vasu-blogs-7-4

ಬಾಲಕಾರ್ಮಿಕರ ಬಿಡುಗಡೆ ಮತ್ತು ಪುನರ್ವಸತಿಯಲ್ಲಿ ಹೆಗಲಿಗೆ ಹೆಗಲೊಡ್ಡಿದ ವಾಸು – ಸರೋಜಾ

Last Updated: February 21, 2026By

ಭದ್ರಾವತಿಯಿಂದ ಬೆಂಗಳೂರಿಗೆ 1994ರಲ್ಲಿ ವಲಸೆ ಬಂದ ನನಗೆ ಸಮಷ್ಠಿ ಸಂಸ್ಥೆಯ ಆಶ್ರಯದಲ್ಲಿ ಎನ್.ಜಿ.ಓ. ಬಳಗಕ್ಕೆ ಸೇರುವ ಸುಸಂಧಿ ಪ್ರಾಪ್ತವಾಯಿತು. ಎನ್.ಜಿ.ಓ.ಗಳ ಉದಾತ್ತ ಧ್ಯೇಯೋದ್ದೇಶಗಳ ಪರಿಚಯವಾಗುತ್ತಾ, ನನ್ನ ಆಯ್ಕೆ ಮಕ್ಕಳ ಕ್ಷೇತ್ರವಾಯಿತು. ಇದರಲ್ಲಿ ನನ್ನನ್ನು ನಾನು ಸಕ್ರಿಯವಾಗಿ ತೊಡಗಿಸಿಕೊಂಡೆ. ಆ ಸಂದರ್ಭದಲ್ಲಿಯೇ ಆಗಿನ್ನೂ ಕ್ರೈ ಸಂಸ್ಥೆಯಲ್ಲಿ ಇದ್ದ ವಾಸುದೇವ ಶರ್ಮಾರವರ ಪರಿಚಯವಾಯಿತು. ಕ್ರಮೇಣ ಒಡನಾಟ ನಿಕಟವಾಗುತ್ತಾ ಅವರು ʻವಾಸುʼ ಎಂದೇ ಚಿರಪರಿಚಿತರಾದರು. 

೧೯೯೦ರ ದಶಕದಲ್ಲಿ ಬಾಲಕಾರ್ಮಿಕ ಪದ್ಧತಿ ಎಂಬ ಅನಿಷ್ಟ ಪಿಡುಗು ಉತ್ತುಂಗಮಟ್ಟಕ್ಕೆ ಏರಿತ್ತು. ಈ ಸಂದರ್ಭದಲ್ಲಿ ಬಾಲಕಾರ್ಮಿಕ ಪದ್ಧತಿ ನಿವಾರಣಾ ಕ್ರಮವಾಗಿ ರಾಷ್ಟ್ರಮಟ್ಟದಲ್ಲಿ ಬಾಲಕಾರ್ಮಿಕ ಪದ್ಧತಿ ವಿರೋಧೀ ಆಂದೋಲನ (ಸಿ.ಎ.ಸಿ.ಎಲ್‌) ಪ್ರಾರಂಭವಾಯಿತು. ಅಂತೆಯೇ, ಕರ್ನಾಟಕದಲ್ಲಿಯೂ ಈ ಆಂದೋಲನ ಮುಂಚೂಣಿಯಲ್ಲಿತ್ತು. ಈ ಸಂದರ್ಭದಲ್ಲಿಯೇ ೧೯೯೫ರಲ್ಲಿ ವಾಸುರವರ ಪರಿಚಯ ಆಯಿತು. ಮಕ್ಕಳ ಹಕ್ಕುಗಳ ವಿಷಯದಲ್ಲಿ ಅವರಿಗೆ ವಿಶಿಷ್ಟವಾದ ಅರಿವು ಇತ್ತು. 

ಮಕ್ಕಳನ್ನು ಕುರಿತಾದ ಅವರ ಕಾಳಜಿ ಮತ್ತು ಸ್ಪಷ್ಟ ವಿಚಾರಧಾರೆ ನನ್ನನ್ನೂ ಆಕರ್ಷಿಸಿತು. ಅವರ ಒಡನಾಟ ನಿಕಟವಾಗುತ್ತಿದ್ದಂತೆ ನನಗೆ ಮಕ್ಕಳ ಹಕ್ಕುಗಳ ವಿಷಯದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿತು ಎಂದರೆ ಅತಿಶಯವೇನಲ್ಲ. 

ರೇಷ್ಮೆ ಹುರಿಯಂತ್ರಗಳಲ್ಲಿ ಹಗಲು ರಾತ್ರಿ ಎನ್ನದೆ ಬಿಡಿಗಾಸಿಗೆ ಬಾಲ್ಯವನ್ನು ಕಳೆದುಕೊಳ್ಳುತ್ತಿದ್ದ ಮಕ್ಕಳಿಗೆ ಬಾಲ್ಯವನ್ನು ಮರಳಿಸುವ ದೃಷ್ಟಿಕೋನದಿಂದ ಮಾಗಡಿ ನನ್ನ ಕಾರ್ಯಕ್ಷೇತ್ರವಾಯಿತು. ಈ ಮಕ್ಕಳ ಬಂಧಮುಕ್ತತೆಗಾಗಿ ನಮ್ಮೊಂದಿಗೆ ವಾಸುರವರು ಮುಕ್ತ ಮನಸ್ಸಿನಿಂದ ಪಾಲ್ಗೊಂಡು ನಮ್ಮನ್ನು ಹುರಿದುಂಬಿಸಿದರು. ಆಂದೋಲನ ಪ್ರಕ್ರಿಯೆಗಳಲ್ಲಿ ಮತ್ತು ನೆರವು ನೀಡಲು ಮುಂದೆ ಬಂದ ಯುನಿಸೆಫ್‌ಗೆ ಪ್ರಸ್ತಾವನೆ ತಯಾರಿಸುವಲ್ಲಿ ಮತ್ತು ಸರ್ಕಾರಿ ಯಂತ್ರ ಇದರಲ್ಲಿ ಪಾಲ್ಗೊಳ್ಳುವಂತೆ ಮಾಡುವಲ್ಲಿ – ಹೀಗೆ ಪ್ರತಿಯೊಂದು ಹಂತದಲ್ಲಿಯೂ  ಕೈಜೋಡಿಸಿದ್ದರು. 

