ಮಕ್ಕಳ ಕ್ಷೇತ್ರದ ಕಲ್ಪವೃಕ್ಷ – ಡಾ. ಎಚ್.ಸಿ. ರಾಘವೇಂದ್ರ

Last Updated: February 21, 2026By

೨೦೦೨-೦೩ ನಾನು ಅಗಷ್ಟೇ ಕಾಲೇಜು ಶಿಕ್ಷಣ ಮುಗಿಸಿ ಜಿಲ್ಲಾ ಪಂಚಾಯಿತಿ, ಬಳ್ಳಾರಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳಿಗೆ ತರಬೇತಿ ನೀಡುವಂತಹ ಕಾರ್ಯದಲ್ಲಿ ತೊಡಗಿಕೊಂಡಿದ್ದೆ. ಆಗ ಶ್ರೀ ಪೀರ್‌ ಮೊಹಮದ್‌ ಅವರು ನನ್ನಂಥವರ ಮಾರ್ಗದರ್ಶಿಗಳು. ಗ್ರಾಮೀಣ ಪ್ರದೇಶಗಳಲ್ಲಿ ಸಮುದಾಯಗಳೊಡನೆ, ಜನಪ್ರತಿನಿಧಿಗಳೊಡನೆ ನಮ್ಮ ಕೆಲಸ. 

ಆ ಸಮಯದಲ್ಲಿ ಪೀರ್‌ ಮೊಹಮದ್‌ ಸಾರ್‌ ನಮಗೆ ತಿಳಿಸಿದ್ದು, ಸಂಗನಕಲ್ಲು ಗ್ರಾಮದಲ್ಲಿ ಮಕ್ಕಳ ಹಕ್ಕುಗಳ ಕುರಿತು ಸಾಮರ್ಥ್ಯಾಭಿವೃದ್ಧಿ ತರಬೇತಿಯನ್ನು ಆಯೋಜಿಸಲಾಗುತ್ತಿದೆ. ಬೆಂಗಳೂರಿನಿಂದ ಚೈಲ್ಡ್‌ ರೈಟ್ಸ್‌ ಟ್ರಸ್ಟ್‌ನ ವಾಸುದೇವ ಶರ್ಮಾ ಅವರು ಬರಲಿದ್ದಾರೆ ಎಂದು. ಮೂರು ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೆ ತಿಳಿಸಿದರು. ನಾನು ಮತ್ತು ನನ್ನೊಟ್ಟಿಗೆ ಅನೇಕ ಸ್ನೇಹಿತರು ತರಬೇತಿಯಲ್ಲಿ ಪಾಲ್ಗೊಂಡೆವು, ಅಂದು ನನ್ನ ಮತ್ತು ವಾಸು ಸರ್ ಅವರ ಮೊದಲ ಭೇಟಿಯಾಯಿತು. ನಿರಂತರ ಮೂರು ದಿನಗಳ ತರಬೇತಿಯಲ್ಲಿ ಭಾಗವಸಿದ್ದೆ. ತರಬೇತಿಯಲ್ಲಿ ವಿಷಯಗಳನ್ನು ತಿಳಿಯುತ್ತಾ, ಪ್ರಕ್ರಿಯೆಗಳಲ್ಲಿ ಭಾಗವಹಿಸುತ್ತಾ, ಅನೇಕ ಪ್ರಶ್ನೆಗಳನ್ನು ಕೇಳುತ್ತಾ ಬಂದೆ. ಕೊನೆಯ ದಿನ ವಾಸುದೇವ ಶರ್ಮಾ ಅವರು ನನ್ನನ್ನು ಕರೆದು ಮಾತನಾಡಿಸಿದರು. ಬಳ್ಳಾರಿಯ ಮೂರು ತಾಲೂಕುಗಳಲ್ಲಿ ʻಮಕ್ಕಳನ್ನು ಕುರಿತು ಗ್ರಾಮಪಂಚಾಯತಿಗಳ ಜವಾಬ್ದಾರಿʼ ಕುರಿತು ಚೈಲ್ಡ್‌ ರೈಟ್ಸ್‌ ಟ್ರಸ್ಟ್‌ ಕೈಗೊಳ್ಳಲಿದ್ದ ಕ್ರಿಯಾಸಂಶೋಧನೆಯ ತಂಡದಲ್ಲಿ ಸೇರಲು ಆಹ್ವಾನ ಕೊಟ್ಟರು. 

