ಮಕ್ಕಳ ಹಕ್ಕುಗಳ ಮಾಹಿತಿಯ ಕಣಜ-ವಾಸು ಸರ್ – ವೆಂಕಟೇಶ್ ಟಿ.

ಎಲ್ಲ ಹಕ್ಕುಗಳು ಎಲ್ಲ ಮಕ್ಕಳಿಗೂ ಸಿಗಬೇಕು ಎಂಬ ಧ್ಯೇಯವಾಕ್ಯದೊಂದಿಗೆ ಚೈಲ್ಡ್ ರೈಟ್ಸ್ ಟ್ರಸ್ಟ್ ಸಂಸ್ಥೆಯು ಮಕ್ಕಳ ಕ್ಷೇತ್ರದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಪರಿಚಯವಿದೆ. ಈ ಸಂಸ್ಥೆಗೆ ಹೆಗಲು ನೀಡಿ ಸುಮಾರು ೨೫ ವರ್ಷಗಳಿಂದ ಮುನ್ನಡೆಸಿಕೊಂಡು ಬರುವುದು ಸಾಮಾನ್ಯವಲ್ಲ. ಇದು ಒಂದು ಸಾಧನೆಯೇ ಸರಿ. ಚೈಲ್ಡ್ ರೈಟ್ಸ್ ಟ್ರಸ್ಟ್ ನ ಕಾರ್ಯಕಾರಿ ನಿರ್ದೇಶಕರಾದ ಶ್ರೀ ವಾಸುದೇವ ಶರ್ಮಾರವರಿಗೆ ಅರವತ್ತರ ಸಂವತ್ಸರದ ಶುಭಾಶಯಗಳು.
ನಾನು ಜೀತ ಪದ್ಧತಿ ನಿರ್ಮೂಲನೆಗಾಗಿ ಶ್ರಮಿಸುತ್ತಿದ್ದ ಜೀವಿಕ-ಜೀತ ವಿಮುಕ್ತಿ ಕರ್ನಾಟಕ ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದಾಗ, ವಾಸು ಸರ್ ಕ್ರೈ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ೧೯೯೭ ನೇ ಇಸವಿಯಲ್ಲಿ ಆನೇಕಲ್ ನಲ್ಲಿ ನಡೆಯುತ್ತಿದ್ದ ಬ್ರಿಡ್ಜ್ ಕೋರ್ಸ ವಸತಿ ಶಾಲೆಗೆ ಭೇಟಿ ನೀಡಿದ್ದರು. ಅಂದು ನೋಡಿದಾಗ ಅವರ ಮಾತು, ಮಾಹಿತಿಗಳ ವಿವರ, ದಾಖಲಾತಿಗಳ ಪರಿಶೀಲನೆ ಗಮನಿಸುತ್ತಿದ್ದ ನನಗೆ ಇವರು ಬಹಳ ನೇರ, ನಿಷ್ಠುರ ಮತ್ತು ಕೆಲಸದ ವಿಷಯದಲ್ಲಿ ರಾಜಿಯಾಗದ ವ್ಯಕ್ತಿತ್ವವೆಂದು ಅರ್ಥಮಾಡಿಕೊಂಡೆ. ಆ ನಂತರ ವಾಸು ಸರ್ ಸಿಆರ್‌ಟಿ ಮೂಲಕ ಆಯೋಜಿಸುತ್ತಿದ್ದ ಮಕ್ಕಳ ಹಕ್ಕುಗಳ ಕಾರ್ಯಾಗಾರ ತರಬೇತಿಗಳಲ್ಲಿ ಭಾಗವಹಿಸುತ್ತಿದ್ದೆ. ಹೆಚ್ಚು ಪರಿಚಯವಾಗಿದ್ದು ಸಿ ಎ ಸಿ ಎಲ್ ಕೆ ಸಭೆಗಳಲ್ಲಿ. ಮಕ್ಕಳ ಪರವಾಗಿ ಮಾತನಾಡುವುದನ್ನು ಕೇಳಿ ಅವರಿಗಿದ್ದ ಬದ್ಧತೆ ಮತ್ತು ಕಾಳಜಿಯಿಂದ ನಾನು ಹೆಚ್ಚು ಆಕರ್ಷಿತನಾದೆ.
