ಮಕ್ಕಳ ಹಕ್ಕುಗಳ ರಕ್ಷಣೆಗೆ ಸಮರ್ಪಿತ ಧ್ವನಿ – ಸುನಂದಾ ತೋಳಬಂದಿ

Last Updated: February 21, 2026By

ಮಕ್ಕಳ ಹಕ್ಕುಗಳ ರಕ್ಷಣೆಯನ್ನು ತಮ್ಮ ಜೀವನದ ಧ್ಯೇಯವನ್ನಾಗಿ ಮಾಡಿಕೊಂಡು, ಸೇವೆಯಲ್ಲಿ ಶ್ರದ್ಧೆ, ಕಾರ್ಯದಲ್ಲಿ ನಿಷ್ಠೆ, ಮನೋಭಾವದಲ್ಲಿ ಸಹಿಷ್ಣುತೆ ಮತ್ತು “ಪರಹಿತವೇ ಪರಮೋಚ್ಚ” ಎಂಬ ಮೌಲ್ಯವನ್ನು ಅಳವಡಿಸಿಕೊಂಡಿರುವ ಸಮಾಜ ಸೇವಕರು ಶ್ರೀ ವಾಸುದೇವ ಶರ್ಮಾ. ಸಮಾಜಕ್ಕೆ ಏನಾದರೂ ಮಾಡಬೇಕು ಎಂಬ ಹಂಬಲದಿಂದ, ಮಕ್ಕಳ ಹಕ್ಕುಗಳ ಪರವಾಗಿ ಸದಾ ಕಿವಿಯಾಗಿ, ಧ್ವನಿಯಾಗಿ ನಿಂತಿರುವ ಅಪರೂಪದ ವ್ಯಕ್ತಿತ್ವ ಅವರದು.

ಶ್ರೀ ವಾಸುದೇವ ಶರ್ಮಾ ಅವರ ಪರಿಚಯ ನನಗೆ ೧೯೯೪ರಲ್ಲಿ. ವಿಜಯಪುರದಲ್ಲಿ ನಾವು ಉಜ್ವಲ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆಯ ಮೂಲಕ ಕೊಳಚೆ ಮತ್ತು ಗ್ರಾಮೀಣ ಪ್ರದೇಶಗಳ ಮಹಿಳೆಯರು ಹಾಗೂ ಮಕ್ಕಳನ್ನು ಸಶಕ್ತರನ್ನಾಗಿ ಮಾಡುವ ಕಾರ್ಯ ಆರಂಭಿಸಿದ್ದೆವು. ಆಗ ಕ್ರೈ ಸಂಸ್ಥೆಯ ಪ್ರತಿನಿಧಿಯಾಗಿ ವಾಸುದೇವ ಶರ್ಮಾ ಅವರು ನಮ್ಮನ್ನು ಭೇಟಿಯಾಗಿ ನಮ್ಮ ಕೆಲಸಗಳಿಗೆ ಬಲ, ಬೆಂಬಲ ನೀಡಿ, ನಮ್ಮ ಕೆಲಸಗಳ ಬೆಳವಣಿಗೆಗೆ ಭರವಸೆ ಕೊಟ್ಟರು. ಮಕ್ಕಳ ರಕ್ಷಣೆ ಮತ್ತು ಶಿಕ್ಷಣದ ಸೇವೆಯಲ್ಲಿ ತೊಡಗಿರುವ ಸಂದರ್ಭದಲ್ಲಿ, ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿರುವ ಯಾವುದೇ ಪ್ರಕರಣವಅದರೂ, ಅವರು ಅದನ್ನು ತೀರಾ ಗಂಭೀರವಾಗಿ ಪರಿಗಣಿಸುತ್ತಾರೆ. ರಾಜ್ಯಮಟ್ಟದ ಅಧಿಕಾರಿಗಳೊಂದಿಗೆ ವಕಾಲತ್ತು ನಡೆಸಿ, ಅವರನ್ನು ಮನವೊಲಿಸಿ ಕಾರ್ಯಪ್ರವೃತ್ತರನ್ನಾಗಿಸುವ ಅವರ ವೈಖರಿ ನಿಜಕ್ಕೂ ಶ್ಲಾಘನೀಯ. ಬೆಂಗಳೂರು ನಿವಾಸಿಯಾಗಿದ್ದರೂ, ರಾಜ್ಯದಲ್ಲಿ ಬಾಲ್ಯವಿವಾಹ, ಭ್ರ‍್ರೂಣಹತ್ಯೆ, ಮಕ್ಕಳ ಮಾರಾಟ, ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿರುವ ಉತ್ತರ ಕರ್ನಾಟಕಕ್ಕೆ ವಿಶೇಷ ಒತ್ತು ನೀಡಿ ಕೆಲಸ ಮಾಡಿದವರು ಅವರು. ಉತ್ತರ ಕರ್ನಾಟಕದ ಮಕ್ಕಳ ಪರ ಕೆಲಸ ಮಾಡುವ ಅನೇಕ ಸ್ವಯಂಸೇವಾ ಸಂಸ್ಥೆಗಳಿಗೆ ಬೆನ್ನೆಲುಬಾಗಿ ನಿಂತು, ನಿರಂತರ ಸಲಹೆಸೂಚನೆ ನೀಡುತ್ತಿದ್ದಾರೆ.

