ಮಕ್ಕಳ ಹಕ್ಕುಗಳ ಗ್ರಾಮಸಭೆಯ ಜನಕನಿಗೆ 60ರ ಸಂಭ್ರಮ: ಸುಮನ ಮತ್ತು ಗೌತಮ್‌

Last Updated: February 21, 2026By

ಮಕ್ಕಳ ಹಕ್ಕುಗಳ ಗ್ರಾಮಸಭೆಯ ಪರಿಕಲ್ಪನೆಯನ್ನು ಕೊಟ್ಟ ಮಕ್ಕಳ ಹಕ್ಕುಗಳ ಹರಿಕಾರ

ಗೌರವಾನ್ವಿತ ಹಾಗೂ ಪ್ರೀತಿಯ ವಾಸು ಸರ್‌,

ಅಂಕಿಗಳಲ್ಲಿ ೬೦ ತಲುಪಿದ ನಿಮಗೆ ೬೦ರ ಜನುಮ ದಿನದ ಶುಭಾಶಯಗಳು.

ಜೋರಾಗಿ ನಗು ಬಂತಾ ಸರ್ ಈ ನಗು ಸದಾ ಹೀಗೆ ಇರಲಿ, ಕೆನ್ನೆ ಮೇಲೆ ಗುಳಿ ಬರುವಷ್ಟೂ ನಗು.

ನೀವು ಮಕ್ಕಳ ಹಕ್ಕುಗಳ ಬೆನ್ನು ಹತ್ತಿದ ರೀತಿ ಹಾಗೂ ನಿಮ್ಮ ಬರಹಗಳ ಆಸ್ವಾದಕಿ ಮಾತ್ರ ಆಗಿದ್ದ ನಾನು, ನಿಮ್ಮನ್ನು ಮತ್ತು ಲಕ್ಷ್ಮಿ ಮೇಡಂ ಅವರನ್ನು ಹತ್ತಿರದಿಂದ ಕಂಡ ನಂತರ ನಿಮ್ಮ ಬದುಕು ಮತ್ತು ಬರಹ ಎರಡೂ ನಮಗೆ ಸ್ಪೂರ್ತಿ. ಯಾಕೆಂದರೆ ನಿಮ್ಮ ಬರಹದಲ್ಲಿ ನಿಮ್ಮ ಬದುಕು ಸಹ ಅಂತರ್ಗತ.

  • “ಮಕ್ಕಳು ನಮ್ಮಯ ಭಾಗ್ಯ” ಎಂದು ಬರೆದ ನಿಮ್ಮ ಹಾಡು ನಮ್ಮ ರಾಜ್ಯದಲ್ಲಿ ಮಕ್ಕಳ ಹಕ್ಕುಗಳ ನಾಡಗೀತೆ‌!
  • ಮಕ್ಕಳ ಹಕ್ಕುಗಳ ಗ್ರಾಮಸಭೆಯ ಪರಿಕಲ್ಪನೆಯನ್ನು ರಾಜ್ಯಕ್ಕೆ ಕೊಟ್ಟ ಮಕ್ಕಳ ಗ್ರಾಮಸಭೆಯ ಕ್ರಿಯೇಟರ್.
  • ಕಿಂಚಿತ್ತೂ ಗರ್ವವಿಲ್ಲದ, ಗುಳಿ ಕೆನ್ನೆ ನಗುವಲ್ಲೇ ಸಂಸ್ಥೆ ಮತ್ತು ಸಮಾಜವನ್ನು ಮುನ್ನಡೆಸುವ ಮಾಸ್ಟರ್.
  • ಒಂದೇ ಸಮಯದಲ್ಲಿ ಎರಡು ಮೂರು ಟಾಸ್ಕ್‌ಗಳನ್ನು ಮಾಡುವ ಸಾಮರ್ಥ್ಯ ಇರುವ ಮಲ್ಟಿಟಾಸ್ಕರ್.
  • ಮಕ್ಕಳ ಹಕ್ಕುಗಳ ಕ್ಷೇತ್ರವನ್ನು ಬೆನ್ನು ಹತ್ತಿರುವ ನಮಗೆ ನೀವು ಹೆದ್ದಾರಿ.

ಅಷ್ಟಕ್ಕೂ ಮಕ್ಕಳ ಕ್ಷೇತ್ರದಲ್ಲಿ ಇಷ್ಟು ಆಳ ಮತ್ತು ಅಗಲವನ್ನು ಕಂಡುಕೊಳ್ಳಲು ನಿಮಗೆ ಹೇಗೆ ಸಾಧ್ಯವಾಯಿತು?

