ವಾಸು ಎಂಬ ಬಾಸು – ವಾಣಿ ಕಂಟ್ಲಿ

ಶೀರ್ಷಿಕೆ ನೋಡಿದರೆ ಇದೇನೋ ಹಳೆಯ ಬಾಸನ್ನು ಕುರಿತ ಲೇಖನ ಅನ್ನಿಸಬಹುದು. ಯಾರಿಗಾದರೂ ಬಾಸ್ ಅಂದರೆ ಪ್ರೀತಿಯೇ! ಅವರ ಬಗ್ಗೆ ಬರೆಯಬೇಕು ಎಂದರೆ ಅವರನ್ನು ಮೆಚ್ಚಿಸಲು ಬರೆಯಬೇಕು ಅಷ್ಟೇ ಅನ್ನಿಸದಿರದು. ಆದರೆ ನನ್ನ ಇದುವರೆಗಿನ 20 ವರ್ಷದ ವೃತ್ತಿ ಜೀವನದಲ್ಲಿ ತುಂಬಾ ಸ್ಪೂರ್ತಿದಾಯಕ ಬಾಸ್ ಗಳ ಜೊತೆ ಕೆಲಸ ಮಾಡಲು ಅವಕಾಶ ದೊರೆತಿದ್ದು ನನ್ನ ಅದೃಷ್ಟವೇ ಸರಿ.
ಶ್ರೀ ಮಾನ್ ಡಾ ವಾಸುದೇವ ಶರ್ಮಾ ಎನ್ನುವ ಹೆಸರು ನನ್ನ ವೃತ್ತಿ ಜೀವನದ ಸ್ಪೂರ್ತಿ ಮತ್ತು ಮಾರ್ಗದರ್ಶಕರಾಗಿ ಪ್ರಧಾನ ಪಾತ್ರವಹಿಸುವ ನನ್ನ ಮೊದಲ ಗುರು ಆಗಿದ್ದು ನನ್ನ ಅದೃಷ್ಟ. ಅವರ ನನ್ನ ಪರಿಚಯ 20 ವರ್ಷದ ಹಿಂದೆ ಆದದ್ದು. ನಾನು ಕೊಪ್ಪಳ ಜಿಲ್ಲೆಯಲ್ಲಿ ಸರ್ವೋದಯ ಸಂಸ್ಥೆಯಿಂದ 2004 ರಲ್ಲಿ ಮಕ್ಕಳೊಂದಿಗೆ ಶಾಸಕರು/ ಮಕ್ಕಳ ಪಾರ್ಲಿಮೆಂಟ್ ಗೆ ಭಾಗವಹಿಸಲು ಬೆಂಗಳೂರಿನಲ್ಲಿ CRT ಸಂಸ್ಥೆ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಬಂದಾಗ ಮೊದಲ ಬಾರಿ ಇಡೀ crt ತಂಡ, ಅದರೊಂದಿಗೆ ವಾಸುದೇವ ಶರ್ಮಾ ಅವರ ಮೊದಲ ಪರಿಚಯ ಆಗಿತ್ತು. ನಾನೂ ಆಗ ಬೆಂಗಳೂರಿನ ಬಗ್ಗೆ ಇತರ ಜಿಲ್ಲೆಗಳ ನಿವಾಸಿಗಳಿಗೆ ಇರುವ ಸಹಜ ಕುತೂಹಲ ಮತ್ತು ಭ್ರಾಂತಿಯಲ್ಲಿದ್ದೆ.
ಮಕ್ಕಳಿಗೆ ಮಕ್ಕಳ ಹಕ್ಕುಗಳ ಬಗ್ಗೆ ತರಬೇತಿ ನೀಡಿ ಅವರ ಭಾಗವಹಿಸುವ ಹಕ್ಕನ್ನು ವಾಸು ಸರ್ ವಿವರಿಸುವಾಗ, ಈ ನವೀನ ಮಾಹಿತಿಯಿಂದ ನನ್ನ NGO ವೃತ್ತಿಯ ಹೊಸದೊಂದು ಲೋಕ ತೆರೆದುಕೊಂಡಿತ್ತು.
