ವಾಸು ಸರ್ – ಸತೀಶ್ ಜಿ. ಸಿ.

ನಾನು ವಾಸು ಸರ್ ಅವರನ್ನು ಮೊದಲು ಭೇಟಿಯಾದದ್ದು 2004ರಲ್ಲಿ ಸಿ.ಆರ್.ಟಿ. ಸಂಸ್ಥೆಗೆ ಕೆಲಸಕ್ಕೆಂದು ಸಂದರ್ಶನಕ್ಕೆ ಬಂದಾಗ. ನನಗೆ ಸಂದರ್ಶನದಲ್ಲಿ ಏನೇನು ಕೇಳಬಹುದು ಎಂದು ಊಹಿಸಿ, ನಾನು ಮಾಡಿದ ಹಿಂದಿನ ಕೆಲಸಗಳನ್ನೆಲ್ಲಾ ವಿವರಿಸಲು ಸಿದ್ಧತೆ ಮಾಡಿಕೊಂಡಿದ್ದೆ. ಆದರೆ ಸಂದರ್ಶನದಲ್ಲಿ ವ್ಯಾವಹಾರಿಕ ಕುಶಲೋಪರಿಯ ನಂತರ ಅವರು ಕೇಳಿದ್ದು ನನ್ನ ಹವ್ಯಾಸಗಳ ಬಗ್ಗೆ. ನಾನು ಓದುವ ಹವ್ಯಾಸವಿದೆ ಎಂದು ಹೇಳಿದಾಗ ʻಇತ್ತೀಚೆಗೆ ಯಾವ ಪುಸ್ತಕ ಓದಿದಿರಿ?ʼ ಎಂದು ಕೇಳಿದರು. ನಾನು ಆಗ ತಾನೆ ನಿರಂಜನ ಅವರ ಮೃತ್ಯಂಜಯ ಪುಸ್ತಕವನ್ನು ಓದಿದ್ದೆ, ಅದನ್ನೆ ಹೇಳಿದೆ. “ಹಾಗಿದ್ದರೆ ಅದರ ಕಥೆಯನ್ನು ಸಂಕ್ಷಿಪ್ತವಾಗಿ ಹೇಳಿ?” ಎಂದರು. ನನಗೆ ಆಶ್ಚರ್ಯ. ಮನಸ್ಸಿನಲ್ಲೆ “ಈ ಯಪ್ಪಾ ಏನು ಕೆಲಸದ ಸಂದರ್ಶನಕ್ಕೆ ಕರೆದಿದ್ದಾರೋ ಅಥವಾ ಈಗಾಗಲೇ ಯಾರನ್ನಾದರೂ ಆಯ್ಕೆ ಮಾಡಿ ತೋರಿಕೆಗೆ ನನ್ನ ಸಂದರ್ಶನ ನಡೆಸುತ್ತಿದ್ದಾರೋ?” ಎಂದುಕೊಂಡೆ. ಕಥೆಯನ್ನೂ ಸಹ ಹೇಳಿದೆ. ಕೆಲವು ಮಾತುಕತೆಗಳ ನಂತರ “ನೀವು ಆಯ್ಕೆಯಾಗಿದ್ದೀರಿ, ನೀವು ನಾಳೆಯಿಂದಲೇ ಬೇಕಿದ್ದರೆ ಬರಬಹುದು” ಎಂದು ಹೇಳಿದರು. ಅಲ್ಲಿಂದ ಪ್ರಾರಂಭವಾದದ್ದು ನನ್ನ ವಾಸು ಸರ್ ಅವರ ಒಡನಾಟ ಮತ್ತು ಕೆಲಸ.