ಈ ಚರ್ಚೆ, ಅವರೊಡನೆ ಹಳ್ಳಿಗಳಲ್ಲಿನ ಸುತ್ತಾಟದಲ್ಲಿ, ವಾಸುದೇವ ಶರ್ಮಾ ಅವರಿಗೆ ಗ್ರಾಮೀಣ ಮಕ್ಕಳ ಬಗ್ಗೆ ಅನೇಕ ಅಭಿವೃದ್ಧಿಯ ಕಲ್ಪನೆಗಳು ಇರುವುದನ್ನು ಆಗ ನಾನು ಕಂಡೆ. ಜೊತೆಗೆ ಸ್ಥಳೀಯ ಭಾಗೀದಾರರಿಗೆ (ಸೇವಾದಾರರಿಗೆ) ಸಾಮರ್ಥ್ಯ ವೃದ್ಧಿಸಿದರೆ ಮಾತ್ರ ಆ ಪ್ರದೇಶದಲ್ಲಿ ಬದಲಾವಣೆ ಕಾಣಬಹುದು, ಸಹಕಾರ, ಸಮನ್ವಯ ಜೊತೆಗೆ ಸ್ಥಳೀಯ ಸರ್ಕಾರದ ಚುನಾಯಿತ ಜನಪ್ರತಿನಿಧಿಗಳ ಪಾಲ್ಗೊಳ್ಳುವಿಕೆ ಬಹಳ ಮುಖ್ಯ ಎಂಬ ಅಗಾಧ ನಂಬಿಕೆ ಅವರಲ್ಲಿತ್ತು. ಈ ಮುಖ್ಯವಾದ ವ್ಯಕ್ತಿಗಳ ಆಲೋಚನಾ ಕ್ರಮಗಳನ್ನು ಬದಲಿಸಬೇಕಾದರೆ ಮೊದಲು ನಾವು ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಮಕ್ಕಳ ಹಕ್ಕುಗಳ ಕಾರ್ಯಕರ್ತರ ಸಾಮರ್ಥ್ಯವೃದ್ಧಿಗೆ ತರಬೇತಿಗಳು, ಅಂಕಿ ಸಂಖ್ಯೆಗಳ ಸಂಗ್ರಹ, ಮಾಹಿತಿ ಪಡೆಯುವುದು, ಮಾಹಿತಿಗಳನ್ನು ಇಂದೀಕರಿಸುವುದು, ವಿಶ್ಲೇಷಿಸುವುದು, ಪರಿಸ್ಥಿತಿ ಅವಲೋಕನ, ನಂತರ ಪರಿಹಾರ ಸೂಚಿಸುವುದು ಅಗತ್ಯ ಎಂಬುದನ್ನು ಅಂದಿನಿಂದಲೂ ಪ್ರತಿಪಾದಿಸುತ್ತಾ ಬಂದವರಲ್ಲಿ ಡಾ. ವಾಸುದೇವ ಶರ್ಮಾ ಮೊದಲಿಗರು ಎಂಬುದರಲ್ಲಿ ಎರಡು ಮಾತಿಲ್ಲ. 