ಹೇಗಾದರೂ ಮಾಡಿ ಈ crt ಸಂಸ್ಥೆಯಲ್ಲಿ ಕೆಲಸ ಗಿಟ್ಟಿಸಿಕೊಂಡು ಬಿಡಬೇಕು. ಪದ್ಮಿನಿ ಮೇಡಂ, ವಾಸು ಸರ್, ಸಿಂಹ ಸರ್, ಸತೀಶ್ ಸರ್, ಸುಮತಿ, ಶ್ವೇತಾ, ಯುನಿಸೆಫ್, ಆಗ ಅತಿಥಿಯಾಗಿ ಬಂದಿದ್ದ ರಂಗಣ್ಣ, ನೆ ಲ ನರೇಂದ್ರ ಬಾಬು, ಕಾತ್ಯಾಯಿನಿ ಮೇಡಂ, ಹರೀಶ್ ಜೋಗಿ ಇವರಿಂದ ಉತ್ತೇಜಿತಗೊಂಡು, ಈ ಅದ್ಬುತ ಜಗತ್ತಿನಲ್ಲಿ ನಾನೂ ಕಲಿಯಲು, ಬೆಳೆಯಲು ಅವಕಾಶಕ್ಕೆ ಯತ್ನಿಸಿದೆ.
ನಂತರ CACT ಕಾರ್ಯಕ್ರಮಕ್ಕೆ ಒಂದು ಬಾರಿ ವಾಸು ಸರ್ ಕೊಪ್ಪಳಕ್ಕೆ workshop ಮಾಡಲು ಬಂದಾಗ, ನನಗೆ ಕಾರ್ಯಕ್ರಮ ನಡೆಸಿಕೊಡಲು ಸಲಹೆ ಸೂಚನೆ ನೀಡಿ ಅವರು ವಾಪಸು ಟ್ರೈನ್ ಹತ್ತುವವರೆಗೂ ಜೊತೆಯಲ್ಲಿ ಇದ್ದು ಅವರ ಜ್ಞಾನದ ಮಾತು ಕೇಳಿಸಿಕೊಳ್ಳುವ ಸದವಕಾಶ ಪಡೆದುಕೊಂಡಿದ್ದೆ.
ನಂತರ ಬೆಂಗಳೂರಿನಲ್ಲಿ ಕೆಲಸ ಹುಡುಕಬೇಕೆಂದು ಬಂದಾಗ, CRT ಯಲ್ಲಿ ಕೆಲಸಕ್ಕಾಗಿ ಫೋನ್ ಮಾಡಿದ್ದೆ. ಸದ್ಯಕ್ಕೆ ಕೆಲಸವಿಲ್ಲ ಎಂದು ಮತ್ತೆ ನಾನು ಬಿಜಾಪುರಕ್ಕೆ ಕೆಲಸಕ್ಕೆ ಹೋಗಿದ್ದಾಯ್ತು. ಎಲ್ಲೇ ಕೆಲಸ ಮಾಡಿದರೂ, ಒಮ್ಮೆಯಾದರೂ CRT ಯಲ್ಲಿ ಕೆಲಸ ಮಾಡಬೇಕೆಂಬ ಹಂಬಲ ಹೋಗಲಿಲ್ಲ. ಕೊನೆಗೆ 2007 ರಲ್ಲಿ ಅದು ಸಾಧ್ಯವಾಗಿತ್ತು.
ಆಗ ವಾಸು ಸರ್ ಮೊದಲ CWC ಸಮಿತಿಯ ರಚನೆಯಾಗಿ ಮೊದಲ ಬಾರಿಗೆ ಸದಸ್ಯರಾಗಿದ್ದ ಕಾಲ. EveryChild project ನಲ್ಲಿ ಮಕ್ಕಳ ಗ್ರಾಮಸಭೆಯ ಪರಿಕಲ್ಪನೆ ಅರಳುತ್ತಿದ್ದ ಸಮಯ, ಪದ್ಮಿನಿ ಮೇಡಂ UNCRC ಆಲ್ಟರ್ನೇಟಿವ್ / ಪರ್ಯಾಯ ವರದಿ ನೀಡುವಲ್ಲಿ ಕಾರ್ಯಪ್ರವೃತ್ತರಾಗಿದ್ದರು, ChildLine ಗೆ CRT ನೋಡಲ್ ಸಂಸ್ಥೆಯಾಗಿ ಕೆಲಸ ಪ್ರಾರಂಭಿಸಿದ ಕಾಲ. ಮೊದಲ ಬಾರಿಗೆ ಶಾಸಕರ ಭವನದಲ್ಲಿ ಮಕ್ಕಳಿಗಾಗಿ ಶಾಸಕರು ಕಾರ್ಯಕ್ರಮ ಮಾಡಿದ್ದ ಕಾಲ.
ದಿನ ಬೆಳಿಗ್ಗೆ ಬರುವ ವಾಸು ಸರ್ ತರಬೇತಿ ಇಲ್ಲವೆ CWC ಎಂದು ಹೆಚ್ಚಿಗೆ ಕಚೇರಿಯಿಂದ ಹೊರಗೆ ತುಂಬಾ ಬ್ಯುಸಿ ಇದ್ದರೂ, ನಮಗೆಲ್ಲಾ ಕೆಲಸ ವಹಿಸಿ ಹೋಗುತ್ತಿದ್ದರು. ನಾವು ಬಹಳಷ್ಟು ಬಾರಿ, ಕಾದು, ನಮಗೆ ಕೊಟ್ಟ ಕೆಲಸ ಮಾಡಿ ಮನೆಗೆ ಹೊರಡುವ ಸಮಯದಲ್ಲಿ backpack ಹೊತ್ತು ಸರ್ 5 ರಿಂದ 5.30 ಕ್ಕೆ ಕಚೇರಿಗೆ ಬರುತ್ತಿದ್ದರು. ಮತ್ತೆ ಕಚೇರಿಯ ಕೆಲಸದ ಚರ್ಚೆ. ಬಹಳಷ್ಟು ಬಾರಿ ನನಗೆ ಹೊತ್ತಾಗುವುದು ಎಂದು, ತಮ್ಮ ಕಾರಿನಲ್ಲಿ ಮಾತಾಡುತ್ತಾ ಹಾದಿಯಲ್ಲಿ ನನ್ನನ್ನು ಬನಶಂಕರಿ ಬಸ್ ಸ್ಟ್ಯಾಂಡ್ ವರೆಗೂ ಡ್ರಾಪ್ ಮಾಡುತ್ತಿದ್ದರು.
ಆಗ ಅವರು ತಮ್ಮ ವೃತ್ತಿ ಜೀವನದ ಪ್ರಾರಂಭಿಕ ಜೀವನ, ಮೈಸೂರಿನ ಕಾಲೇಜಿನ ನಾಟಕದ ಅನುಭವಗಳು, CWC ಅನುಭವಗಳನ್ನು ಹಂಚಿಕೊಂಡರೆ, ಅವರ ಅಪಾರ ಅನುಭವಗಳು ನನ್ನಲ್ಲಿ ಸ್ಪೂರ್ತಿ ತುಂಬಿ ನಾನು ಅವರ ಹಾಗೆ ಬೆಳೆಯಬೇಕು ಎನ್ನುವ ಹಂಬಲ ಮೂಡುತ್ತಿತ್ತು. ನಂತರ ಅವರ ಹಾಗೆ, ನಾನು CWC ಸಮಿತಿಯ ಸದಸ್ಯೆಯಾದಾಗ ಅವರಿಗೆ ಹೇಳುವಲ್ಲಿ ನನಗೆ ತುಂಬಾ ಖುಷಿಯಾಗಿತ್ತು. CRT ಯಲ್ಲಿ ಕೇವಲ 7 ತಿಂಗಳು ಕೆಲಸ ಮಾಡಿದರೂ ಅದು ಯಾವಾಗಲೂ ನನ್ನ ತವರುಮನೆಯಾಗಿ ಉಳಿದಿದ್ದು ಶ್ಲಾಘನೀಯ. ಇನ್ನೂ ನನಗೆ ಪೇಚೆನಿಸುವುದು CRT ಬಿಟ್ಟು ಹೋಗಿದ್ದು, ವಾಸು ಸರ್ ಬಳಿ ಕಲಿತು ಬಹಳಷ್ಟು ಜನ ಉನ್ನತ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ, ಆದರೆ ನನ್ನಂತೆ ಎಲ್ಲರಿಗೂ ನಾವು CRT ಯಲ್ಲಿಯೇ ಇದ್ದು CRT ಯಲ್ಲಿಯೇ ಸಂಸ್ಥೆಯ ಜೊತೆ ಬೆಳೆದಿದ್ದರೆ ಎಷ್ಟು ಚೆನ್ನಾಗಿತ್ತು ಎನ್ನಿಸದಿರದು.