ನೀವು ವಾಸುನಾ… ವಾಸ್ಕೋಡಿಗಾಮಾನಾ…?!!

ನೀವು ಕರ್ನಾಟಕ ಸರ್ಕಾರಕ್ಕೆ ಕೊಟ್ಟ ಮಕ್ಕಳ ಹಕ್ಕುಗಳ ಗ್ರಾಮಸಭೆಯ ಮಾದರಿ ಇಂದು ಲಕ್ಷಾಂತರ ಮಕ್ಕಳ ಭಾಗವಹಿಸುವ ಹಕ್ಕನ್ನು ಎತ್ತಿ ಹಿಡಿದಿದ್ದು ಮಾತ್ರವಲ್ಲ, ಅವರ ಸಮಸ್ಯೆಗಳನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸಮುದಾಯದೆದುರು ಎದ್ದು ನಿಂತು ಧೈರ್ಯವಾಗಿ ಕೇಳಿ ಪರಿಹರಿಸಿಕೊಳ್ಳುವ ವೇದಿಕೆಯಾಗಿದೆ. ನಿಮ್ಮದೇ ಹಾಡಿನ ಸಾಲಿನಂತೆ,  “ಅವರ ಮಾತಿಗೂ ದನಿ ಬಂದಿದೆ”.

ಮಕ್ಕಳ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ನಿಮ್ಮೊಳಗೊಂದು ಮಗುವನ್ನು ಸಹ ನಾವು ಕಂಡಿದ್ದೇವೆ ಹೊಸದನ್ನು ಕಂಡರೆ ಕುತೂಹಲ, ಪ್ರತಿಯೊಂದನ್ನು ಆಳವಾಗಿ ತಿಳಿದುಕೊಳ್ಳುವ ಬಯಕೆ, ಪ್ರತಿಯೊಂದರಲ್ಲೂ ಒಂದು ಕಥೆಯನ್ನು ಹುಡುಕುವ ಪತ್ತೆದಾರಿತನ, ಎಲ್ಲವನ್ನೂ ವಿಭಿನ್ನವಾದ ದೃಷ್ಟಿಕೋನದಲ್ಲಿ ನೋಡುವ ಸೂಕ್ಷ್ಮತೆ, 

ಅಂದು “ಕಲ್ಪನೆಯಿಂದ ಸಾಧ್ಯತೆಯೆಡೆಗೆ ಮಕ್ಕಳ ಹಕ್ಕುಗಳು” ಕಾರ್ಯಗಾರಕ್ಕೆ ಹಾಸನದ ಪಡುವಲಹಿಪ್ಪೆಗೆ ಬಂದಾಗ ದಾರಿಯಲ್ಲಿ ದೊಡ್ಡ ಕುರಿ ಹಿಂಡನ್ನು ಬೆರಗಿನ ಕಣ್ಗಳಲ್ಲಿ ನೋಡುತ್ತಾ ಪ್ರೊಫೆಷನಲ್‌ ಪೋಟೋಗ್ರಫರ್‌ ತರ ಫೋಟೋ ತೆಗೆಯುತ್ತಾ ರಸ್ತೆ ಮದ್ಯೆ ಕಳೆದೋಗಿದ್ದು ನಿಮಗೆ ನೆನಪಿದೆಯಾ ಸರ್? ನಿಮಗೆ ಗೊತ್ತಾ ಇಂತಹವನ್ನೆಲ್ಲಾ ನಾನೂ ಮಾಡುತ್ತಿರುತ್ತೇನೆ ಆಗ ನಿಮ್ಮ ನೆನಪಾಗುತ್ತಿರುತ್ತದೆ.