ಪ್ರಭಾವ:- ಡಾ. ವಾಸುದೇವ ಶರ್ಮಾ ಸರ್ ನಮ್ಮ ರಾಜ್ಯದಲ್ಲಿ ಮಕ್ಕಳ ಕ್ಷೇತ್ರದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಉದಾಹರಣೆಗೆ, ೨೦೦೩-೧೦ರ ಕರ್ನಾಟಕ ರಾಜ್ಯ ಮಕ್ಕಳ ಕ್ರಿಯಾ ಯೋಜನೆ ನಿರ್ಮಾಣ (Karnataka State Plan of Action for Children), ಕರ್ನಾಟಕ ರಾಜ್ಯ ಮಹಿಳೆಯರು ಮತ್ತು ಮಕ್ಕಳ ಕಳ್ಳಸಾಗಣೆ, ಮಾರಾಟ ತಡೆ ಕ್ರಿಯಾ ಯೋಜನೆ (೨೦೦೫), ಬೆಂಗಳೂರು ನಗರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾಗಿ ನಿರ್ವಹಿಸಿದ ಜವಾಬ್ದಾರಿಯ ಅನುಭವ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾಗಿ ನಿರ್ವಹಿಸಿದ ಅನುಭವ, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸಲಹಾ ಸಮಿತಿ ಸದಸ್ಯರಾಗಿ, ಬಹಳ ಮುಖ್ಯವಾಗಿ ಮಕ್ಕಳ ರಕ್ಷಣಾ ನಿರ್ದೇಶನಾಲಯದ ಪರವಾಗಿ ಮಕ್ಕಳ ಕಲ್ಯಾಣ ಸಮಿತಿಗಳು ಮತ್ತು ಮಕ್ಕಳ ನ್ಯಾಯ ಮಂಡಳಿಗಳ ಸದಸ್ಯರ ಆಯ್ಕೆ ಸಮಿತಿ ಮತ್ತು ಅವರಿಗೆ ತರಬೇತಿ ನೀಡುವ ಸಮಿತಿಗಳಲ್ಲೂ ಸದಸ್ಯರಾಗಿ ಯಶಸ್ವಿಯಾಗಿ ಜವಾಬ್ದಾರಿ ನಿರ್ವಹಿಸಿದ ಅನುಭವವನ್ನು ಹೊಂದಿದವರು. ಅಗಾಧ ಪ್ರೌಢಿಮೆ, ಜ್ಞಾನ ಹೊಂದಿದ್ದರೂ ಸರಳ ವ್ಯಕ್ತಿತ್ವ ಸ್ವಭಾವದವರು. ನನಗೆ ಅವರಲ್ಲಿರುವ ತುಂಬಾ ಇಷ್ಟವಾದ ಗುಣವೆಂದರೆ ಎಲ್ಲರ ಅಭಿಪ್ರಾಯಕ್ಕೆ ಮನ್ನಣೆ ನೀಡುವುದು, ಕೇಳಿಸಿಕೊಳ್ಳುವುದು, ಪಾರದರ್ಶಕತೆ, ಜ್ಞಾನ ಹೆಚ್ಚಿಸಿಕೊಳ್ಳಲು ಪ್ರೋತ್ಸಾಹಿಸುವುದು, ಮಕ್ಕಳ ಕ್ಷೇತ್ರದ ಕೆಲಸದ ಮೇಲೆ ಪ್ರೀತಿ, ಶ್ರದ್ದೆ, ಬದ್ದತೆ, ತೊಡಗಿಸಿಕೊಳ್ಳುವುದು, ಅವರು ಸದಾ ಯೋಚಿಸುವ ಮಕ್ಕಳ ಸ್ನೇಹೀ ಅಲೋಚನೆ, ಅದು ವ್ಯಕ್ತಿ, ಕುಟುಂಬ, ಶಾಲೆ, ಅಂಗನವಾಡಿ ಕೇಂದ್ರ, ವಸತಿನಿಲಯ, ಸರ್ಕಾರ ಅಥವಾ ಮಕ್ಕಳ ಕ್ಷೇತ್ರದಲ್ಲಿನ ಸಂಘ ಸಂಸ್ಥೆಗಳಾಗಿರಬಹುದು. ಇವು ನನ್ನ ವೈಯಕ್ತಿಕ ಬದುಕಿನ ಮೇಲೆ ಹೆಚ್ಚು ಪ್ರಭಾವ ಬೀರಿವೆ. ನಾನು ಇವತ್ತು ರಾಜ್ಯದಲ್ಲಿ ಒಂದಿಷ್ಟು ಕೆಲಸಗಳನ್ನು ಮಾಡಿ ಗುರುತಿಸಿಕೊಂಡಿದ್ದರೆ ಅದರಲ್ಲಿ ಡಾ.ವಾಸುದೇವ ಶರ್ಮಾ ಸರ್ ಅವರ ವಿಚಾರಗಳನ್ನು ಅಳವಡಿಸಿಕೊಂಡಿರುವುದರಿಂದ ಸಾಧ್ಯವಾಗಿದೆ ಎಂದು ನಾನು ಹೆಮ್ಮೆಯಿಂದ ಹೇಳುತ್ತೇನೆ. ಅವರ ಸನ್ಮಾರ್ಗ, ಸಲಹೆಗಳು ನಮ್ಮ ಬದುಕಿಗೆ ದಾರಿದೀಪವಾಗಿದೆ. ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾಗಿ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿರುವಲ್ಲಿ ಅವರ ಪಾತ್ರ ಹಿರಿದಾಗಿದೆ. 

ಹಂಪಿ ವಿಶ್ವವಿದ್ಯಾಲಯದ ಮೂಲಕ ಪಿಎಚ್‌.ಡಿ ಅಧ್ಯಯನಕ್ಕಾಗಿ ನಾನು ಆಯ್ಕೆ ಮಾಡಿಕೊಂಡ ಸಂಶೋಧನಾ ವಿಷಯವಾದ “ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿನ ಪೋಷಕತ್ವದಿಂದ ವಂಚಿತರ ಸ್ಥಿತಿಗತಿ” ಕುರಿತು ಅಧ್ಯಯನಕ್ಕೆ ಸಂಪೂರ್ಣ ಸಹಕಾರ ಮತ್ತು ಹೊಸ ಕಲ್ಪನೆಯ ಸಂಶೋಧನಾ ದೃಷ್ಟಿಕೋನವನ್ನು ವಾಸುದೇವ ಶರ್ಮಾ ನೀಡಿದ್ದಾರೆ. ಅವರು ನೀಡಿದ ಪ್ರೋತ್ಸಾಹವನ್ನು ನಾನು ಎಂದೂ ಮರೆಯುವಂತಿಲ್ಲ, ನಾನು ಮಾತ್ರವಲ್ಲ ಮಕ್ಕಳ ಕ್ಷೇತ್ರದಲ್ಲಿ ಯಾರು ಬೇಕಾದರೂ ಸಹಾಯ ನಿರೀಕ್ಷಿಸಿದರೆ, ಸಲಹೆ ಕೇಳಿದರೆ ಖಂಡಿತವಾಗಿಯೂ ನೀಡಲು ಅವರು ಸದಾ ಸಿದ್ದರಾಗಿರುತ್ತಾರೆ. ಎಲ್ಲರನ್ನೂ ಪ್ರೋತ್ಸಾಹಿಸುವ ಅವರ ಮನಸ್ಸಿಗೆ ನನ್ನದೊಂದು ಸಲಾಮ್. 

