ಸಮಾಜಕಾರ್ಯದ ಮಾದರಿ ವ್ಯಕ್ತಿ ಮತ್ತು ವ್ಯಕ್ತಿತ್ವ ನಮ್ಮ ವಾಸು ಸರ್ – ನಾಗರಾಜ ಬಿ.ಜಿ.

2004ರಲ್ಲಿ ಅಂಕ ತಂಡ (ಅಂಗವಿಕಲರ ಕಲಾ ತಂಡ) ದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಆಹ್ವಾನಿತರಾಗಿ ಬಂದ ವ್ಯಕ್ತಿ, ಬೀದಿನಾಟಕ ಹೇಗೆ ಸಮಾಜ, ಸಮುದಾಯ ಮತ್ತು ವೈಯಕ್ತಿಕ ಬದಲಾವಣೆಗಳನ್ನು ತರುತ್ತದೆ ಮತ್ತು ಇದರ ಮಹತ್ವ ಏನು ಎಂಬ ವಿಚಾರಗಳನ್ನು ಹಲವಾರು ಉದಾಹರಣೆಗಳೊಂದಿಗೆ ಹೇಳುತ್ತಾ ಎಲ್ಲಾ ಅಂಗವಿಕಲ ಕಲಾವಿದರಲ್ಲಿ ಸ್ಪೂರ್ತಿಯನ್ನು ತುಂಬುತ್ತಾರೆ… ಆ ಸ್ಪೂರ್ತಿಯ ಮಾತುಗಳಿಂದ ಇತರೆ ಕಲಾವಿದರಿಗಿಂತ ನಾನು ಹೆಚ್ಚು ಪ್ರಭಾವಿತನಾದೆ. ಈ ರೀತಿ ಪ್ರಭಾವ ಮೂಡಿಸಿದ ಆ ಮುಖ್ಯ ಆಹ್ವಾನಿತರು ಬೇರೆ ಯಾರೂ ಅಲ್ಲ, ಅದು ವಾಸು ಸರ್. ಆ ಕಾರ್ಯಕ್ರಮದಲ್ಲಿ ನಾನು ಶ್ರೀಕೃಷ್ಣನ ಮೂಕಾಭಿನಯದ ಮೂಲಕ ವಾಸು ಸರ್ ಅವರನ್ನು ಸ್ವಾಗತಿಸಿದ ದೃಶ್ಯ ಇಂದಿಗೂ ಕಣ್ಣಮುಂದಿದೆ.
ಬಹುಶಃ ಇಂತಹ ಕಾರ್ಯಕ್ರಮಗಳಿಗೆ ಬಂದಿರುವ ಮುಖ್ಯ ಆಹ್ವಾನಿತರು ಮತ್ತು ಪಾಲ್ಗೊಂಡಿರುವವರ ಸಂಬಂಧ, ಕಾರ್ಯಕ್ರಮ ಮುಗಿದ ನಂತರ ಅಲ್ಲಿಗೇ ಮುಗಿಯುತ್ತದೆ. ಆದರೆ ನನ್ನ ಮತ್ತು ವಾಸು ಸರ್ ಅವರ ಸಂಬಂಧ ಅಲ್ಲಿಂದ ಆರಂಭವಾದದ್ದು ಎಂದಿಗೂ ಮುಗಿಯಲಾರದ ಸಂಬಂಧವಾಗಿ ಮುಂದುವರಿಯುತ್ತಿದೆ. ಆಗ ನಾನು ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಪ್ರಥಮ ವರ್ಷದಲ್ಲಿ ಬಿ.ಎ ವ್ಯಾಸಂಗ ಮಾಡುತ್ತಿದ್ದೆ. ನಂತರದ ದಿನಗಳಲ್ಲಿ ಚೈಲ್ಡ್ ರೈಟ್ಸ್ ಟ್ರಸ್ಟ್ ಮುಖಾಂತರ ಹಲವಾರು ತರಬೇತಿ, ಕಾರ್ಯಕ್ರಮಗಳು, ವಿಚಾರ ಸಂಕಿರಣಗಳಲ್ಲಿ ವಾಸು ಸರ್ ಜೊತೆ ಪಾಲ್ಗೊಳ್ಳುತ್ತಾ, ವಾಸು ಸರ್ ಅವರ ಒಡನಾಟ ಮತ್ತಷ್ಟು ಹತ್ತಿರವಾಯಿತು. ಈ ಒಡನಾಟದ ಪ್ರಭಾವ ಮುಂದಿನ ನನ್ನ ಸ್ನಾತಕೋತ್ತರ ಪದವಿಯನ್ನು ಸಮಾಜಕಾರ್ಯದಲ್ಲೆ ಮಾಡಬೇಕು ಎಂಬ ದೃಢ ನಿಶ್ಚಯಕ್ಕೆ ಕಾರಣವಾಯಿತು.