ರಾಜ್ಯದಲ್ಲಿ ಮಕ್ಕಳ ಹಕ್ಕುಗಳ ಚಿಂತನೆಯಲ್ಲಿ ತೊಡಗಿರುವ ಸ್ವಯಂಸೇವಾ ಸಂಸ್ಥೆಗಳ ಒಕ್ಕೂಟವಾದ ಕೆಸಿಆರ್‌ಒ ರಚಿಸಿ, ನಮ್ಮೆಲ್ಲರನ್ನೂ ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಂಘಸಂಸ್ಥೆಗಳ ಮುಖ್ಯಸ್ಥರೊಂದಿಗೆ ವಕಾಲತ್ತುಗಳ ಮೂಲಕ ಸಂವಹನ ನಡೆಸಿ, ಅದನ್ನು ಯಾವತ್ತೂ ಪ್ರಚಾರ ಮಾಡಿಕೊಳ್ಳದೇ ಅಜ್ಞಾತವಾಗಿ ಉಳಿಯುವ ಸ್ವಭಾವ ಅವರದು.

ಬಾಲ್ಯವಿವಾಹ ತಡೆ ಹೋರಾಟದಲ್ಲಿ ನಮ್ಮ ಉಜ್ವಲ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ ಕೆಲವೊಮ್ಮೆ ಹತಾಶೆಯ ಅಂಚಿಗೆ ಬಂದಾಗ, “ನಿಮ್ಮ ಪ್ರಯತ್ನ ಹೀಗೆ ಸಾಗುತ್ತಿರಲಿ” ಎಂದು ಬೆನ್ನು ತಟ್ಟಿ ಧೈರ್ಯ ತುಂಬಿದವರು ನಮ್ಮೆಲ್ಲರ ಪ್ರೀತಿಯ ವಾಸು ಅಣ್ಣ.

೨೦೦೮ರಿಂದ ಇಲ್ಲಿಯವರೆಗೆ, ಜಿಲ್ಲಾ ಮಟ್ಟದ ಮಕ್ಕಳ ಹಕ್ಕುಗಳ ಸಂಸತ್ತನ್ನು ಸಿಆರ್‌ಟಿ ಸಹಯೋಗದಲ್ಲಿ, ಮಕ್ಕಳಿಗಾಗಿ ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ. ಮಕ್ಕಳ ಭಾಗವಹಿಸುವ ಹಕ್ಕನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಪ್ರತಿ ಜಿಲ್ಲೆಯ ಮಕ್ಕಳಿಗಾಗಿ ಕಾರ್ಯಕ್ರಮಗಳನ್ನು ಆಯೋಜಿಸಿ, ಅಲ್ಲಿ ಆಯ್ಕೆಯಾದ ಮಕ್ಕಳ ಪ್ರತಿನಿಧಿಗಳಿಗೆ ಮುಖ್ಯಮಂತ್ರಿ, ಸಚಿವರು ಹಾಗೂ ರಾಜ್ಯಮಟ್ಟದ ಅಧಿಕಾರಿಗಳೊಂದಿಗೆ ವಿಧಾನಸೌಧದಲ್ಲಿ ಸಂವಾದ ನಡೆಸುವ ಅಪರೂಪದ ವೇದಿಕೆಯನ್ನು ನಿರ್ಮಿಸಿ ಕೊಟ್ಟಿದ್ದಾರೆ. ಇದು ಅಷ್ಟು ಸುಲಭದ ಕಾರ್ಯವಲ್ಲ ಎಂಬುದು ಎಲ್ಲರಿಗೂ ತಿಳಿದ ಸಂಗತಿ.

