ನನ್ನನ್ನು ಪತ್ರಿಕೋದ್ಯಮಕ್ಕೆ ಕರೆತಂದ ವಾಸು – ಡಾ ಕೂಡ್ಲಿ ಗುರುರಾಜ
ವಾಸುದೇವ ಶರ್ಮಾನ ಬಗ್ಗೆ ಬರೆಯಲು ಕುಳಿತರೆ ನೆನಪುಗಳ ಮೆರವಣಿಗೆ ಸಾಗುತ್ತವೆ. ಅದು ನಮ್ಮ ಹೈಸ್ಕೂಲ್ ವಿದ್ಯಾಭ್ಯಾಸದ ದಿನಗಳು. ನಾವು ಜೊತೆಯಾಗಿ ಅಭಿನಯಿಸಿದ ಸಾಲುಸಾಲು ನಾಟಕಗಳು. ನನ್ನನ್ನು ದಿನಪತ್ರಿಕೆಯ ಸಂಪಾದಕರೆದುರು ಕರೆದೊಯ್ದು ಪತ್ರಿಕೋದ್ಯಮದಲ್ಲಿ ಅಂದಿನಿಂದಲೇ ತೊಡಗಿಸಿದ ಆ ಕ್ಷಣಗಳು…
ವಾಸು ಮತ್ತು ನಾನು ಮೈಸೂರಿನ ಶಾರದಾ ವಿಲಾಸ ಬಾಲಕರ ಪ್ರೌಢಶಾಲೆಯಲ್ಲಿ ಕ್ಲಾಸ್ ಮೇಟ್ಸ್. ಆತ ಇಂಗ್ಲಿಷ್ ಮೀಡಿಯಂ. ನಾನು ಕನ್ನಡ ಮೀಡಿಯಂ. ಪ್ರಥಮ ಭಾಷೆ ಸಂಸ್ಕೃತದ ತರಗತಿಯಲ್ಲಿ ನಮಗೆಲ್ಲರಿಗೂ ಒಟ್ಟಿಗೆ ಪಾಠ. ಹಾಗಾಗಿ, ವಾಸು ಗೆಳೆತನ ಆಗಿನಿಂದ.
ಹೈಸ್ಕೂಲ್ ನಂತರ ನಮ್ಮಿಬ್ಬರ ಕಾಲೇಜು ಬೇರೆಯಾದರೂ ನಮ್ಮಿಬ್ಬರನ್ನು ಒಗ್ಗೂಡಿಸಿದ್ದು ರಂಗಭೂಮಿ. ಇಬ್ಬರಿಗೂ ಆಗ ನಾಟಕದ ಗೀಳು. ಮೈಸೂರಿನ ವಿದ್ಯಾರಣ್ಯಪುರಂನಲ್ಲಿದ್ದ ಅಂಕ ನಾಟಕ ತಂಡದ ಸದಸ್ಯರು ನಾವು. ಅದು 1980ರ ದಶಕದ ಆರಂಭದ ವರ್ಷಗಳು. ರಂಗ ನಿರ್ದೇಶಕ ನಾ. ಶ್ರೀನಿವಾಸ್ (ಪಾಪು) ಹುಟ್ಟುಹಾಕಿದ್ದ ಈ ತಂಡದಿಂದ ಮೈಸೂರು ಹಾಗೂ ಸುತ್ತಮುತ್ತಲು ಅನೇಕ ಬೀದಿನಾಟಕಗಳ ಪ್ರದರ್ಶನ. ನಾವಿಬ್ಬರೂ ತಂಡದ ಇತರ ಕಲಾವಿದರೊಂದಿಗೆ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದೇವೆ. ಆ ದಿನಗಳಲ್ಲಿ ಇದ್ದ ಏಕೈಕ ರಂಗಸ್ಥಳ ಮೈಸೂರಿನ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ನಡೆದ ನಮ್ಮ ತಂಡದ ನಾಟಕಗಳಲ್ಲೂ ಪಾತ್ರ ಮಾಡಿದ್ದೆವು. ರಂಗಸಜ್ಜಿಕೆಯ ಕೆಲಸಗಳಿಗೆ ಕೈ ಜೋಡಿಸುತ್ತಿದ್ದೆವು. ಆಗೆಲ್ಲಾ ನಾನು ಹಾಗೂ ವಾಸು ಸೈಕಲ್ ಸವಾರರು. ನಾವಿಬ್ಬರೂ ನಾಟಕದ ಕೆಲಸಕ್ಕಾಗಿ ಮೈಸೂರಿನ ಅನೇಕ ಕಡೆ ಸೈಕಲ್ ಮೇಲೆ ಜೊತೆಯಲ್ಲೇ ಸುತ್ತಾಡುತ್ತಿದ್ದೆವು. ರಾತ್ರಿ ವೇಳೆ ನಾಟಕದ ಪೋಸ್ಟರ್ಗಳನ್ನೂ ಅಂಟಿಸುತ್ತಿದ್ದೆವು.
ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ವಾಸು ಓದುತ್ತಿದ್ದಾಗ ಸಮಾನಮನಸ್ಕ ವಿದ್ಯಾರ್ಥಿಗಳ ಜೊತೆಗೂಡಿ ೧೯೮೫ನೇ ಇಸವಿಯಲ್ಲಿ ನೆಳಲು ಬೆಳಕು (ನೆಬೆ) ನಾಟಕ ತಂಡ ಹುಟ್ಟು ಹಾಕಿದ್ದ.
ನೆಳಲು ಬೆಳಕು ನಾಟಕ ತಂಡ ಜನವರಿ 1986ರಲ್ಲಿ ಮೈಸೂರಿನ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ನೆಬೆ ʼ೮೬ ಮೊದಲ ಅಂತರ ಕಾಲೇಜು ನಾಟಕ ಸ್ಪರ್ಧೆಯನ್ನು ಆಯೋಜಿಸಿತ್ತು. ಆ ಕಾಲದಲ್ಲಿ ಈ ನಾಟಕ ಸ್ಪರ್ಧೆ ಮೈಸೂರಿನ ಕಾಲೇಜು ರಂಗಭೂಮಿಯಲ್ಲಿ ಸೃಷ್ಟಿಸಿದ ಸಂಚಲನ ಅಪಾರ.
ಈ ಮೊದಲ ನಾಟಕೋತ್ಸವವನ್ನು ದೀಪ ಬೆಳಗಿ ಉದ್ಘಾಟಿಸಿದದ್ದು ನಾನು!
ನಾನು ನಮ್ಮ ಕಾಲೇಜಿನಿಂದ ನಾ.ಶ್ರೀನಿವಾಸ್ ಅವರು ರಚಿಸಿದ ʻಕನಸಿನವರುʼ ನಾಟಕವನ್ನು ನಿರ್ದೇಶಿಸಿ ಪಾತ್ರವಹಿಸಿದ್ದೆ. ನೇಪಥ್ಯದಲ್ಲಿ ಸಹಕಲಾವಿದರೊಂದಿಗೆ ರಂಗವೇರಲು ಸಿದ್ಧವಾಗುತ್ತಿದ್ದೆ. ಮೇಕಪ್ ರೂಂಗೆ ಬಂದ ವಾಸು, ʻನಾಟಕೋತ್ಸವವನ್ನು ನೀನು ಉದ್ಘಾಟಿಸಬೇಕುʼ ಅಂದ. ನನಗೆ ಒಂದು ಕ್ಷಣ ಗಾಬರಿ. ʻಏಕೆ?ʼ ಅಂದೆ. ʻನಾಟಕೋತ್ಸವದ ಮೊದಲ ನಾಟಕದ ಪ್ರಮುಖ ಪಾತ್ರಧಾರಿ ಕೈಯಿಂದಲೇ ನಾಟಕೋತ್ಸವವನ್ನು ಉದ್ಘಾಟಿಸಬೇಕೆಂದು ನಾವು ನಿರ್ಧರಿಸಿದ್ದೇವೆ. ಹೀಗಾಗಿ ನೀನೇ ನಾಟಕೋತ್ಸವ ಉದ್ಘಾಟಿಸಬೇಕುʼ ಎಂದ. ನಾಟಕದ ಪ್ರಮುಖ ಪಾತ್ರ ʻಕೂಲಿʼ. ಮುಂದೆ ಮಹತ್ತರವಾದ ಮೈಲುಗಲ್ಲಾದ ʻನೆಬೆ ನಾಟಕೋತ್ಸವʼವನ್ನು ನಾನು ದೀಪ ಬೆಳಗಿ ಉದ್ಘಾಟಿಸಿದ ಕ್ಷಣ ನನಗೊಂದು ಅದ್ಭುತ ನೆನಪು.