ಸ್ಪೂರ್ತಿ:- ವಾಸುದೇವ ಶರ್ಮಾ ಅವರು ತಮ್ಮ ಪಿಎಚ್‌.ಡಿ ಪದವಿಗಾಗಿ ಬೆಂಗಳೂರು ವಿವಿಯೆದುರು ಮಂಡಿಸಿದ ಮಹಾಪ್ರಬಂಧದ ವಿಷಯ “ಗ್ರಾಮೀಣ ಮಕ್ಕಳ ಹಕ್ಕುಗಳು” (೨೦೧೮). ಈ ವಿಷಯದ ಆಯ್ಕೆಯನ್ನು ಗಮನಿಸಿದರೆ ಗ್ರಾಮೀಣ ಮಕ್ಕಳು ತಮ್ಮ ಅನೇಕ ಹಕ್ಕುಗಳಿಂದ ವಂಚಿತರಾಗುತ್ತಿರುವುದನ್ನು ಅವರು ಬಹಳ ಹತ್ತಿರದಿಂದ ನೋಡಿದ್ದಾರೆ. ಬಾಲ್ಯವಿವಾಹಕ್ಕೆ ಒಳಗಾಗುವ ಮಕ್ಕಳು, ದುಡಿಮೆಯಲ್ಲಿ ತೊಡಗಿದ ಮಕ್ಕಳು, ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಕ್ಕಳು, ಮೋಸಕ್ಕೆ ಬಲಿಯಾದ ಮಕ್ಕಳು, ಪೋಷಕತ್ವ ವಂಚಿತ ಮಕ್ಕಳು, ಜೀತದಲ್ಲಿರುವ ಮಕ್ಕಳು, ದೇವದಾಸಿ ಪದ್ದತಿಗೆ ಒಳಗಾದ ಮಕ್ಕಳು, ಕುಟುಂಬದ ನಿರ್ಲಕ್ಷ್ಯಕ್ಕೆ  ಒಳಗಾದ ಮಕ್ಕಳು, ವಿಕಲಚೇತನ ಮಕ್ಕಳು, ನಿರ್ಲಕ್ಷ್ಯ ಮತ್ತು ತಾರತಮ್ಯಕ್ಕೆ ಒಳಗಾದ ಮಕ್ಕಳು, ಹೀಗೆ ಗ್ರಾಮೀಣ ಪ್ರದೇಶದ ಅನೇಕ ಮಕ್ಕಳು ತಮ್ಮ ಹಕ್ಕುಗಳಿಂದ ವಂಚಿತರಾಗಿ ಭವಿಷ್ಯ ಮತ್ತು ಬಾಲ್ಯವನ್ನು ಕಳೆದುಕೊಂಡ ವಿವಿಧ ಪರಿಸ್ಥಿತಿಗಳನ್ನು ಹಾಗೂ ಇವುಗಳಿಗೆ ಜವಾಬುದಾರರಾದವರ ಕರ್ತವ್ಯಗಳನ್ನು ನೆನಪಿಸುವುದು ಮತ್ತು ಅವರನ್ನು ಪ್ರೇರೇಪಿಸುವುದರ ಅಗತ್ಯವನ್ನು ತಿಳಿದು ಅವರು ಈ ಕ್ಷೇತ್ರದಲ್ಲಿನ ಅಧ್ಯಯನದ ಅಗತ್ಯತೆಯನ್ನು ಮನಗಂಡು ಈ ವಿಷಯದ ಆಯ್ಕೆಯನ್ನು ಮಾಡಿಕೊಂಡಿರುವುದು ಅವರಿಗೆ ಈ ಕ್ಷೇತ್ರ ಮತ್ತು ಮಕ್ಕಳ ಹಕ್ಕುಗಳ ಮೇಲಿರುವ ಬದ್ಧತೆ, ಕಾಳಜಿಯನ್ನು ತೋರಿಸುತ್ತದೆ. ಇದು ನಮಗೆಲ್ಲರಿಗೂ ಸ್ಫೂರ್ತಿಯ ಸೆಲೆಯಾಗಿದೆ.