“ದಿಕ್ಕಿಲ್ಲದವರಿಗೆ ದೇವರೇ ದಿಕ್ಕು” ಎಂಬಂತೆ, ನನ್ನ ಹೋರಾಟದ ಪ್ರತಿಯೊಂದು ಹೆಜ್ಜೆಯಲ್ಲೂ ಅವರು ನನಗೆ ದೇವರಂತೆ ಕಾಣುತ್ತಾರೆ. ನಾನು ಮತ್ತು ನನ್ನ ಪತಿ ವಾಸುದೇವ ತೋಳಬಂದಿ ಅವರು ೧೯೯೩ ರಿಂದ ಕೊಳಚೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬಾಲಕಾರ್ಮಿಕತೆ ಮತ್ತು ಬಾಲ್ಯವಿವಾಹ ತಡೆಯುವ ಸೇವೆಯಲ್ಲಿ ತೊಡಗಿದ್ದಾಗ, ಸಮುದಾಯ ಹಾಗೂ ಆರ್ಥಿಕ ಸವಾಲುಗಳು ಎದುರಾದ ಕ್ಷಣಗಳಲ್ಲಿ, “ಇವುಗಳನ್ನು ಮೆಟ್ಟಿ ನಿಂತಾಗಲೇ ಬದುಕು ಕಾಣಿಸುತ್ತದೆ” ಎಂದು ಬೆನ್ನು ತಟ್ಟಿದ ಮಾತುಗಳು ನನಗೆ ಎಂದಿಗೂ ಮರೆಯಲಾಗದವು.

ಇಂದು ಕರ್ನಾಟಕದ ಯಾವುದೇ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿಯ ಕಚೇರಿಗೆ ಕಾಲಿಟ್ಟರೆ, ಅಲ್ಲಿನ ಮೇಜಿನ ಮೇಲೆ ನೀಲಿ ಬಣ್ಣದ ಮಕ್ಕಳ ನ್ಯಾಯ ಕಾಯಿದೆಯ ಕನ್ನಡ ಅನುವಾದಿತ ಪುಸ್ತಕ ತಪ್ಪದೆ ಕಾಣುತ್ತದೆ. ಆ ಪುಸ್ತಕದ ಮೊದಲ ಪುಟದಲ್ಲಿ ಅನುವಾದಕಾರರ ಹೆಸರನ್ನು ನೋಡಿದರೆ ಇವರೇ.!! ವಾಸುದೇವ ಶರ್ಮಾ. ಕಾನೂನಿನ ಪದಗಳನ್ನು ಮಕ್ಕಳ ಬದುಕಿನ ರಕ್ಷಣೆಯಾಗಿ ರೂಪಿಸಿದ ಈ ಸೇವೆಯೇ, ಮಕ್ಕಳ ಹಕ್ಕುಗಳ ಕ್ಷೇತ್ರಕ್ಕೆ ಅವರು ನೀಡಿದ ಅಪರೂಪದ ಕೊಡುಗೆಯ ಜೀವಂತ ಸಾಕ್ಷಿ. ಅವರ ಹೆಸರು ಪುಸ್ತಕದ ಪುಟಗಳಲ್ಲಿ ಮಾತ್ರವಲ್ಲ, ಸಾವಿರಾರು ಮಕ್ಕಳ ಸುರಕ್ಷಿತ ಭವಿಷ್ಯದ ಒಳಗೇ ಶಾಶ್ವತವಾಗಿ ಮುದ್ರಿತವಾಗಿದೆ. ರಾಜ್ಯ ಸರಕಾರಕ್ಕೆ ಮಕ್ಕಳ ಹಕ್ಕುಗಳ ಬಗ್ಗೆ ಸಲಹೆಗಾರರಾಗಿ,  ರಾಷ್ಟ್ರಮಟ್ಟದಲ್ಲೂ ತರಬೇತಿದಾರರಾಗಿ ಹಾಗೂ ಯುನಿಸೆಫ್‌ನೊಂದಿಗೆ ನಮ್ಮನ್ನು ಜೊಡಿಸಿ ಮಕ್ಕಳ ಸೇವೆ ಮಾಡಿಸುತ್ತಿರುವ ಇವರು ನಮ್ಮೆಲ್ಲರ ಹೆಮ್ಮೆಯಾಗಿದ್ದಾರೆ.

