vasu-blogs-2-3

ಮಗು ಮನಸ್ಸಿನ ಜಂಗಮ ಸಂಘಟಕ ವಾಸು – ಪ್ರಕಾಶ್‌ ರಾವಂದೂರು

Last Updated: February 21, 2026By

ತುಂಬ ತುಂಟ, ಗಲಾಟೆ ಮಾಡುವ ಮಗುವನ್ನು ಬಹುಮಾನದ ಆಸೆ ತೋರಿಸಿ ಚಕ್ಕಂಬಕ್ಕಳ ಹಾಕಿ ಕೂತು, ಮಾತಾಡದಂತೆ ಬಾಯಿಗೆ ಬೀಗ ಹಾಕಿಕೊಂಡು ಒಂದೈದು ನಿಮಿಷ ಸುಮ್ಮನೆ ಕೂರುವಂತೆ ಹೇಳುತ್ತೇವೆ. ಮೊದಲು ಒಪ್ಪಿಕೊಂಡು ಕೂರುವ ಮಗು ಸ್ವಲ್ಪ ಸಮಯದಲ್ಲೇ ಅತ್ತಿತ್ತ ಕಣ್ಣಾಡಿಸುತ್ತದೆ, ನಂತರ ನಮ್ಮನ್ನೇ ನೋಡಿ  ಸ್ವಲ್ಪ ನಗೆ ಸೂಸುತ್ತದೆ. ಕೊನೆಗೆ ಕಿಸಕ್ಕೆಂದು ಪೂರ್ಣ ನಗೆ ಬೀರಿ ಕೈ ಕಾಲು ಚೆಲ್ಲುತ್ತದೆ. ತುಂಬಾ ಪ್ರಿಯವಾದ ಚಾಕೋಲೇಟಿನ ಆಸೆಯೂ ಸಹ ಅದನ್ನು ಒಂದೈದು ನಿಮಿಷ ಕಟ್ಟಿಹಾಕಲು ಸಾಧ್ಯವಿಲ್ಲ. ನಮ್ಮ ವಾಸುವನ್ನು ನೋಡಿದಾಗಲೆಲ್ಲ ನನಗೆ ಇದು ನೆನಪಿಗೆ ಬರುತ್ತಿರುತ್ತದೆ. ವಾಸು ಒಬ್ಬ ಜಂಗಮ, ಸದಾ ಕ್ರಿಯಾಶೀಲನಾಗಿರುವ, ಸೃಜನಶೀಲ ವ್ಯಕ್ತಿ. ಅವನನ್ನು ಒಂದೆಡೆ ಹಿಡಿದಿಡುವುದೆಂದರೆ ಮುಷ್ಟಿಯಲ್ಲಿ ನೀರನ್ನು ಹಿಡಿದಿಟ್ಟಂತೆ.

ಮೊದಲ ಬಿ.ಎ ವ್ಯಾಸಂಗಕ್ಕೆ ಸೇರಿದ್ದಾಗಿನ ಸಣ್ಣ ಬಿಸಿಲಿನ ಒಂದು ದಿನ ಗೆಳೆಯರೊಂದಿಗೆ ಮಹಾರಾಜ ಕಾಲೇಜಿನ ಕೆಳಗಿನ ಕಾರಿಡಾರ್ನಲ್ಲಿ ನಡೆದು ಹೋಗುತ್ತಿದ್ದಾಗ ನೋಟೀಸ್ ಬೋರ್ಡಿನ ಪಕ್ಕದಲ್ಲಿ ಒಂದು ಪೋಸ್ಟರ್ ಕಂಡಿತು. “ಕಲೆ, ಸಂಗೀತ, ಸಾಹಿತ್ಯ, ನೃತ್ಯ… ಮುಂತಾದುವುಗಳಲ್ಲಿ  ಆಸಕ್ತಿಯಿರುವ ವಿದ್ಯಾರ್ಥಿಗಳು ತರಗತಿಗಳು ಮುಗಿದ ನಂತರ ಸಂಜೆ ೪.೩೦ ಗಂಟೆಗೆ ಕಾಲೇಜಿನ ಒಳ ಪ್ರಾಂಗಣದ ಮಧ್ಯೆ ಇರುವ ವೇದಿಕೆಯ ಬಳಿ ಸೇರಲು ಆಹ್ವಾನ” ಎಂದು ಬರೆದಿತ್ತು. ಕೂತೂಹಲದಿಂದಲೇ ಅಲ್ಲಿಗೆ ಹೋದಾಗ ನನ್ನಂತೆಯೇ ಆಸಕ್ತಿಯಿರುವ ಹಲವಾರು ವಿದ್ಯಾರ್ಥಿಗಳು ಅಲ್ಲಿಗೆ ಬಂದಿದ್ದರು. ಸಭೆ ಕರೆದಿದ್ದವನು ʻಪಿತಾಮಹ’ ವಾಸು (ನಾನು ಅವನನ್ನು ಕರೆಯುವುದೇ ಹೀಗೆ) ಜೊತೆಗೆ ಕೈಜೋಡಿಸಿದ್ದ ಮತ್ತೊಬ್ಬ ಹಿರಿಯ ವಿದ್ಯಾರ್ಥಿ ಎಂದರೆ ಕವಿತಾ ರತ್ನ. ನಮ್ಮ ನಲ್ಮೆಯ ‘ನೆಬೆ’ ಹುಟ್ಟಿದ್ದು ಹೀಗೆ. 

