ಮಕ್ಕಳಲ್ಲಿ ಮಕ್ಕಳಾಗುವ ನಮ್ಮ ವಾಸುದೇವ ಶರ್ಮಾ ಸರ್ – ಜ್ಯೋತಿ ಹಿಟ್ನಾಳ್

ನನ್ನ ಜೀವನದಲ್ಲಿ ಬಂದಿರುವ ವ್ಯಕ್ತಿಗಳು ಅವರು ಬರೀ ವ್ಯಕ್ತಿಗಳಲ್ಲ, ಅವರು ನನ್ನ ಕೆಲಸಕ್ಕೆ ದಾರಿ ತೋರಿಸುವವರು. ನನ್ನ ಮನದೊಳಗಿನ ಕನಸುಗಳಿಗೆ ಸ್ಪೂರ್ತಿ ತುಂಬುವವರು. ಇವರುಗಳಲ್ಲಿ ವಾಸುದೇವ ಶರ್ಮಾ ಸರ್ ಕೂಡ ಒಬ್ಬರು.
ನಾನು ಮೊದಲ ಬಾರಿಗೆ ವಾಸು ಸರ್ ರವರ ಬಗ್ಗೆ ಕೇಳಿದ್ದು ವಾಣಿ ಅಕ್ಕ ಮತ್ತು ಉಮಾಶಂಕರ್ ಸರ್ ಅವರ ಮನೆಯಲ್ಲಿ. ಅವರು ಮಕ್ಕಳ ಬಗ್ಗೆ ಮಾಡುವ ಪ್ರತಿ ಚರ್ಚೆಯಲ್ಲಿ ವಾಸು ಸರ್ ರವರ ವಿಶೇಷತೆ, ಅವರ ಕೆಲಸದ ಬಗ್ಗೆ ತೋರುವ ಮೆಚ್ಚುಗೆ, ಕಾಳಜಿ ಇವೆಲ್ಲ ನನ್ನ ಮನದಲ್ಲಿ ಕುತೂಹಲ ಮೂಡಿಸುತ್ತಿತ್ತು. ವಾಸು ಸರ್ ಅಂದರೆ ಯಾರು? ಮಕ್ಕಳಿಗಾಗಿ ಅವರು ಏನು ಕೆಲಸ ಮಾಡುತ್ತಾರೆ? ಇವರು ಅವರ ಬಗ್ಗೆ ಇಷ್ಟೊಂದು ಗೌರವದಿಂದ, ಪ್ರೀತಿಯಿಂದ ಏಕೆ ಮಾತನಾಡುತ್ತಾರೆ? ಈ ಪ್ರಶ್ನೆಗಳು ಸುಮಾರು ೯-೧೦ ವರ್ಷಗಳ ಹಿಂದಿನವು. ಈ ಸಮಯದಲ್ಲಿ ನಾನು ಫೇಸ್ಬುಕ್ಲ್ಲಿ ಅವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದೆ. ಅವರು ಅದನ್ನು ಅಕ್ಸೆಪ್ಟ್ ಮಾಡಿದ ಕ್ಷಣ ನನಗೆ ಅವರಲ್ಲಿ ಗೌರವ ಹೆಚ್ಚಾಯಿತು. ಭೇಟಿಯಾಗದೇ ಇದ್ದರೂ ನನ್ನನ್ನು ಗುರುತಿಸಿದರು ಎಂಬ ಹೆಮ್ಮೆ, ಆ ದಿನ ನನಗೆ ತುಂಬಾ ಸಂತೋಷವಾಗಿತ್ತು. ಇದಾದ ನಂತರ ಅವರ ಚಿಂತನೆಗಳು, ಬರಹಗಳು, ಪೋಸ್ಟರ್ಗಳು, ಪುಸ್ತಕಗಳನ್ನು ಗಮನಿಸುತ್ತಾ, ಕಲಿಯುತ್ತಾ ಬಂದೆ. ಅವರ ಪ್ರತಿಯೊಂದು ಮಾತು ಮಕ್ಕಳ ಹಕ್ಕುಗಳಿಗೆ ಇರುವ ಬದ್ಧತೆಯ ದೀಪವಾಗಿಯೇ ಕಾಣುತ್ತಿತ್ತು.
ನನ್ನ ಮೊದಲ ಸಂಪಾದನೆಯ ಪುಸ್ತಕ “ಮುಟ್ಟು ಏನಿದರ ಒಳಗುಟ್ಟು” – ಪುಸ್ತಕ ಕುರಿತು ನಾನು ಫೇಸ್ಬುಕ್ನಲ್ಲಿ ಶೇರ್ ಮಾಡಿದೆ. ವಾಸು ಸರ್ ಅದನ್ನು ನೋಡಿ “ಈ ಪುಸ್ತಕ ಎಲ್ಲ ಹದಿಹರೆಯದ ಮಕ್ಕಳಿಗೆ ತಲುಪಲಿ” ಎಂದು ಬರೆದಿದ್ದರು. ಅದೆಂತಹ ಪ್ರೇರಣೆ! ಅವರ ಆ ಒಂದು ಸಾಲು ನನ್ನ ಜೀವನದಲ್ಲಿ ಒಂದು ದೊಡ್ಡ ಗೌರವವೆನಿಸಿತು. ಲಾಕ್ ಡೌನ್ ಸಮಯದಲ್ಲಿ ಬಿಡುಗಡೆಯಾದ ಪುಸ್ತಕ. ನಾನಾಗ ಸ್ವಲ್ಪ ಹಣಕಾಸಿನ ಸಂಕಷ್ಟದಲ್ಲಿದ್ದೆ. ಬೆಂಬಲವಿಲ್ಲದ ಪರಿಸ್ಥಿತಿಯಲ್ಲೂ ನಾನು ಪ್ರಕಟಿಸಿದ್ದ ಪುಸ್ತಕಕ್ಕೆ ಅವರ ಮೆಚ್ಚುಗೆ ಬಂದದ್ದು ನನ್ನ ಮನದಲ್ಲಿ ಹೊಸ ಧೈರ್ಯವನ್ನು ಹುಟ್ಟಿಸಿತು. ಅದು ಕೇವಲ ಅಭಿನಂದನೆ ಅಲ್ಲ, ನನ್ನ ಕೆಲಸಕ್ಕೆ ಬಂದ ಮೊದಲ ಪ್ರೇರಣೆಯ ಪ್ರಶಸ್ತಿ ಎನ್ನುವಷ್ಟು ಹೆಮ್ಮೆಯಾಗಿತ್ತು ನನಗೆ. ಅಷ್ಟಕ್ಕೆ ಅವರು ಬಿಡಲಿಲ್ಲ. ಹದಿಹರೆಯದ ಮ್ಕಕಳಿಗೆ ತಲಪುವಂತೆ ಪುಸ್ತಕದ ೪೦೦ ಕ್ಕೂ ಹೆಚ್ಚು ಪ್ರತಿಗಳನ್ನು ನನ್ನಿಂದ ತೆಗೆದುಕೊಂಡು ರಾಜ್ಯದ ವಿವಿಧೆಡೆ ಮಕ್ಕಳ ಗುಂಪುಗಳಿಗೆ ತಲುಪಿಸಿದರು. ಇಲ್ಲಿ ಮಕ್ಕಳಿಗೂ ತಲುಪಿದಂತಾಯಿತು. ಹಾಗೆಯೇ ಮುದ್ರಣ ಮಾಡಿದ ನನಗೂ ವೈಯಕ್ತಿಕವಾಗಿ ಸಹಕಾರಿಯಾಯಿತು. ಇದು ವಾಸು ಸರ್ ರವರ ಬದ್ಧತೆ.
ನನ್ನ ಸಂಸ್ಥೆಯ ಕೆಲಸದಲ್ಲಿ ಸಂಸ್ಥೆಯ ಆಡಳಿತಾತ್ಮಕ ನಿಯಮಗಳು, ದಾಖಲೆಗಳು, ಪಾರದರ್ಶಕ ವ್ಯವಸ್ಥೆ ಇವೆಲ್ಲವನ್ನು ಹೇಗೆ ಮಾಡುವುದು ಎಂಬ ಗೊಂದಲದಲ್ಲಿದ್ದ ಸಮಯದಲ್ಲಿ ವಾಸು ಸರ್ ಹತ್ತಿರ ಇದನ್ನು ಹಂಚಿಕೊಂಡಿದ್ದೆ. ಆಗ ಅವರು ಅನೇಕ ಉದಾಹರಣೆಗಳ ರೂಪದಲ್ಲಿ ಮಾರ್ಗದರ್ಶನ ಕೊಟ್ಟರು, ಅನೇಕ ಸಲಹೆಗಳನ್ನು ನೀಡಿದರು. ಜೊತೆಗೆ ಯಾವುದೇ ಸಲಹೆಗಾಗಿ ನನಗೆ ಅವರ ಕಛೇರಿಯಲ್ಲಿರುವ ಸೌಮ್ಯ ಅವರನ್ನು ಪರಿಚಯ ಮಾಡಿಸಿ, ಇವರು ಅಂಗಳ ಸಂಸ್ಥೆಯವರು ಇವರಿಗೆ ಏನಾದರೂ ಸಹಾಯ ಬೇಕೆಂದರೆ ಮಾಡಿ ಎಂದು ಹೇಳಿದ್ದರು. ನಾನು ಇಲ್ಲಿಯವರೆಗೂ ಅದೆಷ್ಟೋ ಸಹಾಯ ಮತ್ತು ಸಲಹೆಗಳನ್ನು ಇಲ್ಲಿಂದ ಪಡೆದಿದ್ದೇನೆ. ಇದಕ್ಕೆ ನಾನು ಎಷ್ಟು ಸಾರಿ ಧನ್ಯವಾದಗಳನ್ನು ಹೇಳಿದರೂ ಸಾಲದು. ಇಷ್ಟು ಮಾತ್ರವಲ್ಲದೆ, ಎರಡನೇ ಪುಸ್ತಕ – ‘ಮುಟ್ಟು ಮತ್ತು ಆರೋಗ್ಯʼ ಸಿದ್ಧಪಡಿಸುತ್ತಿದ್ದಾಗ ಹದಿಹರೆಯದ ಹೆಣ್ಣು ಮಕ್ಕಳು ಹಾಗೂ ಗಂಡು ಮಕ್ಕಳ ದೃಷ್ಟಿಕೋನದಿಂದ ಏನು ಬರೆಯಬೇಕು, ಅವರಿಗೆ ಅರ್ಥವಾಗುವ ಭಾಷೆ ಬೇಕು, ಅವರ ಪ್ರಶ್ನೆಗಳನ್ನೇ ಕೇಂದ್ರವಾಗಿಡಬೇಕು ಎಂದು ಅವರು ಹಲವು ಸಲಹೆಗಳನ್ನು ನೀಡಿ, ಪುಸ್ತಕದ ಕರಡನ್ನು ತಿದ್ದಿ ಕೊಟ್ಟರು. ಅವರ ಆ ಸಲಹೆಗಳು ಪೂರ್ಣ ಪುಸ್ತಕಕ್ಕೆ ಜೀವ ತುಂಬಿದವು. ಪುಸ್ತಕಕ್ಕೊಂದು ಅರ್ಥಪೂರ್ಣ ಮುನ್ನುಡಿಯನ್ನೂ ಬರೆದುಕೊಟ್ಟರು. ಇದು ನನ್ನ ಬರಹದಲ್ಲಿ ಬಂದ ದೊಡ್ಡ ಬೆಳವಣಿಗೆ.
ಮುಟ್ಟಿನ ವಿಷಯದಲ್ಲಿ ಪಿ.ಹೆಚ್.ಡಿ ಯನ್ನು ಮಾಡುತ್ತಿರುವ ಸಂದರ್ಭದಲ್ಲಿ ನನ್ನ ಅಧ್ಯಯನದ ವಿಷಯಗಳನ್ನು ಪ್ರಸ್ತುತಪಡಿಸಲು ಅವಕಾಶಗಳಿಗಾಗಿ ಕಾಯುತ್ತಿದ್ದೆ., ಅಷ್ಟರಲ್ಲಿ ಒಂದು ಅವಕಾಶ ಭಾರತೀದಾಸನ್ ವಿಶ್ವವಿದ್ಯಾಲಯ ಚೆನ್ನೈನಲ್ಲಿ ಪ್ರಸ್ತುತಿ ಮಾಡಲು ಅವಕಾಶ ಮಾಡಿಕೊಟ್ಟಿದ್ದು ಕೂಡ ವಾಸು ಸರ್ ರವರು. ಅದು ನನ್ನ ಜೀವನದ ಮೊದಲ ಅಕಾಡೆಮಿಕ್ ವೇದಿಕೆಯಾಗಿತ್ತು. ಅಲ್ಲಿ ನಿಂತು ಪ್ರಸ್ತುತಿ ಮಾಡುವಾಗ ನನ್ನಂತೆ ಅದೆಷ್ಟೋ ಜನರಿಗೆ ವಾಸು ಸರ್ ಬೆಂಬಲವಾಗಿದ್ದಾರೆ ಎಂಬ ಭರವಸೆ ನನ್ನ ಧೈರ್ಯವನ್ನು ಹೆಚ್ಚಿಸಿತು.
ಈ ಸಂದರ್ಭದಲ್ಲಿ ನಾನು ಗಮನಿಸಿದ್ದು ವಾಸು ಸರ್ ವ್ಯಕ್ತಿತ್ವದಲ್ಲಿ ಕೆಲಸದ ಬದ್ಧತೆ, ಸಮಾಜವನ್ನು ಕುರಿತು ಕಾಳಜಿ, ಜವಾಬ್ದಾರಿ ಸಮಯಪಾಲನೆ, ಅವರ ಕಟ್ಟುನಿಟ್ಟಾದ ನಿಲುವುಗಳು. ದಣಿವಿಲ್ಲದ ಚೈತನ್ಯ, ಮಕ್ಕಳಿಗಾಗಿ ಅವರ ಅಪಾರ ಕಾಳಜಿ, ಎಲ್ಲಾ ವರ್ಗದ ಜನರಿಗೆ ಸಮಾನ ಗೌರವ, ಅವರ ಪ್ರತಿ ಮಾತಿನಲ್ಲಿ ಜವಾಬ್ದಾರಿ ಇವೆಲ್ಲವೂ ಯಾರನ್ನೂ ಪ್ರೇರೇಪಿಸದೆ ಇರದು.
ಮಕ್ಕಳ ಹಕ್ಕುಗಳು, ಅವರ ಕನಸುಗಳು, ಅವರ ಜೀವನ ಶೈಲಿ ಬಗ್ಗೆ ಅತಿ ಹೆಚ್ಚು ಅಧ್ಯಯನ, ಇವೆಲ್ಲವನ್ನೂ ಜೀವಾಳವಾಗಿ ತೆಗೆದುಕೊಂಡವರು ವಾಸು ಸರ್. ಅವರ ದಣಿವಿಲ್ಲದ ಹಾದಿ, ಮಕ್ಕಳಿಗೆ ನಗು ತರುವ ಕೆಲಸ, ಸಮಾಜದ ಬದಲಾವಣೆಗೆ ನೀಡುವ ಮನಸ್ಸು ನನ್ನಂತಹ ಅನೇಕರಿಗೆ ಸ್ಪೂರ್ತಿ. ಮಕ್ಕಳ ಕನಸಿಗಾಗಿ ಬದುಕಿದ ವ್ಯಕ್ತಿ ಮಕ್ಕಳ ಹಕ್ಕುಗಳು, ಸುರಕ್ಷತೆ, ಶಿಕ್ಷಣ, ಕನಸು ಈ ವಿಷಯಗಳನ್ನು ಜೀವನದ ಮೌಲ್ಯವಾಗಿ ತೆಗೆದುಕೊಳ್ಳುವವರು ವಾಸು ಸರ್. ಅವರು ಮಕ್ಕಳಿಗಾಗಿ ಕೆಲಸ ಮಾಡುವುದು ಸೇವೆಯಲ್ಲ, ಅವರ ಆಂತರಿಕ ನಂಬಿಕೆ. ಮಕ್ಕಳ ಮೊಗದಲ್ಲಿ ಮನದಲ್ಲಿ ನಗು ತರಲು ಅವರು ಮಾಡಿದ ಸೇವೆಗಾಗಿ ಸಮಾಜದ ದೊಡ್ಡ ಬದಲಾವಣೆಯ ಹರಿಕಾರ ಎನ್ನಬಹುದು.
ವಾಸು ಸರ್, ನಿಮಗೆ ನನ್ನ ಗೌರವದ ಕೃತಜ್ಞತೆಗಳನ್ನು ಹೇಳಲು ಬಯಸುವೆ. ನನಗೆ ಹಾಗೂ ನನ್ನಂತೆ ಇರುವ ಅದೆಷ್ಟೋ ಜನರಿಗೆ ಸಲಹೆ ಮತ್ತು ಸಹಕಾರ ನೀಡುವ ಗುಣ ನಿಮ್ಮಿಂದ ನನಗೆ ಬಂದ ಪ್ರೇರಣೆ. ನಿಮ್ಮ ಮಾರ್ಗದರ್ಶನ, ಸಲಹೆಗಳು, ಬೆಂಬಲ ಇವೆಲ್ಲ ನನ್ನ ಪಯಣದಲ್ಲಿ ಅಳಿಯದ ಗುರುತು. ನಿಮ್ಮ ಸೇವಾ ಮನೋಭಾವ, ಆರೋಗ್ಯ, ಚೈತನ್ಯ ಹೀಗೆ ಸದಾ ಉಳಿಯಲಿ. “ಮಕ್ಕಳ ಮನದಲ್ಲಿ ನಗು ಅರಳಲಿ. ನಿಮ್ಮ ಕನಸುಗಳು ನಿಜವಾಗಲಿ” ಅದು ನಿಜವಾಗುತ್ತದೆ ಎಂದು ನಾನು ನಂಬಿದ್ದೇನೆ. ನಿಮ್ಮ ಬಗ್ಗೆ ಬರೆಯಲು ನೀಡಿದ ಅವಕಾಶಕ್ಕಾಗಿ ನಾನು ಸದಾ ಕೃತಜ್ಞಳಾಗಿರುತ್ತೇನೆ. ಇದು ನನ್ನ ಜೀವನದ ಹೆಮ್ಮೆಯ ಕ್ಷಣಗಳಲ್ಲಿ ಒಂದು.
ವಾಸು ಸರ್ ಅಂದರೆ ಒಂದು ಹೆಸರು ಅಲ್ಲ, ಅದು ಒಂದು ಪ್ರೇರಣೆ.
ಧನ್ಯವಾದಗಳು.
- ಜ್ಯೋತಿ ಹಿಟ್ನಾಳ್, ಮುಖ್ಯಸ್ಥರು, ಅಂಗಳ ಟ್ರಸ್ಟ್, ಕೊಪ್ಪಳ ಜಿಲ್ಲೆ