ನನ್ನ ಪದವಿ ಮುಗಿಸಿ ಎಂ.ಎಸ್.ಡಬ್ಲ್ಯೂ ಪದವಿಗೆ ಪ್ರವೇಶ ಪರೀಕ್ಷೆಯಲ್ಲಿ ಬೆಂಗಳೂರು ವಿಶ್ವವಿದ್ಜಾನಿಲಯದಲ್ಲಿ ನನಗೆ ಸೀಟು ಸಿಕ್ಕಾಗ ವಾಸು ಸರ್ ಮತ್ತು ಲಕ್ಷ್ಮೀ ಮೇಡಂ ಕರೆಮಾಡಿ ಅಭಿನಂದನೆ ತಿಳಿಸಿದ್ದು, ಹೃದಯಪೂರ್ವಕವಾಗಿ ಸಂತೋಷಪಟ್ಟು ಹಾರೈಸಿದ್ದು ಇಂದಿಗೂ ನೆನಪಿದೆ.
ಎಂ.ಎಸ್.ಡಬ್ಲ್ಯೂ ಪದವಿ ಮುಗಿದ ನಂತರ ಕೆಲಸ ಹುಡುಕುವ ತಯ್ಯಾರಿಯಲ್ಲಿದ್ದಾಗ ವಾಸು ಸರ್ ಆಫೀಸಿಗೆ ಕರೆಸಿದರು. ʻನೋಡು ಕೆಲಸ ಇಲ್ಲವೆಂದು ಊರಿಗೆ ಹೋಗಿಬಿಡಬೇಡ, ಆಫೀಸಿಗೆ ಬಂದು ಕೆಲಸ ಕಲಿತುಕೊಳ್ಳುತ್ತಾ ಇರುʼ ಎಂದು ಹೇಳಿ ನನ್ನ ವೃತ್ತಿಪರ ಕ್ಷೇತ್ರಕ್ಕೆ ಬುನಾದಿ ಕಲ್ಪಿಸಿದ್ದು ವಾಸು ಸರ್. ಅವರಿಗೆ ಜೊತೆಯಾದವರು ನಾಗಸಿಂಹ ಸರ್. ತಾತ್ಕಾಲಿಕವಾಗಿ ಕೆಲಸ ನಿರ್ವಹಿಸುತ್ತಿದ್ದ ನಾನು ಚೈಲ್ಡ್ ರೈಟ್ಸ್ ಟ್ರಸ್ಟಿನಲ್ಲೇ ಪೂರ್ಣಪ್ರಮಾಣದ ಉದ್ಯೋಗಿಯಾದ ಮೇಲೆ ವಾಸು ಸರ್ ಜೊತೆ ಸಹದ್ಯೋಗಿಯಾಗಿ ಕೆಲಸ ನಿರ್ವಹಿಸಿದ್ದು ನನ್ನ ಜೀವನದ ಪ್ರಮುಖ ಘಟ್ಟಗಳಲ್ಲಿ ಒಂದು. ನಂತರ ವಾಸು ಸರ್ ಅವರ ವಿಚಾರಗಳನ್ನು, ಅವರ ಆದರ್ಶಗಳನ್ನು, ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು.