ಶ್ರೀ ವಾಸುದೇವ ಶರ್ಮಾ ಅವರು ಮನಸ್ಸು ಮಾಡಿದರೆ ಇಂದು ರಾಜ್ಯಮಟ್ಟದ ಉನ್ನತ ಅಧಿಕಾರಿಯಾಗಿರಬಹುದಿತ್ತು. ಆದರೆ ಅಧಿಕಾರದ ಹಿಂದೆ ಓಡದೆ, ಅಧಿಕಾರಿಗಳು, ಸಮುದಾಯ ಮತ್ತು ಜನಪ್ರತಿನಿಧಿಗಳ ಕಣ್ಣು ತೆರೆಸುವ ಉದ್ದೇಶದಿಂದ ತರಬೇತಿ ಸಭೆಗಳನ್ನು ನಡೆಸಿ, ಸರ್ಕಾರಕ್ಕೆ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಂದು “ಮಕ್ಕಳ ಹಕ್ಕುಗಳು” ಎಂದರೆ “ವಾಸುದೇವ ಶರ್ಮಾ” ಎಂಬಂತೆ ಗುರುತಿಸುವಂತಾಗಿದೆ.

ವಿಧಾನಸೌಧದಲ್ಲಿ ಮಕ್ಕಳ ಸಮಸ್ಯೆಗಳ ಕುರಿತು ಜನಪ್ರತಿನಿದಿಗಳು ಚರ್ಚಿಸುವಂತಾಗಿದೆ ಎಂದರೆ ಅದಕ್ಕೆ ಕಾರಣ ವಾಸುದೇವ ಶರ್ಮಾ. 

“ಇಂದಿನ ಮಕ್ಕಳು ನಾಳಿನ ಪ್ರಜೆಗಳಲ್ಲ. ಇಂದಿನ ಪ್ರಜೆಗಳು” ಎಂಬ ಮಾನವೀಯ ದೃಷ್ಟಿಕೋನವನ್ನು ಸಮಾಜಕ್ಕೆ ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಸರಳ ಸ್ವಭಾವ, ಸಹೃದಯತೆ, ಇತರರಿಗೆ ಗೌರವ ನೀಡುವ ಗುಣ, ದಿನದ ೨೪ ಗಂಟೆಯೂ ಯಾರೇ ಕರೆ ಮಾಡಿದರೂ ಉತ್ತರಿಸಿ ಸಲಹೆಮಾರ್ಗದರ್ಶನ ನೀಡುವ ಗುಣ ಅವರ ವಿಶೇಷತೆ.

೧೯೯೯ರಲ್ಲಿ ಕರ್ನಾಟಕ ರಾಜ್ಯದಲ್ಲೇ ಮೊಟ್ಟಮೊದಲ ಬಾರಿಗೆ ಜಮಖಂಡಿ ಪಟ್ಟಣದ ಸಿಕ್ಕಲಗಾರ ಓಣಿಯ ಸಾಮೂಹಿಕ ವಿವಾಹದಲ್ಲಿ ೨೪ ಬಾಲ್ಯವಿವಾಹಗಳನ್ನು ತಡೆಯುವ ಹೋರಾಟದಲ್ಲಿ ನಮಗೆ ವಾಸುದೇವ ಶರ್ಮಾ ಅವರು ಕಾನೂನು ನೆರವು, ತಂತ್ರ ಮತ್ತು ಮಾರ್ಗದರ್ಶನ ನೀಡಿದ ಫಲವಾಗಿ, ನಮ್ಮ ಸಂಸ್ಥೆ ಕಳೆದ ೨೫ ವರ್ಷಗಳಿಂದ ಈ ಸಮಸ್ಯೆಯ ನಿರ್ಮೂಲನೆಗಾಗಿ ನಿರಂತರವಾಗಿ ಕೆಲಸ ಮಾಡುವಂತಾಗಿದೆ. ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಕ್ಕಳ ಹಕ್ಕುಗಳ ಅರಿವು ಮೂಡಿಸಲು, ಉಜ್ವಲ ಸಂಸ್ಥೆಯಲ್ಲಿ ಸಂಪನ್ಮೂಲ ವ್ಯಕ್ತಿಗಳ ತಂಡವನ್ನು ರೂಪಿಸುವಲ್ಲಿ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಇವರ ತಂದೆ ಆಸ್ಪತ್ರೆಯಲ್ಲಿ ತೀರಾ ಅಸ್ವಸ್ಥರಾಗಿದ್ದ ಸಂದರ್ಭದಲ್ಲೂ, ವಿಜಯಪುರದಲ್ಲಿ ನಮ್ಮ ಕಾರ್ಯಕರ್ತರು ಎದುರಿಸುತ್ತಿದ್ದ ಬಾಲ್ಯವಿವಾಹ ಪ್ರಕರಣದ ಸಂಕಷ್ಟಕ್ಕೆ ತಮ್ಮ ವೈಯಕ್ತಿಕ ದುಃಖವನ್ನು ಬದಿಗಿಟ್ಟು ಮಾರ್ಗದರ್ಶನ ನೀಡಿದ ಮಾನವೀಯ ಗುಣವನ್ನು ನಾವು ಎಂದಿಗೂ ಮರೆಯಲಾಗದು.