ಅವರು ಸದಾ ಅಧ್ಯಯನಶೀಲರು, ಹೊಸ ಹೊಸ ವಿಚಾರಗಳನ್ನು ತಿಳಿಯುತ್ತ, ಹೊಸ ಕಲ್ಪನೆಗಳನ್ನು ಸೃಷ್ಟಿಸಲು ಯೋಚಿಸುತ್ತಿರುತ್ತಾರೆ. ಜೊತೆಗೆ ಅವರ ಬರಹಗಳು ನಮಗೆ ಸ್ಪೂರ್ತಿ. ನಮಗೆಲ್ಲಾ ಗೊತ್ತಿರುವ ಹಾಗೆ ಅನೇಕ ಪುಸ್ತಕಗಳನ್ನು ರಚಿಸಿ ಮುದ್ರಿಸುತ್ತಿದ್ದಾರೆ. ಮಕ್ಕಳಿಗೆ, ದೊಡ್ಡವರಿಗೆ, ಅಧಿಕಾರಿ ವರ್ಗದವರಿಗೆ, ಸಾರ್ವಜನಿಕರಿಗೆ, ಚುನಾಯಿತ ಪ್ರತಿನಿಧಿಗಳಿಗೆ ಮಾಹಿತಿ ತಲುಪಿಸಲು ಸದಾ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಕರಪತ್ರ, ಗೋಡೆ ಪತ್ರಿಕೆ, ಪೋಸ್ಟರ್, ಕಿರು ಪುಸ್ತಕ, ಹ್ಯಾಂಡ್‌ಬುಕ್ ಹೀಗೆ ಇನ್ನೂ ಅನೇಕ.

ಸಂಶೋಧನೆಗಳು, ತರಬೇತಿಗಳು ಮತ್ತು ಯೋಜನೆಗಳು:- ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿಗಳು, ನಮ್ಮ ಯೋಜನೆ ನಮ್ಮ ಪ್ರಗತಿ, ಮಕ್ಕಳು ಮತ್ತು ಆಡಳಿತ, ಹೀಗೆ ಸಿ.ಆರ್.ಟಿ. ಯಲ್ಲಿ ಅವರೊಟ್ಟಿಗೆ ಸೇರಿ ಅನೇಕ ಯೋಜನೆಗಳಲ್ಲಿ ಭಾಗವಹಿಸಿದ್ದೇನೆ. ಕಾರ್ಯಕ್ಷೇತ್ರದ ಕಿರು ಸಂಶೋಧನೆಗಳು, ಸಂಶೋಧನೆಗೆ ಪ್ರಶ್ನೆಗಳನ್ನು ಸೃಜಿಸುವುದು, ಅಂಕಿ ಸಂಖ್ಯೆಗಳ ಸಂಗ್ರಹ, ವಿಶ್ಲೇಷಣೆ, ವರದಿ ತಯಾರಿಸುವುದು, ವಿವಿಧ ವರ್ಗದ ಜನರಿಗೆ ತರಬೇತಿಗಳು, ತರಬೇತಿ ವಿನ್ಯಾಸಗಳನ್ನು ರಚಿಸುವುದು, ವಿವಿಧ ಸ್ಥರಗಳಲ್ಲಿ ವಕೀಲಿ ಮಾಡುವುದು, ಬರಹ ಕಾರ್ಯಾಗಾರಗಳು ಜೊತೆಗೆ ಮಕ್ಕಳ ಕುರಿತು ಇರುವ ಕಾನೂನು ಕಾಯ್ದೆಗಳು, ನಿಯಮಗಳು, ನ್ಯಾಯಾಲಯದ ತೀರ್ಪುಗಳು, ಪ್ರಕರಣ ಅಧ್ಯಯನಗಳನ್ನು ವಾಸು ಸರ್‌ ಅರ್ಥೈಯಿಸಿದ್ದಾರೆ. 

ನಾನೊಬ್ಬನೆ ಕಲಿತೆ ಎನ್ನುವುದಕ್ಕಿಂತ ಸಮಾಜಸೇವಾ ಕಾರ್ಯಕ್ಷೇತ್ರದ ಅನೇಕರಿಗೆ ಕಲಿಸಿದ್ದಾರೆ. ನಾವು ಕಲಿಯುವುದರ ಜೊತೆಗೆ ಕಲಿತದ್ದನ್ನು ಸಮಾಜಕ್ಕೆ ಬೋಧಿಸಲು ಸಾಮರ್ಥ್ಯ ತುಂಬಿದ್ದಾರೆ. ಇಂದು ಮಕ್ಕಳ ಕ್ಷೇತ್ರದಲ್ಲಿ ಗಟ್ಟಿಯಾಗಿ ನಿಂತು ಕೆಲಸ ನಿರ್ವಹಿಸಲು ನನ್ನಂತೆ ಅದೆಷ್ಟೋ ಜನರಿಗೆ ಸಾಮರ್ಥ್ಯ ವೃದ್ಧಿಸಿ, ಕಾರ್ಯಕ್ಷೇತ್ರದಲ್ಲಿ ಕೆಲಸ ನಿರ್ವಹಿಸಲು ಹುರಿದುಂಬಿಸಿದ್ದಾರೆ. ಕರ್ನಾಟಕ ರಾಜ್ಯವಲ್ಲದೇ ಇತರೆ ಹೊರ ರಾಜ್ಯಗಳಲ್ಲಿಯೂ ಕೂಡ ಅನೇಕ ತರಬೇತಿ, ಸಂಶೋಧನೆ ಹಾಗೂ ಕಾರ್ಯಾಗಾರ, ವಿಚಾರ ಸಂಕೀರ್ಣಗಳಲ್ಲಿ ಪಾಲ್ಗೊಳ್ಳುತ್ತಿರುತ್ತಾರೆ. ಹೊಸ ವಿಚಾರಗಳನ್ನು ಒಡನಾಡಿಗಳಿಗೆ ಸದಾ ಬಿತ್ತುತ್ತಿರುತ್ತಾರೆ.

ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆ ಒಂದು ಮೈಲುಗಲ್ಲು:- ೨೦೦೩ರ ಸಂದರ್ಭ ನಾನಿನ್ನೂ ಈ ಕ್ಷೇತ್ರಕ್ಕೆ ಹೊಸಬ. ಆಗ ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಪರಿಕಲ್ಪನೆ ನಮಗೆ ಹೊಸದು. ಗ್ರಾಮ ಪಂಚಾಯಿತಿ ಸ್ಥಳೀಯ ಸರ್ಕಾರವಾಗಿ ಅಲ್ಲಿ ಮಕ್ಕಳ ವಿಚಾರಗಳು, ಮಕ್ಕಳ ಪರಿಸ್ಥಿತಿಗಳು ತಿಳಿಯಲು ಅಂಕಿ ಸಂಖ್ಯೆಗಳನ್ನು ಸಂಗ್ರಹಿಸಿ, ವಿಶ್ಲೇಷಿಸಿ, ವರದಿ ತಯಾರಿಸುವ ಕಾರ್ಯದಲ್ಲಿ ಚೈಲ್ಡ್‌ ರೈಟ್ಸ್‌ ಟ್ರಸ್ಟ್‌ನ ವಾಸುದೇವ ಶರ್ಮಾ ಅವರೊಡನೆ ನಾವು ತೊಡಗಿಕೊಂಡಿದ್ದೆವು. ಗ್ರಾಮ ಪಂಚಾಯತಿಗಳ ಆಡಳಿತ ಮಕ್ಕಳಿಗಾಗಿಯೇ ಮಾಡಬೇಕಾದ ಕಾರ್ಯಗಳು, ನೈಜ ಪರಿಸ್ಥಿತಿಗಳು, ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ ಅನುಷ್ಟಾನ ಕುರಿತು ಸುದೀರ್ಘ ಮೂರು ವರ್ಷಗಳ ಕಾಲ ಮಾಡಿದ ಕಿರು ಸಂಶೋಧನೆ, ಸ್ಥಳೀಯ ಆಡಳಿತದ ಜನಪ್ರತಿನಿಧಿಗಳು, ಅಧಿಕಾರಿಗಳು, ಅಂಗನವಾಡಿ, ಆರೋಗ್ಯ, ಶಿಕ್ಷಣದಲ್ಲಿ ತೊಡಗಿರುವ ಸೇವಾದಾರರು, ಸಮುದಾಯಗಳೊಡನೆಯ ಸಮಾಲೋಚನೆ, ಮಕ್ಕಳೊಡನೆ ನಡೆಸಿದ ಸಭೆಗಳು, ನಮ್ಮ ಗಮನಿಸುವಿಕೆಯೊಡನೆ ಆದ ಕಲಿಕೆ ಮತ್ತು ಫಲಿತಾಂಶಗಳನ್ನು ಕರ್ನಾಟಕ ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಕಾರ್ಯದರ್ಶಿಗಳೆದುರು ೨೦೦೬ರಲ್ಲಿ ಮಂಡಿಸಿದೆವು. ಅಲ್ಲಿನ ಚರ್ಚೆಗಳು, ಸಲಹೆಗಳ ಫಲವಾಗಿ ಕರ್ನಾಟಕ ಸರ್ಕಾರ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆಗಳನ್ನು ಆಯೋಜಿಸಲು ರಾಜ್ಯದ ಗ್ರಾಮ ಪಂಚಾಯಿತಿಗಳಿಗೆ ನೀಡಿದ ಸುತ್ತೋಲೆ ನಮ್ಮ ಬದುಕಿನಲ್ಲಿ ಒಂದು ಮೈಲುಗಲ್ಲೇ ಸರಿ. ಇಂದು ರಾಜ್ಯಾದ್ಯಂತ ಆಯೋಜಿಸುವ ಮಕ್ಕಳ ಹಕ್ಕುಗಳ ಗ್ರಾಮಸಭೆಗಳಲ್ಲಿ ಮಕ್ಕಳು ತಮ್ಮ ಹಕ್ಕೊತ್ತಾಯವನ್ನು ಮಂಡಿಸುತ್ತಿದ್ದಾರೆ. ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹೇಳುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಕ್ಕಳ ಕುರಿತು ಸ್ಥಳೀಯ ಸರ್ಕಾರದ ಬದ್ಧತೆಯ ಜೊತೆಗೆ ಮಕ್ಕಳ ಸಮಸ್ಯೆ ಮತ್ತು ಬೇಡಿಕೆಗಳಿಗೆ ಸ್ಪಂದಿಸುವ ವ್ಯವಸ್ಥೆ ಸೃಷ್ಟಿಯಾಗುತ್ತಿರುವುದು ಮಕ್ಕಳ ಸ್ನೇಹಿ ಆಡಳಿತದ ಸೂಚಕವಾಗಿದೆ. ೨೦೦೩ರಿಂದ ೨೦೦೬ರ ವರೆಗೆ ಸತತ ಮೂರು ವರ್ಷಗಳ ಕಾಲ ಬಳ್ಳಾರಿಯ ೩ ತಾಲೂಕುಗಳ ೧೫ ಗ್ರಾಮ ಪಂಚಾಯಿತಿಗಳಲ್ಲಿ ಚೈಲ್ಡ್‌ ರೈಟ್ಸ್‌ ಟ್ರಸ್ಟ್‌ನ ಸಹವರ್ತಿಗಳೊಡನೆ ಹಗಲು ರಾತ್ರಿ ಕೆಲಸ ನಿರ್ವಸಿದ್ದಾರೆ. ಗ್ರಾಮೀಣ ಮಕ್ಕಳ ಬದುಕನ್ನು ಹಸನಾಗಿಸಲು ಡಾ. ವಾಸುದೇವ ಶರ್ಮಾ ಸರ್ ಶ್ರಮಿಸಿದ ಪ್ರಯತ್ನಗಳನ್ನು, ಕೊಡುಗೆಗಳನ್ನು ಮತ್ತು ಪರಿಶ್ರಮವನ್ನು ಈ ಸಂದರ್ಭದಲ್ಲಿ ನಾವು ಯಾರೂ ಮರೆಯುವಂತಿಲ್ಲ. 