ಬದ್ಧತೆಯ ವ್ಯಕ್ತಿತ್ವ
ವಾಸು ಸರ್ ತಾವು ನಂಬಿದ ಸಿದ್ಧಾಂತಕ್ಕೆ ಎಂತದ್ದೇ ಸಂದರ್ಭ ಬಂದರೂ ರಾಜಿ ಮಾಡಿಕೊಳ್ಳುವುದಿಲ್ಲ ಮತ್ತು ಎಷ್ಟೇ ಅಡೆತಡೆಗಳು ಬಂದರೂ ಅದರಿಂದ ಹಿಂದೆ ಸರಿಯುವುದಿಲ್ಲ. ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ಕೆಲಸ ಮಾಡುವ ಸಂದರ್ಭಗಳಲ್ಲಿ ಬೇರೆ ಬೇರೆ ಇಲಾಖೆಗಳ ಅಧಿಕಾರಿಗಳು, ಸಮಾಜದ ದೊಡ್ಡ ದೊಡ್ಡ ವ್ಯಕ್ತಿಗಳು ತಪ್ಪು ಮಾಡಿದಾಗ ಯಾವುದೇ ಭಯ, ಆತಂಕಗಳಿಲ್ಲದೆ ಅವರ ತಪ್ಪುಗಳ ವಿರುದ್ದ ಹೋರಾಟ ಮಾಡಿರುವುದು ಅವರ ಬದ್ಧತೆಗೆ ನಿದರ್ಶನ.
ಚಾಕು ಸಾಣೆಯಿಡುತ್ತಿರಬೇಕು
ಕಛೇರಿಯಲ್ಲಿ ಕೆಲಸ ಮಾಡುವಾಗ ವಾಸು ಸರ್ ನಮಗೆಲ್ಲರಿಗೂ ಪದೇ ಪದೇ ಹೇಳುತ್ತಿದ್ದ ಮಾತು “ಚಾಕು ಸಾಣೆ ಹಿಡಿಯುತ್ತಿರಬೇಕು!” ಬಹುಶಃ ಬೇರೆಯವರಿಗೆ ಚಾಕು ಸಾಣೆಯಿಡುವ ಕೆಲಸ ಇವರಿಗೇಕೆ ಎಂದೆನಿಸಬಹುದು. ಆದರೆ ಆ ಚಾಕು ಯಾವುದು ಎಂದರೆ ನಮ್ಮ ಮೆದುಳು. “ಅಭಿವೃದ್ಧಿ ಕ್ಷೇತ್ರದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ತಾನು ಕೆಲಸ ನಿರ್ವಹಿಸುತ್ತಿರುವ ಕ್ಷೇತ್ರದ ವಿಚಾರಗಳನ್ನು, ಆಗಿಂದಾಗ್ಗೆ ಆಗುತ್ತಿರುವ ಬೆಳವಣಿಗೆಗಳನ್ನು ತಿಳಿದುಕೊಳುತ್ತಲೇ ಇರಬೇಕು. ಇದಕ್ಕೆ ಸತತವಾಗಿ ಅಧ್ಯಯನ ಮಾಡುತ್ತಲೇ ಇರಬೇಕು ಜೊತೆಗೆ ತಿಳಿದುಕೊಂಡ ವಿಚಾರಗಳನ್ನು ಅವಶ್ಯಕ ಸಂದರ್ಭಗಳಲ್ಲಿ ಬಳಸಬೇಕು. ಆಗ ನಮ್ಮ ಚಾಕು ಚೂಪಾಗಿ ಬಳಸಲು ಸುಲಭವಾಗುತ್ತದೆ” ಎಂದು ವಾಸು ಸರ್ ಹೇಳಿರುವ ವಿಚಾರ ನಾನು ಎಂದಿಗೂ ಮರೆಯುವುದಿಲ್ಲ.
