vasu-blogs-10-7

ವಾಸು ಸರ್‌ ಎಂದರೆ ʻಎಲ್ಲರ ಕುರಿತು ಕಾಳಜಿʼ – ನಾಗಮಣಿ ಸಿ.ಎನ್.

Last Updated: February 21, 2026By

ನಾನು ಸಂದರ್ಶನಕ್ಕೆಂದು ಸಿ.ಆರ್.ಟಿ.ಸಂಸ್ಥೆಗೆ ಬಂದು ಮಾತನಾಡಿ ಆಯಿತು. ನಾಳೆ ಸಿದ್ದರಬೆಟ್ಟದಲ್ಲಿ ಮಕ್ಕಳ ಹಕ್ಕುಗಳ ಕುರಿತು ಒಂದು ತರಬೇತಿ ಇದೆ ಅಲ್ಲಿಗೆ ಬನ್ನಿ ಎಂದು ನನ್ನನ್ನು ಮಾತನಾಡಿಸಿದವರು ಹೇಳಿದರು. 

ನಾನು ದೂರದ ಹಳ್ಳಿಯೊಂದರಿಂದ ಹೇಗೋ ಪ್ರಯತ್ನಿಸಿ ತಡವಾಗಿ ಅಂತೂ ಸಿದ್ದರಬೆಟ್ಟ ತಲುಪಿದೆ. ಸುಸ್ತಾಗಿದ್ದೆ, ಮೊದಲ ಬಾರಿ ಹುಡುಕಿಕೊಂಡು ಅಷ್ಟು ದೂರ ಹೋಗಿದ್ದು. ಅಲ್ಲಿ ನನ್ನನ್ನು ʻಬಾಮ್ಮ, ತಿಂಡಿ ತಿಂದಿದ್ದೀರಾ, ಸುಧಾರಿಸಿಕೊಳ್ಳಿ, ಕಷ್ಟ ಆಯಿತಾʼ ಅಂತೆಲ್ಲಾ ಕೇಳಿದ್ದು, ಅಬ್ಬಾ ಪರವಾಗಿಲ್ಲ ಅಂತ ಸಮಾಧಾನದಿಂದ ಭಾಗಿಯಾಗಿ ಮಕ್ಕಳ ಹಕ್ಕುಗಳ ತರಬೇತಿಯನ್ನು ಪಡೆದುಕೊಂಡೆ. ಹೀಗೆ ಮಾತನಾಡಿಸಿ ನನ್ನನ್ನು ತರಬೇತಿಯಲ್ಲಿ ತೊಡಗಿಸಿದವರು ನಮ್ಮ ವಾಸು ಸಾರ್.‌ ಹೀಗೆ ಅವರೊಂದಿಗೆ ಪ್ರಾರಂಭವಾದ ಪರಿಚಯ ಸಿ.ಆರ್.ಟಿ. ಸಂಸ್ಥೆಯ ಮೂಲಕ ನನ್ನ ಬೆಳವಣಿಗೆಗೂ ಸಾಕಷ್ಟು ಕೊಡುಗೆ ನೀಡಿದೆ. 

‘ಮಕ್ಕಳ ಹಕ್ಕುಗಳು ಎಂದರೆ ನೆನಪಾಗುವುದು ವಾಸು’, ಎಂದು ಹಲವರು ಹೇಳಿರುವುದನ್ನು ನಾನು ಕೇಳಿದ್ದೇನೆ. ರಾಜ್ಯದಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಸಾಕಷ್ಟು ಕೆಲಸ ಮಾಡಿರುವ, ಮಾಡುತ್ತಿರುವ ವಾಸು ಸಾರ್‌ ನಿಜಕ್ಕೂ ಅತ್ಯಂತ ಸರಳ ವ್ಯಕ್ತಿತ್ವದವರು. ಅವರ ಮಾತು, ನಡವಳಿಕೆಗಳು ಅವರು ಸರಳ ಅನ್ನುವುದನ್ನು ತಿಳಿಸುತ್ತಲೇ ಇರುತ್ತದೆ. ಆಡಂಬರವನ್ನು ಇಷ್ಟಪಡದ ವ್ಯಕ್ತಿ ಅವರು. ಚೈಲ್ಡ್‌ ರೈಟ್ಸ್‌ ಟ್ರಸ್ಟ್‌ ಸಂಸ್ಥೆಯನ್ನು ನಡೆಸಿಕೊಂಡು ಬರುತ್ತಿರುವ ಇವರು ಹಣಕಾಸಿನ ಬಗ್ಗೆ ಬಹಳ ಪ್ರಾಮಾಣಿಕವಾಗಿ ಇರುತ್ತಾರೆ. ಸಂಸ್ಥೆಯ ನಿರ್ವಹಣೆ, ಕೆಲಸಗಳು, ವಕೀಲಿ, ತರಬೇತಿ, ವರದಿ, ಈ ಎಲ್ಲದರ ಜೊತೆ ಜೊತೆಗೇ ಹಣಕಾಸು ಪಾರದರ್ಶಕತೆಯಿಂದಿರಬೇಕು, ಕಾರ್ಯಕ್ರಮಗಳಿಗೆ ಸಂಪನ್ಮೂಲಗಳು ಪ್ರಾಮಾಣಿಕವಾಗಿ ವೆಚ್ಚವಾಗಬೇಕು, ಅಂದರೆ ಹೆಚ್ಚು ಹೆಚ್ಚು ಕಾರ್ಯಕ್ರಮಗಳಾಗಬೇಕು, ಮೇಲಿನ ಇತರೆ ಖರ್ಚು ಕಡಿಮೆ ಇರಬೇಕು, ಸರಿಯಾದ ಲೆಕ್ಕ, ಅವುಗಳಿಗೆ ಸಮರ್ಪಕವಾದ ಪುರಾವೆಗಳಿರಬೇಕು ಎಂಬುದರ ಬಗ್ಗೆ ಅತೀವ ಕಾಳಜಿ ಮತ್ತು ಗಮನ ನೀಡುತ್ತಾರೆ.  

