ನಾ ಕಂಡ ಡಾ. ವಾಸುದೇವ ಶರ್ಮಾ – ಶೈಲಜಾ ಜಿ.ಕೆ.

Last Updated: February 21, 2026By

ನಾನು ಇವರನ್ನು ಭೇಟಿಯಾಗಿದ್ದು ಮಾರ್ಚ್ 2018 ರಲ್ಲಿ ಬೀದರ್ ನಲ್ಲಿ ನಡೆದ ಇಮೇಜ್ ಭಾಗಿದಾರರ ಕಾರ್ಯಗಾರದಲ್ಲಿ. ಆಗ ನಾನು ಕನ್ನಡದಲ್ಲಿ ಮಾತಾಡುವುದು ಅಷ್ಟಕ್ಕಷ್ಟೇ ಇತ್ತು. ಈ ಕಾರ್ಯಗಾರದಲ್ಲಿ ಬಾಲ್ಯವಿವಾಹವಾದ ಮಕ್ಕಳ ಭವಿಷ್ಯ ಉತ್ತಮಗೊಳಿಸಲು ಇರುವ ಹಾದಿಗಳನ್ನು ಒಬ್ಬೊಬ್ಬರಿಂದ ಒಂದೊಂದು ವಿಷಯ ಕಲೆ ಹಾಕುವಾಗ ನಾನು ಕನ್ನಡದಲ್ಲಿ ಮಾತಾಡಲು ಎಡವುತ್ತಿರುವುದು ಗಮನಿಸಿ, ನಿಮ್ಮ ಭಾಷೆಯಲ್ಲೇ ಮಾತಾಡಿ ಎಂದು ಪ್ರೋತ್ಸಾಹಿಸಿದ್ದರು. 

ಆಗಿನಿಂದ ಹಂತ ಹಂತದಲ್ಲೂ ಇವರ ಜ್ಞಾನದಿಂದ ನಾನು ಬೆಳೆಯಲು ಅನುಕೂಲವಾಯಿತೆಂದು ಹೆಮ್ಮೆಯಿಂದ ಹೇಳುತ್ತೇನೆ.  ಇವರ ಸಲಹೆ ಸೂಚನೆಗಳಿಗೆ ರಾಜ್ಯದ ಮೂಲೆ ಮೂಲೆಗಳಿಂದ ಮಕ್ಕಳ ಅಭಿವೃದ್ಧಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕಾರ್ಯಕರ್ತರಿಂದ ಫೋನ್ ಗಳು ಬರುತ್ತಿರುತ್ತವೆ. ಇಂತಹವರಲ್ಲಿ ನಾನೂ ಒಬ್ಬಳು. ಇವರು ಎಂದೂ ಬೇಸರಪಡಲ್ಲ, ಯಾವಾಗಲೂ ನಗುಮುಖದಲ್ಲಿರುತ್ತಾರೆ. 

ಮಕ್ಕಳ ಹಕ್ಕುಗಳ ಬಗ್ಗೆ ತುಂಬಾ ಸಂಘ ಸಂಸ್ಥೆಗಳು, ಕಾರ್ಯಕರ್ತರಿಗೆ ತಿಳಿಸುತ್ತಾ ಬಂದಿದ್ದಾರೆ. ಎಲ್ಲರಿಗೂ ಉತ್ತೇಜನ ನೀಡುತ್ತಾರೆ. ಇವರಲ್ಲಿ ಸ್ವಾರ್ಥವಿಲ್ಲ, ಹಾಗಂತ ಮುಲಾಜು ಇಲ್ಲ. ವಿಷಯಾಧಾರಿತವಾಗಿ ಮಕ್ಕಳ ಹಕ್ಕುಗಳ ಸಂದರ್ಭದಲ್ಲಿ ನಿಷ್ಠುರ ಮಾತು. ರಾಜಿಯಾಗುವ ಪ್ರಶ್ನೆಯೇ ಇಲ್ಲ.     