ಕೆಲವು ಕಾರಣಾಂತರಗಳಿಂದ ಜೀವಿಕ ಸಂಘಟನೆ ಕೆಲಸ ಬಿಟ್ಟಿದ್ದೆ, ಆಗಾಗ ಮಕ್ಕಳ ಹಕ್ಕುಗಳ ಸಭೆ ಸಮಾರಂಭಗಳಲ್ಲಿ ಭೇಟಿಯಾಗುತ್ತಿದ್ದೆ. ವಾಸು ಸರ್ ರವರೊಂದಿಗೆ ಕೆಲಸ ಮಾಡುವಂತ ಸುವರ್ಣವಕಾಶ ಒದಗಿಬಂದಿತ್ತು. ೨೦೧೭-೨೦೧೮ರಿಂದ ಪ್ರಾರಂಭವಾದ ಯೋಜನೆ ನಿಷೇಧಿತ ದೇವದಾಸಿ ಪದ್ದತಿಗೆ ಒಳಗಾಗಿದ್ದ ಕುಟುಂಬದ ಮಕ್ಕಳನ್ನು ಸಶಕ್ತೀಕರಣಗೊಳಿಸುವ ಅವಕಾಶ ಸಿಕ್ಕಿದ್ದು ಬಹಳ ಸಂತೊಷದ ಸಂಗತಿಯಾಗಿತ್ತು.
ವಾಸು ಸರ್‌ರವರೊಂದಿಗೆ ಕೆಲಸ ಮಾಡುವಾಗ ನಾನು ಸಾಕಷ್ಟು ಹೊಸ ವಿಚಾರಗಳನ್ನು ಕಲಿಯಲು ಮತ್ತು ನನ್ನಲ್ಲಿ ರೂಢಿಸಿಕೊಳ್ಳಲು ಕಾರಣಕರ್ತರಾಗಿದ್ದಾರೆ. ಅದರಲ್ಲಿ ಮುಖ್ಯವಾದ ಕೆಲವೊಂದನ್ನು ಹಂಚಿಕೊಳ್ಳಲು ಹೆಮ್ಮೆ ಅನಿಸುತ್ತದೆ.
ನಾನು ಜೀವಿಕದಲ್ಲಿ ಕೆಲಸ ಮಾಡುತ್ತಿದ್ದಾಗ ಜೀತ ಪದ್ದತಿ, ಬಾಲಕಾರ್ಮಿಕ ಪದ್ದತಿ ಕುರಿತು ಸ್ವಲ್ಪ ಮಾಹಿತಿ ತಿಳಿದಿದ್ದೆ. ಆದರೆ ಸಿ ಆರ್ ಟಿ ಗೆ ಸೇರಿದ ನಂತರವೇ ಮಕ್ಕಳ ಹಕ್ಕುಗಳ ಕುರಿತು ಹೆಚ್ಚೆಚ್ಚು ತಿಳಿದುಕೊಳ್ಳಲು ಪ್ರಾರಂಭಿಸಿದೆ. ನಾನು ಪಿಯುಸಿಯಲ್ಲಿ ಓದುವಾಗ ಕನ್ನಡ ಮತ್ತು ಇಂಗ್ಲಿಷ್ ಟೈಪಿಂಗ್ ಕಲಿತಿದ್ದೆ. ಆದರೆ ಕಂಪ್ಯೂಟರ್ ನಲ್ಲಿ ಟೈಪ್ ಮಾಡುವುದು ಕಲಿಯಲು ಕಾರಣ ವಾಸು ಸರ್. ಸಿಆರ್‌ಟಿ ಗೆ ಬಂದ ಮೊದಲ ಒಂದು ತಾಸು ಕನ್ನಡ ಟೈಪ್ ಮಾಡಿ ವಾಸು ಸರ್ ಗೆ ತೋರಿಸಬೇಕಾಗಿತ್ತು ಆ ನಂತರ ಪತ್ರ ಬರೆಯುವುದು ಹೇಗೆ, ಅಧಿಕಾರಿಗಳನ್ನು ಭೇಟಿ ಮಾಡಿ ಅವರೊಂದಿಗೆ ಹೇಗೆ ಮಾತನಾಡಬೇಕು ಎಂಬುದೆಲ್ಲ ಕಲಿಯಲು ಮಾರ್ಗದರ್ಶನ ಮಾಡುತ್ತಿದ್ದರು.