ಸಂಪನ್ಮೂಲ ಕೇಂದ್ರವಾಗಿ ಗುರುತಿಸಿಕೊಂಡಿರುವ ಸಿ.ಆರ್‌.ಟಿ. ಸಂಸ್ಥೆಯ ಸಿಬ್ಬಂದಿ ತರಬೇತಿ, ಸಭೆ, ಚಟುವಟಿಕೆ ಹೀಗೆ ಆಗಾಗ ಬೇರೆ ಜಿಲ್ಲೆಗಳಿಗೆ, ಕ್ಷೇತ್ರಗಳಿಗೆ ಭೇಟಿ ನೀಡಬೇಕು. ಸಹೋದ್ಯೋಗಿಗಳು ಹೋಗಿ ಬರ್ತಾರೆ ಎಂದು ವಾಸು ಸರ್‌ ಅವರು ಸುಮ್ಮನಾಗುವುದಿಲ್ಲ, ತಲುಪಿದ್ದಾರೋ, ಇಲ್ಲವೋ, ವಸತಿ ಹೇಗಿದೆ, ರಕ್ಷಣೆ, ಊಟ ಇವುಗಳ ಬಗ್ಗೆ ವಿಚಾರಿಸಿಕೊಳ್ಳುತ್ತಾರೆ. ಹೀಗೆ ಸಿಬ್ಬಂದಿಗಳ ಬಗ್ಗೆ ಅವರ ಕಾಳಜಿ ಮುಂದುವರಿಯುತ್ತದೆ. ಹತ್ತಿರದಿಂದ ಅವರ ಜೊತೆ ಸಹೋದ್ಯೋಗಿಯಾಗಿರುವ ನನಗೆ ಅವರ ಕಾಳಜಿಯ ಅನುಭವ ಆಗಿದೆ. ಒಮ್ಮೆ ಯಾವುದೋ ಕಾರ್ಯಕ್ರಮಕ್ಕೆ ಹೋಗಿದ್ದಾಗ ನನ್ನ ಆರೋಗ್ಯದ ಬಗ್ಗೆ ವಿಚಾರಿಸುತ್ತಾ ಏನಾಗ್ತಿದೆ, ನನಗೆ ಒಬ್ಬ ಮಗಳಿದ್ದಾಳೆ. ನೀವೂ ನನ್ನ ಮಗಳ ಹಾಗೆ, ಆರಾಮಾಗಿರಿ ಎಂದು ಹೇಳಿದರು, ಮತ್ತೊಮ್ಮೆ ತುಂಬಾ ಹುಶಾರಿಲ್ಲದಿರುವಾಗ, ಬ್ಯಾಗ್ ಹಿಡಿದುಕೊಂಡಿದ್ದೆ. ನಡೆಯಲು ಸುಸ್ತು ಆಗ್ತಿತ್ತು. ಆಗ ಬ್ಯಾಗ್‌ ಕೊಡಮ್ಮಾ ಪರವಾಗಿಲ್ಲ ಎಂದು ಅವರೇ ಬ್ಯಾಗ್‌ ಹಿಡಿದುಕೊಂಡು, ನಾನು ಸ್ವಲ್ಪ ಆರಾಮಾಗಿ ನಡೆಯಲು ಸಹಾಯ ಮಾಡಿದ್ದಾರೆ. 

ಅವರೊಡನೆ ಪ್ರಯಾಣ ಮಾಡುವುದು ಯಾವಾಗಲೂ ಖುಷಿ ಕೊಡುತ್ತದೆ, ಯಾಕೆಂದರೆ ಅದೆಷ್ಟು ವಿಚಾರಗಳನ್ನು ನಮ್ಮೊಂದಿಗೆ ಹೇಳುತ್ತಿರುತ್ತಾರೆ. ಅವರು ಕ್ಷೇತ್ರದಲ್ಲಿ ಕಂಡುಕೊಂಡ ವಿಚಾರಗಳು, ಒಮ್ಮೆ ಪರಿಸರ, ಕೃಷಿ, ಅಡುಗೆ, ಮಹಿಳೆ, ಮಕ್ಕಳು, ಪತ್ರಿಕಾ ರಂಗ, ಸಾಹಿತ್ಯ, ಕಥೆ ಹೀಗೆ ಅಬ್ಬಬ್ಬಾ ಕೇಳಿದಷ್ಟು ಹೇಳೋ ತರ. ಸಿಬ್ಬಂದಿಯ ಆರೋಗ್ಯದ ಬಗ್ಗೆ ಕಾಳಜಿವಹಿಸುವ ಅವರು, ಸರಿಯಾಗಿ ತಿನ್ನಿ ಅಂತ ಹೇಳೋದೆ ಅಲ್ಲ, ಕೆಲವೊಮ್ಮೆ ಅವರು ಮನೆಯಲ್ಲಿ ಲಕ್ಷ್ಮಿ ಮೇಡಂ ಜೊತೆ ಆ ವಿಚಾರಗಳನ್ನು ಮಾತಾಡುತ್ತಾರೆ. ಮೇಡಂ ಕೂಡ ನನ್ನ ಆರೋಗ್ಯದ ಬಗ್ಗೆ ಮಾತನಾಡಿ, ಕಾಳಜಿ ಮಾಡಿದ್ದಾರೆ. ಆಗ ಹೋ ವಾಸು ಸಾರ್‌ ಮನೆಯಲ್ಲಿಯೂ ಮೇಡಂ ಜೊತೆ ಈ ವಿಷಯಗಳನ್ನು ಹಂಚಿಕೊಂಡಿದ್ದಾರೆ ಎಂದು ಗೊತ್ತಾಗಿದೆ. ಹೀಗೆ ವಾಸು ಸಾರ್‌ ಸಂಸ್ಥೆಯ ನಿರ್ದೇಶಕರು, ಅವರ ಜೊತೆ ಹೇಗೋ ಅನ್ನುವಂತಿಲ್ಲ, ಆರೋಗ್ಯ ಇಂತಹ ವಿಚಾರಗಳಲ್ಲಿ ಆಪ್ತತೆಯಿಂದ ವಿಚಾರಿಸುತ್ತಾರೆ. 