ಎಷ್ಟೇ ಸಾಧನೆ ಮಾಡಿದರೂ ವ್ಯಕ್ತಿತ್ವದಲ್ಲಿ ಸ್ವಲ್ಪವೂ ಬದಲಾವಣೆ ಮಾಡಿಕೊಳ್ಳದೇ, ತುಟಿಯ ಮೇಲೆ ಅದೇ ನಗು, ಎದುರಿನವರನ್ನು ನಗುಮುಖದ ಮಾತಿನಿಂದ ಒಪ್ಪಿಸುವ ಅವರ ಮೋಡಿಯ ವ್ಯಕ್ತಿತ್ವ. ಮಕ್ಕಳ ಹಕ್ಕುಗಳ ರಕ್ಷಣೆಯನ್ನು ಕೇವಲ ವೃತ್ತಿಯಲ್ಲ, ಬದುಕಿನ ಧರ್ಮವನ್ನಾಗಿ ಸ್ವೀಕರಿಸಿದ ಅಪರೂಪದ ವ್ಯಕ್ತಿತ್ವವೇ ಶ್ರೀ ವಾಸುದೇವ ಶರ್ಮಾ. ಮಾತಿಗಿಂತ ಕಾರ್ಯಕ್ಕೆ ಮಹತ್ವ ನೀಡುವ, ಹೆಸರುಪ್ರಚಾರಕ್ಕಿಂತ ಪರಿಣಾಮಕಾರಿ ಸೇವೆಯನ್ನು ಮೆಚ್ಚುವ ಅವರ ಜೀವನ ಪಯಣ ಅನೇಕ ಸಮಾಜಸೇವಕರಿಗೆ ಪ್ರೇರಣೆಯ ದೀಪವಾಗಿದೆ. ಮಕ್ಕಳ ಹಕ್ಕುಗಳ ಉಲ್ಲಂಘನೆಗೆ ಮೌನವಾಗಿರದ ಧೈರ್ಯ, ಅನ್ಯಾಯದ ವಿರುದ್ಧ ನಿರಂತರ ವಕಾಲತ್ತು, ಹಾಗೂ ಪ್ರತಿಯೊಬ್ಬ ಮಗುವಿನಲ್ಲೂ ಭವಿಷ್ಯದ ನಾಗರಿಕನನ್ನು ನೋಡುವ ದೃಷ್ಟಿಕೋನಇವೆಲ್ಲವೂ ಅವರನ್ನು ಸಮಾಜದ ಅಮೂಲ್ಯ ಆಸ್ತಿಯನ್ನಾಗಿ ಮಾಡಿವೆ. ಅವರ ಸೇವಾ ಮನೋಭಾವ, ನಿಷ್ಠೆ ಮತ್ತು ಮಾನವೀಯತೆ ಮುಂದಿನ ಪೀಳಿಗೆಗೂ ದಾರಿದೀಪವಾಗಲಿ ಎಂಬುದು ನಮ್ಮೆಲ್ಲರ ಹಾರೈಕೆ.

೬೦ನೇ ವಯಸ್ಸಿನಲ್ಲಿ ಯುವಕರನ್ನು ನಾಚಿಸುವ ಇವರ ಕ್ರೀಯಾಶೀಲತೆಗೆ ನನ್ನದೊಂದು ಸಲಾಂ. ಇನ್ನೂ ಹೆಚ್ಚೆಚ್ಚು ಸೇವೆ ಮಾಡಲು ಸಾಮರ್ಥ್ಯವನ್ನು ಪರಮಾತ್ಮ ಅವರಿಗೆ ನೀಡಲಿ. ಮಕ್ಕಳ ರಕ್ಷಣೆಗಾಗಿ ಅವರು ೧೦೦ ವರ್ಷ ಬದುಕಬೇಕು, ತುಂಬು ಜೀವನ ನಡೆಸಬೇಕೆಂಬುದು ನನ್ನಾಸೆ.

  • ಸುನಂದಾ ತೋಳಬಂದಿ, ಉಜ್ವಲಾ ಸಂಸ್ಥೆ, ವಿಜಯಪುರ