ಮರೆಯದ ಘಟನೆ: ೨೦೦೮ರ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಸಮತಾ ಫೆನ್ಸ್ ಸಂಸ್ಥೆಗೆ ತರಬೇತಿಗಾಗಿ ಬಂದಿದ್ದರು. ನನ್ನೊಟ್ಟಿಗೆ ಇನ್ನೂ ೭ ಜನ ಸಿ.ಆರ್.ಟಿ. ಒಡನಾಡಿಗಳು ಇದ್ದರು. ರಾತ್ರಿ ೧೦ ಗಂಟೆಗೆಯ ಹೊತ್ತಿಗೆ ಊಟ ಮುಗಿಸಿ ಕುಶಲೋಪರಿ ವಿಚಾರಿಸುತ್ತಿದ್ದರು. ನಮ್ಮ ಒಡನಾಡಿಗಳು ಡಾ. ವಾಸುದೇವ ಶರ್ಮಾ ಸರ್ ಅವರಿಗೆ ಒಂದರ ಮೇಲೊಂದು ಪ್ರಶ್ನೆಗಳನ್ನು ಕೇಳುತ್ತಾ ಹೋದರು. ಹಗಲೆಲ್ಲಾ ತರಬೇತಿ ನಡೆಸಿದ್ದರೂ ಅವರು ಸಮಾಧಾನದಿಂದ, ಉತ್ಸಾಹದಿಂದ ಉತ್ತರ ಕೊಡುತ್ತಾ ಹೋದರು. ಚರ್ಚೆ ಶುರುವಾಗಿದ್ದು, ಏನಿದು ಮಕ್ಕಳ ಹಕ್ಕು, ಯಾಕೆ, ಇದರ ಜನಕಿ ಎಗ್ಲಾಂಟಿನ್ ಜೆಬ್ ಯಾರು, ಮೊದಲ ಮಹಾಯುದ್ದ, ಎರಡನೇ ಮಹಾಯುದ್ದ, ವಿಶ್ವಸಂಸ್ಥೆ, ಯುರೋಪಿನಲ್ಲಿ ಮಕ್ಕಳ ಪರಿಸ್ಥಿತಿ, ಅಲ್ಲಿನ ರಾಜಕೀಯ ಕಾರಣಗಳು, ಆಡಳಿತ, ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ, ಒಡಂಬಡಿಕೆಗೆ ಭಾರತ ಸರ್ಕಾರದ ಸಹಿ, ಭಾರತದಲ್ಲಿ ಮಕ್ಕಳನ್ನು ಕುರಿತು ಇರುವ ಕಾನೂನುಗಳು, ನಂತರ ಭಾರತದಲ್ಲಿ ಮಕ್ಕಳ ವಿವಿಧ ಪರಿಸ್ಥಿತಿಗಳು, ಸರ್ಕಾರದ ಯೋಜನೆ, ಕಾರ್ಯಕ್ರಮಗಳು, ಬಜೆಟ್ ಹೀಗೆ ನಾವು ಕೇಳುತ್ತಾ ಹೋದೆವು, ಅವರು ಹೇಳುತ್ತಾ ಹೋದರು. ಇದರ ಮಧ್ಯ ನಮ್ಮ ಒಡನಾಡಿಯೊಬ್ಬ ಎದ್ದು ಬಾತು ರೂಮ್ಗೆ ಹೋಗಿ ಬಂದು ಹೇಳಿದ, ʻಸರ್, ಈಗ ಸಮಯ ಬೆಳಗ್ಗೆ ೫.೩೦ʼ. ಸರ್ ತಕ್ಷಣ ಪ್ರತಿಕ್ರಿಯಿಸಿ ಸಾಕು ಮಲಗಿ ಎಂದು ಎಲ್ಲರನ್ನೂ ಕಳಿಸಿದರು.