ಸಂಸ್ಥೆಯ ಮೂಲಕ ಹಲವಾರು ಜನರನ್ನು ಬೆಳೆಸಿದ್ದಾರೆ, ಸಂಸ್ಥೆಯ ಸಿಬ್ಬಂದಿಯನ್ನು ಬೆಳೆಸುವುದು ಅವರಿಗೆ ಒಂದು ತರಹ ಖುಷಿ. ಓದಿ, ಓಡಾಡಿ, ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಕೇಳಿಸಿಕೊಳ್ಳಿ ಹೀಗೆ ಹೇಳುವುದೇ ಅಲ್ಲದೇ ಊಟದ ಸಮಯದಲ್ಲಿ ಏನಾದರೊಂದು ವಿಚಾರಗಳನ್ನು ಚರ್ಚೆ ಮಾಡುವ ಮೂಲಕ ಅಲ್ಲಿಯೂ ವಿಚಾರ ಹಂಚುತ್ತಾರೆ. ಮಳೆ, ಬೆಳೆ, ಸಾಹಿತ್ಯ, ರಾಜಕೀಯ, ಸಾಮಾಜಿಕ, ನಾಟಕ, ರಂಗಭೂಮಿ, ಸಿನೆಮಾ, ಹಾಡು ಹೀಗೆ ಎಲ್ಲದರಲ್ಲಿಯೂ ಆಸಕ್ತಿ, ಬಹಳ ಸೊಗಸಾಗಿ ಯಾವುದೇ ವಿಚಾರ ಬಂದರೂ ಅದನ್ನು ಮಾತನಾಡುತ್ತಾರೆ, ಅದನ್ನು ಕೇಳುವುದೇ ಚೆಂದವಿರುತ್ತದೆ.  ಇವರಿಗೆ ಈ ವಿಷಯಗಳೂ ಗೊತ್ತಿದೆಯಾ, ಎಷ್ಟು ವಿಷಯಗಳು ಗೊತ್ತಪ್ಪಾ ಅಂತ ನನಗೆ ಅನ್ನಿಸಿದ್ದೂ ಉಂಟು. ಅಷ್ಟು ಏನೇ ಕೇಳಿದ್ರೂ ಹೇಳ್ತಿದ್ರು ಅನ್ನುವ ಹಾಗೇ, ಗೊತ್ತಿಲ್ಲ ಅಂದ್ರೆ ಹುಡುಕಿ ಹೇಳೋದು, ಹುಡುಕೋಕೆ ಹೇಳೋದು. 

ಬೇರೆ ಇಲಾಖೆ, ಸಂಸ್ಥೆಗಳೊಂದಿಗೆ ಕಾರ್ಯಕ್ರಮಗಳಿಗೆ ನಮ್ಮ ಹೆಸರನ್ನು ಸೂಚಿಸಿ, ಅವರನ್ನು ಕರೆಯಿರಿ ಮಾತನಾಡುತ್ತಾರೆ ಎಂದು ಹೇಳಿ ಬರುತ್ತಿದ್ದರು. ಅಲ್ಲಾ ಸಾರ್‌ ನೀವೇ ಬನ್ನಿ ಅಂತೆಲ್ಲಾ ಹೇಳಿದರೆ, ಕರೆಯಿರಿ ಮಾತನಾಡುತ್ತಾರೆ ಎಂದು ಅವರಿಗೆ ಭರವಸೆ ಕೊಡುತ್ತಾರೆ. ಹೀಗೇನೇ ನಮಗೆ ಇನ್‌ ಪುಟ್ಸ್‌ ಕೊಟ್ಟು, ಚೆನ್ನಾಗಿ ಮಾತಾಡಿ, ತಯ್ಯಾರಾಗಿ ಹೋಗಿ ಅಂತ ಹೇಳಿ ನಾವು ಕೂಡ ಬೆಳೆಯುವಂತೆ ಮಾಡುತ್ತಿದ್ದಾರೆ. ನಮ್ಮಲ್ಲಿ ಉತ್ಸಾಹ, ಆತ್ಮವಿಶ್ವಾಸ ತುಂಬಿಸುತ್ತಿರುತ್ತಾರೆ. ಅಲ್ಲದೇ ಕರೆದವರು ನಿಮ್ಮವರು ಚೆನ್ನಾಗಿ ಸೆಷನ್‌ ನಡೆಸಿದರು, ತರಬೇತಿ ಮಾಡಿದ್ರು ಅಂದರೆ, ಪೋನ್‌ ಮಾಡಿ ಒಳ್ಳೆದು ಕಣಮ್ಮಾ ಚೆನ್ನಾಗಿ ಆಯಿತಂತೆ, ನನಗೆ ಅವರು ಹೇಳಿದರು ಅಂತೆಲ್ಲಾ ಮಾತಾಡುವಾಗ ಅವರಿಗೆ ಆದ ಸಂತೋಷ, ಅಭಿಮಾನ ಅವರ ಮಾತುಗಳಲ್ಲಿ ನನಗೆ ಗೊತ್ತಾಗಿದೆ, ಅವರಿಗೆ ಗೊತ್ತಿರುವ ಯುವಜನರಿಗೆ ಯಾರೇ ಆಗಲಿ ಎಂತಹದಾದರು ಪ್ರಶಸ್ತಿಯೋ, ಬಹುಮಾನವವೋ ಮತ್ತೇನೋ ಅವಕಾಶವೋ ಅಂತಹ ಕಡೆಗೆಲ್ಲಾ ಅವರ ಹೆಸರುಗಳನ್ನು ಸೂಚಿಸಿ, ಅವರ ಕೆಲಸ ಸಾಧನೆಗಳಿಗೆ ಮನ್ನಣೆ ಸಿಗುವಂತೆ ಮಾಡುತ್ತಾರೆ. ಪ್ರಶಸ್ತಿ ಪಡೆದವರಿಗೆ ಕೆಲವೊಮ್ಮೆ ಇವರೇ ಹೆಸರು ಸೂಚಿಸಿರುವುದು ಎಂದು ಗೊತ್ತೇ ಆಗುವುದಿಲ್ಲ. 

ಇನ್ನು ಮಕ್ಕಳು, ಯುವಜನರು, ವಯಸ್ಕರ ಜೊತೆ ಮಕ್ಕಳ ಕುರಿತಾದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದಾಗ, ಅಂತಹ ಕಾರ್ಯಕ್ರಮಗಳಲ್ಲಿ ಊಟದ ಸಮಯದಲ್ಲಿ ವಾಸು ಸಾರ್‌ ಇದ್ದರೆ, ʻವಾಸು ಸಾರ್‌ ಇದ್ದಾರೆ, ಬರ್ತಾ ಇದ್ದಾರೆ, ಕೇಳ್ತಾರೆ ಇರಿʼ ಅನ್ನುವ ಮಾತುಗಳು ಕೇಳಿಸುತ್ತಾ ಇರುತ್ತವೆ. ಕೆಲವೊಮ್ಮೆ ಗುಸುಗುಸು ʻವಾಸು ಸಾರ್‌ ಬರ್ತಾ ಇದ್ದಾರೆʼ ಅಂತ ತಟ್ಟೆ ನೋಡಿಕೊಳ್ಳುವುದು, ಬಚ್ಚಿಟ್ಟುಕೊಳ್ಳುವುದು. ಯಾಕೆ ಅಂತ ಪ್ರಶ್ನೆಯಾ? ವಾಸು ಸಾರ್‌ ಎಲ್ಲರ ತಟ್ಟೆಗಳನ್ನು ಗಮನಿಸಿ ʻತರಕಾರಿ ತಿನ್ನಿ, ಊಟ ವೇಸ್ಟ್‌ ಮಾಡಬೇಡಿʼ ಅಂತ ಎಚ್ಚರಿಕೆ ಕೊಡುತ್ತಲೇ ಇರುತ್ತಾರೆ. ಮಕ್ಕಳು, ಭಾಗವಹಿಸಿದವರು ಚೆನ್ನಾಗಿ ಊಟ ಮಾಡಲಿ, ಆರೋಗ್ಯವಾಗಿರಲಿ ತರಕಾರಿ ತಿನ್ನಲಿ, ಅನ್ನುವ  ಕಾಳಜಿಯೊಂದಿಗೆ, ಆಹಾರ ಹಾಳು ಮಾಡಬಾರದು ಅನ್ನುವ ಜವಾಬ್ದಾರಿ ಕೂಡ ಅವರಿಗೆ ತಿಳಿಸುತ್ತಾರೆ. 

