ಮಕ್ಕಳ ಪರವಾದ ದನಿ ವಾಸು – ಪರಶುರಾಮ್
ಮಕ್ಕಳು ಈ ದೇಶದ ಸಂಪತ್ತು. ಅವರಿಗೆ ಬಾಲ್ಯದಲ್ಲಿ ಆಗುವ ಗಾಯ ಮಾಯುವುದೇ ಇಲ್ಲ. ಆ ನೋವು ನಿರಂತರ. ಹಾಗಾಗಿ ಮಕ್ಕಳಿಗೆ ಹಕ್ಕುಗಳು ಬೇಕು. ಬೆಳೆಯುವ, ನಲಿಯುವ ಮುಕ್ತವಾದ ವಾತಾವರಣಕ್ಕೆ ಹಂಬಲಿಸುವ ತುಡಿತ. ಆ ತುಡಿತಕ್ಕೆ ಎಲ್ಲರೊಡಗೂಡಿ ಆ ಧ್ವನಿ, ದನಿ ಎತ್ತಿದ್ದು ವಾಸುದೇವ ಶರ್ಮಾ.
ವಾಸು ಕಟ್ಟುವ ಜಗತ್ತಿನಲ್ಲಿ ನಾನು ಸಿಕ್ಕಿಬಿದ್ದಿದ್ದು ಭಿನ್ನವಾಗಿ! ʻನೆಳಲು ಬೆಳಕುʼವಿನ ಸದಸ್ಯನಾಗಿದ್ದ ನಾನು, ವ್ಯಕ್ತಿಯೊಬ್ಬ ಹೆಣ್ಣುಮಗಳಿಗೆ ಅಸಭ್ಯವಾಗಿ ವರ್ತಿಸಿದ ರೀತಿ, ಚುಡಾಯಿಸಿದ ರೀತಿ ನೋಡಿ ನನಗೆ ಸಿಟ್ಟು ಮೇಲೇರಿ, ಬುದ್ಧಿ ಕಲಿಸಬೇಕೆಂದುಕೊಂಡಾಗ ಆ ಪ್ರಕರಣವನ್ನು ಸಹನೆಯಿಂದ ಸಭ್ಯತೆಯಿಂದ ನಿರ್ವಹಿಸಬೇಕೆಂಬ ಪಾಠ ಕಲಿಸಿದ್ದು/ ಮೂಡಿಸಿದ್ದು ವಾಸುದೇವ ಶರ್ಮಾರವರು.
ಲೈಂಗಿಕ ಶೋಷಿತ ಮಕ್ಕಳಿಗಾಗಿ ನಾವು ಒಡನಾಡಿ ಸಂಸ್ಥೆ ಪ್ರಾರಂಭಿಸಬೇಕೆಂದುಕೊಂಡ ಸಂದರ್ಭದಲ್ಲಿ ಅವರು ನಮಗೆ ಕಲಿಸಿದ ಪಾಠ ಬಹಳ ದೊಡ್ಡದು. ಮಕ್ಕಳಿಗಾಗಿ ಪ್ರಥಮ ಬಾರಿಗೆ ಕೇಂದ್ರವನ್ನು ಆರಂಭಿಸಿದಾಗ ಆ ಕಲ್ಪನೆಯ ಆವಶ್ಯಕತೆಯನ್ನು ಮನಗಂಡು, CRY ಸಂಸ್ಥೆಯ ಮೂಲಕ ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸಿದ್ದವರು. ಮಕ್ಕಳು, ಸಮುದಾಯದೊಡನೆ ಕೆಲಸ ಮಾಡುವಾಗ ಸಾರ್ವಜನಿಕ ಹಣಕಾಸಿನ ನಿರ್ವಹಣೆಯ ವಿಚಾರದಲ್ಲಿ ವಾಸು ನಮಗೆ ಬಹಳಷ್ಟನ್ನು ತಿಳಿಸಿಕೊಟ್ಟಿದ್ದು ಇನ್ನೂ ನಮ್ಮ ತಲೆಯೊಳಗೆ ಕೂತಿದೆ. ಧೈರ್ಯ, ಆತ್ಮವಿಶ್ವಾಸದ ನಡೆ ಬೇಕಾದರೆ, ಈ ಬಿರುಗಾಳಿಯ ಸಂತೆಯಲ್ಲಿ ಹಣಕಾಸಿನ ಲೆಕ್ಕಾಚಾರವು ಸ್ಪಷ್ಟವಾಗಿರಬೇಕು ಹಾಗೂ ಪಾರದರ್ಶಕವಾಗಿರಬೇಕು ಎಂದು ಹೇಳಿದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ.
