vasu-blogs-9-3

ಮಗು ಸ್ನೇಹಿ ಸಮಾಜದ ಕನಸು ರೂಪಿಸಿದ ದಾರ್ಶನಿಕ ಡಾ. ವಾಸುದೇವ ಶರ್ಮಾ – ರೆನ್ನಿ ಡಿʼಸೋಜ

Last Updated: February 21, 2026By

90ರ ದಶಕದಲ್ಲಿ ವಿಶ್ವದಾದ್ಯಂತ ಮಕ್ಕಳ ಹಕ್ಕುಗಳಿಗೆ ಪ್ರಾಮುಖ್ಯತೆ ದೊರೆತ ಸಮಯ. ಅದಾಗಲೇ 1989ರಲ್ಲಿ ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ ರಚನೆಯಾಗಿ ವಿಶ್ವದ ಎಲ್ಲಾ ಮಕ್ಕಳಿಗೆ ಹಕ್ಕುಗಳಿವೆ ಎಂದು ಸಾರಿದ ಕ್ಷಣಗಳು. ಸ್ವಲ್ಪ ತಡವಾದರೂ 1992ರಲ್ಲಿ ಭಾರತ ಸರಕಾರವು ಕೂಡ ಒಪ್ಪಂದಕ್ಕೆ ಸಹಿ ಹಾಕಿ ಸಂವಿಧಾನದ ಆಶಯದಂತೆ ನಮ್ಮ ದೇಶದಲ್ಲೂ 18 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಮಕ್ಕಳ ಹಕ್ಕುಗಳನ್ನು ನೀಡಲು ಸರಕಾರ ಬದ್ಧ ಎಂದು ಖಾತರಿಗೊಳಿಸಿದ ಸುಸಂದರ್ಭ. ಇದರ ಪರಿಣಾಮವಾಗಿ, ನಮ್ಮ ಸಮಾಜದಲ್ಲಿ ವಿವಿಧ ತಾರತಮ್ಯ, ಅಸಮಾನತೆ, ಅನ್ಯಾಯದಿಂದ ಹಿಂದುಳಿದ ಮಕ್ಕಳಿಗೆ ತಮ್ಮ ಬಾಲ್ಯವನ್ನು ಪಡೆಯಲು ಅವಕಾಶವಾಯಿತು. ಈ ದಿಟ್ಟಿನಲ್ಲಿ ಸಂಬಂಧಪಟ್ಟ ಕಾಯಿದೆಗಳು, ನೀತಿಗಳು ಅನೇಕ ಯೋಜನೆಗಳನ್ನು  ಕೇಂದ್ರ ಸರಕಾರ   ಮತ್ತು ರಾಜ್ಯ ಸರ್ಕಾರ ಅನಿವಾರ್ಯವಾಗಿ  ತರುವಂತಾಯಿತು. ಇದರ ಪರಿಣಾಮವಾಗಿ ಶಿಕ್ಷಣ ಮೂಲಭೂತ ಹಕ್ಕು ಎಂದು ಸಂವಿಧಾನಕ್ಕೆ ತಿದ್ದುಪಡಿ ಮಾಡಲಾಯಿತು. ಇದರ ಅನುಷ್ಟಾನಕ್ಕಾಗಿ RTE ಕಾಯಿದೆ 2009ರಲ್ಲಿ ಬಂತು. 2000 ದಲ್ಲಿ ಬಾಲ ನ್ಯಾಯ ಕಾಯಿದೆ ಜಾರಿಗೆ ಬಂದು, ಆರೈಕೆ ಪೋಷಣೆಯ ಆವಶ್ಯಕತೆ ಇರುವ ಮಕ್ಕಳಿಗೆ ಮತ್ತು ಕಾನೂನಿನೊಡನೆ  ಸಂಘರ್ಷಕ್ಕೆ  ಸಿಲುಕಿದ ಮಕ್ಕಳಿಗೆ  ಕಾನೂನಿನ  ಬಲ ದೊರೆತಿದ್ದರಿಂದ,  ಅನೇಕ ಮಕ್ಕಳಿಗೆ ತಮ್ಮ ಬಾಲ್ಯವನ್ನು  ಆನಂದಿಸಲು ಒಂದು ಸುವರ್ಣವಕಾಶ ಸಿಗುವಂತಾಯಿತು ಎಂದೇ ಹೇಳಬಹುದು .