ಕಾರ್ಯಕ್ರಮ, ಸಭೆ ಎಲ್ಲಿಯೇ ಆಗಲಿ ಜನ ಬರ್ತಿದ್ದರೆ ಅವರದ್ದು ತಿಂಡಿ ಆಗಿದೆಯಾ, ಇಲ್ದಿದ್ರೆ ಅಲ್ಲಿ ತಿಂಡಿ ಇಡೋಕೆ ಹೇಳಿ, ಇಲ್ಲವಾ ಮಾಡಿಕೊಂಡು ಬರೋಕೆ ಹೇಳಿ ಅಂತ ಹೇಳುವುದು, ಕೆಲವೊಮ್ಮೆ ಅವರೇ ಖುದ್ದಾಗಿ ವಿಚಾರಿಸುವುದು, ಅವರೇ ತಿಂಡಿ ಮಾಡಿಕೊಂಡು ಬನ್ನಿ ಎಂದು ಬಂದವರನ್ನು ತಿಂಡಿಗೆ ಕಳಿಸುತ್ತಿದ್ದುದು, ಉಪಚರಿಸುತ್ತಿದ್ದುದು ಅವರು ಜನರನ್ನು ಹೇಗೆ ಗೌರವದಿಂದ ನಡೆಸಿಕೊಳ್ಳುತ್ತಾರೆ ಎನ್ನುವುದನ್ನು ಹತ್ತಿರದಿಂದಲೇ ನೋಡಿದ್ದೇನೆ.  ಆಫೀಸಿನವರಿಗೆ ಆಸ್ಪತ್ರೆಗೆ ಹೋಗುವುದು, ಮತ್ತೇನಾದರೂ ತೊಂದರೆ ಇದ್ದರೆ ಹಣ ಇದೆಯಾ, ಕೇಳಬಹುದಾ ಸಂಕೋಚ ಪಟ್ಟುಕೋಬೇಡಿ ತಗೊಳ್ಳಿ ಅಂತ ಅವರೇ ಮುಂದಾಗಿ ಹೇಳುವುದು, ಬೇಕಿದ್ದರೆ ಸಹಾಯ ಮಾಡುವುದು – ಹೀಗೆ ಮತ್ತೊಬ್ಬರನ್ನು ಅರ್ಥಮಾಡಿಕೊಳ್ಳಲು  ಕಷ್ಟಗಳನ್ನು ಅರಿಯಲು ಪ್ರಯತ್ನಿಸುತ್ತಾ ಅವರಿಗೆ ಸ್ಪಂದಿಸುವಂತಹ ಸೂಕ್ಷ್ಮತೆ ಅವರಲ್ಲಿದೆ. ಈ ಗುಣಗಳು, ಅವರು ಮತ್ತೊಬ್ಬರ ಬಗ್ಗೆ ತೋರುವ ಸಹಾನುಭೂತಿ, ನನಗೆ ವಾಸು ಸರ್‌ ಅವರನ್ನು ಕುರಿತು ಗೌರವ ಹೆಚ್ಚು ಮಾಡಿದೆ.  

ಇನ್ನು ಸರ್ಕಾರಿ ಅಥವಾ ಇತರೆ ಸಂಸ್ಥೆಗಳ ಪ್ರತಿನಿಧಿಗಳು ಅಧಿಕಾರಿಗಳು ವಾಸು ಸರ್‌ ಅವರನ್ನು ಮಕ್ಕಳ ಹಕ್ಕುಗಳ ಉಲ್ಲಂಘನೆಯ ವಿಚಾರಗಳಲ್ಲಿ ಮಾಹಿತಿಗಾಗಿ ಆಗಾಗ ಸಂಪರ್ಕಿಸುತ್ತಿರುತ್ತಾರೆ. ಸಭೆಗಳಲ್ಲಿ ಅವರ ಮಾತನ್ನು ಬಹು ಮುಖ್ಯವೆಂದು ಆಲಿಸುತ್ತಾರೆ. ವಾಸು ಸಾರ್‌ ತರಬೇತಿಯನ್ನು ನಡೆಸುವ ರೀತಿ ಎಲ್ಲರ ಮೆಚ್ಚುಗೆ ಪಡೆದಿದೆ. ಭಾಗವಹಿಸಿದವರನ್ನು ಚಟುವಟಿಕೆಗಳಿಗೆ ಒಳಪಡಿಸುತ್ತಾರೆ. ಹಲವಾರು ಸಂಬಂಧಿಸಿದ ಪ್ರಕರಣಗಳನ್ನು ಉಲ್ಲೇಖಿಸಿ, ಕಥೆಗಳನ್ನು ಹೇಳಿ, ಹಾಡಿ, ಹಾಡಿಸಿ, ಭಾಗವಹಿಸಿದವರನ್ನೇ ಸಂಭಾಷಣೆಗಳಲ್ಲಿ ತೊಡಗಿಸಿ, ಅವರಿಂದಲೇ ವಿವಿಧ ವಿಷಯ, ವಿಚಾರಗಳನ್ನು ಹೊರತೆಗೆದು, ಅವರು ಭಾಗವಹಿಸುವಂತೆ ಮಾಡುವ ಕಲೆ ವಾಸು ಅವರಲ್ಲಿದೆ. ಅಲ್ಲದೇ ಅವರೇ ಅನೇಕ ಚಟುವಟಿಕೆಗಳನ್ನು, ಕಥೆಗಳನ್ನು ಕ್ರಿಯಾತ್ಮಕವಾಗಿ ರೂಪಿಸಿದ್ದಾರೆ, ಹೆಣೆದಿದ್ದಾರೆ. ಅವುಗಳು ಜನರ ಮನಸ್ಸನ್ನು ಬಹಳ ಬೇಗ ತಲುಪುತ್ತಿರುವುದು ಖುಷಿಯ ವಿಚಾರ. 