ಚೈಲ್ಡ್ ರೈಟ್ಸ್ ಟ್ರಸ್ಟ್ ನಿಂದ ಆಯೋಜಿಸುತ್ತಿದ್ದ ಸಭೆ, ತರಬೇತಿಗಳಿಗೆ ಅಧಿಕಾರಿಗಳನ್ನು ಆಹ್ವಾನಿಸುವ ಪತ್ರ, ಆಹ್ವಾನ ಪತ್ರಿಕೆ ಮತ್ತು ಕಾರ್ಯಕ್ರಮದ ಶೆಡ್ಯೊಲ್ ಹೇಗಿರಬೇಕು ಹಾಗೂ ಪೂರ್ವ ತಯಾರಿ ಮಾಡಿಕೊಳ್ಳುವ ಮೂಲಕ ಒಂದು ಕಾರ್ಯಕ್ರಮ, ತರಬೇತಿಯನ್ನು ಯಶಸ್ವಿಯಾಗಿ ನಡೆಸುವುದು ತಿಳಿದುಕೊಂಡೆ. ಜಿಲ್ಲೆ ಮತ್ತು ರಾಜ್ಯ ಮಟ್ಟದ ಹಲವಾರು ಸಭೆ, ತರಬೇತಿಗಳನ್ನು ಆಯೋಜಿಸುವುದು ಕರಗತ ಮಾಡಿಕೊಂಡೆ.
ತರಬೇತಿಗಳಲ್ಲಿ ಮಾತನಾಡಲು ಹಿಂಜರಿಯುತ್ತಿದ್ದಾಗ ವಿಷಯದ ಕುರಿತು ನಮಗೆ ಸ್ಪಷ್ಟ ಮಾಹಿತಿ ನೀಡಿ, ನಾವೇ ತರಬೇತಿ ನಡೆಸಲು ನಮಗೆ ಪ್ರೋತ್ಸಾಹ ನೀಡಿ ಧೈರ್ಯ ತುಂಬಿದವರು ವಾಸು ಸರ್. ಇಂದು ಸಂಪನ್ಮೂಲ ವ್ಯಕ್ತಿಯಾಗಿ ನಾನು ಸಾಕಷ್ಟು ತರಬೇತಿಗಳನ್ನು ನಡೆಸುತ್ತಿದ್ದೇನೆ.
ನನಗೆ ನ್ಯೂಸ್ ಪತ್ರಿಕೆ, ಪುಸ್ತಕ ಓದುವ ಹವ್ಯಾಸ ಬಹಳ ಕಡಿಮೆಯೇ, ಮಕ್ಕಳ ಜೊತೆ, ಸಮುದಾಯದ ಅಭಿವೃದ್ಧಿಗೆ ಕೆಲಸ ಮಾಡುವ ನಾವು ಪ್ರತಿ ದಿನ ಅಪ್ ಡೇಟ್ ಆಗಬೇಕು ಹೊಸ ಹೊಸ ವಿಷಯ ತಿಳಿದಾಗಲೇ ನಮ್ಮ ಮಾತಿಗೆ ಬೆಲೆ ಜಾಸ್ತಿ ಎಂದು ತಿಳಿದುಕೊಂಡೆ.
ಮಕ್ಕಳ ಸಮಸ್ಯೆಗಳ ಕುರಿತು ಒಂದೊಂದು ಆರ್ಟಿಕಲ್ ಬರೆಯಲು ಹೇಳುತ್ತಿದ್ದರೂ ನಾವು ಮನಸ್ಸು ಮಾಡುತ್ತಿರಲಿಲ್ಲ ನಮ್ಮಿಂದ ಆಗುವುದಿಲ್ಲ ಎಂದು ತಪ್ಪಿಸಿಕೊಳ್ಳುತ್ತಿದ್ದೆವು. ಆದರೆ ಮರು ದಿನ ಊಟದ ಸಮಯದಲ್ಲಿ ಕೇಳುತ್ತಿದ್ದರು, ಹೊಸ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದರು. ಎಲ್ಲರೂ ಮಾತನಾಡಲು ಅವಕಾಶ ನೀಡುತ್ತಿದ್ದರು.
ಮಕ್ಕಳ ಹಕ್ಕುಗಳ ಕುರಿತು ವಾಸು ಸರ್ ಬರೆದಿರುವ ಕೃತಿಗಳು ಇಂದು ಮಕ್ಕಳ ಕ್ಷೇತ್ರದಲ್ಲಿ ಕೆಲಸ ಮಾಡುವ ಕಾರ್ಯಕರ್ತರಿಗೆ, ಇಲಾಖಾ ಅಧಿಕಾರಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಬಹಳ ಉಪಯೋಗವಾಗುತ್ತಿವೆ.
ಚೈಲ್ಡ್ ರೈಟ್ಸ್ ಟ್ರಸ್ಟ್ ಹೆಸರು ಹೇಳಿದರೆ ಸಾಕು, ಹಲವು ಇಲಾಖೆಗಳಲ್ಲಿ ನಮಗೆ ಒಂದು ರೀತಿಯ ರಾಜಮರ್ಯಾದೆ ಸಿಗುತಿತ್ತು. ಕಾರಣ ಅವರಿಗೆ ವಾಸು ಸರ್ ಪರಿಚಯವಿದ್ದುದರಿಂದ.