ಮಧ್ಯಾಹ್ನದ ಜೊತೆಯೂಟ – ಹೊಟ್ಟೆಯ ಜೊತೆಗೆ ಮೆದುಳಿಗೂ ಊಟ
ಕಛೇರಿಯಲ್ಲಿದ್ದಾಗ ಎಲ್ಲಾ ಸಿಬ್ಬಂದಿಗಳು ಊಟದ ಸಮಯಕ್ಕೆ ಎಲ್ಲರೂ ಜೊತೆಯಲ್ಲೇ ಕುಳಿತುಕೊಂಡು ಊಟ ಮಾಡಬೇಕು ಎಂಬ ನಿಯಮ ಜಾರಿಯಲ್ಲಿತ್ತು. ಅಲ್ಲಿ ಎಲ್ಲಾ ಸಿಬ್ಬಂದಿಗಳು ಜೊತೆಯಲ್ಲೇ ಕೂರಬೇಕು, ಊಟಕ್ಕೆ ತಂದಿರುವ ಡಬ್ಬಿಗಳನ್ನು ಹಂಚಿಕೊಂಡು ತಿನ್ನುವ ಅಭ್ಯಾಸ ಕಛೇರಿಯಲ್ಲಿ ವಾಸು ಸರ್ ರೂಢಿಗೆ ತಂದಿದ್ದರು. ಇಲ್ಲಿ ಕೇವಲ ಹೊಟ್ಟೆಗೆ ಅಷ್ಟೇ ಊಟವಾಗುತ್ತಿರಲಿಲ್ಲ. ಮೆದುಳಿಗೂ ಊಟ ಇರಲೇ ಬೇಕಿತ್ತು. ಊಟದ ಸಮಯದಲ್ಲಿ ಯಾವುದಾದರೂ ಒಂದು ವಿಚಾರದ ಬಗ್ಗೆ ಮಾತನಾಡುತ್ತಲೋ, ಹರಟೆ ಹೊಡೆಯುತ್ತಲೋ ಊಟವನ್ನು ಸವಿಯಬೇಕು. ಈ ಸಂದರ್ಭಗಳಲ್ಲಿ ಮಕ್ಕಳ ಹಕ್ಕುಗಳು, ಸಿನಿಮಾ, ಹಿಂದಿನ ತರಬೇತಿಯ ಅನುಭವಗಳು, ಪ್ರಸಕ್ತ ವಿದ್ಯಮಾನಗಳ ಜೊತೆ ನಾಗಸಿಂಹ ಸರ್ ಅವರ ಹಾಸ್ಯದೊಂದಿಗೆ ಹೊಟ್ಟೆಯ ಜೊತೆಗೆ ಮೆದುಳಿಗೂ ಊಟ ಆಗುತ್ತಿತ್ತು.
ಕಿರಿಯರಿಗೆ ಜವಾಬ್ದಾರಿಗಳು
ವಾಸು ಸರ್ ರವರಲ್ಲಿ ನಾನು ಕಂಡ ಮತ್ತೊಂದು ಮಾದರಿ ಅಂಶವೆಂದರೆ ಕಿರಿಯರಿಗೆ ಜವಾಬ್ದಾರಿಗಳನ್ನು ನೀಡುತ್ತಿದ್ದುದು. ಸಾಮಾನ್ಯವಾಗಿ ಕಛೇರಿಗಳಲ್ಲಿ ಹಿರಿಯರಿಗಷ್ಟೆ ಪಾಮುಖ್ಯತೆ ಇರುತ್ತದೆ. ಆದರೆ ವಾಸು ಸರ್ ಕಿರಿಯ ಸಹೋದ್ಯೋಗಿಗಳ ಮೇಲೆ ಭರವಸೆ ಇಡುತ್ತಾರೆ. ಅವರಿಗೆ ಜವಾಬ್ದಾರಿಗಳನ್ನು ನೀಡುತ್ತಾರೆ. ತಪ್ಪುಗಳಾದಾಗ ತಪ್ಪಿನ ವಿಮರ್ಶೆಗೆ ಅವಕಾಶ ಮಾಡಿಕೊಡುತ್ತಾರೆ. ಯಾವುದಾದರೂ ಹೊಸ ಆಲೋಚನೆಗಳಿಗೆ ಎಂದಿಗೂ ಬೇಡ ಎನ್ನುವುದಿಲ್ಲ… “ಗೋ ಅಹೆಡ್ – ಯು ಕೆನ್ ಡು ಇಟ್ʼ ಎಂದು ಪ್ರೋತ್ಸಾಹಿಸುವ ಗುಣ ವಾಸು ಸರ್ ಅವರದ್ದು.
ಪಾರದರ್ಶಕತೆ
ಕೆಲವು ಸಂಸ್ಥೆಗಳಲ್ಲಿ ದೊಡ್ಡ ಸ್ಥಾನಗಳಲ್ಲಿರುವವರು ತಮ್ಮ ಇತರೆ ಕೆಲಸಗಾರರೊಂದಿಗೆ ಸರಿಯಾಗಿ ಮಾತನಾಡುವುದೂ ಇಲ್ಲ ಮತ್ತು ಸಂಸ್ಥೆಗಳ ನಿರ್ಧಾರಗಳಲ್ಲಿ, ಹಣಕಾಸಿನ ವಿಚಾರಗಳಲ್ಲಿ ಅವರನ್ನು ಹತ್ತಿರಕ್ಕೂ ಸೇರಿಸುವುದಿಲ್ಲ. ಸಾಕಷ್ಟು ಸಿಬ್ಬಂದಿಗಳಿಗೆ ತಮ್ಮ ಸಂಸ್ಥೆಗೆ, ತಾವು ಮಾಡುತ್ತಿರುವ ಯೋಜನೆಗೆ ಹಣ ಎಲ್ಲಿಂದ ಬಂದಿದೆ, ಎಷ್ಟಿದೆ ಎಂಬ ವಿಚಾರಗಳು ಮರೀಚಿಕೆಯೇ. ಆದರೆ ವಾಸು ಸರ್ ಇದಕ್ಕೆ ತದ್ವಿರುದ್ಧ. ಸಂಸ್ಥೆಯ ಹಣಕಾಸಿನ ವಿಚಾರದಿಂದ ಹಿಡಿದು ತಾನು ಕೆಲಸ ನಿರ್ವಹಿಸುತ್ತಿರುವ ಯೋಜನೆಗಳ ಹಣ ಎಷ್ಟು? ಯಾವುದಕ್ಕೆ ಎಷ್ಟು ಬಳಸಬೇಕು ಎಂಬ ವಿಚಾರಗಳು ಎಲ್ಲರಿಗೂ ತಿಳಿಸುತ್ತಿದ್ದರು. ಇದು ಅವರ ಪಾರದರ್ಶಕ ಗುಣಕ್ಕೆ ಹಿಡಿದ ಕನ್ನಡಿ.
ವಾಸು ಸರ್ ಅವರು ಒಂದು ಅದ್ಬುತ ವ್ಯಕ್ತಿ. ಎಂದಿಗೂ ಜಾತಿ, ಧರ್ಮ, ಮೇಲು, ಕೀಳು ಎಂಬ ಮನೋಧೋರಣೆ ಹೊಂದಿದವರಲ್ಲ. ಪ್ರತಿ ಸಂಧರ್ಭದಲ್ಲೂ ತನ್ನ ಜೊತೆ ಇರುವವರ ಜೊತೆ ಮುಕ್ತವಾಗಿ ಬೆರೆಯುತ್ತಾರೆ. ಕಿರಿಯರಿಗೆ ಮಾರ್ಗದರ್ಶನ ನೀಡುತ್ತಾರೆ. ಪ್ರೋತ್ಸಾಹ ನೀಡುತ್ತಾರೆ ಮುಖ್ಯವಾಗಿ ಬೇರೊಬ್ಬರ ಸಾಮರ್ಥ್ಯದ ಮೇಲೆ ಭರವಸೆ ಇಡುತ್ತಾರೆ. ಸದಾ ಹೊಸದನ್ನು ಕಲಿಯುತ್ತಾ, ತನ್ನ ಜೊತೆಯಲ್ಲಿರುವವರೂ ಕಲಿಯಬೇಕು ಎಂದು ಪ್ರೋತ್ಸಾಹ ನೀಡುವ ವ್ಯಕ್ತಿತ್ವ ವಾಸು ಸರ್ ಅವರದ್ದು.
ನನಗೆ ವಾಸು ಸರ್ ನೀಡಿದ ಅವಕಾಶ, ತಿದ್ದಿ ತೀಡಿದ ರೀತಿ, ಪ್ರೋತ್ಸಾಹ, ಮಾರ್ಗದರ್ಶನ ಮತ್ತು ಬೆಂಬಲ ನನ್ನ ವೃತ್ತಿ ಜೀವನ ಮತ್ತು ವೈಯಕ್ತಿಕ ಬೆಳೆವಣಿಗೆಗೆ ಕಾರಣ ಎಂದು ಹೇಳಬಹುದು. ಅವರು ಆರೋಗ್ಯವಾಗಿ, ಸಂತೋಷವಾಗಿ, ಉತ್ಸಾಹಿಗಳಾಗಿ ಮತ್ತಷ್ಟು ಯುವ ಪೀಳಿಗೆಗೆ ಮಾರ್ಗದರ್ಶನ ನೀಡುತ್ತಾ ನೂರ್ಕಾಲ ನಮ್ಮ ಜೊತೆ ಹೀಗೆ ಇರಬೇಕೆಂದು ಆಶಿಸುತ್ತಾ…

- ನಾಗರಾಜ ಬಿ.ಜಿ, ಅಸಿಸ್ಟೆಂಟ್ ಪ್ರೋಫೆಸರ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚಿಕ್ಕನಾಯಕನಹಳ್ಳಿ, ತುಮಕೂರು ಜಿಲ್ಲೆ





