್ರಸ್ಟ್ ಕಟ್ಟಿ, ಬೆಳೆಸಿ ನಡೆಸುತ್ತಾ ಬಂದ ಪರಿಗೆ ಪ್ರೀತಿಯ ಸಲಾಮು. ಕೆಲಸವನ್ನು ಪ್ರೀತಿಸುವ ರೀತಿ, ಕೆಲಸದಲ್ಲಿಯ ಬದ್ದತೆಗಳ ಬಗ್ಗೆ ವಿಶೇಷ ಮೆಚ್ಚುಗೆ ಇದೆ. `ಮಕ್ಕಳ ಗ್ರಾಮಸಭೆ’ಯ ಪರಿಕಲ್ಪನೆ ರೂಪಿಸಿ, ಜ್ಯಾರಿಗೆ ತರುವಲ್ಲಿ ವಾಸು ಕೊಡುಗೆ ದೊಡ್ಡದು. ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿ ಸಾಕಷ್ಟು ಪುಸ್ತಕಗಳನ್ನೂ ಬರೆದಿರುವುದು ಮಕ್ಕಳ ಜೊತೆಗೆ ಕೆಲಸ ಮಾಡುವವರಿಗೆ ಒಳ್ಳೆಯ ಸಂಪನ್ಮೂಲವಾಗಿದೆ. ಅವರ ದೊಡ್ಡ ಶಿಷ್ಯ ಬಳಗವನ್ನೂ ನಾವು ಕರ್ನಾಟಕದ ಮೂಲೆ ಮೂಲೆಗಳಲ್ಲಿ ಕಾಣಬಹುದು. ವಾಸುಗೆ ಕೆಲಸದಲ್ಲಿ ದೊಡ್ಡದು ಸಣ್ಣದು ಅಂತ ಇಲ್ಲ. ಒಂದು ಚಿಕ್ಕ ಮಂಡನೆ ಇರಬಹುದು, ಅದಕ್ಕೆ ತುಂಬು ಶ್ರದ್ಧೆಯಿಂದ ತಯಾರಾಗುತ್ತಾರೆ. ಸದಾ ಕಲಿಯುತ್ತಾ ಇರುತ್ತಾರೆ. ಕೆಲಸದ ಶಿಸ್ತು ವಾಸುವಿನಿಂದ ಕಲಿಯಬೇಕು. ತಾವು ನಂಬಿಕೊಂಡ ವಿಚಾರಗಳನ್ನು ಎಲ್ಲಿ ಅವಕಾಶ ಸಿಗುತ್ತದೋ ಅಲ್ಲಿ ಮಂಡಿಸಲು ತೊಡಗುತ್ತಾರೆ… ಅದೂ ಸಂಪೂರ್ಣ ಜೋಶಿನಲ್ಲಿ!
ಒಂದು ಸಾರಿ ಬೆಂಗಳೂರಿನಿಂದ ಮಂಗಳೂರಿಗೆ ರೈಲುಗಾಡಿಯಲ್ಲಿ ಪ್ರಯಾಣ ಮಾಡುತ್ತಿದ್ದೆವು. ಅಲ್ಲಿ ಸಹಪಯಣಿಗರೊಬ್ಬರು ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿಯೋ ಏನೋ ಒಂದು ಪ್ರಶ್ನೆ ಕೇಳಿದರು. ನಮ್ಮ ವಾಸು ಉತ್ತರ ಕೊಟ್ಟ ಭರದಲ್ಲಿ ಅವರಿಗೆ ಎರಡನೇ ಪ್ರಶ್ನೆ ಕೇಳುವುದಕ್ಕೂ ಅವಕಾಶ ಇರಲಿಲ್ಲ. ಅಷ್ಟು ಉತ್ಸಾಹ…ಕೆಲವೊಮ್ಮೆ ಯಾಕಪ್ಪಾ ಇಷ್ಟು ಮಾತಾಡುತ್ತಾರೆ ಅಂತ ಅನಿಸಿದ್ದೂ ಇದೆ. ಆದರೆ ಅವರಿಗೆ ಸಾಕಾಗಿದ್ದು ಕಂಡಿಲ್ಲ. ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಆದ ಮೇಲೂ, ವೈಯಕ್ತಿಕ ಬದುಕಿನ ಒಂದಷ್ಟು ಸವಾಲುಗಳ ನಡುವೆಯೂ ಕೆಲಸದ ಉತ್ಸಾಹ ತಗ್ಗಿದ ಹಾಗೆ ಕಂಡಿಲ್ಲ. ಸದಾ ಝಳು ಝುಳು ಹರಿವ ನದಿಯ ಹಾಗೆ.