ಬೇರೆ ಬೇರೆ ಸಮುದಾಯಗಳು, ಗುಂಪುಗಳೊಡನೆ ವಾಸು ಅವರು ಬೆರೆಯುವ ಪರಿ ಚೆನ್ನಾಗಿರುತ್ತದೆ. ಗ್ರಾಮವಿರಲಿ, ನಗರವಿರಲಿ, ಕೊಳೆಗೇರಿಯಿರಲಿ, ಶಾಲೆ, ಅಂಗನವಾಡಿ ಎಂತಹದೇ ಹಿನ್ನೆಲೆಯ ಸಮುದಾಯಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿದಾಗ, ವಾಸು ಅವರು ಯಾವುದೇ ಹಿಂಜರಿಕೆಗಳಿಲ್ಲದೆ ಎಲ್ಲರೊಡನೆ ಬೆರೆಯುತ್ತಿರುತ್ತಾರೆ. ಉಳಿದವರನ್ನೂ ಬೆರೆಯಲು ಪ್ರೋತ್ಸಾಹಿಸುತ್ತಿರುತ್ತಾರೆ. ಅವರ ಮನೆಗಳಲ್ಲಿ ಸಹಜವಾಗಿ ಸರಳವಾಗಿ ಕುಳಿತು ಮಾತನಾಡುತ್ತಾರೆ. ಊಟವನ್ನೂ ಮಾಡುತ್ತಾರೆ. ಸಮುದಾಯಗಳಲ್ಲಿ, ಗ್ರಾಮಗಳಲ್ಲಿ ಅವರಲ್ಲೊಬ್ಬರಂತೆ ಬಹಳ ಬೇಗ ಬೆರೆತು ವಿಚಾರವನ್ನು ಗ್ರಹಿಸುತ್ತಾರೆ. ಅಷ್ಟೇ ಅಲ್ಲ, ಯಾವುದೇ ಸಂಸ್ಥೆಗಳ ಸಿಬ್ಬಂದಿ ಅವರೊಡನೆ ಕಾರ್ಯಕ್ರಮಗಳಿಗೆ, ಅಧ್ಯಯನಗಳಿಗೆ ಹೋದರೆ ಅವರನ್ನು ಅಷ್ಟೇ ಗೌರವದಿಂದ ನಡೆಸಿಕೊಳ್ಳುವುದು, ಇತರರಿಗೆ ಅವರನ್ನು ಪರಿಚಯಿಸುತ್ತಾರೆ.  ಹೀಗೆ ದೊಡ್ಡವರು, ಚಿಕ್ಕವರು, ಜಾತಿ, ಧರ್ಮ ಯಾವುದನ್ನೂ ಎಣಿಸದೆ ಎಲ್ಲರಲ್ಲಿಯೂ ಆತ್ಮೀಯತೆ, ಗೌರವ ತೋರುವ, ಯಾರೇ ಆಗಿದ್ದರೂ ಗೌರವದಿಂದ ನಡೆಸಿಕೊಳ್ಳುವ ಸ್ವಭಾವ ಅವರದು. ಜೊತೆಗೆ ಅವರೊಂದಿಗೆ ಇದ್ದವರಿಗೂ ಅದು ಪ್ರೇರೇಪಣೆಯಾಗುತ್ತದೆ. ಸಮುದಾಯಗಳಲ್ಲಿ ಅವರು ಮಾತನಾಡುವಾಗ ಎಂತಹ ಸರಳ ಸಂಭಾಷಣೆ ಎಂದರೆ ಬಹಳ ಬೇಗ ಸಮುದಾಯದವರು ಇವರೊಡನೆ ಮಾತುಕತೆಯಲ್ಲಿ ತೊಡಗುತ್ತಾರೆ. ಮಳೆ ಆಗಿದೆಯೇ, ಇನ್ನು ಬೇಕೆ, ಸಾಕೇ, ಬೆಳೆ ಏನು, ನೀರು ಹೇಗಿದೆ, ಊರಿನ ಬಗ್ಗೆ ತಿಳಿಯುವುದು, ಹೀಗೆ ಸಾಮಾನ್ಯ ವಿಚಾರಗಳ ಬಗ್ಗೆ ಮಾತನಾಡಿ ಆಸಕ್ತಿಯಿಂದ ಕೇಳುತ್ತಾರೆ. 

ಇನ್ನು ಹೆಣ್ಣುಮಕ್ಕಳ ಆರೋಗ್ಯದ ಪ್ರಾಮುಖ್ಯತೆ, ಸೂಕ್ಷ್ಮತೆ, ಹೆಣ್ಣುಮಕ್ಕಳು ಇರುವಾಗ ಅವರೊಂದಿಗೆ ಮಾತುಕತೆ, ನಡವಳಿಕೆ ಖಂಡಿತಾ ಮೆಚ್ಚುವಂತದ್ದು. ಎಲ್ಲರೂ ಮಾತನಾಡಲು ಪ್ರಾಮುಖ್ಯತೆ  ಕೊಡುವುದೇ ಅಲ್ಲದೇ, ಅವರ ಮಾತುಗಳನ್ನು ಆಲಿಸುತ್ತ್ತಾರೆ, ಸಂಕೋಚದಿಂದಿವರುವವರನ್ನು ಅವಕಾಶಗಳನ್ನು ಬಳಸಿಕೊಳ್ಳಲು ಪ್ರೇರೇಪಿಸುತ್ತಾರೆ, ಕಾರ್ಯಕ್ರಮಗಳಲ್ಲಿ ಊಟದ ಸಮಯದಲ್ಲಿ ಹೆಣ್ಣುಮಕ್ಕಳು ಹಿಂದೆ ಅಥವಾ ಲೇಟಾಗಿ ಬರುತ್ತಿದ್ದರೆ ಪರವಾಗಿಲ್ಲ ನೀವೂ ಕೂಡ ಬೇಗ ಬನ್ನಿ, ಆರಾಮಾಗಿ ಊಟ ಮಾಡಿ ಎಂದು ಅವರಿಗೆ ಅನುವು ಮಾಡಿಕೊಡುತ್ತಾರೆ. ಹೆಣ್ಣುಮಕ್ಕಳ ಋತುಸ್ರಾವದ ದಿನಗಳ ಬಗ್ಗೆ, ಅವರು ಆಗ ಎದುರಿಸಬೇಕಾದ ತಳಮಳ, ಹೊಟ್ಟೆನೋವು ಇತ್ಯಾದಿಗಳ ಬಗ್ಗೆ ಸೂಕ್ಷ್ಮತೆ ಹೊಂದಿದ್ದು, ಇದು ಹೆಣ್ಣುಮಕ್ಕಳ ಬಗೆಗಿನ ಅವರ ಗೌರವ, ಅರ್ಥಮಾಡಿಕೊಳ್ಳುವುದನ್ನು ತೋರಿಸುತ್ತದೆ.  

