ನಮ್ಮ ವಾಸು – ವಿಶ್ವ ವಿನ್ಯಾಸ್
ನೆಲಮಂಗಲ ವಿಶ್ವನಾಥ ವಾಸುದೇವ ಶರ್ಮಾ ಎನ್ನುವ ಹೆಸರು ನೆನಪಾದ ತಕ್ಷಣ ನನಗನಿಸುವುದು ʻಎನರ್ಜಿ’. ಅವನ (ನಾವಿಬ್ಬರೂ ಒಟ್ಟಿಗೆ ಮಾತಿಗೆ ಸಿಕ್ಕಾಗ ನಾವು ಏಕವಚನದಲ್ಲೇ ಮಾತಾಡುವುದು) ʻಎನರ್ಜಿ’ಯ ಅಭಿಮಾನಿ ನಾನು.
೧೯೯೧ರಿಂದ ವಾಸು ನನಗೆ ಪರಿಚಿತ. ಅರಸೀಕೆರೆಯಲ್ಲಿರುವ ಕಸ್ತೂರ್ಬಾ ಗಾಂಧಿ ನ್ಯಾಷನಲ್ ಮೆಮೋರಿಯಲ್ ಟ್ರಸ್ಟ್ ನಲ್ಲಿದ್ದ “ಜಿಲ್ಲಾ ಸಂಪನ್ಮೂಲ ಕೇಂದ್ರ” (ಡಿ.ಆರ್.ಯು) ದಲ್ಲಿ ನಾನೂ ಅವನೂ ಸಹೋದ್ಯೋಗಿಗಳು. ಆಗಿನಿಂದ ಈಗಿನವರೆಗೆ ಅವನು ನಿಂತಲ್ಲಿ ನಿಲ್ಲಲಾರ ಕೂತಲ್ಲಿ ಕೂರಲಾರ. ಏನಾದರೂ ಮಾಡುತ್ತಾ ಇರುವ ʻವರ್ಕೋಹಾಲಿಕ್’.
ವಾಸು ಜೊತೆಗಿನ ಒಡನಾಟ ಅವನು ಡಿ.ಆರ್.ಯು. ಬಿಟ್ಟ ಮೇಲೂ ಮುಂದುವರಿಯಿತು. ಅವನ ಹಲವು ಕನಸುಗಳಿಗೆ ಸಿಂಗಾರ ಮಾಡಿ ಬಣ್ಣ ಹಾಕುವ ಕೆಲಸದಲ್ಲಿ ನಾನೂ ನಿರಂತರ ಪಾತ್ರ ವಹಿಸಿದ್ದೇನೆ ಎನ್ನುವುದು ನನಗೆ ಖುಷಿ ಕೊಡುವ ನೆನಪುಗಳು. ಅವನು ಬರೆದ ಹಲವು ಕವನ, ಕತೆ, ಚಿತ್ರ ಹಾಗೂ ಹೊಸ ಐಡಿಯಾಗಳಿಗೆ ನಾನು ಮೊದಲ ನೋಡುಗ, ಕೇಳುಗ ಮತ್ತು ಓದುಗನಾಗಿರುತ್ತಿದ್ದೆ.
ಮಕ್ಕಳ ಹಕ್ಕುಗಳ ವಿಚಾರಕ್ಕೆ ಬಂದರೆ ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯ ಮಕ್ಕಳ ಹಕ್ಕುಗಳ ಕಾರ್ಯಕರ್ತ ಅಂದರೆ ನಿಸ್ಸಂದೇಹವಾಗಿ “ವಾಸು” ಹೆಸರನ್ನು ಹೇಳಲೇಬೇಕಾಗುತ್ತದೆ. ಹಲವು ವರ್ಷಗಳ ಹಿಂದೆ ಕರ್ನಾಟಕ ರಾಜ್ಯದಲ್ಲಿ ಹಲವರು ಮಕ್ಕಳ ಹಕ್ಕುಗಳ ಬಗ್ಗೆ ಕೆಲಸ ಮಾಡಿದ್ದರೂ, “ಮಕ್ಕಳ ಹಕ್ಕು” ವಿಚಾರಗಳಿಗೆ ಒಂದು ಸ್ಟಾರ್ ವ್ಯಾಲ್ಯು ತಂದು ಕೊಟ್ಟವನು “ವಾಸುದೇವ ಶರ್ಮಾ” ಎಂದರೆ ಅತಿಶಯೋಕ್ತಿ ಅಲ್ಲ. ಜನರ ನಾಡಿಮಿಡಿತವನ್ನು ಅರ್ಥಮಾಡಿಕೊಂಡು ಮಕ್ಕಳ ಹಕ್ಕುಗಳ ಬಗೆಗಿನ ವಿವಿಧ ವಿಚಾರಗಳನ್ನು ಯಾರಿಗೆ, ಹೇಗೆ ತಲುಪಿಸಬೇಕು ಎನ್ನುವ ಯೋಚನೆ, ಯೋಜನೆಗಳನ್ನು ಹಮ್ಮಿಕೊಂಡು ಕಾರ್ಯ ಪ್ರವರ್ತಕನಾಗಿ ಕನ್ನಡಿಗರಿಗೆ ಅಷ್ಟಾಗಿ ಲಭ್ಯವಿಲ್ಲದ “ಮಕ್ಕಳ ಹಕ್ಕು”ಗಳ ವಿಚಾರಗಳನ್ನು ಜನರಿಗೆ, ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಜನರಿಗೆ, ಅಧಿಕಾರಿಗಳಿಗೆ, ಮಾಧ್ಯಮಗಳಿಗೆ, ರಾಜಕಾರಣಿಗಳಿಗೆ ಮುಟ್ಟಿಸುವ ಪ್ರಯತ್ನದಲ್ಲಿ ವಾಸು ಮತ್ತು ಅವನ ತಂಡ ಸಾಕಷ್ಟು ಮಟ್ಟಿಗೆ ಯಶಸ್ವಿ ಆಗಿದ್ದಾರೆ. ಈ ಪ್ರಕ್ರಿಯೆಯಲ್ಲಿ ಒಬ್ಬ ಕಲಾವಿದನಾಗಿ ನಾನು ಕೂಡ ಅವನ ಸಂಸ್ಥೆಯ ಜೊತೆ ಸಾಥ್ ನೀಡಿದ್ದೇನೆ ಎನ್ನುವುದು ನನ್ನ ಹೆಮ್ಮೆ.
ಸುಮಾರು ಮೂರುವರೆ ದಶಕಗಳಿಂದ ಮಕ್ಕಳ ಹಕ್ಕುಗಳಿಗಾಗಿ ಅವಿರತವಾಗಿ ದುಡಿಯುತ್ತಿರುವ ವಾಸುದೇವ ಶರ್ಮಾ ಹಲವು ನವೀನವಾದ, ಸೃಜನಾತ್ಮಕವಾದ ಯೋಜನೆಗಳನ್ನು ಸರ್ಕಾರದ ಜೊತೆಗೆ ಸೇರಿಕೊಂಡು ಜಾರಿಗೆ ತಂದಿರುವುದು ಅವನ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ. ಮುಖ್ಯವಾಗಿ ಮಕ್ಕಳ ಹಕ್ಕುಗಳ ಗ್ರಾಮ ಸಭೆ, ಚುನಾವಣಾ ಸಮಯದಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ವಕಾಲತ್ತು – ಮಕ್ಕಳ ಬೇಡಿಕೆಗಳನ್ನು ರಾಜಕೀಯ ಪಕ್ಷಗಳ ಮುಖ್ಯಸ್ಥರಿಗೆ ಅವರ ಕಚೇರಿಗಳಿಗೆ, ಮಾಧ್ಯಮಗಳಿಗೆ ತಲುಪಿಸುವುದು, ಚೈಲ್ಡ್ ಇನ್ ನ್ಯೂಸ್, ಮಕ್ಕಳ ಹಕ್ಕುಗಳ ಸಂಸತ್ತು, ವಿಧಾನ ಸಭೆ, ವಿಧಾನ ಪರಿಷತ್ತುಗಳಲ್ಲಿ ಮಕ್ಕಳ ಕುರಿತಾಗಿ ಎತ್ತಲಾದ ಪ್ರಶ್ನೆಗಳ ವಿಶ್ಲೇಷಣೆ, ಮಕ್ಕಳ ಹಕ್ಕುಗಳಿಗಾಗಿ ಶಾಸಕರ ವೇದಿಕೆ ಇತ್ಯಾದಿ.
ಈ ವರ್ಷ ವಾಸುವಿಗೆ ನನ್ನ ಹಾಗೆ ೬೦ ವರ್ಷ ಆಯಿತು. ಈ ಸಂದರ್ಭದಲ್ಲಿ ಇನ್ನೂ ಹೆಚ್ಚಿನ ಗೌರವ, ಪ್ರಶಸ್ತಿ, ಹುದ್ದೆ ಅವನನ್ನು ಹುಡುಕಿಕೊಂಡು ಬರಲಿ. ಆರೋಗ್ಯ, ಆನಂದ ಹೆಚ್ಚಾಗಲಿ.
- ವಿಶ್ವ ವಿನ್ಯಾಸ್, ಮಾಹಿತಿ, ಶಿಕ್ಷಣ, ಮತ್ತು ಸಂವಹನ ಅಭ್ಯಾಸಿ, ಮೈಸೂರು









