ಮರೆಯದ ಹುಟ್ಟುಹಬ್ಬದ ಪ್ರಸಂಗ! - ನಾಗಸಿಂಹ ಜಿ. ರಾವ್

ಆಫೀಸ್ನಲ್ಲಿ ವಾಸು ಮೊದಲ ಹುಟ್ಟುಹಬ್ಬವನ್ನು ನೆನಪಿಸಿಕೊಂಡರೆ ಇಂದಿಗೂ ನಗು ಬರುತ್ತದೆ, ಆಗ CRT ಇನ್ನೂ ಬಾಲ್ಯದಲ್ಲಿತ್ತು – ಕೇವಲ ಕೆಲವೇ ವರ್ಷಗಳ ಹಳೆಯದು. ಸಿಬ್ಬಂದಿ ಕೂಡಾ ಐದೇ ಜನ: ವಾಸು, ನಾನು, ಸತೀಶ್, ಸಂಜಯ್, ಮತ್ತು ಎವರ್‌ಗ್ರೀನ್ ಎಂಥುಸಿಯಾಸ್ಟ್ ಕವಿತಾ ಮ್ಯಾಕ್ಸಿ. ಕಡಿಮೆ ಜನ, ಆದರೆ ಉತ್ಸಾಹ ತುಂಬಾ!
ವಾಸು ನನಗೆ ೧೯೮೩ರಿಂದಲೇ ಪರಿಚಯ. ಆದರೆ ಆತನ ಹುಟ್ಟುಹಬ್ಬದ ದಿನಾಂಕ ತಿಳಿದಿರಲಿಲ್ಲ. CRT ಶುರುವಾಗುವ ಮುಂಚೆ ಒಮ್ಮೆಯೂ “ಹ್ಯಾಪಿ ಬರ್ತ್ಡೇ” ಅಂತ ಹೇಳಿದ ನೆನಪೇ ಇಲ್ಲ. ಆದರೆ ಕವಿತಾ ಮ್ಯಾಕ್ಸಿ ಕೆಲಸಕ್ಕೆ ಸೇರಿ ಆರು ತಿಂಗಳು ಆದ ಮೇಲೆ ನವೆಂಬರ್ ಬಂತು. ಆಕೆಗೆ ಹುಟ್ಟುಹಬ್ಬ, ಗಿಫ್ಟ್, ಸರ್ಪ್ರೈಸ್ ಅಂದ್ರೆ ಪ್ರಾಣ! ಒಂದು ದಿನ ಆಕೆ ನಮ್ಮನ್ನೆಲ್ಲಾ ಕರೆದು, “ವಾಸು ಸರ್‌ಗೆ ಸರ್ಪ್ರೈಸ್ ಬರ್ತ್ಡೇ ಮಾಡೋಣ!” ಅಂತ ಐಡಿಯಾ ಕೊಟ್ಟಳು.
ನಮಗೆಲ್ಲಾ ಖುಷಿ ಆಯ್ತು. ಏನು ಪ್ಲಾನಿಂಗ್! ಸಂಜಯ್ ಮತ್ತು ನಾನು ಕೇಕ್ ತರೋದು. ಕವಿತಾ ಮತ್ತು ಸತೀಶ್ ಗಿಫ್ಟ್ ಆಯ್ಕೆ ಮಾಡೋದು. ಆಗ ಆಫೀಸ್‌ಗೆ ಇಂಟರ್ನ್ಶಿಪ್‌ಗೆ ಬರುತ್ತಿದ್ದ ನಾಗೇಂದ್ರ ಪ್ರಸಾದ್ ಕೂಡಾ ಸೇರಿಕೊಂಡರು. ನಾಗೇಂದ್ರ ಹಣ್ಣುಗಳ ಜವಾಬ್ದಾರಿ ತಗೊಂಡ. ಸರಿಯಾಗಿ ೧೧ ಗಂಟೆ ೧೧ ನಿಮಿಷಕ್ಕೆ ವಾಸು ಬರ್ತ್ ಡೇ!
ಒಂದು ಪೂರ್ತಿ ವಾರ ಗುಟ್ಟಾಗಿ ತಯಾರಿ ನಡೆಯಿತು. ವಾಸು ಮುಂದೆ ಯಾರೂ ಮಾತಾಡದೇ ಇದ್ದೆವು. ಆತ ಬಂದಾಗ ಎಲ್ಲರೂ “ಗುಡ್ ಮಾರ್ನಿಂಗ್ ” ಅಂತ ಮಾತ್ರ ಹೇಳಿ ಸುಮ್ಮನಾಗ್ತಿದ್ದೆವು. ಆದರೆ ಒಳಗೊಳಗೆ ಎಕ್ಸೈಟ್‌ಮೆಂಟ್ ಇತ್ತು.
11 ನೇ ತಾರೀಕು ಬಂತು. ೧೧:೧೧ಕ್ಕೆ ಸರಿಯಾಗಿ ಕೇಕ್‌ನ ಮೇಲೆ ಮೊಂಬತ್ತಿ ಹಚ್ಚಿ, ಗಿಫ್ಟ್ಗಳನ್ನು ಹಿಡ್ಕೊಂಡು, ಹಣ್ಣುಗಳ ತಟ್ಟೆಯೊಂದಿಗೆ ಗುಂಪಾಗಿ ವಾಸು ಕ್ಯಾಬಿನ್‌ಗೆ ನುಗ್ಗಿದೆವು.