ಚಿತ್ರದುರ್ಗದಲ್ಲಿ ಒಂದು ಸ್ವಯಂಸೇವಾಸಂಸ್ಥೆಯನ್ನು ನಿರ್ವಹಿಸುತ್ತಿದ್ದ ವಿಶ್ವಸಾಗರ್ ಮೇಲೆ ಆಗಿದ್ದ ಆರೋಪದ ಪ್ರಕರಣದಲ್ಲಿ ವಿಚಿತ್ರ ಸನ್ನಿವೇಶ ಸೃಷ್ಟಿಯಾಗಿತ್ತು. ಚಿತ್ರದುರ್ಗದಲ್ಲಿನ ಮತ್ತು ರಾಜ್ಯದ ನಾಯಕರು, ಮಕ್ಕಳ ಕ್ಷೇತ್ರಕಾರ್ಯರ್ತರು ಅವನನ್ನು ವಿರೋಧಿಸುವ ಬದಲು ಆ ಕಿರಾತಕನ ಕಾಲಿಗೆ ಬೀಳುವ ಮತ್ತು ಅವನ ಕಾಲಿನ ಧೂಳಿಯನ್ನು ವಿಭೂತಿಯಂತೆ ಅನಾವಶ್ಯಕವಾಗಿ ಬಳಿದುಕೊಂಡು ಕಿರಾತಕನಿಗೆ ಜೈ ಎನ್ನುತ್ತಿದ್ದರು. ಇಂತಹ ಜಗತ್ತಿನಲ್ಲಿ, ಸಂಸ್ಕಾರದ ಮುಖವಾಡದ ನಗೆಯ ಕಾವಿಯಲ್ಲಿದ್ದ ಕಾಮುಕನನ್ನು ವಿರೋಧಿಸಿದ ಡಮರುಗಕ್ಕೆ ಮೊದಲ ಶಂಖನಾದವಾದದ್ದು ವಾಸುರವರು.
ಇವೆಲ್ಲದುರ ಹಿಂದೆ ಮಕ್ಕಳ ಹಕ್ಕುಗಳನ್ನು ಕುರಿತು ವಾಸುರವರಿಗಿರುವ ಆಪ್ತ ಹುಚ್ಚು ಕುಣಿತವಿದೆ. ಮಕ್ಕಳ ಬಗೆಗಿನ ವ್ಯಾಕುಲತೆಯ ಕುದಿಯಿದೆ. ಇವರನ್ನು ತಿಳಿದವರು ಕಡಿಮೆ. ವಿಶ್ವವಿದ್ಯಾನಿಲಯಗಳು ಅರಿವಿನ ಕ್ಷಿತಿಜದೊಳಗೆ ಈಜಲಾಗದಿರುವಾಗ ದೊಡ್ಡ ವಿಚಾರಗಳನ್ನು ಚರ್ಚೆಗೆ ಎತ್ತುಕೊಂಡ ಮನುಷ್ಯತ್ವದ, ಮಾನವೀಯತೆಯ ಪ್ರತೀಕ ಇವರು. ಎಲ್ಲೆಡೆಯೂ ಏನೋ ಮತ್ತೇನೋ ನಡೆಯುತ್ತಿರುವಾಗ, ತಕತಕ ಬರಿ ಮಕ್ಕಳು. ಮುಂದಿನ ಜಗತ್ತನ್ನು ಕಟ್ಟಲು ʻಮಕ್ಕಳ ಹಕ್ಕುಗಳ ಗ್ರಾಮಸಭೆ ಮತ್ತು ಮಕ್ಕಳ ಹಕ್ಕುಗಳ ಸಂಸತ್’ ಕಟ್ಟಿದ್ದು ಒಂದು ವಿಶೇಷ ಅನುಭೂತಿ. ದೊಡ್ಡವರ ಆಡಳಿತದಲ್ಲಿ ಬಹಳಷ್ಟು ಬದಲಾವಣೆಯಾಗಿದೆ. ಹೌದು, ವಾಸು ಮಕ್ಕಳ ನಿಶಬ್ದದ ಉಸಿರು. ಪರಿಣಾಮಕಾರಿ ಬೆಳಕು ಮತ್ತು ಬೆರಗು. ಮಕ್ಕಳ ಕಾರ್ಯ ಮಾಡುವವರಿಗೆ ಸ್ವಾಗತದ ತೋರಣ. ಅದೆಷ್ಟೋ ಗೆಳೆಯರ ಬಳಗದ ದಂಡು. ಹೌದೇನ್ರೋ… ಎನ್ನುವ ಅನನ್ಯತೆ.
ವಾಸುರವರ ಒಡನಾಟದಲ್ಲಿ ಅವರನ್ನು ಅರಿಯಲು ಬಹಳಷ್ಟು ಇದೆ. ಸ್ನೇಹ ಮತ್ತು ಸಂಘಟನೆ ವಿಚಾರದಲ್ಲಿ ಎಂದೂ ಕೆಡುಕನ್ನು ಕಂಡದ್ದು ಇಲ್ಲ. ಎಲ್ಲಾ ಕಾರ್ಯವು ನೆನೆಗುದಿಗೆ ಬಿದ್ದಿರುವಾಗ, ಎಚ್ಚರಿಕೆಯ ಜಾಗೃತಿಯನ್ನು ಬರೆಯುತ್ತಲೇ ಇರುವ ವಾಸುವಿಗೆ ಎಂದೋ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಪ್ರಶಸ್ತಿ ಮತ್ತು ಮಕ್ಕಳ ಹಕ್ಕುಗಳ ಕಾರ್ಯಗಳನ್ನು ಮಾಡಲು ಬಹಳಷ್ಟನ್ನು ನೀಡಬೇಕಿತ್ತು. ಮಕ್ಕಳ ವಿಚಾರದಲ್ಲಿ ಕಠೋರ ನಿಲುವನ್ನು ತೆಗೆದುಕೊಳ್ಳುವ ಈ ವ್ಯಕ್ತಿಗೆ, ಸತ್ಯವನ್ನು ಹೇಳುವ ವ್ಯಕ್ತಿಗಳನ್ನು ಪೋಷಿಸಲಾಗದ ಸರ್ಕಾರಗಳು ಮತ್ತೇನನ್ನೂ ಮಾಡಲಾರವು. ಇದು ವಾಸುರವರಿಗೆ ತಿಳಿದಿದೆ. ನಾನು ಇವರಿಂದ ಬಹಳಷ್ಟು ಕಲಿತಿದ್ದೇನೆ. ಆದರೆ ಅವರಿಗಿರುವ ಸಂಯುಮವನ್ನು ನಾನು ಕಲಿಯಲಿಲ್ಲ. ಯಾವಾಗಲೂ ಮುಷ್ಠಿಯನ್ನು ಬಿಗಿಗೊಳಿಸುತ್ತೇನೆ. ಮಕ್ಕಳ ವಿಚಾರದಲ್ಲಿ ಕೆಡುಕನ್ನು ಸಹಿಸದ, ವ್ಯಾಘ್ರಗತಿಯ ಮನಸ್ಥಿತಿ ನನ್ನದು. ಈ ಸ್ಥಿತಿಗೂ ಪೂರಕವಾಗಿ ನೀರೆರೆದಿದ್ದಾರೆ ವಾಸು. ಆದರೆ ನಾನು ನಿಮ್ಮ ಮಗುವಿನಂತಹ ನಗುವನ್ನು ಕಲಿಯಲಾಗಲಿಲ್ಲ. ಕ್ಷಮೆ ಇರಲಿ. ಸಂಬಂಧಗಳನ್ನು ಹೆಣೆಯುವಾಗ ಸಿಕ್ಕುಗಳು ಸಾಮಾನ್ಯ. ನಿಮಗೆ ವಯಸ್ಸಾಗಿಲ್ಲ. ನಕ್ಷತ್ರಗಳನ್ನೆರಚಿ, ಮಕ್ಕಳ ಮಡಿಲಿಗೆ ಆಯ್ದು ತುಂಬುವ ತಾಕತ್ತು ನಿಮಗಿದೆ. ನಿಮ್ಮ ಕೆಲಸ ನಿಲ್ಲುವುದೇ ಇಲ್ಲ. ನಿಲ್ಲದೇ ದೂರ ದೂರ ಸಾಗುತ್ತಲೇ ಇರಲಿ.
- ಪರಶುರಾಮ್, ಸಂಸ್ಥಾಪಕರು, ಒಡನಾಡಿ ಸಂಸ್ಥೆ, ಮೈಸೂರು