ಆದರೆ ಸಾಮಾಜಿಕ ಆರ್ಥಿಕ ಹಾಗೂ ಸಾಂಸ್ಕ್ರತಿಕ ಅಸಮಾನತೆಯಿಂದ ನರಳಾಡುತ್ತಿರುವ ಈ ಸಮಾಜದಲ್ಲಿ ಕಾಯಿದೆಗಳನ್ನು ಮಕ್ಕಳಿಗೆ ದಾಟಿಸುವುದು ಅಷ್ಟು ಸುಲಭದ ಮಾತಲ್ಲ. ಯಾಕೆಂದರೆ ತಲೆತಲಾಂತರದಿಂದ ತಾರತಮ್ಯ, ಅಸಮಾನತೆ ಹಾಗೂ ಅನ್ಯಾಯಕ್ಕೆ ಒಳಗಾಗಿ ಶ್ರೇಣಿಕೃತ ಸಮಾಜದಲ್ಲಿ ಬದುಕುತ್ತಿರುವ ಜನರಲ್ಲಿ  ಒಮ್ಮೆಲೇ ತಾರತಮ್ಯವಿಲ್ಲದೆ ಎಲ್ಲಾ ಮಕ್ಕಳಿಗೆ  ಸಮಾನವಾದ   ಅವಕಾಶವನ್ನು  ನೀಡಿ ಮಗು ಸ್ನೇಹಿ  ಸಮಾಜ ನಿರ್ಮಾಣ ಮಾಡುವುದು ಅಷ್ಟು  ಸುಲಭದ  ಮಾತಾಗಿರಲಿಲ್ಲ. 

ಇಂತಹ ಸಂದರ್ಭದಲ್ಲಿ ಮಕ್ಕಳ ಪಾಲಿಗೆ ಚೈತನ್ಯಶೀಲ ಶಕ್ತಿಯಾಗಿ ಬಂದವರು ಡಾ. ವಾಸುದೇವ ಶರ್ಮಾರವರು. ಡಾ. ಪದ್ಮಿನಿಯವರ ಒಡನಾಟದಲ್ಲಿ ಹಾಗೂ ಮಾರ್ಗದರ್ಶನದಲ್ಲಿ ಆರಂಭಿಸಿದ ಚೈಲ್ಡ್‌ ರೈಟ್ಸ್‌ ಟ್ರಸ್ಟ್ ಮೂಲಕ ನಮಗೆಲ್ಲರಿಗೂ  ಪರಿಚಯರಾದ ಡಾ. ವಾಸುದೇವ ಶರ್ಮಾರವರು  ಬಹುಮುಖ ವ್ಯಕ್ತಿತ್ವವನ್ನು ಹೊಂದಿದವರಾಗಿದ್ದು, ಅದರ ಮೂಲಕ ಮಕ್ಕಳ  ಒಳಿತಿಗಾಗಿ ಸದಾ ಸಂದ್ಪಿಸುತ್ತಾ ನಮ್ಮೆಲ್ಲರಿಗೂ ಮಾದರಿಯಾಗಿರುತ್ತಾರೆ.