“ಹ್ಯಾಪಿ ಬರ್ತ್ಡೇ ಟು ಯೂ… ಹ್ಯಾಪಿ ಬರ್ತ್ಡೇ ಟು ಯೂ… ಹ್ಯಾಪಿ ಬರ್ತ್ಡೇ ಡಿಯರ್ ವಾಸು ಸರ್…”
ಕೇಕ್ ಟೇಬಲ್ ಮೇಲೆ ಇಟ್ಟೆವು. ಗಿಫ್ಟ್ಗಳನ್ನು ನೀಡಿದೆವು.
ಆಮೇಲೆ ನಾವು ನೋಡಿದ್ದು… ಅಬ್ಬಾ! ಡಾ. ರಾಜಕುಮಾರ್ ಅವರು ಬಭ್ರುವಾಹನ ಮತ್ತು ಅರ್ಜುನನ ಪಾತ್ರಗಳಲ್ಲಿ ಶಪಥ ಮಾಡುವ ದೃಶ್ಯ!
“ಆಆಆಆಆ…!!! ಬರ್ತ್ಡೇ??? ಯಾರು ನಿಮಗೆ ಇದನ್ನು ಮಾಡಲು ಹೇಳಿದ್ದು? ನನಗೆ ಇದೆಲ್ಲಾ ಇಷ್ಟವಿಲ್ಲ! ಇಂಥಹ ಕೆಲಸಗಳು ಬೇಡ! ಈ ಕೇಕ್ ತೆಗೆದುಕೊಂಡು ಹೋಗಿ! ಗಿಫ್ಟ್ಗಳನ್ನು ವಾಪಸ್ ತಗೋಳಿ!” ವಾಸು ಕಣ್ಣು ಕೆಂಪಗಾಗಿತ್ತು. ಕೈ ಕಟ್ಟಿ ನಿಂತು ಒಂದು ಐದು ನಿಮಿಷ ಗಂಭೀರ ಉಪನ್ಯಾಸ ಬೇರೆ. ನಾವೆಲ್ಲಾ ಪೆಚ್ಚಾಗಿ ಬಿಟ್ಟು ನಿಂತೆವು. ಯಾರ ಮುಖದಲ್ಲೂ ನಗು ಇಲ್ಲ, ಮಾತಿಲ್ಲ. ಕೇಕ್ ಹಿಡ್ಕೊಂಡು ಹಿಂದೆ ಹಿಂದೆ ಸರಿದೆವು. ಎಲ್ಲರೂ ಮೌನವಾಗಿ ನಮ್ಮ ನಮ್ಮ ಸೀಟ್‌ಗೆ ಬಂದು ಕುಳಿತುಕೊಂಡೆವು. ನಾನು ಒಳಗೇ ಆಲೋಚಿಸಿದೆ. ʻವಾಸೂಗೆ ಬರ್ತ್‌ಡೇ ಆಚರಿಸುವುದು ಇಷ್ಟವಿಲ್ಲ ಅಂತ ಮೊದಲೇ ತಿಳಿದಿದ್ದರೆ ಒಳ್ಳೆಯದಾಗಿತ್ತು!ʼ ಆಫೀಸ್‌ನಲ್ಲಿ ಸಂಪೂರ್ಣ ನಿಶ್ಶಬ್ದ. ಗೋಡೆಯಲ್ಲಿರುವ ಗಡಿಯಾರದ ಟಿಕ್ ಟಿಕ್ ಶಬ್ದ ಮಾತ್ರ ಕೇಳುತ್ತಿತ್ತು.
ಹೀಗೆ ಎರಡು ಗಂಟೆ ಆಯ್ತು. ಊಟದ ಸಮಯ ಬಂತು. ವಾಸು ಕ್ಯಾಬಿನ್‌ನಿಂದ ಹೊರ ಬಂದು. ಎಲ್ಲರನ್ನೂ ಒಮ್ಮೆ ನೋಡಿ, ನಗು ಮುಖ ಮಾಡಿ, “ಬನ್ನಿ, ಕೇಕ್ ಕಟ್ ಮಾಡೋಣ” ಅಂದ. ನಾವೆಲ್ಲಾ ಆಶ್ಚರ್ಯದಿಂದ ನೋಡಿದೆವು. ವಾಸು ಕೇಕ್ ಕಟ್ ಮಾಡಿ, ಮೊದಲ ತುಂಡು ಕವಿತಾಗೆ ಕೊಟ್ಟರು. “ನೀವು ಎಲ್ಲಾ ಇಷ್ಟೊಂದು ಶ್ರಮ ಪಟ್ಟಿದ್ದೀರಿ, ಥ್ಯಾಂಕ್ಸ್” ಅಂದರು. ಆ ದಿನ ನೆನಪಿಸಿಕೊಂಡರೆ ಈಗಲೂ ನಗು ಬರುತ್ತದೆ.
ಮುಂದಿನ ವರ್ಷಗಳಲ್ಲಿ ವಾಸು ಹುಟ್ಟುಹಬ್ಬದ ದಿನ ಆತನಿಗೆ ಪ್ರಿಯವಾದ ಕಡಲೆಕಾಯಿ ಮತ್ತು ಹಣ್ಣುಗಳನ್ನು ಕೊಟ್ಟು ವಿಶ್ ಮಾಡುವ ವಾಡಿಕೆ ಪ್ರಾರಂಭವಾಗಿತ್ತು. ೨೦೦೮ರಿಂದ ಆಫೀಸಿನಲ್ಲಿ ಹಣ್ಣುಗಳನ್ನು ಕತ್ತರಿಸುವುದರೊಂದಿಗೆ ಮತ್ತೆ ಎಲ್ಲರ ಬರ್ತ್ ಡೇ ಆಚರಣೆಗಳು ಪ್ರಾರಂಭವಾಗಿತ್ತು.
- ನಾಗಸಿಂಹ ಜಿ. ರಾವ್