ನನ್ನ ವೈಯುಕ್ತಿಕ ಕಷ್ಟದ ಸಮಯದಲ್ಲಿಯೂ ನನಗೆ ಸ್ಪಂದಿಸಿ, ಸಾಂತ್ವನ ಹೇಳಿದ್ದೂ ಉಂಟು. ಚೈಲ್ಡ್‌ಲೈನ್‌ ೧೦೯೮ರ ನೋಡಲ್‌ ಏಜೆನ್ಸಿ ಕೆಲಸಗಳಿಗೆ ಸಂಬಂಧಿಸಿದಂತೆ ಮಕ್ಕಳ ಸಮಸ್ಯೆಗಳಿರಲಿ, ತರಬೇತಿಗಳನ್ನು ನಡೆಸಲು ಹೊರಟಾಗ ಅಥವಾ ನ್ಯಾಯಾಲಯದಲ್ಲಿ ಸಾಕ್ಷಿ ನೀಡಲು ಹೋಗುವಾಗ ನನಗೆ ಏನಾದರೂ ಸಲಹೆಗಳು, ಕಾನೂನು ವಿಚಾರಗಳ ಬಗ್ಗೆ ಮಾಹಿತಿ ಬೇಕಿರಲಿ, ಮತ್ತೆ ಸರ್ಕಾರದ ಇಲಾಖೆ, ಪೊಲೀಸ್‌, ಸಹ ಸಂಸ್ಥೆಗಳೊಡನೆ ನಡೆಯುವ ಚರ್ಚೆಗಳು, ಕೆಲವು ಬೇಸರವಾದ ವಿಷಯಗಳನ್ನು ಕೂಡಾ ಅವರೊಡನೆ ಹೇಳಿಕೊಳ್ಳಬಹುದು. ಕೇಳುತ್ತಾರೆ, ಚರ್ಚಿಸುತ್ತಾರೆ, ಸೂಕ್ತ ಸಲಹೆಗಳನ್ನು ನೀಡುತ್ತಾರೆ. ಈಗಲೂ ನನ್ನ ವಿವಿಧ ಕೆಲಸಗಳು, ಬದಲಾದ ಪಾತ್ರದ ಸಂದರ್ಭದಲ್ಲೂ ಕೇಳುತ್ತಿದ್ದಾರೆ. ಇಂತಹ ಆತ್ಮೀಯ ಗುಣ ಅವರಲ್ಲಿದೆ. 

ಸದಾ ಮಕ್ಕಳ ಹಕ್ಕುಗಳ ವಿಚಾರ ಕುರಿತು ಆಲೋಚನೆ, ಮಾತುಕತೆ, ಅಧ್ಯಯನ, ಬರಹ, ವಕೀಲಿ ಕೆಲಸಗಳಲ್ಲೇ ಇರುವ ಅವರನ್ನು ಆರೋಗ್ಯದ ಬಗ್ಗೆ ಗಮನ ಕೊಡಿ, ಸಾರ್‌ ರೆಸ್ಟ್ ಮಾಡಿ ಅಂದರೆ, ʻಇಲ್ಲಮ್ಮಾ ಪರವಾಗಿಲ್ಲ. ಆಗುತ್ತೆ. ಗಮನಹರಿಸುತ್ತೇನೆ. ಬೇಕಾದಾಗ ತೆಗೆದುಕೊಳ್ಳಲೇಬೇಕಲ್ಲ!ʼ ಅಂತ ಕೆಲವೊಮ್ಮೆ ಸಮಯ ಮುಂದೂಡಿರುವುದು ವಾಸ್ತವ. ಲಕ್ಷ್ಮಿ ಮೇಡಂ ಸರ್‌ ಅವರಿಗೆ ಹೇಳಿ ಹೇಳಿ ಅವರು ಒಪ್ಪುವಂತೆ ಪ್ರಯತ್ನ ಮಾಡುತ್ತಾರೆ. ಆರೋಗ್ಯದ ಬಗ್ಗೆ ವಾಸು ಅವರಿಗೆ ಗಮನವಿಲ್ಲ ಅಂತಲ್ಲ. ಅದಕ್ಕೆ ಆವಶ್ಯಕವಾದ ಸಮಯ ಕೊಡುವುದಿಲ್ಲ, ಕೆಲಸಗಳ ಕಡೆಗೇ ಹೆಚ್ಚು ಗಮನ ಕೊಡುತ್ತಾರೆ ಎಂಬುದು ನನ್ನ ಅನಿಸಿಕೆ.  

ಕೆಲವೊಂದು ಸಂದರ್ಭಗಳಲ್ಲಿ ವಾಸು ಅವರ ಮಾತುಗಳನ್ನು, ಅಭಿಪ್ರಾಯಗಳನ್ನು ಕೆಲವರು ತಪ್ಪಾಗಿ ಅರ್ಥಮಾಡಿಕೊಂಡಿದ್ದು, ಅವುಗಳನ್ನು ಬೇರೆಯೇ ರೀತಿಯಲ್ಲಿ ಅವರ ವಿರುದ್ಧ ಬಳಸಿದ್ದು ಮಾತನಾಡುತ್ತಿದ್ದುದು ನನಗೆ ತಿಳಿದಿತ್ತು. ʻಅವರು ಹೀಗೆಲ್ಲಾ ಯಾಕೆ ಮಾಡ್ತಾರೆ ಸಾರ್‌? ಅವರ ತಪ್ಪು ಗ್ರಹಿಕೆಗಳನ್ನು ಸರಿಪಡಿಸುವುದು ಹೇಗೆ? ಅವರಿಗೆ ಸರಿಯಾಗಿ ಹೇಳಬೇಕು ಅಂತ ಅನ್ನಿಸುತ್ತೆʼ ಅಂತ ನಾನೆಂದರೆ, ʻಹೌದು. ಏನು ಮಾಡುವುದು? ತಪ್ಪು ಗ್ರಹಿಕೆ ಮಾಡಿಕೊಳ್ಳಬೇಡಿ, ಹಾಗೆಲ್ಲಾ ಮಾತನಾಡಬಾರದು ಅಂತ ನಾನು ಮತ್ತೆ ಮತ್ತೆ ಹೇಳಿದರೂ ಕೆಲವರಿಗೆ ತಿಳಿಯುವುದಿಲ್ಲ. ಕಾಲಾನುಕಾಲಕ್ಕೆ ಪರಿಸ್ಥಿತಿಗಳು ಬದಲಾದಂತೆ ಅವರಿಗೂ ತಿಳಿಯುತ್ತೆ. ಯಾವ ಸಂದರ್ಭದಲ್ಲಿ ನಾನು ಯಾಕೆ ಹಾಗೆ ಹೇಳಿದೆ, ಅಂತಹ ನಿಲುವನ್ನು ಮಕ್ಕಳ ಪರವಾಗಿಯೋ, ಒಂದು ವಿಚಾರದ ಬಗ್ಗೆಯೋ ಏಕೆ ತೆಗೆದುಕೊಂಡೆ ಎಂದು ತಿಳಿಯುತ್ತದೆ. ಕಾಯೋಣ. ಈಗ ನಮ್ಮ ಕೆಲಸ ಮುಂದುವರಿಸೋಣʼ ಎಂದು ಶಾಂತವಾಗಿ ಇರಲು ಯತ್ನಿಸುತ್ತಿದ್ದರು. ಕೆಲವೊಮ್ಮೆ ತಪ್ಪು ತಿಳಿದವರನ್ನು ಕುರಿತು ಕನಿಕರ ಪಡುತ್ತಿದ್ದರೇನೋ ಅನ್ನಿಸಿಬಿಡುತ್ತಿತ್ತು. 

ಇಷ್ಟೆಲ್ಲಾ ಹೇಳ್ತಿದ್ರೆ ಅವರಿಗೆ ಸಿಟ್ಟೇ ಬರಲ್ವಾ? ಶಾಂತಮೂರ್ತಿಯೇನು? ಅಂತ ಕೇಳಬಹುದೇನೋ. ಹಾಗೇನಿಲ್ಲ. ಕಾರ್ಯಕ್ರಮಗಳ ಆಯೋಜನೆಯಲ್ಲಿ ಜವಾಬ್ದಾರಿ ವಹಿಸಿಕೊಂಡವರು ಸರಿಯಾಗಿ ನಿರ್ವಹಿಸದಿದ್ದಲ್ಲಿ, ಜವಾಬ್ದಾರಿ ಇರುವ ವ್ಯಕ್ತಿಗಳು ಭಾಷಣದಲ್ಲಿ ತಪ್ಪು ತಪ್ಪೇ ಹೇಳುತ್ತಿದ್ದಲ್ಲಿ, ಕಾರ್ಯಕ್ರಮಗಳ ಭಾಗೀದಾರರು ಬೇಜವಾಬ್ದಾರಿ ತೋರಿದರೆ, ಅಲ್ಲಿ ಅವರು ಜೋರಾಗಿ ಮಾತನಾಡಿದ್ದೂ ಇದೆ. ಸರಿಯಾಗಿ ಮಾಡಬೇಕು, ಗಮನಿಸಬೇಕು ಅಲ್ವೇನ್ರೀ ಎಂದು ಗದರುತ್ತಿದ್ದುದೂ ಇದೆ. ಅದೆಲ್ಲ ಕೆಲಸದ ಬಗ್ಗೆ ಅವರು ಕೊಡುತ್ತಿದ್ದ ಮಹತ್ವವನ್ನು ತೋರಿಸುತ್ತದೆ. ಕೆಲವೊಮ್ಮೆ ವಾಸು ಸಾರ್‌ ಯಾಕೆ ಹೀಗೆ ಮಾತನಾಡಿದರು? ಅಲ್ಲೇನೂ ನಮಗೆ ಗೊತ್ತಾಗಲಿಲ್ಲವಲ್ಲ ಎಂದು ಗೊಂದಲವಾಗಿದ್ದೂ ಇದೆ. ವಾಸು ಸರ್‌ ಅವುಗಳನ್ನು ನಿಧಾನವಾಗಿ ವಿವರಿಸಿದಾಗ ಅಲ್ಲಿನ ತಪ್ಪು ಒಪ್ಪು ಅರಿವಾಗುತ್ತಿತ್ತು. 

ಸಿ.ಆರ್.ಟಿ. ತಂಡದ ಕೆಲಸಗಳು, ಬರವಣಿಗೆ, ಕಲಿಕೆಗಳನ್ನು ತಿದ್ದಬೇಕಾದರೆ ನವಿರಾಗಿ ಗದರುವ ಮೂಲಕವೂ ತಿದ್ದುತ್ತಾರೆ. ನಮ್ಮ ನೆಟ್‌ವರ್ಕ್‌ನ ಸದಸ್ಯರು ನಾವು ನಿರೀಕ್ಷಿಸಿದಂತೆ ಪ್ರತಿಕ್ರಿಯಿಸದಿದ್ದರೆ, ತಡ ಮಾಡಿದರೆ, ಒಪ್ಪಿಕೊಂಡ ಕೆಲಸಗಳನ್ನು ನಿರ್ವಹಿಸದಿದ್ದರೆ ಜವಾಬ್ದಾರಿಯನ್ನು ನೆನಪಿಸುವ ರೀತಿ ಕೆಲವೊಮ್ಮೆ ಅವರು ಸಿಟ್ಟಾಗಿರುವರೇನೋ ಎಂದು ಕಛೇರಿಯ ಸಿಬ್ಬಂದಿ ಭಾವಿಸುವುದಿದೆ. ಆದರೆ ಮತ್ತೆ ಕೆಲವೇ ನಿಮಿಷಗಳಲ್ಲಿ ಅವರು ಮಾಮೂಲಿ ಮನುಷ್ಯ. ಸಮಾಧಾನವಾಗಿ ಹೇಳುವುದನ್ನು ಅಭ್ಯಾಸಪೂರ್ವಕವಾಗಿ ಕಲಿತಿದ್ದೇನೆ ಎಂದು ಹೇಳುತ್ತಾರೆ.  