ಈ 21 ವರ್ಷಗಳಲ್ಲಿ ಅವರೊಂದಿಗೆ ಕಾರ್ಯನಿರ್ವಹಿಸುತ್ತಾ ಹಲವಾರು ವಿಷಯಗಳನ್ನು ಕಲಿತಿದ್ದೇನೆ. ಅವರ ಹಾಸ್ಯ ಪ್ರಜ್ಞೆಯನ್ನು ಮೆಚ್ಚಿದ್ದೇನೆ, ದಣಿವರಿಯದೆ ತರಬೇತಿ ಮಾಡುವುದನ್ನು ನೋಡಿ ಅಚ್ಚರಿ ಪಟ್ಟಿದ್ದೇನೆ. ಉತ್ತಮ ಸಂಬಳವಿದ್ದ ಕೆಲಸವನ್ನು ಬಿಟ್ಟು ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ಸಂಶೋಧನೆ, ತರಬೇತಿ ಮತ್ತು ವಕೀಲಿ ಕಾರ್ಯಗಳ ಅವಶ್ಯಕತೆ ಇರುವುದನ್ನು ಆಗಲೇ ಕಂಡುಕೊಂಡು ಸಿ.ಆರ್.ಟಿ. ಸಂಸ್ಥೆಯನ್ನು ಸ್ಥಾಪಿಸಿ, ಅದನ್ನು ಇಷ್ಟು ವರ್ಷಗಳ ಕಾಲ ನಡೆಸಿಕೊಂಡು ಬಂದಿರುವುದಲ್ಲದೆ ಸಂಸ್ಥೆಯ ಹೆಸರನ್ನು ಎತ್ತರಕ್ಕೆ ಕೊಂಡೊಯ್ದದ್ದು ಅವರ ಹೆಗ್ಗಳಿಕೆ.
ಸಂಸ್ಥೆಯ ಈ ಅವಧಿಯಲ್ಲಿ ಹಲವಾರು ಜನ ಕೆಲಸ ಬಿಟ್ಟಿದ್ದಾರೆ, ಹೊಸಬರು ಬಂದಿದ್ದಾರೆ. ಹೋಗುವವರಿಗೆ ಶುಭ ಹಾರೈಸುತ್ತಾ ಮತ್ತು ಹೊಸದಾಗಿ ಬರುವವರಿಗೆ ಕಲಿಸುತ್ತಾ ಅದೇ ಉತ್ಸಾಹದಿಂದ ಮುನ್ನಡೆಸುತ್ತಿದ್ದಾರೆ. ಅವರು ನಮಗೆಲ್ಲಾ ಕಲಿಸಿದ್ದು ʼನಮಗೆ ಸಿಗುವ ಯಾವುದೇ ಅವಕಾಶವನ್ನು ಕೈಚೆಲ್ಲಬಾರದು, ಪ್ರಯತ್ನ ಪಡಲೇಬೇಕು, ಒಂದು ವೇಳೆ ಪ್ರಯತ್ನ ವಿಫಲವಾದರೂ ಸಹ ಅದು ನಮಗೆ ಕಲಿಕೆಯಾಗುತ್ತದೆʼ ಎಂಬ ಮುಖ್ಯವಾದ ಸಂಗತಿ.
ಮಕ್ಕಳ ಹಕ್ಕುಗಳ ಕುರಿತು ಅಪಾರ ಕಾಳಜಿ ಮತ್ತು ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದ ವಿಚಾರಗಳು, ಕಾಯ್ದೆಗಳು ತಳಮಟ್ಟದಲ್ಲಿ ವ್ಯಾಪಕವಾಗಿ ಪ್ರಚಾರ ಪಡೆಯಲು ಅವು ಸ್ಥಳೀಯ ಭಾಷೆಯಲ್ಲಿರಬೇಕು ಎಂದು ನಂಬಿದವರು. ಮತ್ತು ನಮ್ಮನ್ನೆಲ್ಲಾ ಹಲವಾರು ವಿಚಾರಗಳು, ಕಾಯ್ದೆಗಳ ಅನುವಾದದಲ್ಲಿ ತೊಡಗಿಸಿ, ನಮಗೆ ನೋವಾಗದಂತೆ ಅವುಗಳನ್ನು ತಿದ್ದುವುದಲ್ಲದೆ, ಅವುಗಳನ್ನು ಏಕೆ ತಿದ್ದಿದೆ ಎಂದು ವಿವರಿಸುತ್ತಾರೆ. ನಾನೇನಾದರೂ ಇಂದು ಅಲ್ಪ ಸ್ವಲ್ಪ ಭಾಷಾಂತರ ಮಾಡುತ್ತಿದ್ದರೆ, ಅದಕ್ಕೆ ವಾಸು ಸರ್ ಕಾರಣ.