ವಾಸು ಸರ್ ರವರೊಂದಿಗೆ ರಾಜ್ಯದ ಬಹುತೇಕ ಜಿಲ್ಲೆಗಳನ್ನು ಸುತ್ತಾಡಿದ್ದೇನೆ. ಆ ಸಂದರ್ಭಗಳಲ್ಲಿ ಮಕ್ಕಳ ಹಕ್ಕುಗಳು, ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳು, ಅದಕ್ಕೆ ಪರಿಹಾರ ಮಾರ್ಗೋಪಾಯಗಳ ಕುರಿತೇ ಹೆಚ್ಚು ಮಾತನಾಡುತ್ತಿದ್ದೆವು.
ಟಿಡಿಎಚ್ ಎನ್ ಎಲ್ ನವರ ಆರ್ಥಿಕ ಸಹಾಯದೊಂದಿಗೆ ಹದಿಹರೆಯದ ಮಕ್ಕಳಿಗೆ ಜೀವನ ಕೌಶಲ್ಯಗಳು, ಬಾಲ್ಯವಿವಾಹ ನಿಷೇಧ, ದೇವದಾಸಿ ಪದ್ಧತಿ ನಿರ್ಮೂಲನೆ ಮತ್ತು ಕಾನೂನು ಸ್ವಯಂಸೇವಕರಿಗೆ ಮಕ್ಕಳ ಹಕ್ಕುಗಳ ಕಾಯಿದೆಗಳ ಕುರಿತು ಪುಸ್ತಕ ಬರವಣಿಗೆ ಮತ್ತು ಮುದ್ರಣದ ಕೆಲಸದಲ್ಲಿ ನಾನು ಭಾಗಿಯಾಗಿದ್ದು ನನಗೆ ಬಹಳ ಖುಷಿ ಕೊಟ್ಟಿದೆ.
ಸಿಆರ್ ಟಿ ಗೆ ಯಾರೇ ಬಂದರೂ ಬಹಳ ಪ್ರೀತಿಯಿಂದ ಮಾತನಾಡಿ, ಚಹಾ, ಊಟದ ಜೊತೆಗೆ ಒಂದು ಪುಸ್ತಕ ಕೊಟ್ಟು ಕಳುಹಿಸುವುದು ವಾಸು ಸರ್ ವಾಡಿಕೆ. ಈ ತರದ ಔದಾರ್ಯತೆ ಬೇರೆಡೆ ದೊರೆಯುವುದು ಬಹಳ ವಿರಳ.
ಆಸಕ್ತಿಯಿಂದ ಕಲಿಯಲು ಬಂದವರಿಗೆ ವಾಸು ಸರ್, ನಾಗಸಿಂಹ ಸರ್ ಮತ್ತು ಸತೀಶ್ ಸರ್ ಅಷ್ಟೇ ಅಕ್ಕರೆಯಿಂದ ಕಲಿಸಿಕೊಟ್ಟಿದ್ದಾರೆ. ಮಕ್ಕಳ ಹಕ್ಕುಗಳನ್ನು ಸಾಕಾರಗೊಳಿಸಲು ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳೊಂದಿಗೆ ತಮ್ಮ ನಿರಂತರ ಸಂಪರ್ಕ ಹೀಗೆ ಮುಂದುವರಿಯಲಿ, ಎಲ್ಲೆಡೆ ಮಕ್ಕಳ ಸ್ನೇಹಿ ವಾತಾವರಣ ಸೃಷ್ಠಿಯಾಗಿ, ಎಲ್ಲಾ ಹಿರಿಯರು ಮಕ್ಕಳ ಅಭಿಪ್ರಾಯಗಳಿಗೆ ಮನ್ನಣೆ ಸಿಗಲಿ. ಈ ರೀತಿಯ ಕೆಲಸಗಳಿಗೆ ಸದಾ ತಮ್ಮೊಂದಿಗೆ ಇರುತ್ತೇವೆ ಸರ್. ಅರವತ್ತರ ಸಂವತ್ಸರದ ಶುಭಾಶಯಗಳು! ನೆಮ್ಮದಿ, ಸಂತೋಷ ಮತ್ತು ಉತ್ತಮ ಆರೋಗ್ಯ ಸಿಗಲೆಂದು ಹಾರೈಸುತ್ತೇನೆ.

- ವೆಂಕಟೇಶ್ ಟಿ., ಕೇರ್