ಕಥೆ, ಪುಸ್ತಕ, ಲೇಖನ, ಹಾಡು ಹೀಗೆ ಬರೆಯುತ್ತಲೇ ಇರುತ್ತಾರೆ. ಮಕ್ಕಳಿಗಾಗಿ ಹಾಡು, ಕತೆಗಳೂ ಪ್ರಕಟವಾಗಿವೆ. ತಮ್ಮ ಬರಹಗಳನ್ನು ನಮ್ಮೊಂದಿಗೆ ಹಂಚಿಕೊಂಡು ಅಭಿಪ್ರಾಯ ಕೇಳುತ್ತಾರೆ, ನೀವೂ ಓದಿರಿ, ಬರೆಯಿರಿ ಎಂದು ಪ್ರೋತ್ಸಾಹಿಸುತ್ತಲೇ ಇರುತ್ತಾರೆ.  ತಮ್ಮ ಹಾಡುಗಳಿಗೆ ಅವರೇ ರಾಗ ಹಾಕಿ ಹಾಡುವುದು ಹಾಡಿಸುವುದೂ ಉಂಟು. ಪ್ರತಿ ವಾರ ಮಕ್ಕಳ ಹಕ್ಕುಗಳ ಅಂಕಣಕ್ಕಾಗಿ ಬೇಕಾದ ವಿಷಯ ಸಂಗ್ರಹ ಸತತವಾಗಿ ನಡೆದಿರುತ್ತದೆ. ಬರೆದುದನ್ನು ಪತ್ರಿಕೆ, ಪುಸ್ತಕಗಳ ಮೂಲಕ ಸಂಬಂಧಿಸಿದವರಿಗೆ ತಲುಪಿಸುವ, ಹಂಚುವ ಕೆಲಸವನ್ನು ಆಸ್ಥೆಯಿಂದ ಮಾಡುತ್ತಿದ್ದಾರೆ. ಅವರಿಗೆ ಹೊಗಳಿಕೆ ಆಗಿ ಬರುವುದಿಲ್ಲ. ಅನೇಕ ಸಭೆಗಳಲ್ಲಿ ಇವರನ್ನು ಗುರುಗಳು ಅಂತಲೋ ಮತ್ತೋನೋ ಹೊಗಳುತ್ತಿದ್ದರೆ, ಅದೆಲ್ಲ ಬೇಡಪ್ಪಾ ಈಗಿನ ಕೆಲಸ ನೋಡೋಣ ಎನ್ನುವುದು ಸಾಮಾನ್ಯ. 

ಈ ಲೇಖನಕ್ಕೋಸ್ಕರ ನಮ್ಮ ಮಧ್ಯ ಇರುವ ದೊಡ್ಡ ವ್ಯಕ್ತಿಯನ್ನು ಕುರಿತು ಕೆಲವು ಚಿಕ್ಕ ಚಿಕ್ಕ ವಾಸ್ತವ ವಿಚಾರವನ್ನಷ್ಟೇ ಬರೆದಿದ್ದೇನೆ. ಸಾಮಾನ್ಯವಾಗಿ ನಾನು ಏನಾದರೂ ಬರೆದರೆ ಅವರಿಗೆ ಕೊಟ್ಟು, ನೋಡಿ ಕೊಡಿ ಸಾರ್‌ ಎಂದು ಕೇಳುವುದು. ಅವರು ಕೂಡ ನೋಡಿ ತಿದ್ದಿ ಕೊಡುತ್ತಾರೆ. ಈಗ ಅವರ ಬಗ್ಗೆಯೇ ಬರೆಯವುದು, ಅದೂ ಕೂಡ ಅವರಿಗಾಗಿ ಸಿದ್ಧಪಡಿಸಿರುವ ಸಪ್ರೈಸ್‌ ಎಂದು. ಹಾಗಾಗಿ ಅವರಿಗೆ ನೋಡಿ ಕೊಡಿ ಸಾರ್‌ ಅಂತ ಕೊಡುವಂತಿಲ್ಲ. ಬರೆದುಬಿಟ್ಟಿದ್ದೇನೆ, ಆಮೇಲೆ ಓದಬಹುದು, ತಪ್ಪಿದ್ದರೆ ತಿದ್ದಲಿ, ತಿಳಿಸಲಿ ಪರವಾಗಿಲ್ಲ. ಇದನ್ನು ಓದಿ ಇಲ್ಲಿಯೂ ತಿದ್ದಬೇಕೆ ಎಂದು ನಗು/ಹುಸಿಮುನಿಸೋ ಬಂದರೆ ಗೊತ್ತಿಲ್ಲ. ಮುಖದ ಮೇಲೆ ನಗು ಮೂಡಲಿ ಅಷ್ಟೆ! ಮಕ್ಕಳ ಹಕ್ಕುಗಳ ಬಗ್ಗೆ ಅವರ ಕೆಲಸದಲ್ಲಿ ಅವರ ಬದ್ಧತೆ ಶ್ಲಾಘನೀಯ. ಅವರ ಮಕ್ಕಳ ಬಗೆಗಿನ ಕಾಳಜಿ ಹೀಗೆ ಮುಂದುವರಿದು, ಅಭಿವೃದ್ಧಿಯ, ಹಲವಾರು ಕ್ಷೇತ್ರಗಳಲ್ಲಿನ ಅವರ ಆಸಕ್ತಿ, ಸಮಾಜಕ್ಕೆ ಮತ್ತಷ್ಟು ಕೊಡುಗೆ ಕೊಡಲಿ. ಸಿ.ಆರ್.ಟಿ. ಮತ್ತು ವಾಸು ಸಾರ್‌ ಅವರ ಕೆಲಸಗಳಿಗೆ ಅವರ ಕುಟುಂಬದ ಬೆಂಬಲ ನಿಜಕ್ಕೂ ಮೆಚ್ಚಬೇಕು. ಕೆಲಸಗಳು, ವರದಿಗಳು, ಕಾರ್ಯಕ್ರಮಗಳಲ್ಲಿ ಅವರ ಬೆಂಬಲ ಮತ್ತು ಸಹಕಾರ ತುಂಬಾ ಇದೆ. ಇಂತಹ ಸಂತೋಷವನ್ನು ನೀಡುತ್ತಿರುವ ಅವರ ಕುಟುಂಬದೊಂದಿಗೂ ಕೆಲಸದ ಜೊತೆಗೆ, ವಾಸು ಸರ್‌ ಕುಟುಂಬಕ್ಕೂ ಸಾಕಷ್ಟು ಸಮಯ ಕೊಟ್ಟು ಸಂತೋಷದಿಂದ ಇರಲಿ ಎಂದು ಆಶಿಸುವೆ. 

vasu-blogs-10-7
  • ನಾಗಮಣಿ ಸಿ. ಎನ್. ಸಂಯೋಜಕರು, ಚೈಲ್ಡ್‌ ರೈಟ್ಸ್‌ ಟ್ರಸ್ಟ್.