ಇದಕ್ಕಿಂತ ಸ್ವಲ್ಪ ದಿನಗಳ ಹಿಂದಿರಬೇಕು ವಾಸು ಮತ್ತು  ನಾಗಸಿಂಹ ಇಬ್ಬರೂ ಸೇರಿ  ಸೆಂಟೆನರಿ ಹಾಲ್ ಮುಂದಿನ ಹುಲ್ಲುಹಾಸಿನ ಮೇಲೆ ಬ್ರೆಕ್ಟನ ʻವೈಟಿಂಗ್ ಫಾರ್ ಗೊಡಾಟ್’ ವಸ್ತುವಿದ್ದ ನಾಟಕವನ್ನು ಅಭಿನಯಿಸಿದ್ದ ನೆನಪು.  

ವಾಸು ಎಂದ ಕೂಡಲೇ ನೆನಪಿಗೆ ಬರುವುದು ಅವನ ವಿಶಿಷ್ಟ ನಗು, ಮುಂದೆ ನಿಂತವರನ್ನು ನಗುತ್ತಾ ಮಾತನಾಡಿಸುತ್ತಲೇ ಪರಿಶೀಲಿಸುವ ಕಣ್ಣುಗಳು, ಅವನ ಚಲನಶೀಲತೆ, ಆತನ ಸಂಘಟನಾ ಸಾಮರ್ಥ್ಯ ಮತ್ತು ಎಲ್ಲಕಿಂತ ಹೆಚ್ಚಾಗಿ ʻಎಲ್ಲರನ್ನೂ ಒಳಗೊಳ್ಳುವ ವ್ಯಕ್ತಿತ್ವ’. ಮಹಾರಾಜ ಕಾಲೇಜಿಗೆ ಬರುವ ಮುಂಚೆಯೇ ವಾಸುವಿಗೆ ನಾಟಕದಲ್ಲಿ ಆಸಕ್ತಿ, ಸಂಘಟನೆಯಲ್ಲಿ ತರಬೇತಿ ಇತ್ತೆಂದು ಕಾಣುತ್ತದೆ. ಅಂತೂ ೧೯೮೫ ರಲ್ಲಿ ನಮ್ಮ ʻನೆಳಲು ಬೆಳಕು’ ಹುಟ್ಟಿತು. ಹೆಸರಾಂತ ಮಹಾರಾಜ ಕಾಲೇಜಿನ ಇತಿಹಾಸದಲ್ಲಿ ಪಠ್ಯೇತರ ಗುಂಪಾಗಿ ಹೆಸರು ಮಾಡಿದ್ದು ಕನ್ನಡದ ಪ್ರಸಿದ್ಧ ಸಾಹಿತಿಗಳನ್ನೊಳಗೊಂಡ ʻಮಿತ್ರವೃಂದ’, ನಂತರ ʻನೆಳಲು ಬೆಳಕು’. ನೆಳಲು ಬೆಳಕು ಎಂದರೆ ನಮಗೆಲ್ಲ ಏನೋ ಒಂದು ಪ್ರೀತಿ, ಹೆಮ್ಮೆ. ಅದನ್ನು ವರ್ಣಿಸುವುದು ಹೇಗೆ? ನೆಳಲು ಬೆಳಕನ್ನು ಹುಟ್ಟುಹಾಕಿದಾಗ ಅದು ಇಷ್ಟರ ಮಟ್ಟಿಗೆ ಪರಿಣಾಮ ಬೀರೀತೆಂದು ವಾಸುವೂ ಎಣಿಸಿರಲಿಲ್ಲವೇನೋ. 

ಮಹಾರಾಜಾ ಕಾಲೇಜಿನ ಆ ದಿನಗಳನ್ನು ಇಂದು ನೆನೆದಾಗ ಅನಿಸುವುದು ಅಂದು ನಮಗೆ ಕಾಲೇಜಿನೊಳಗೊಂದು ಕಾಲೇಜಿತ್ತು. ಈ ಕಾಲೇಜಿನಲ್ಲಿ ಫೀಸ್ ಇರಲಿಲ್ಲ, ಪ್ರಾಧ್ಯಾಪಕರಿರಲಿಲ್ಲ, ಪಠ್ಯವಿರಲಿಲ್ಲ – ಅದು ನೆಬೆ. ಕಾಲೇಜಿನ ಪ್ರಾಧ್ಯಾಪಕರ ಪಾಠ, ಅವರ ವ್ಯಕ್ತಿತ್ವ ಇದರ ಜೊತೆಗೇ ನಮ್ಮ ವ್ಯಕ್ತಿತ್ವವನ್ನು ನಮಗರಿವಿಲ್ಲದಂತೆಯೇ ರೂಪಿಸಿದ್ದು ನೆಬೆ ಬಳಗ. ತರಗತಿಯ ನಾಲ್ಕು ಗೋಡೆಗಳ ನಡುವೆ ಕಲಿತಿದ್ದಕ್ಕಿಂತ ಮಹಾರಾಜಾ ಕಾಲೇಜಿನ ಶತಮಾನೋತ್ಸವ ಭವನದೆದುರಿನ ಬಯಲಿನಲ್ಲಿ ಕಲಿತದ್ದೇ ಹೆಚ್ಚು. 

ಯಾರನ್ನೂ ಕಡೆಗಣಿಸದೆ ಎಲ್ಲರನ್ನೂ ಒಳಗೊಳ್ಳುತ್ತಾ, ಪ್ರೋತ್ಸಾಹಿಸುತ್ತಾ ಎಲ್ಲರನ್ನೂ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ತೊಡಗಿಸಿಕೊಳ್ಳುತ್ತಿದ್ದ ಅವನ ಚತುರತೆ, ಯಾವುದೇ ಕೆಲಸವಾಗಲಿ ಅದನ್ನು ಸರಿಯಾಗಿ ಯೋಜಿಸುತ್ತಾ, ಎಲ್ಲರಿಗೂ ಕೆಲಸಗಳನ್ನು ಹಂಚುತ್ತಾ, ಉದ್ದೇಶಿತ ಕಾರ್ಯವನ್ನು ಸರಿಯಾಗಿ ಕಾರ್ಯರೂಪಕ್ಕೆ ತರುತ್ತಿದ್ದುದು ವಾಸುವಿನ ವೈಶಿಷ್ಟ್ಯ.  ನೆಬೆಯ ನೆನಪುಗಳು ಒಂದೇ ಎರಡೇ… ಹಾಡುತ್ತ, ನಟಿಸುತ್ತ, ಕುಣಿಯುತ್ತ, ಕಿರುಚುತ್ತ, ನೆನಪಿನಂಗಳದಿಂದ ಬೊಗೆದಷ್ಟೂ ಸಾವಿರ ಸುಂದರ ನೆನೆಪುಗಳೇ… 