ಇಡೀ ರಾತ್ರಿ ಪೂರ್ಣ ಮಕ್ಕಳ ಕ್ಷೇತ್ರದ ಕುರಿತು ನಡೆದ ಚರ್ಚೆ, ವಿಚಾರಗಳನ್ನು ನಾವೆಂದೂ ಮರೆಯುವಂತಿಲ್ಲ. ಅದೊಂದು ಸಾರ್ಥಕ ಕ್ಷಣ, ಅಂದು ನಾವು ಕೇಳಿಸಿಕೊಂಡ ಅನೇಕ ವಿಚಾರಗಳು, ನಮ್ಮನ್ನು ಈ ಕ್ಷೇತ್ರದಲ್ಲಿ ಗಟ್ಟಿಯಾಗಿ ನಿಂತು ಕೆಲಸ ಮಾಡಲು ಹಾಕಿದ ಅಡಿಪಾಯ ಎಂದರೂ ತಪ್ಪಾಗಲಾರದು.  

ಅವರೊಟ್ಟಿಗೆ ವಿವಿಧ ರೀತಿಯ ಕೆಲಸಗಳನ್ನು ಮಾಡಲು ಅವಕಾಶ ಕಲ್ಪಿಸಿರುವ ಸಿ.ಆರ್.ಟಿ.ಗೆ ನಾನು ಅಭಾರಿಯಾಗಿದ್ದೇನೆ. ಮಕ್ಕಳ ಹಕ್ಕುಗಳ ಕ್ಷೇತ್ರದ ಯಾವುದೇ ವಿಚಾರಗಳನ್ನು ಕೇಳಿದರೆ, ರಾಜ್ಯದ ಯಾವುದೇ ಮೂಲೆಯಿಂದ ಕೇಳಿದರೂ ತಟತಟನೆ ಹೇಳುವುದು, ವೆಬ್ ಸೈಟ್ ವಿಳಾಸ, ಪಿ.ಪಿ.ಟಿ.ಮಂಡನೆಗಳು, ಪುಸ್ತಕಗಳು, ನಿಯಮಗಳು, ವಿವಿಧ ಕಾಯ್ದೆಗಳು ಮತ್ತು ಸೆಕ್ಷನ್‌ಗಳು, ಪ್ರಕರಣ ಅಧ್ಯಯನಗಳು, ಕ್ಷೇತ್ರ ಕಾರ್ಯದ ವಿಚಾರಗಳು, ಗೂಗಲ್ ಮೀಟ್‌ಗಳು ಮತ್ತು ನ್ಯಾಯಾಲಯದ ಉಲ್ಲೇಖಗಳನ್ನು ತಿಳಿಸುವ, ಈ ಕುರಿತು ಕೇಳಿದ್ದನ್ನು ನೀಡುವ ವಾಸು ಸರ್‌ ಮಕ್ಕಳ ಕ್ಷೇತ್ರದ ಕಾಮಧೇನು ಕಲ್ಪವೃಕ್ಷವಿದ್ದಂತೆ.  ಈಗ ಡಾ. ವಾಸುದೇವ ಶರ್ಮಾ ಸರ್ ಗೆ ೬೦ ವರ್ಷಗಳು ಪೂರೈಸಿದ ಸಂದರ್ಭ. ಅವರು ಇನ್ನೂ ಎತ್ತರಕ್ಕೆ ಬೆಳೆಯಲಿ, ದೇವರು ಅವರಿಗೆ ಆರೋಗ್ಯ, ದೀರ್ಘಾಯುಷ್ಯ, ಐಶ್ವರ್ಯ ನೀಡಲಿ, ಮಕ್ಕಳ ಹಕ್ಕುಗಳ ಕ್ಷೇತ್ರಕ್ಕೆ ಅವರು ದೊಡ್ಡ ಆಸ್ತಿ, ಆ ಕ್ಷೇತ್ರಕ್ಕೆ ಇನ್ನೂ ಕೊಡುಗೆಗಳನ್ನು ನೀಡುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪಾರ್ಥಿಸುತ್ತೇನೆ.

  • ಡಾ. ಎಚ್.ಸಿ. ರಾಘವೇಂದ್ರ, ಕ್ಷೇತ್ರ ಸಮನ್ವಯಕಾರರು ಸಿ ಆರ್‌ ಟಿ, ಮಕ್ಕಳ ಹಕ್ಕುಗಳ ಕಾರ್ಯಕರ್ತರು ಹಾಗೂ ನಿಕಟಪೂರ್ವ ಸದಸ್ಯರು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ.