vasu-sharma-9-5

ಮಕ್ಕಳ ಹಕ್ಕಿನ ಅಪ್ರಮೇಯ, ಡಾ. ವಾಸುದೇವ ಶರ್ಮಾ – ಡಾ. ಕೊಣಿಲ ರಾಘವೇಂದ್ರ ಭಟ್

Last Updated: February 21, 2026By

ಮಕ್ಕಳ ಹಕ್ಕು ಎಂಬ ಶಬ್ದವನ್ನು ಕರ್ನಾಟಕ ರಾಜ್ಯದಲ್ಲಿ (೧೯೯೪ರ ಕಾಲಘಟ್ಟದಲ್ಲಿ) ಬೀಜ ಬಿತ್ತಿದವರು ಯಾರು? ಎಂದು ಕೇಳಿದರೆ ಎಲ್ಲರ ಬಾಯಲ್ಲಿ ಬರುತ್ತಿದ್ದ ಮೊದಲ ಹೆಸರು ವಾಸುದೇವ ಶರ್ಮಾ. “ಮಕ್ಕಳ ಹಕ್ಕು”, ಮಕ್ಕಳ ಸಂರಕ್ಷಣೆ ಹಾಗೂ ಮಕ್ಕಳ ಅಭಿವೃದ್ಧಿಯ ಜೀವಾಳ ಮತ್ತು ಅದರ ಬೀಜ ಮಂತ್ರವನ್ನು ಸಮಾಜ ಸೇವಾ ಕಾರ್ಯಕರ್ತರು, ಸ್ವಯಂಸೇವಾ ಸಂಸ್ಥೆಗಳು, ಮಾಧ್ಯಮದವರಿಗೆ ಪರಿಚಯಿಸಿದವರು ಯಾರು ಎಂದು ಕೇಳಿದರೆ, ಕೇಳಿ ಬರುತ್ತಿದ್ದ ಮೊದಲ ಹೆಸರು ವಾಸುದೇವ ಶರ್ಮಾ.

ಮಕ್ಕಳ ಹಕ್ಕು ಅಂತ ಒಂದು ಇದೆ, ಅದು ನಮ್ಮ ಸಂವಿಧಾನದ ಆಶಯಕ್ಕೆ ಒಳಪಟ್ಟಿದೆ, ಅದು ಕಾನೂನಿನ ಚೌಕಟ್ಟಿನಲ್ಲಿದೆ, ಅದು ವಿಶ್ವಸಂಸ್ಥೆಯ ಅಂಗೀಕಾರ ಪಡೆದಿದೆ, ಅದಕ್ಕೆ ಭಾರತ ೧೯೯೨ ಡಿಸೆಂಬರ್ ೧೧ ರಂದು ಸಹಿ ಮಾಡಿದೆ, ನಾವೆಲ್ಲ ನಮ್ಮ ಕಾರ್ಯಕ್ಷೇತ್ರದಲ್ಲಿ ಮಕ್ಕಳ ಹಕ್ಕುಗಳನ್ನು ಪ್ರಚಾರ ಮಾಡಬೇಕು ಎಂಬಿತ್ಯಾದಿ ಅಂಶಗಳನ್ನು ಈ ರಾಜ್ಯದಲ್ಲಿ ಪರಿಚಯಿಸುವ ಕೆಲಸ ಯಾರು ಮಾಡಿದ್ದಾರೆ? ಎಂದು ಕೇಳಿದರೆ ಮತ್ತೆ ಎಲ್ಲರ ಬಾಯಲ್ಲಿ ಬರುತ್ತಿದ್ದ ಹೆಸರು ವಾಸುದೇವ ಶರ್ಮಾ. 

ಮುಂದುವರಿದು ಮಕ್ಕಳ ಹಕ್ಕುಗಳ ಬಗ್ಗೆ ತರಬೇತಿ ನೀಡಲು ಸಂಪನ್ಮೂಲ ವ್ಯಕ್ತಿಗಳು ಯಾರಿದ್ದಾರೆ ಎಂದು ಪ್ರಶ್ನಿಸಿದರೆ ಮೊದಲು ಕೇಳಿ ಬರುತ್ತಿದ್ದ ಹೆಸರು ವಾಸುದೇವ ಶರ್ಮಾ. ಮಕ್ಕಳ ಹಕ್ಕುಗಳ ಬಗ್ಗೆ ಪುಸ್ತಕ, ಸಾಹಿತ್ಯ, ಕೈಪಿಡಿ, ಕರಪತ್ರ, ಚಾರ್ಟ್, ಭಿತ್ತಿಪತ್ರ, ಸ್ಟಿಕರ್, ಲೇಖನಗಳು ಹಾಗೂ ಬರಹಗಳು ಏನಾದರೂ ಕನ್ನಡದಲ್ಲಿ ಇದೆಯಾ? ಯಾರಾದರೂ ಬರೆದಿದ್ದಾರಾ? ಎಂದು ಕೇಳಿದರೆ ಮತ್ತೆ ಕೇಳಿ ಬರುವ ಹೆಸರು ವಾಸುದೇವ ಶರ್ಮಾ. ಹೀಗೆ ಅಂದು ಇಂದು ಮಕ್ಕಳ ಹಕ್ಕು, ಮಕ್ಕಳ ಸಂರಕ್ಷಣೆ ವಿಚಾರ ಎತ್ತಿದಾಗೆಲ್ಲ ಮುನ್ನೆಲೆಗೆ ಕೇಳಿ ಬರುವ ಹೆಸರು ಅದೇ! ಅದರೆ ಅವರು ಈಗ ಡಾ. ವಾಸುದೇವ ಶರ್ಮಾ ಎನ್. ವಿ. ವಾವ್!!! ಎಂತಹ ವಿಶೇಷ ಅಲ್ವೇ? ಇದು ನಮಗೆಲ್ಲ ಒಂದು ಹೆಮ್ಮೆಯ ಸಂಗತಿ. 

ಅತ್ಯಂತ ಕಡಿಮೆ ಅವಧಿಯಲ್ಲಿ ಒಂದು ವಿಷಯದ ಮೇಲೆ ಇಲಾಖೆಗಳು, ಅಧಿಕಾರಿಗಳು, ಸಮುದಾಯ, ನಾಗರಿಕ ಸಂಘ ಸಂಸ್ಥೆಗಳು, ಸ್ವಯಂಸೇವಾ ಸಂಸ್ಥೆಗಳು, ಹೋರಾಟಗಾರರು, ಮಾಧ್ಯಮದವರು, ತಳ ಹಂತದಿಂದ, ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಚಿರಪರಿಚಿತರಾದವರು ಹಾಗೂ ಗುರುತಿಸಿಕೊಂಡವರು ಡಾ. ವಾಸುವೇವ ಶರ್ಮಾ ಎನ್.ವಿ ಎಂದು ಹೇಳಿದರೆ, ಇವರನ್ನು ಬಲ್ಲವರು ಸತ್ಯ ಎಂದು ಹೇಳುವ ನಂಬಿಕೆ ನನಗಿದೆ. ಮಕ್ಕಳ ಹಕ್ಕು, ಮಕ್ಕಳ ಸಂರಕ್ಷಣೆ, ಮಕ್ಕಳ ಕಾನೂನು, ನೀತಿಗಳಡಿಯಲ್ಲಿ ಇರುವ ಹಲವಾರು ಸಮಿತಿಗಳಲ್ಲಿ ಸದಸ್ಯರಾಗಿ ಉದಾ: ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾಗಿ, ಬೆಂಗಳೂರು ನಗರ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾಗಿ, ಮಕ್ಕಳ ಸಹಯವಾಣಿಯ ೧೦೯೮ರ ರಾಷ್ಟ್ರೀಯ ಸಲಹಾ ಮಂಡಳಿಯ ಸದಸ್ಯರಾಗಿ ಉತ್ತಮ ಕೊಡುಗೆಗಳನ್ನು ನೀಡಿರುವುದು ಇಲ್ಲಿ ನೆನಪಿಗೆ ಬರುತ್ತದೆ. ಅಲ್ಲದೆ ರಾಜ್ಯದ ವಿವಿಧ ಇಲಾಖೆಗಳಲ್ಲಿ ಮಕ್ಕಳ ಅಭಿವೃದ್ಧಿ ಕುರಿತಾದ ಅನುಷ್ಠಾನದ ನೀತಿ, ಕರ್ನಾಟಕ ರಾಜ್ಯ ಮಕ್ಕಳ ಕ್ರಿಯಾ ಯೋಜನೆ ೨೦೦೩-೧೦, ನೀಲ ನಕ್ಷೆ, ಕ್ರಮಬದ್ಧ ಕಾರ್ಯವಿಧಾನಗಳ ರಚನಾ ಸಮಿತಿಯ ಸದಸ್ಯರಾಗಿ ಹಲವಾರು ಕೈಪಿಡಿಗಳು ದಾಖಲೆಗಳು ಕ್ರಿಯಾ ಯೋಜನೆಗಳು ಇವರ ಜ್ಙಾನ, ಬರವಣಿಗೆ, ಅನುಭವದೊಂದಿಗೆ ಹೊರಬಂದಿರುವುದು ರಾಜ್ಯದಲ್ಲಿ ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ. ಮಕ್ಕಳ ಹಕ್ಕು, ಸಂರಕ್ಷಣೆ, ಮಕ್ಕಳ ಕಾನೂನುಗಳ ಬಗ್ಗೆ ಇವರಿಗೆ ಇರುವ ಜ್ಙಾನ, ಅನುಭವ ನಿಜಕ್ಕೂ ಅಪಾರ, ಅಪರಿಮಿತ ಹಾಗೂ ಅಳೆಯಲಾಗದ್ದು, ಅದಕ್ಕೆ “ಮಕ್ಕಳ ಹಕ್ಕಿನ ಅಪ್ರಮೇಯ ಡಾ. ವಾಸುದೇವ ಶರ್ಮಾ ಎನ್.ವಿ.” ಶೀರ್ಷಿಕೆಯೇ ಸೂಕ್ತ ಅನ್ನಿಸಿತು ಹಾಗೂ ಅದೇ ಸರಿ. 

ಡಾ. ವಾಸುದೇವ ಶರ್ಮಾ ಎನ್.ವಿ. ಯವರಿಗೆ ೨೦೨೫ರ ನವೆಂಬರ್ ೧೧,  ೬೦ ವರ್ಷಗಳು ತುಂಬಿತು. ಅಂದರೆ ಷಷ್ಟ್ಯಬ್ಧಿ ಸಂಭ್ರಮ. (ಈ ಪದ ಅವರಿಗೆ ಇಷ್ಟ ಆಗಲಿಕ್ಕಿಲ್ಲ ಆದರೆ ಅವರೇ ಹೇಳಿಕೊಟ್ಟ ಹಕ್ಕು, ನನಗೆ ಹೇಳುವ ಹಕ್ಕಿದೆ) ಅದಕ್ಕಾಗಿ ಅವರಿಗೆ ಪ್ರೀತಿಯ, ಗೌರವದ ಹಾರ್ದಿಕ ಶುಭಾಶಯಗಳು. ಈ ಸಂದರ್ಭದಲ್ಲಿ ಅವರೊಂದಿಗೆ ನನ್ನ ಕೆಲವು ನೆನಪುಗಳನ್ನು ಹೇಳಲೇಬೇಕು.

ಡಾ. ಶರ್ಮಾ ಸರ್ ಅಪ್ಪಟ ನಿಷ್ಠುರವಾದಿ. ಇದ್ದದನ್ನು ಇದ್ದ ಹಾಗೆ, ಅಷ್ಟೇ ಅಲ್ಲ ಸತ್ಯವನ್ನು ಮುಖಕ್ಕೆ ಹಿಡಿದ ಹಾಗೆ, ಗಟ್ಟಿಯಾಗಿ ಸ್ಷಷ್ಟವಾಗಿ ನೇರವಾಗಿ ಹೇಳುತ್ತಾರೆ, ಹೇಳುವ ವ್ಯಕ್ತಿ. ನಮಗೂ ಹಾಗೆಯೇ ಹೇಳಲು ಹೇಳಿಕೊಡುತ್ತಿದ್ದರು. ಇಷ್ಟ ಇಲ್ಲ ಅಂತ ಆದರೆ ಇಷ್ಟ ಇಲ್ಲ ಅಂತ ಹೇಳಿ!, ಆಗಲ್ಲ ಅಂತ ಹೇಳಿ! ಮಾಡಲ್ಲ ಅಂತ ಹೇಳಿ! ಗಟ್ಟಿಯಾಗಿ ಹೇಳಿ ಎಂದು ಹೇಳುತ್ತಿದ್ದರು. ತಪ್ಪು ಮಾಡಿದವರು ಕ್ಷಮೆ ಕೇಳಿದರೆ ಒಪ್ಪ್ಪುತ್ತಿರಲಿಲ್ಲ, ಬದಲಾಗಿ ಪಶ್ಚಾತ್ತಾಪ ಪಟ್ಟರೆ ಮಾತ್ರ ಕ್ಷಮಿಸುತ್ತಿದ್ದರು. ಅದು ಅವರ ವಿಶೇಷ ಗುಣ. ನಾನು ಕರ್ನಾಟಕ ರಾಜ್ಯ ಬಾಲಕಾರ್ಮಿಕ ಪದ್ಧತಿ ವಿರೋಧಿ ಆಂದೋಲನದಲ್ಲಿ ರಾಜ್ಯ ಸಂಯೋಜಕನಾಗಿ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ಡಾ. ಶರ್ಮಾರವರು ಆಂದೋಲನದ ಕಾರ್ಯಕಾರಿ ಸಮಿತಿ ಸದಸ್ಯರು. ಆವಾಗ ಸಮಿತಿ ಸಭೆಗಳಲ್ಲಿ ಏನಾದರೂ ಕಾರ್ಯಸೂಚಿ ಇಡಬೇಕೆಂದರೆ ಇವರೇ ನಮಗೆ ಆಶ್ರಯ. ಇವರಲ್ಲಿ ಹೇಳಿದರೆ ಅಲ್ಲಿ ಒಂದಷ್ಟು ಚರ್ಚೆ ಆಗುತ್ತಿತ್ತು. ಉತ್ತಮ ತೀರ್ಮಾನ ಆಗುತ್ತಿತ್ತು ಎಂಬುದಕ್ಕೆ ನಾನೇ ಸಾಕ್ಷಿ. ಕಾನೂನು, ನಿಯಮ, ನ್ಯಾಯ ಏನು ಹೇಳುತ್ತದೆ ಅದರ ಪರ ನಿಲ್ಲುತ್ತಿದ್ದರು. ಇವರ ಇನ್ನೊಂದು ಉತ್ತಮ ಗುಣವೆಂದರೆ ನಮಗೆ ಕನ್ನಡ, ಇಂಗ್ಲಿಷ್ ಪದಗಳ ಅರ್ಥ, ಪರಿಭಾಷೆ, ಕಾನೂನು, ನಿಯಮಗಳ ಭಾಷಾಂತರ ವಿಷಯ ಬಂದಾಗ ಎಲ್ಲವನ್ನೂ ಮೊದಲು ಕೇಳುವುದು ಇದೇ ಡಾ. ಶರ್ಮಾ ರವರಲ್ಲಿ. ಇನ್ನೊಂದು ವಿಶೇಷ ಸಂಗತಿ ಏನೆಂದರೆ, ನನ್ನ ಅನುಭವದ ಸುಮಾರು ೩೧ ವರ್ಷದಲ್ಲಿ ನಾವೂ ತರಬೇತಿ ಮಾಡಬೇಕು ನಿಮ್ಮ ಪಿಪಿಟಿ ನಮಗೂ ಕೊಡಿ ಸರ್ ಅಂತ ಕೇಳಿದಾಗ ಅವುಗಳು ಕೆಲವೇ ನಿಮಿಷಗಳಲ್ಲಿ ನಮ್ಮ ಕೈ ಸೇರುತ್ತಿದ್ದವು. ಎಷ್ಟು ಚಂದ ಅಲ್ವೇ? ನಿಜ! ಹಾಗೆ ಅಷ್ಟು ಬೇಗ ಹಂಚಿಕೊಳ್ಳುವವರು ಸಿಗುವುದು ಕಡಿಮೆ ಜನ. ಆ ಕಡಿಮೆಯಲ್ಲಿ ಇವರು ಒಬ್ಬರು. ಅದಕ್ಕೆ ಇವರು ಹೆಚ್ಚು ಆತ್ಮೀಯರಾಗುತ್ತಾರೆ ಮತ್ತು ಗೌರವಕ್ಕೆ ಪಾತ್ರರಾಗುತ್ತಾರೆ. 

ನನ್ನಂತೆ ತುಂಬಾ ಜನ ಬೆಂಗಳೂರಿಗೆ ಹೋದಾಗ, ತಮ್ಮ ಕೆಲಸ ಮುಗಿದ ಮೇಲೆ ಸಮಯವಿದ್ದರೆ, ತಕ್ಷಣ ಒಂದು ಕರೆ! ಸರ್ ಕಛೇರಿಯಲ್ಲಿ ಇದ್ದಿರಾ? ಹೌದು ಎಂದರೆ ಸಾಕು, ನಮ್ಮ ಕಾಲುಗಳು ಸಿ,ಆರ್.ಟಿ ಕಛೇರಿಗೆ ಓಡಿ ವಾಸುಜೀ ಮುಂದೆ ಹಾಜರು. ಒಂದಷ್ಟು ಹರಟೆ ಹೊಡೆದು, ಮಾಹಿತಿ ಸಂಗ್ರಹಿಸಿ, ಅವರ ದುಡ್ಡಲ್ಲಿ ಕಾಫಿ ಕುಡಿದು ಅವರ ಹೊಸ ಪುಸ್ತಕಗಳು, ಸಾಹಿತ್ಯಗಳನ್ನು ನಮ್ಮ ಬ್ಯಾಗಿಗೆ ಇಳಿಸಿಕೊಂಡು ಬಿಡುತ್ತಿದ್ದೆವು. ಏಯ್! ಪುಸ್ತಕದ್ದು ಕಾಸು ಕಣ್ರೋ ಅಂತ ಅವರು ಕೇಳುವಾಗ ನಾವು ಕಛೇರಿಯಿಂದ ಹೊರಬರುತ್ತಿದ್ದೆವು. ನಂತರ ಅವರೂ ಹೊರ ಬಂದು ನಮಗೆ ಬಸ್, ರೈಲು ಹಿಡಿಯಲು ಹತ್ತಿರದ ಜಾಗಕ್ಕೆ ಅವರ ಕಾರಿನಲ್ಲಿಯೇ ಡ್ರಾಪ್ ಕೊಡುತ್ತಾರೆ. ಆವಾಗ ಸರ್ ಪುಸ್ತಕದ್ದು ದುಡ್ಡು ನಿಜ ಕೊಡಬೇಕಾ? ಅಂತ ಕೇಳಿದರೆ, ಬೇಡ ಕಣೋ!! ಸುಮ್ಮನೆ ಕೇಳಿದೆ! ಓದಿ ಅಭಿಪ್ರಾಯ ತಿಳಿಸಿ ಎಂದು ಬೆನ್ನು ತಟ್ಟಿ ಕಳುಹಿಸಿಕೊಡುತ್ತಿದ್ದರು. ಇವುಗಳಿಂದ ಅವರು ನಮಗೆ ತುಂಬಾ ಹತ್ತಿರವಾಗುತ್ತಿದ್ದರು. 

ಈ ಶರ್ಮಾ ಸರ್‌ರವರು ಒಮ್ಮೆ ಗಳೆತನ ಬೆಳೆಸಿದರೆ ನಂತರ ಹಿರಿಯರು, ಕಿರಿಯರು ಎಂಬ ವ್ಯತ್ಯಾಸ ಮಾಡದಿರುವುದು ಇವರ ವಿಶೇಷ ಗುಣ. ಇದು ನಾನು ಇವರಲ್ಲಿ ಹೆಚ್ಚು ಇಷ್ಟಪಟ್ಟ ಅಂಶ. ನನಗಿಂತ ಇವರು ಹಿರಿಯರಾದರೂ ನಾನು ದೊಡ್ಡವನು ಎಂಬ ಅಂತರವನ್ನು ಎಂದೂ ಮಾಡಲಿಲ್ಲ. ಮುಕ್ತವಾಗಿ ಮಾತನಾಡುತ್ತಿದ್ದೇವೆ.

ಮರೆಯಲಾರದ ಕ್ಷಣ: ನಾನು ಬೆಂಗಳೂರಿಗೆ ಹೋಗುವುದಿದ್ದರೆ ಮುಂಚಿತವಾಗಿ ವಾಸು ಸರ್‌ಗೆ ಹೇಳುತ್ತಿದ್ದೆ, ನಾಳೆ ನಾನು ಬೆಂಗಳೂರಿಗೆ ಬರುತ್ತೇನೆ, ಸಭೆ ಮುಗಿದ ಮೇಲೆ ನಿಮ್ಮ ಕಛೇರಿಗೆ ಬರುವೆ, ಎಂದು ಹೇಳಿ, ಮಕ್ಕಳ ಹಕ್ಕು ಬಗ್ಗೆ ಹರಟೆ ಹೊಡೆಯಲು ಹೋಗುತ್ತಿದ್ದೆ. ಅಥವಾ ಅವರೂ ಇದ್ದ ಸಭೆಗೆ ಹೋದರೆ ಅವರೊಂದಿಗೆ ಅವರ ಕಛೇರಿಗೆ ಬರುತ್ತಿದ್ದೆ. ಹೀಗೆ ಒಂದು ಸಲ ಒಂದು ಸಣ್ಣ ಸಭೆ ಮುಗಿಸಿ ಅವರೊಂದಿಗೆ ಅವರೇ ಊಟಕ್ಕೆ ಕರೆದುಕೊಂಡು ಹೋದರು, ಹೋಗುವಾಗ ಅವರ ಒಂದು ಮಾತು, “ನಾನು ಇವತ್ತು ನನ್ನ ಹೆಂಡತಿಗೆ ಹೇಳಿ ಬಂದಿದ್ದೇನೆ, ಬುತ್ತಿ ಬೇಡ, ಮನೆಗೆ ಊಟಕ್ಕೆ ಬರಲ್ಲ, ಇವತ್ತು ರಾಘವೇಂದ್ರ ಬರುತ್ತಾನೆ, ಇಂದು ಅವನೊಂದಿಗೆ ಹೊರಗೆ ಊಟ ಅಂತ ಹೇಳಿ ಬಂದಿದ್ದೇನೆ ಕಣೋ” ಅಂತ ಅಂದರು. ಇದನ್ನು ಕೇಳಿದ ನನಗೆ ಅವರ ಗೆಳೆತನದಲ್ಲಿ ನನಗೆ ನೀಡಿದ ಜಾಗ ನೆನೆದು, ಆದ ಸಂತೋಷದಿಂದ ಕಣ್ಣು ಒದ್ದೆಯಾಗಿದ್ದನ್ನು ಅವರಿಗೆ ಗೊತ್ತಾಗದಂತೆ ಥ್ಯಾಂಕ್ಸ್ ಸರ್ ಎಂದು ಹೇಳುತ್ತಾ ಅವರೊಂದಿಗೆ ಹೊಟೆಲ್‌ನತ್ತ ಹೆಜ್ಜೆ ಹಾಕಿದೆ. ಹೀಗೆ ವಾಸುಜೀಯವರೊಂದಿಗೆ ತಿಂಡಿ, ಊಟ, ಕಾಫಿಗಾಗಿ ಹೋಟೆಲ್‌ಗಳಿಗೆ ಹೋದರೆ ನಮ್ಮ ಪರ್ಸ್ ಬೆಚ್ಚಗೆ ಜೋಬಿನಲ್ಲಿಯೇ ಇರುತ್ತವೆ, ಅದಕ್ಕೆ ಹೊರ ಬರಲು ಅವಕಾಶ ಇರುತ್ತಿರಲಿಲ್ಲ. ಇವೆಲ್ಲ ಹೀಗೆ ಹೇಳುತ್ತಾ ಹೋದರೆ ಅಪಾರ ಅನುಭವ ಪಡೆದದ್ದು ಇದೆ.

ಇನ್ನು ಕೆಲವು ತರಬೇತಿಗಳ ಸಂದರ್ಭಗಳಲ್ಲಿ ಅವರೊಂದಿಗೆ ವಾಸ್ತವ್ಯ ಹೂಡುವ ಅವಕಾಶ ಸಿಕ್ಕಿದರೆ, ಸಾಕು ಅದು ಕೇಳುವುದು ಬೇಡ, ಸುಮಾರು ದೇಶಗಳನ್ನು ನಾಳೆಯಿಂದ ನಾವೇ ಆಳುವುದೋ ಏನೋ! ಎನ್ನುವ ತರಹ ಚರ್ಚೆ ನಡೆಯುತ್ತಿತ್ತು. ದೇಶ, ವಿದೇಶ ಸುದ್ದಿ, ಮಕ್ಕಳು, ಹಕ್ಕು, ಕಾನೂನು, ನೀತಿ, ಬರವಣಿಗೆ, ಅಭಿವೃದ್ಧಿ, ಮನೆ, ಕುಟುಂಬ, ವ್ಯಕ್ತಿತ್ವ ವಿಕಸನ, ತರಬೇತಿ ಕೈಪಿಡಿ, ಆಪ್ತ ಸಮಾಲೋಚನೆ, ಅವರ-ಇವರ ಬಗ್ಗೆ ಎಲ್ಲಾ ಮಾತಾಡಿ!! ಮಾತಾಡಿ! ರಾತ್ರಿ ಒಂದು, ಎರಡು ಗಂಟೆ ಆದ ಮೇಲೆ ಹಾಗೆಯೇ ನಿದ್ದೆಗೆ ಜಾರುತ್ತಿದ್ದೆವು. ವಾವ್!! ಆ ಕ್ಷಣಗಳು ನಿಜಕ್ಕೂ ಅದ್ಭುತ ಹಾಗೂ ಸದಾ ನೆನಪಿನಂಚಿನಲ್ಲಿರುವ ಕ್ಷಣಗಳು. ಇದರಿಂದ ನನಗೆ ಇವರ ಮೇಲಿನ ಪ್ರೀತಿ, ಗೌರವ ಇಮ್ಮಡಿಯಾಗಿ ಗೆಳೆತನದ ಬೆಸುಗೆ ಶಾಶ್ವತವಾಯಿತು. ಇವರ ಲಕ್ಕೀ ಪತ್ನಿ ಶ್ರೀಮತಿ ಲಕ್ಷ್ಮಿ, ಶ್ರದ್ದೆಯ ಮಗಳು ಶ್ರದ್ದಾ ಇವರ ಕೆಲವೊಂದು ಕುಟುಂಬ ನಿಯಮ ಉಲ್ಲಂಘನೆಗಳು, ದಿನಗಳ, ಕ್ಷಣಗಳನ್ನು ಸಹಿಸಿಕೊಂಡು ಇವರಿಗೆ ಬೆಂಬಲ ನೀಡಿ, ಸುಂದರ ಕೌಟುಂಬಿಕ ಜೀವನವನ್ನು ನಡೆಸುತ್ತಿರುವುದು ನೋಡಿದರೆ ಹೆಮ್ಮೆಯಾಗುತ್ತದೆ. ನಿಜಕ್ಕೂ ಆದರ್ಶ ಹಾಗೂ ಮಾದರಿ ಪುಟ್ಟ ಕುಟುಂಬ. 

ಇನ್ನು ಇವರ ಬಗ್ಗೆ ಹೆಚ್ಚು ಹೇಳಿದರೆ, ಗೆಳೆತನಕ್ಕೆ ಧಕ್ಕೆ ಆಗಬಹುದು, ಅದು ಬರೆಯಲು, ಹೇಳಲು ಇರುವುದಲ್ಲ! ಹಕ್ಕಿನಂತೆ ಅನುಭವಿಸಲು ಇರುವುದು. ಇಷ್ಟು ಸಾಕು. ಡಾ. ವಾಸುದೇವ ಶರ್ಮಾ ಎನ್.ವಿ ಯವರಿಗೆ ಮತ್ತೊಮ್ಮೆ ಅರವತ್ತನೇ ಜನುಮದಿನದ ಹಾರ್ದಿಕ ಶುಭಾಶಯಗಳು. (೧೧-೧೧-೨೦೨೫)

  • ಡಾ. ಕೊಣಿಲ ರಾಘವೇಂದ್ರ ಭಟ್,  ಸಂಯೋಜಕರು, ಯುನಿಸೆಫ್ ಮಕ್ಕಳ ರಕ್ಷಣಾ ಯೋಜನೆ, ಕೊಪ್ಪಳ.