ಹದಿನೆಂಟರ ಹರೆಯ ನಾಜೂಕಿನದು. ವ್ಯಕಿತ್ವ ರೂಪುಗೊಳ್ಳುವುದೂ ಈ ಸಮಯದಲ್ಲೇ. ಪಠ್ಯೇತರ ಚಟುವಟಿಕೆಗಳಿಂದ ನಮ್ಮಗಳೆಲ್ಲರ  ವ್ಯಕ್ತಿತ್ವವನ್ನು  ರೂಪಿಸುವುದಕ್ಕೆ ಬುನಾದಿ ಹಾಕಿದ್ದು ನೆಬೆ ಬಳಗವೇ. ನೆಬ್ಬಿಗರೆಲ್ಲರೂ ಇಂದು ಅವರವರ ಕ್ಕ್ಷೇತ್ರಗಳಲ್ಲಿ  ಸಾಧಕರೇ. ಸಮಾಜ ತುಚ್ಛೀಕರಿಸುವ ವರ್ಗಕ್ಕೆ ಬೆಂಬಲವಾಗಿ ನಿಂತ ಪರಶು ಹುಟ್ಟುಹಾಕಿರುವ ʻಒಡನಾಡಿ’, ಯುವಮನಸ್ಸುಗಳನ್ನು ಸೃಜನಶೀಲವಾಗಿ  ರೂಪಿಸುತ್ತಾ ಹೋಗುತ್ತಿರುವ ಪ್ರಸಾದಿಯ ʻನಿರಂತರ’, ಮಕ್ಕಳ ಹಕ್ಕುಗಳಿಗಾಗಿ ಹೋರಾಡುವ ವಾಸು ಆರಂಭಿಸಿರುವ ʻಸಿಆರ್‌ಟಿ’,  ನಿರ್ಗತಿಕರಿಗೆ, ನಿರ್ಬಲರಿಗೆ ಆಸರೆಯಾಗಿ ದುಡಿಯುತ್ತಿರುವ ವರ್ಷರವರ ʻಕ್ರೆಡಿಟ್ ಐ’,  ಕನ್ನಡತನ, ಕನ್ನಡದ ಮನಸ್ಸನ್ನು ರೂಪಿಸುವ ದೊಡ್ಡ ಕನಸಿನೊಂದಿಗೆ ರೂಪುಗೊಂಡ ಜಯರಾಮನ ʻಸಮಾಜಮುಖಿ’, ತಾವು ಆಯ್ಕೆ ಮಾಡಿಕೊಂಡ ಕ್ಷೇತ್ರಗಳಲ್ಲೇ ವೈಯ್ಯಕ್ತಿಕವಾಗಿ ತಮ್ಮದೇ ಛಾಪು ಮೂಡಿಸುತ್ತಿರುವ ಅನೇಕ ಹೆಸರಾಂತ  ಸ್ನೇಹಿತರು… ಹೀಗೆ ಇವರೆಲ್ಲರ ಕನಸುಗಳಿಗೆ ನೀರೆರೆದದ್ದು, ಅವರ ಬೇರುಗಳನ್ನು ಗಟ್ಟಿಗೊಳಿಸಿದ್ದು ʻನೆಬೆ’. 

ನೆಬೆ ನಮ್ಮೆಲ್ಲರಿಗೂ  ಕೊಟ್ಟದ್ದೇನು? ʻನಿಷ್ಕಲ್ಮಶವಾದ ಸ್ನೇಹ’. ನೆಬೆ ನಮಗೆ ಹೇಳಿದ್ದೇನು? ʻವ್ಯಕ್ತಿಗಿಂತ ಸಮಾಜ ಮೊದಲು’   ಅಂತಲೇ ʻನೆಬೆ’ ಎಂದಾಗ ನನಗೆ ಮೊದಲಿಗೆ ನೆನಪು ಬರುವುದು ವಾಸು. ಅದಕ್ಕೇ ಅವನಿಗೆ  ನಾನು ʻಪಿತಾಮಹ’ನೆನ್ನುವುದು.  ಥ್ಯಾಂಕ್ಯು ವಾಸು.  

ಮಕ್ಕಳ ಕ್ಷೇತ್ರದಲ್ಲಿ ವಾಸುವಿನ ದುಡಿಮೆ, ಸಾಧನೆ ಅಪಾರ. ಹೋರಾಟ, ಬರವಣಿಗೆ, ದಣಿವರಿಯದ ಓಡಾಟ… ಆದರೆ ನಲ್ವತ್ತು ವರ್ಷಗಳ ನಂತರವೂ ನನಗೆ ಕಾಣುವುದು ಅದೇ ವಾಸು. ಯಾವ ಜಂಬ ಆಡಂಬರಗಳಿಲ್ಲ, ಬಿಗುಮಾನವಿಲ್ಲ, ಅಹಂ ಇಲ್ಲ. ಅದೇ ನಗು, ಅದೇ ಪ್ರೀತಿ, ಅದೇ ವಿಶ್ವಾಸ, ಅದೇ ಕಾಳಜಿ, ಅದೇ ಚೈತನ್ಯ. ವಾಸುವಿಗೆ ಅರವತ್ತು ವಸಂತಗಳಿರಲಿ, ತೊಂಬತ್ತಾದರೂ ಅದು ದೇಹಕ್ಕೇ ಹೊರತು ಮನಸ್ಸಿಗಲ್ಲ. ಆದ್ದರಿಂದ ಇತ್ತೀಚೆಗೆ ಅವನು ಲಕ್ಷ್ಮಿಯವರೊಂದಿಗೆ ಮನೆಗೆ ಬಂದಿದ್ದಾಗ ಅವನನ್ನು ಮಾತನಾಡಲು ಬಿಟ್ಟು ಪ್ರೀತಿ, ಕೌತುಕಗಳಿಂದ ನಾನು ಅವನನ್ನೇ ನೋಡುತ್ತ ಕುಳಿತಿದ್ದೆ.

  • ಪ್ರಕಾಶ್‌ ರಾವಂದೂರು ಪ್ರಸ್ತುತ ಮೈಸೂರಿನಲ್ಲಿ ಉದ್ಯಮಿ.