ಈ ಬರಹದ ನೆಪದಲ್ಲಿ ನಾನು ಮತ್ತು ಗೌತಮ್‌ ಇಬ್ಬರೂ ಒಂದು ವಿಷಯ ಹೇಳೋದಿದೆ

ನೀವು ನಮ್ಮೂರಿಗೆ ಬಂದು ನಮ್ಮ ಕನಸಿನ ದಾರಿಯನ್ನು, ಅಂದರೆ ಸಂಸ್ಥೆಯ ಕಛೇರಿಯ ಉದ್ಘಾಟನೆಯನ್ನು ನಡೆಸಿಕೊಟ್ಟಿದ್ದು. ಅದೊಂದು ಮರೆಯಾಲಾಗದ ಕ್ಷಣ. ಜೊತೆಗೆ ಲಕ್ಷೀ ಮೇಡಂ, ನೀವು ಮತ್ತು ಅಜ್ಜಿ ನಾವೆಲ್ಲ ಒಟ್ಟಿಗೆ ಕಳೆದ ಸಮಯ, ಮಾತುಗಳು, ಮಾಹಿತಿಗಳು ಒಂದಾ ಎರಡಾ ನಿಮ್ಮ ಕ್ಯಾಮೆರಾ ಮುಚ್ಚಳ ನಮ್ಮ ಕಾಫಿ ಪಲ್ಪರ್ನಲ್ಲಿ ಬಿದ್ದು ಸಿಕ್ಕದೇ ಹೋದದ್ದು ನೆನಪಿದೆಯಾ ಸರ್…?

ಇಷ್ಟೆಲ್ಲದರ ನಡುವೆ ನೀವು ಬೆಂಗಳೂರಿನ ಕಡೆಗೆ ಮುಖ ಮಾಡಿ ಹೊರಟಾಗ, ಮತ್ತಷ್ಟೂ ದಿನ ಇರಬೇಕಿತ್ತು ಅಂತ ಅಂದುಕೊಂಡೆವು. ನೀವು ಹೊರಟು ನಿಂತು ಗೌತಮ್‌ಗೆ ಕೊಟ್ಟ ಆಪ್ತ ಅಪ್ಪುಗೆ, ನಂತರ ನೀವೆಲ್ಲಾ ಕಾರು ಹತ್ತಿ ಕುಳಿತಾಗ ನಿಮ್ಮೆಲ್ಲರ ಕಣ್ಣಲ್ಲಿದ್ದ ಪ್ರೀತಿ, ಗೌತಮ್‌ ಮತ್ತು ನನ್ನ ಒದ್ದೆಯಾದ ಕಣ್ಣುಗಳಲ್ಲಿ ನೀವು ಮಿನುಗುತ್ತ ಕೈಬೀಸಿ ಹೊರಟ್ಟಿದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ!! ……. Itʼs unforgettable and unexplainable.

ಹಾಗೇ, ಏಜ್‌ ಇಸ್‌ ಜಸ್ಟ್‌ ಎ ನಂಬರ್ ಅಂತಾರೆ ಅಂತ ಅನ್ಕೊಂಡು ಸುಮ್ಮನಿದ್ದು ಬಿಡಬೇಡಿ. ನಿಮ್ಮ ದೇಹ ಮತ್ತು ಮನಸ್ಸು ಕೇಳುವಷ್ಟು ವಿಶ್ರಾಂತಿ ತೆಗೆದುಕೊಳ್ಳಿ, ಆರೋಗ್ಯ ಕಾಳಜಿ ಮಾಡಿಕೊಳ್ಳಿ, ಮತ್ತಷ್ಟು ಬರೆಯಿರಿ. 

ಮತ್ತೊಮ್ಮೆ ಹುಟ್ದಬ್ಬದ ಶುಭಾಶಯಗಳು ಸರ್.

ನಿಮ್ಮಆಶಯಗಳು, ಆರೋಗ್ಯ, ಆಯುಷ್ಯ, ಸಮೃದ್ದಿ, ಓದು, ಬರಹಗಳು ಇನ್ನೂ ಹೆಚ್ಚಾಗಲಿ.

ಪ್ರೀತಿಯ,

ಸುಮನ ಮತ್ತು ಗೌತಮ್‌, ಕೊಡಗು ಜಿಲ್ಲೆ

ಸುಮನಾ ಮತ್ತು ಗೌತಮ್‌ ಸೋಮವಾರಪೇಟೆಯಲ್ಲಿ ʻನಾವು ಪ್ರತಿಷ್ಠಾನʼ ಸಂಸ್ಥೆಯ ಮೂಲಕ ಮಕ್ಕಳು ಮತ್ತು ಸಮುದಾಯಗಳೊಡನೆ ಕೆಲಸ ಮಾಡುತ್ತಿದ್ದಾರೆ. ಸುಮನಾ ೨೦೨೪-೨೫ರ ಸಾಲಿನ ಡಾ. ಪದ್ಮಿನಿ ಮಕ್ಕಳ ಹಕ್ಕುಗಳ ಫೆಲೋ.