ಮಕ್ಕಳ ಜತೆ ಕೆಲಸ ಮಾಡುವ ಅನೇಕ Activist ಗಳಿಗೆ, ಸಂಘಟನೆಗಳ ಮುಖ್ಯಸ್ಥರಿಗೆ ವಾಸುದೇವರವರು ಚಿರಪರಿಚಿತರು. ತಳಮಟ್ಟದಿಂದ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಶ್ರಮಿಸುತ್ತಿರುವ ಅನೇಕ ಜನರೊಂದಿಗೆ ತನ್ನ ನೈಜ ಕಾಳಜಿ ಬದ್ದತೆಯಿಂದ  ಮಕ್ಕಳ ಹಕ್ಕಿಗಾಗಿ ಸದಾ ಹೊಸತನದೊಂದಿಗೆ ಶ್ರಮಿಸುವಂತೆ  ಪ್ರೇರೇಪಿಸುತ್ತಾರೆ. ಮಕ್ಕಳ ಹಕ್ಕುಗಳ  ಒಡಂಬಡಿಕೆ, ಕಾಯಿದೆ ನೀತಿ, ನಿಯಮಗಳು ಜಾರಿಗೆ ಬಂದಿದ್ದರೂ, ಅದು ಅನುಷ್ಠಾನವಾಗುವ ನಿಟ್ಟಿನಲ್ಲಿ ವಾಸುದೇವರವರು ತಮ್ಮ ಜೀವನವನ್ನೇ ಮುಡಿಪಾಗಿ ಇಟ್ಟಿದ್ದಾರೆ  ಎಂದರೆ  ತಪ್ಪಾಗಲಾರದು. ಯಾಕೆಂದರೆ ಒಬ್ಬ    ಉತ್ತಮ ತರಬೇತುದಾರರಾಗಿ, ಭಾಗವಹಿಸುವ  ಪ್ರತಿಯೊಬ್ಬರನ್ನೂ  ಮಕ್ಕಳ ಜತೆ ಕೆಲಸ  ಮಾಡುವಂತೆ ಹಾಗೂ ಅವರಲ್ಲಿ ವಿಶ್ಲೇಷಣಾ ನೋಟವನ್ನು ಚಿಗುರಿಸುತ್ತಿದ್ದರು.  ತಮ್ಮ ನಿರಂತರ ಲೇಖನಗಳ ಮೂಲಕ ಮಕ್ಕಳ ಹಕ್ಕಿನ ಹೊಸ ವಿಚಾರಗಳನ್ನು ಸರಳವಾದ ಸಾಹಿತ್ಯದ ಮೂಲಕ ಜನ ಸಾಮಾನ್ಯರಿಗೆ ತಲುಪುವಂತೆ ಮಾಡಿರುವ  ಫಲವಾಗಿ, ಮಕ್ಕಳಿಗೆ ಸಂಬಂಧಪಟ್ಟ ಅನೇಕ  ಮಾಹಿತಿ  ಲಭ್ಯವಾಗಲು ಕಾರಣವಾಗಿದೆ. ತಮ್ಮ ನಿರಂತರ ಅಧ್ಯಯನ ಮತ್ತು ಅದನ್ನು ಜನರಿಗೆ ದಾಟಿಸುವ ಬಗ್ಗೆ ಯೋಚಿಸುವ  ವಾಸುದೇವ ಶರ್ಮಾರವರು ಇಂದು ಕರ್ನಾಟಕದಲ್ಲಿ ಮಕ್ಕಳ ಹಕ್ಕುಗಳ ಜಾರಿಗಾಗಿ  ಹೋರಾಡುತ್ತಿರುವ ಪ್ರಮುಖರಲ್ಲಿ ಒಬ್ಬರು,  ಮೊದಲಿಗರೆಂದೇ ಹೇಳಬಹುದು.

ನಾನು 90ರ ದಶಕದಲ್ಲಿ ಅದಾಗಲೇ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಕೊಳ್ಳುವ ಸಂದರ್ಭದಲ್ಲಿ  ವಾಸುದೇವರವರು  ಮಕ್ಕಳ ಹಕ್ಕುಗಳ ರಕ್ಷಣೆಯ ಕೆಲಸ ಮಾಡುತ್ತಾ,  ಶಿಕ್ಷಣ ಹಕ್ಕು ಕಾಯಿದೆ ತರುವ ಹೋರಾಟದಲ್ಲಿ CACL ಹಾಗೂ ಇನ್ನಿತರ  ಸಂಪರ್ಕಜಾಲಗಳ ಮೂಲಕ ನೀತಿ ನಿರೂಪಕರ ಮೇಲೆ ಒತ್ತಡ ತರುವ ನಿಟ್ಟಿನಲ್ಲಿ ಶ್ರಮಿಸಿದ್ದಾರೆ.  ಶಿಕ್ಷಣದ  ಜತೆಗೆ ಮಕ್ಕಳ ರಕ್ಷಣೆ  ಕುರಿತು ನನ್ನನ್ನು ಬೆಳೆಸುವ  ನಿಟ್ಟಿನಲ್ಲಿ ವಾಸುದೇವರವರು  ಪಾಲು ಬಹಳ ಇದೆ. ಅದಕ್ಕಾಗಿ ನಾನು ಅವರಿಗೆ ಸದಾ ಚಿರಋಣಿ.