ನನ್ನ ಒಂದು ವೈಯಕ್ತಿಕ ಅನುಭವ ಹಂಚಿಕೊಳ್ಳದೆ ಇರಲು ಸಾದ್ಯವೇ ಇಲ್ಲ. ನಾನು ಆಗ ಗರ್ಭಿಣಿ. 1991ರ ಹೊತ್ತು. ಮೊದಲ ಕೆಲವು ತಿಂಗಳಲ್ಲಿ ನನಗೆ ಬಾಯಿಯ ರಸ ಇಷ್ಟವಾಗುತ್ತಿರಲಿಲ್ಲ. ಕ್ಷಣಕ್ಷಣಕ್ಕು ಉಗುಳ ಬೇಕು ಅನಿಸುತ್ತಿತ್ತು. ಎದ್ದು ಎದ್ದು ಹೋಗುವುದಂತೂ ಸಾಧ್ಯವಿರಲಿಲ್ಲ. ಪಕ್ಕದಲ್ಲೇ ಒಂದು ಮಗ್ಗಿನಲ್ಲಿ ಸ್ವಲ್ಪ ನೀರು ಹಾಕಿ ಇಟ್ಟುಕೊಳ್ಳುತ್ತಿದ್ದೆ. ಆದರೂ ಒಂದು ಕಡೆಯಿಂದ ಒಂದು ಕಡೆಗೆ ಹೋಗಬೇಕಾಗುತ್ತಿತ್ತು. ವಾಸು, ಆಗಿನ್ನೂ ಯುವಕ, ಯಾವುದೇ ಅಸಹ್ಯ ಮಾಡಿಕೊಳ್ಳದೆ ನಾನು ಉಗುಳುತ್ತಿದ್ದ ಮಗ್ಗನ್ನು ನನ್ನ ಹಿಂದೆಯೇ ಎತ್ತಿಕೊಂಡು ಬರುತ್ತಿದ್ದರು. ಈ ಸೇವೆಯನ್ನು ನಾನು ಸಾಕಷ್ಟು ಅನುಭವಿಸಿದ್ದೇನೆ. ಇಂದಿಗೂ ಆ ದೃಶ್ಯಗಳು ನನ್ನ ಕಣ್ಣೆದುರಿಗೆ ಇದೆ.
ಮಹಿಳಾ ಸಮಖ್ಯಾದಲ್ಲಿ ನಾನು ಕೆಲಸ ಮಾಡುತ್ತಿದ್ದಾಗ ವಾಸು, ಲಕ್ಷ್ಮಿ ನಮ್ಮ ಜೊತೆಗೆ ಸಾಕಷ್ಟು ಸಮಯ ಕಳೆಯುವುದು ಇತ್ತು. ಬಹಳಷ್ಟು ಕೆಲಸಗಳನ್ನು ಒಟ್ಟಿಗೇ ಮಾಡಿದ್ದೇವೆ. ವಾಸು, ಲಕ್ಷ್ಮಿ, ಕೆಲವೊಮ್ಮೆ ಶ್ರದ್ಧಾನೂ ಸೇರಿದಂತೆ ಮನೆಗೆ ಬರುವುದೆಂದರೆ ಅದೊಂದು ಹಬ್ಬದ ತರಹ. ಅದೆಷ್ಟು ಹರಟೆಗಳು…ಅವೆಷ್ಟು ನೆನಪುಗಳನ್ನು ಹೇಳಿಕೊಂಡು ಆನಂದಿಸುವುದು, ಹೀಗೇ ಬದುಕಿನ ಸವಾಲುಗಳನ್ನು ಹಂಚಿಕೊಂಡು ಹಗುರವಾಗುವುದು…ಇರುತ್ತದೆ.