2021ರಲ್ಲಿ ನಾನು ಸಮಾಜಕಾರ್ಯಕರ್ತಳಾಗಿ ಬೆಳೆಯಲು ಉತ್ತೇಜಿಸಿದ್ದರಿಂದ ನಾನು ಕಾರ್ಯಕ್ಷೇತ್ರದಲ್ಲಿ ಒಳ್ಳೆಯ ಕೆಲಸಗಳು, ಸಾಧನೆಗಳನ್ನು ಮಾಡಲು ಅನುಕೂಲವಾಯಿತು. ವಿಶೇಷವಾಗಿ ಬಾಲ್ಯವಿವಾಹಕ್ಕೊಳಗಾದ ಹೆಣ್ಣುಮಕ್ಕಳ ಜೊತೆ ಕೆಲಸ ಮಾಡಿದ್ದು. ಅದರ ಪ್ರತಿಫಲವಾಗಿ ಡೆಕ್ಕನ್ ಹೆರಾಲ್ಡ್ ಚೇಂಜ್‌ ಮೇಕರ್ಸ್‌ 2020 ಕ್ಕೆ ಆಯ್ಕೆಯಾಗಿದ್ದು, ಪ್ರಶಸ್ತಿ ದೊರೆಯಿತು. ಬಾದಾಮಿ ತಾಲ್ಲೂಕಿನ ಆಡಿಗಲ್ ಗ್ರಾಮ ಒಂದರಲ್ಲೇ 32 ಬಾಲ್ಯವಿವಾಹಗಳು ಆಗಿದ್ದನ್ನು ಪ್ರಜಾವಾಣಿಗೆ ತಿಳಿಸಿದ್ದು. ಇದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ, ಬಾಗಲಕೋಟೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರುಗಳಿಂದ ಅದನ್ನು ಸಾಬೀತುಪಡಿಸಿ ಎಂದು ಪತ್ರಗಳು ಬಂತು. ಈ ಒಂದು ಸಮಸ್ಯೆ ದೊಡ್ಡದಾಗಿ ಪರಿಣಮಿಸುತ್ತಿತ್ತು. ಆಗ ಇವರ ಸಲಹೆ ಸೂಚನೆಗಳಿಂದ ಸದರಿ ಸಮಸ್ಯೆ ಅರ್ಥಪೂರ್ಣವಾಗಿ  ಬಗೆಹರಿಯಿತು. ಒಂದೊಂದು ಕಾರ್ಯಾಗಾರದಲ್ಲಿ ಒಂದೊಂದು ಹೊಸ ವಿಚಾರಗಳನ್ನು ಇವರಿಂದ ತಿಳಿಯುತ್ತಿದ್ದೆ. ಇವನ್ನು ನನ್ನ ಸ್ವಂತಕ್ಕೆ ಮತ್ತು ಕಾರ್ಯಕ್ಷೇತ್ರದಲ್ಲಿ ಅಳವಡಿಸಿಕೊಳ್ಳುತ್ತಿದ್ದೆ. 

ವಿಶೇಷವಾಗಿ ಇವರ ಪತ್ನಿ ಲಕ್ಷ್ಮಿ ಮೇಡಂರವರೂ ಸಹಾ ಅಹಂ ಇಲ್ಲದವರು. ತಾಳ್ಮೆಗೆ ತವರೆನ್ನಬಹುದು. ನಾನು ಹೊಸ ಪರಿಚಯವಾಗಿದ್ದರೂ ಚೆನ್ನಾಗಿ ಬೆರೆಯುತ್ತಿದ್ದರು. ಸ್ನೇಹಮಯಿಯಾಗಿದ್ದರು. ಇಂತಹ ಸಹಭಾಗಿ ಪತ್ನಿಯಿಂದ ಡಾ. ವಾಸುದೇವ ಶರ್ಮಾ ಸರ್ ಇಷ್ಟು ಬೆಳೆಯಲು, ಪ್ರಖ್ಯಾತಿಗೆ ಪಾತ್ರರಾಗಲು ಅನುಕೂಲವಾಗಿದೆ. ಅಂದರೆ ಪತಿಯ ಕೆಲಸದ ಹಿಂದೆ ಪತ್ನಿಯ ಸಹಕಾರ ಇದೆ ಎಂದು ಭಾವಿಸುತ್ತೇನೆ.                 

  • ಶೈಲಜಾ ಜಿ. ಕೆ. ರೀಚ್‌ ಸಂಸ್ಥೆ, ಬಾಗಲಕೋಟೆ