ಓದುವ ಹವ್ಯಾಸ ಇರುವವರೆಂದರೆ ಅವರಿಗೆ ಬಹಳ ಪ್ರೀತಿ. ಪುಸ್ತಕಗಳ ಬಗ್ಗೆ ಕಛೇರಿಯಲ್ಲಿಯೂ ಚರ್ಚಿಸುತ್ತಾರೆ. ದಿನಪತ್ರಿಕೆ ಓದದೇ ಇರುವವರನ್ನು ಕಂಡರೆ ವಿಪರೀತ ಕೋಪ. ಈಗಲೂ ಸಹ ನಮ್ಮ ಕಛೇರಿಗೆ ಹೊಸದಾಗಿ ಬರುವವರಿಗೆ ಅವರು ನೀಡುವ ಮೊದಲ ಕೆಲಸ ದಿನಪತ್ರಿಕೆ ಓದುವುದು ಮತ್ತು ಅವುಗಳಲ್ಲಿ ಬಂದಿರುವ ಮಕ್ಕಳ ವಿಚಾರಗಳನ್ನು ಗುರುತಿಸುವುದು.
ನಾಟಕ, ಲೇಖನ, ಕಾವ್ಯ ಇವೇ ಮೊದಲಾದವುಗಳಲ್ಲಿ ಅಪಾರ ಆಸಕ್ತಿ ಹೊಂದಿದ್ದರೂ ಸಹ ಮಕ್ಕಳ ಹಕ್ಕುಗಳ ಕುರಿತು ಪ್ರಚಾರ, ತರಬೇತಿ ಅವರಿಗೆ ಬಹು ಪ್ರಿಯವಾದ ಕೆಲಸ. 2004ರಲ್ಲಿ ಅವರಿಗೆ ಮಕ್ಕಳ ಕಲ್ಯಾಣ ರಾಜ್ಯ ಪ್ರಶಸ್ತಿ ಬಂದಾಗ, ಅದರಲ್ಲಿ ಬಂದ ನಗದು ಹಣವನ್ನೂ ಸಹ ಅವರು ಇದೇ ಕೆಲಸಗಳಿಗೆ ಉಪಯೋಗಿಸಿದ್ದು ನೆನಪಿದೆ. ಕೆಲವೊಮ್ಮೆ ಅವರು ತರಬೇತಿಗಳಿಗೆ ಹೆಚ್ಚು ಸಮಯ ನೀಡುತ್ತಾರೆ ಎಂದು ನಾನು ಕೋಪಿಸಿಕೊಂಡಿದ್ದೂ ಸಹ ಇದೆ!
ಮಕ್ಕಳ ಹಕ್ಕುಗಳ ಕ್ಷೇತ್ರದ ಅವರ ಕಾರ್ಯ ಹೀಗೆಯೇ ನಿರಂತರವಾಗಿ ಮಂದುವರಿಯಲಿ, ನಾವೆಲ್ಲ ಅವರ ಜೊತೆಗಿರುತ್ತೇವೆ ಮತ್ತು ಹೊಸ ಹೊಸ ವಿಚಾರಗಳನ್ನು ಕಲಿಯುತ್ತೇವೆ ಎಂಬುದೇ ಆಶಯ.
ನಾಗೇಂದ್ರ ಪ್ರಸಾದ್