ತಮ್ಮ ನಿರಂತರ ಅಧ್ಯಯನ ತರಬೇತಿ , ವಕಾಲತ್ತು ಮಾಡುವುದರ ಮೂಲಕ ಅನೇಕ ಆಸಕ್ತರನ್ನು  Activist ಗಳಾಗಿ ಬೆಳೆಸಿ ಅವರು ತಮ್ಮ ತಮ್ಮ ಕ್ಷೇತ್ರದಲ್ಲಿ ಮಕ್ಕಳಿಗಾಗಿ  ಕೆಲಸ  ಮಾಡುವಂತೆ ಪ್ರೇರಕರಾಗಿದ್ದ ಕಾರಣ ಕರ್ನಾಟಕದ ಪ್ರತಿ ಜಿಲ್ಲೆಯಲ್ಲಿ ವಾಸುದೇವರವರು ತಮ್ಮದೇ  ಅದ ಸ್ನೇಹಿತರ ಬಳಗವನ್ನು   ಹೊಂದಿದ್ದಾರೆ.

ಇದರಿಂದ ರಾಜ್ಯದಲ್ಲಿ ಮಕ್ಕಳ ಹಕ್ಕುಗಳ ಕಾಯಿದೆ ನೀತಿಗಳ ಅನುಷ್ಠಾನಕ್ಕೆ ಅನುಕೂಲವಾಗುತ್ತಿದೆ.  ವೈಯಕ್ತಿಕವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸ್ವಯಂಸೇವಾ ನೆಲೆಯಲ್ಲಿ ಶಿಕ್ಷಣಪರ ವೇದಿಕೆಗಳಾದ  ಶಿಕ್ಷಣ ಸಂಪನ್ಮೂಲ  ಕೇಂದ್ರಗಳ  ಸಬಲೀಕರಣಕ್ಕೆ ಅನೇಕ  ಬಾರಿ ಮಂಗಳೂರಿಗೆ ಬಂದು ತರಬೇತಿ ನೀಡಿದ ಸಂದರ್ಭದಲ್ಲಿ ಅನೇಕ ಮಂದಿ ಸ್ವಯಂ  ಪ್ರೇರಣೆಗೊಂಡು ವಾಸುದೇವ ಶರ್ಮಾರವರ ಸ್ಪೂರ್ತಿಯಿಂದ ಇಂದಿಗೂ ಕಾರ್ಯಕ್ಷೇತ್ರದಲ್ಲಿ ಶ್ರಮಿಸುತ್ತಿದ್ದಾರೆ.   

ವಾಸುದೇವ ಅವರಲ್ಲಿ ವೈಯಕ್ತಿಕವಾಗಿ ನಾವು ಗಮನಿಸಿದ ಒಂದು ಅಂಶವೆಂದರೆ ತಮಗೆ ಬರುವ ಅನೇಕ ಅವಕಾಶಗಳನ್ನು ಅರ್ಹರಿದ್ದವರಿಗೆ ಸಿಗುವಂತೆ ಮಾಡುವುದರ ಮೂಲಕ ಇತರರನ್ನು ಬೆಳೆಸಲು ಹಾಗೂ ಗುರುತಿಸಿಕೊಳ್ಳಲು ಸಹಾಯ ಮಾಡುವುದನ್ನು ನಾನು ಬಹಳ ಸಲ ಕಂಡಿದ್ದೇನೆ.

ಮಕ್ಕಳ ಹಕ್ಕಿನ ಇವರ ಪಯಣದಲ್ಲಿ ಹಂತಹಂತವಾಗಿ NGO ಜತೆಗೆ, ಸರಕಾರದ ವಿವಿಧ ಪ್ರಾಧಿಕಾರಗಳಲ್ಲಿ ಸೇವೆ ಸಲ್ಲಿಸುತ್ತಾ ಬಹಳ ಮುಖ್ಯವಾಗಿ CWC ಅಧ್ಯಕ್ಷರಾಗಿ ,ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾಗಿ ವಿಶೇಷವಾಗಿ ಕೆಲಸ ಮಾಡುವುದರ ಮೂಲಕ ಪ್ರಾಧಿಕಾರಗಳಿಗೆ ಜೀವ ತುಂಬಲು  ಪ್ರಯತ್ನಪಟ್ಟ ರೀತಿ ಇಂದಿಗೂ ನಮ್ಮೆಲ್ಲರಿಗೂ ಮಾದರಿ.