ಮಕ್ಕಳ ಹಕ್ಕುಗಳ ಕುರಿತು ಸಮಾಜದ ಪ್ರತಿಯೊಂದು ವರ್ಗವನ್ನೂ ಜಾಗೃತರನ್ನಾಗಿ ಮಾಡುವಲ್ಲಿ ಅಂದರೆ ಪೋಷಕರು, ಮಾಲೀಕರು, ಸರ್ಕಾರಿ ಅಧಿಕಾರಿಗಳು, ಪೊಲೀಸ್‌ ತಂಡ, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು, ಎಸ್.ಡಿ.ಎಂ.ಸಿ. ಸದಸ್ಯರು, ಎಸ್‌.ಎಚ್‌.ಜಿ. ಸಂಘಗಳ ಸದಸ್ಯರು, ಇತ್ಯಾದಿ ಸಮುದಾಯದವರಿಗೆ ಪ್ರಾತ್ಯಕ್ಷಿಕೆಗಳ ಮುಖಾಂತರ ಜಾಗೃತಿ ಮೂಡಿಸುವಲ್ಲಿ ನಮ್ಮೊಂದಿಗೆ ಹೆಜ್ಜೆ ಹಾಕಿದ್ದಾರೆ. 

ಇದೆಲ್ಲಕ್ಕೂ ಕಳಸವಿಟ್ಟಂತೆ ಸಿ.ಆರ್.ಟಿ.ಯ ಸಂಸ್ಥಾಪಕರಲ್ಲಿ ಒಬ್ಬರಾಗಿ, ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರದ ಕಲ್ಪನೆಯನ್ನು ಬೆಳೆಸಲು ಪ್ರಮುಖ ಪಾತ್ರವಹಿಸಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದಾರೆ. 

ತಾನೂ ಬೆಳೆದು ಇತರರನ್ನೂ ಬೆಳೆಸುವುದು ಒಂದು ಉತ್ತಮ ಮಾರ್ಗ. ಈ ಮಾರ್ಗದಲ್ಲಿ ನಮ್ಮ ವಾಸುರವರು ಮುಂಚೂಣಿಯಲ್ಲಿ ಇದ್ದಾರೆ. ಮಕ್ಕಳ ಹಕ್ಕುಗಳ ಕುರಿತು ಹೋರಾಟಗಾರ್ತಿಯಾಗಿ ನಾನು ಈ ಸಮಾಜಕ್ಕೆ ಕಿಂಚಿತ್ತು ಸೇವೆ ಸಲ್ಲಿಸುತ್ತಿದ್ದರೆ ಅದಕ್ಕೆ ವಾಸುರವರ ಮಾರ್ಗದರ್ಶನನವೂ ಸೇರಿದೆ. 

ಐಹಿಕ ಸುಖಗಳ ಹಿಂದೆ ಓಡುತ್ತಿರುವ ಈ ಜಗತ್ತಿನಲ್ಲಿ ಸ್ವಾರ್ಥಪರತೆ ಮೀರಿ ಸಾಮಾಜಿಕ ಕಳಕಳಿಯಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡಿರುವ ವಾಸು ಇತರರಿಗೆ ಮಾದರಿ ಮತ್ತು ದಾರಿದೀಪ. ಕೊನೆಯದಾಗಿ ಹೇಳುವುದಾದರೆ ಯೋಗ್ಯತೆ ಎಂಬುದು ಇತರರು ಹೇಳುವುದೂ ಅಲ್ಲ, ಅಥವಾ ನಾವು ತೋರಿಕೆ ಮಾಡುವುದೂ ಅಲ್ಲ. ನಾವು ಬದುಕುವ ರೀತಿ ಇತರರ ಅನುಭವಕ್ಕೆ ಬರುವಂತಹದು, ಅದೇ ನಿಜವಾದ ಘನತೆ ಮತ್ತು ಯೋಗ್ಯತೆ. ಈ ಯೋಗ್ಯತೆ ನಾವು ನಮ್ಮ ವಾಸುವಿನಲ್ಲಿ ಕಾಣಬಹುದು ಎಂದು ಮುಕ್ತಮನಸ್ಸಿನಿಂದ ಹೇಳುತ್ತಿರುವೆ. 

ಆರು ದಶಕಗಳನ್ನು ಪೂರೈಸುತ್ತಿರುವ ವಾಸು ಅವರಿಗೆ ಈ ಸುಸಂದರ್ಭದಲ್ಲಿ ಸುದೀರ್ಘ ಜೀವನ ಪ್ರಯಾಣ ಪ್ರಾಪ್ತಿಯಾಗಲಿ ಎಂದು ಮನದುಂಬಿ ಹಾರೈಸುವೆ. 

  • ಸರೋಜ, ಚಿಗುರು ಸಂಸ್ಥೆ, ಮಾಗಡಿ.