ನಾನೇನಾದರೂ ಅನುವಾದದ ಕೆಲಸ ಎತ್ತಿಕೊಂಡರೆ, ಕನ್ನಡ ಪದಗಳಿಗಾಗಿ ತಡಕಾಡುವಾಗ, ನಿಘಂಟು ನೋಡುವುದಕ್ಕಿಂತ ಹೆಚ್ಚಾಗಿ ವಾಸುಗೆ ಮೆಸೇಜ್ ಹೋಗುತ್ತಿರುತ್ತದೆ. ಯಾವುದೇ ದಣಿವಿಲ್ಲದಂತೆ ಶ್ರಮವಹಿಸಿ ಉತ್ತರ ಕಳುಹಿಸಿಕೊಡುತ್ತಾರೆ.
ಓಹ್. ಇತ್ತೀಚೆಗೆ ಲಕ್ಷ್ಮಿ ಜಾರಿ ಬಿದ್ದು, ಕಾಲು ಫ್ರಾಕ್ಚರ್ ಮಾಡಿಕೊಂಡಾಗ, ಅಡುಗೆ ಮನೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು, ಅತ್ಯಂತ ಕಾಳಜಿಯಿಂದ ಸಂಗಾತಿಯ ಸೇವೆ ಮಾಡಿರುವುದು ತಿಳಿದು ಖುಶಿಯಾಯಿತು. ಅನುಭವ ಹೇಳಿ ಅಂದರೆ ಒಂದು ಸೆಷನೇ ತೆಗೆದುಕೊಳ್ಳುವ ಸಾಧ್ಯತೆ ಇದೆ. ಬಿಡುವು ಇಟ್ಟುಕೊಂಡೇ ಕೇಳಬೇಕು.
ಕೆಲವು ವರುಷಗಳಿಂದ ನಾವು ಆಗೀಗ ಸೇರುವುದು ಸಮುಚ್ಚಯ ಎಂಬ ನಮ್ಮ ಅನೌಪಚಾರಿಕ ವೇದಿಕೆಯಲ್ಲಿ; ಅದೊಂದು ದೊಡ್ಡ ಕುಟುಂಬದ ತರಹ ಆಗಿದೆ ನಮಗೆ. ಅಲ್ಲಿಯೂ ವಾಸು ಸಕ್ರಿಯವಾಗಿ ಭಾಗವಹಿಸುತ್ತಾರೆ. ತಮಗೆ ಅನಿಸಿದ್ದನ್ನು ಆರಾಮವಾಗಿ ಹೇಳುತ್ತಾರೆ. ನಿರಾಳವಾಗಿ ಮಾತಾಡಿಕೊಳ್ಳುವ, ಒಡನಾಡುವ ಆ ಸ್ಪೇಸ್ ನ ಅಗತ್ಯವನ್ನು ಸ್ಪಷ್ಟವಾಗಿ ಪ್ರತಿಪಾದಿಸುತ್ತಿರುತ್ತಾರೆ.
ಅರವತ್ತರ ಈ ಹೊತ್ತಿನಲ್ಲಿ…ತುಂಬು ಚೈತನ್ಯದೊಂದಿಗೆ ಕೆಲಸ, ಕುಟುಂಬ ನಿರ್ವಹಿಸಲು ಸಾಧ್ಯವಾಗಲಿ ಎಂಬ ಹಾರೈಕೆ ನನ್ನದು. ಈ ಆಪ್ತವಾದ ಸಂಬಂಧ ನಮ್ಮ ಬದುಕಿನ ದೊಡ್ಡ ಸಂಪತ್ತು ಅಂತ ಅಭಿಮಾನದಿಂದ ಹೇಳಿಕೊಳ್ಳಬಹುದು.
ವಾಣಿ ಪೆರಿಯೋಡಿ, ಮಹಿಳಾಪರ ಹಿರಿಯ ಚಿಂತಕರು, ಲಿಂಗತ್ವ ತರಬೇತುದಾರರು, ಬರಹಗಾರರು, ಅಂಕಣಕಾರ್ತಿ.