ವಾಸು ಸರ್ ಜೊತೆಗಿನ ಒಡನಾಟವನ್ನು ನಾನು ಮೂರು ಹಂತದಲ್ಲಿ ವಿವರಿಸಬಹುದು.
2004 ರಿಂದ 2007 ವರೆಗೆ ಅವರನ್ನು ಐಡಿಯಲ್ ಬಾಸ್ ಆಗಿ ಪಡೆಯಲು ಕನಸು ಕಂಡ, ಪ್ರಯತ್ನಿಸಿದ ಹಂತ. 2007 ರಲ್ಲಿ ಕೇವಲ 7 ತಿಂಗಳು ಅವರೊಂದಿಗೆ ಕೆಲಸ ಮಾಡಿದ ಅತ್ಯಂತ ಸ್ಪೂರ್ತಿದಾಯಕ ಕಲಿಕೆಯ ಅನುಭವ. ನಂತರದಲ್ಲಿ, 20011 ರಿಂದ ಇತರ ಸಂಸ್ಥೆಯ ಕೆಲಸದಲ್ಲಿ ಇದ್ದರೂ CRT ಅಭಿಮಾನಿಯಾಗಿ, ಅವರ KCRO ಸಂಘಟನೆಯ ಭಾಗವಾಗಿ, RTE ಕಾರ್ಯಪಡೆ ಭಾಗವಾಗಿ, BBA ಸಂಸ್ಥೆಯ ಹಲವಾರು ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕೆಲಸ ಮಾಡಿದ ಅಪಾರ ಅನುಭವಗಳು.
ಎಲ್ಲಾ ಹಂತದಲ್ಲಿ ವಾಸು ಸರ್ ಮೇಲಿನ ಅಭಿಮಾನ, ಗೌರವ, ಆದರ, ಸ್ನೇಹ ಬೆಳೆಯಿತಾದರೂ ಅವರು ನನ್ನ ಬಾಸು ಎನ್ನುವ ಅಳುಕು ಉಳಿದಿದ್ದು ಅವರು ಗಳಿಸಿಕೊಂಡ ಅಪಾರ ಜ್ಞಾನ, ಅನುಭವ ಅದಕ್ಕೆ ಕಾರಣ. ಅವರು ಯೋಚಿಸುವಷ್ಟು ದೃಢವಾಗಿ ನಾವು/ನಾನು ಮಕ್ಕಳ ಹಕ್ಕುಗಳ ಬಗ್ಗೆ ಯೋಚಿಸಲಾರೆವು. ಅವರು ನೀಡುವ ಅಪಾರ ಮಾಹಿತಿಯುಳ್ಳ, ಸ್ಪೂರ್ತಿದಾಯಕ ತರಬೇತಿಗಳನ್ನು ನೀಡುವುದು ನನಗೆ ಸಾಧ್ಯವಾಗಿಲ್ಲ. ಅವರ ಜೀವನೋತ್ಸಾಹ, ಅವರ ಆರೋಗ್ಯದ ಬಗ್ಗೆ ಕಾಳಜಿ, ದೊಡ್ಡವರು ಅಥವಾ ಚಿಕ್ಕವರಿರಲಿ, ಅವರು ಎಲ್ಲರೊಂದಿಗೆ ಒಡನಾಡುವುದು, ಎಲ್ಲರನ್ನೂ ಗೌರವಿಸಿ, ಅವರ ಕಲಿಕೆಗೆ ಅವಕಾಶ ನೀಡುವುದು, ಯಾರಾದರೂ CRT ಬಾಗಿಲಿಗೆ ಬಂದು ಏನಾದರೂ ಹೊಸದನ್ನು ಮಾಡೋಣ ಎಂದರೆ ಅವರಿಗೆ ಪ್ರೋತ್ಸಾಹಿಸುವುದು. ಇವೆಲ್ಲಾ ನಾನು ನನ್ನ ವಾಸು ಸರ್ ನಿಂದ ಪಡೆದ ಜೀವನಾನುಭವ, ವೃತ್ತಿ ಜೀವನದ ಕಲಿಕೆ ಮತ್ತು ನನ್ನಲ್ಲಿ ಸದಾ ತುಡಿಯುವ ಮಕ್ಕಳ ಹಕ್ಕುಗಳ ಹೋರಾಟದ ಮನೋಭಾವ.
ನನ್ನ ಬಾಸ್ ಗೆ ಈಗ 60 ತುಂಬುವ ಸಂಧರ್ಭ, ಬಹಳಷ್ಟು ಜನ ಅರವತ್ತಕ್ಕೆ ನಿವೃತ್ತರಾಗುತ್ತಾರೆ. ಆದರೆ, ನಮ್ಮ ವಾಸು ಬಾಸು ಯಾವಾಗಲೂ ಮಾಸ್. ಖಂಡಿತ ಅವರು ಹೊಸ ಇನ್ನಿಂಗ್ಸ್ ಪ್ರಾರಂಭಿಸುವ ತಯಾರಿಯಲ್ಲಿದ್ದಾರೆಂದು ನಾನು ಭಾವಿಸುತ್ತೇನೆ. ಅವರ 60 ರ ವಸಂತದ ಸಂಭ್ರಮದಲ್ಲಿ ನನ್ನ ನಾಲ್ಕು ಅಕ್ಷರದ ಶುಭಹಾರೈಕೆ ತಲುಪಿಸಲು ಅವಕಾಶ ನೀಡಿದ್ದಕ್ಕೆ ನಾನು ಧನ್ಯಳಾಗಿದ್ದೇನೆ.
ವಾಸು ಸರ್ ನಿಮ್ಮೆಲ್ಲಾ ಮಕ್ಕಳ ಹಕ್ಕುಗಳ ಕಾರ್ಯಗಳಿಗೆ, ನಮಗೆ ಸ್ಫೂರ್ತಿಯಾಗಿ, ನಮ್ಮ ಕಾರ್ಯಗಳಿಗೆ ಬೆಂಬಲಿಗರಾಗಿ, ನಮ್ಮ ಆದರ್ಶವಾಗಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು. ನಿಮ್ಮ ಚಿರ ಯೌವ್ವನದ ಚಿಲುಮೆ ನಿಮ್ಮನ್ನು ಇನ್ನೂ ಎತ್ತರಕ್ಕೆ ಬೆಳೆಯಲು, ಕರ್ನಾಟಕದ ಮಕ್ಕಳಿಗೆ ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಹಕ್ಕುಗಳು ತಲುಪಲು ಸಾಧ್ಯವಾಗಲಿ ಎಂದು ಹಾರೈಸುತ್ತೇನೆ.

ನಿಮ್ಮ ಅಭಿಮಾನಿ
ವಾಣಿ ಕಂಟ್ಲಿ