ಕರ್ನಾಟಕದಲ್ಲಿ ಮಕ್ಕಳ ಹಕ್ಕನ್ನು ಜಾರಿಗೆ ತರಲು ವಾಸುದೇವ ಶರ್ಮಾ ಅವರು ಬೆಳೆಸಿದ CRT ಸಂಸ್ಥೆ ಹಾಗೂ ಅವರೊಡನೆ ಇರುವ ತಂಡ ಮಾಡಿರುವ ನಿರಂತರ ಪ್ರಯತ್ನದಿಂದ ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಅನುಷ್ಟಾನಕ್ಕೆ ವೇಗ ತರಲು ಸಾಧ್ಯವಾಯಿತು. ಅವರೊಂದಿಗೆ ನಾವು ಒಂದೆರಡು ಹೆಜ್ಜೆಯನ್ನು ಇಡಲು ಸಾಧ್ಯವಾಯಿತು. ಅದರೆ ಮಕ್ಕಳ ವಿಷಯದಲ್ಲಿ ನಾವಿಂದು ಇನ್ನೂ ದೂರ ಸಾಗಲು ಬಾಕಿ ಇದೆ. 

ಡಾ. ವಾಸುದೇವ ಶರ್ಮಾ ರವರೇ, ನೀವು ಇದೀಗ 60 ರ ಹರೆಯಕ್ಕೆ ಕಾಲಿಡುವ ಸಂದರ್ಭದಲ್ಲಿ ಇನ್ನೂ ಬಾಕಿ ಉಳಿದಿರುವ ಮಕ್ಕಳ ಹಕ್ಕುಗಳ ಹೋರಾಟದಲ್ಲಿ ಅನೇಕ ಜನ ನಿಮ್ಮೊಂದಿಗಿದ್ದಾರೆ. ಪ್ರತಿ ಜಿಲ್ಲೆಯಲ್ಲಿ ನೀವು ಮಕ್ಕಳ ಹಕ್ಕಿಗಾಗಿ ಬಿತ್ತಿರುವ ಬೀಜ ಹೆಮ್ಮರವಾಗಿ ಬೆಳೆದು   ಎಲ್ಲಾ ಮಕ್ಕಳಿಗೆ ನೆರಳು ನೀಡುವ ನಿಮ್ಮ ಕನಸು ನನಸಾಗಲಿ ಎಂದು ಹಾರೈಸುತ್ತೇನೆ. ನಿಮ್ಮ 60 ರ ವರ್ಷಾಚರಣೆಯ ಸಂದರ್ಭದಲ್ಲಿ ತಮ್ಮ ಕುಟುಂಬದ ಸದಸ್ಯರು ತರುತ್ತಿರುವ ಈ ಅಮೂಲ್ಯವಾದ ಬರಹಗಳ ಸಂಕಲನವು ನಿಮ್ಮನ್ನು ಇನ್ನಷ್ಟು ಹುರಿದುಂಬಿಸಲಿ ಹಾಗೂ ಸಮಸ್ತ ನಾಡಿನ ಎಲ್ಲಾ ಮಕ್ಕಳಿಗೆ ಮಗು ಸ್ನೇಹಿ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲೆಂದು ಹಾರೈಸುತ್ತೇನೆ. ಮಾತ್ರವಲ್ಲ ನಿಮ್ಮ ಈ ನಿರಂತರ ಶ್ರಮದ ಹಿಂದೆ ನಿಮ್ಮನ್ನು ಅರ್ಥ ಮಾಡಿಕೊಂಡು, ಸದಾ ಬೆಂಬಲಿಗರಾಗಿ ನಿಮ್ಮ ಜತೆ ಜತೆಯಲ್ಲಿ  ಹೆಜ್ಜೆ ಇಟ್ಟುಕೊಂಡು ಬಾಳುವ ನಿಮ್ಮ ಸಹೃದಯಿ ಪತ್ನಿ ಲಕ್ಷ್ಮಿ ಹಾಗೂ ಮಗಳಾದ ಶ್ರದ್ಧಾ ಇವರನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತಾ‌, ನಿಮ್ಮ ಕುಟುಂಬದಲ್ಲಿ ಆಯುರಾರೋಗ್ಯ, ನೆಮ್ಮದಿ, ಸಂತೋಷ, ಸಂಪತ್ತು ಸದಾ ನೆಲೆಸಲಿ ಎಂದು  ಹಾರೈಸುತ್ತೇನೆ.

ನಿಮ್ಮ ಅತ್ಮೀಯ ಸ್ನೇಹಿತ. 

  • ರೆನ್ನಿ ಡಿʼಸೋಜ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ಪಡಿ, ಮಂಗಳೂರು.