ಪದವಿ ವಿದ್ಯಾಭ್ಯಾಸದ ನಂತರ ದುಡಿಯಲು ಆರಂಭಿಸಿದೆ. ನಾಟಕಗಳಲ್ಲಿ ತೊಡಗುವುದು ಕಡಿಮೆಯಾಯಿತು. ವಾಸು ಪತ್ರಿಕೋದ್ಯಮ ಪದವಿಯ ನಂತರ ʻಆರತಿʼ ಪತ್ರಿಕೆಯಲ್ಲಿ ವರದಿಗಾರನಾಗಿ ಕೆಲಸ ಆರಂಭಿಸಿದ್ದ. ಇಂತಹ ಒಂದು ದಿನ ವಾಸು ನನ್ನನ್ನು ಹುಡುಕಿಕೊಂಡು ನಮ್ಮ ಮನೆಗೆ ಬಂದ. ʻಬಾ ಹೋಗೋಣʼ ಅಂದ. ʻಎಲ್ಲಿಗೆ?ʼ ಕೇಳಿದೆ. ʻಸುಮ್ಮನೇ ಬಾ. ಈಗೊಂದು ಕೆಲಸವಿದೆʼ ಅಂದ. ಸೋಜಿಗದಿಂದಲೇ ಅವನೊಡನೆ ಹೊರಟೆ. ವಾಸು ನನ್ನನ್ನು ಕರೆದೊಯ್ದಿದ್ದು ನಮ್ಮ ಮನೆ ಹತ್ತಿರವೇ ಇದ್ದ ಆರತಿ ಬೆಳಗಿನ ದಿನಪತ್ರಿಕೆಯ ಕಚೇರಿಗೆ. ಸಂಪಾದಕರಾಗಿದ್ದ ಬಿ.ಎಸ್.ನಾಗರಾಜರಾವ್ ಅವರ ಎದುರು ನನ್ನನ್ನು ಕೂರಿಸಿದ. ನಾಗರಾಜರಾವ್ ಅವರ ಪರಿಚಯ ನನಗಿತ್ತು. ಅದಾಗಲೇ ಆ ಪತ್ರಿಕೆಯಲ್ಲೇ ನನ್ನ ಕೆಲವು ಲೇಖನಗಳು ಪ್ರಕಟವಾಗಿತ್ತು. ವಾಸು ಸ್ನಾತಕೋತ್ತರ ಪದವಿ ಅಧ್ಯಯನ ಮುಂದುವರಿಸಲು ನಿರ್ಧರಿಸಿದ್ಧ. ನಾಗರಾಜರಾವ್ ಅವರ ಬಳಿ ವಾಸು ನನ್ನ ಬಗ್ಗೆ ಮಾತಾಡಿ ನಾನು ಆರತಿ ಪತ್ರಿಕೆ ಸೇರಬೇಕೆಂಬುದು ಪ್ರಸ್ತಾಪಿಸಿದ್ದ. ಆರತಿ ಪತ್ರಿಕೆಯಲ್ಲಿ ನಾನು ವರದಿಗಾರನಾಗಿ ಕೆಲಸ ಅಂದಿನಿಂದಲೇ ಆರಂಭಿಸಿದೆ. ಹೀಗೆ ನಾನು ಪತ್ರಿಕೋದ್ಯಮ ಪ್ರವೇಶಿಸಲು ವಾಸು ಕಾರಣನಾಗಿದ್ದಾನೆ. ಆತನ ಬಗ್ಗೆ ಆ ಕೃತಜ್ಞತೆ ನನ್ನಲ್ಲಿ ಯಾವತ್ತಿಗೂ ಇರುತ್ತದೆ.
ಆರತಿ ಪತ್ರಿಕೆಗೆ ವರದಿಗಾರನಾಗಿ ನಾನು ಸೇರಿದ ನಂತರವೂ ವಾಸು ಜೊತೆ ಸ್ವಲ್ಪ ದಿನಗಳ ಕಾಲ ಒಡನಾಟ ಇತ್ತು. ನಂತರ ಕೆಲ ದಿನಗಳಲ್ಲೇ ವಾಸು ಸಮಾಜಕಾರ್ಯ ಅಧ್ಯಯನಕ್ಕಾಗಿ ಬೆಂಗಳೂರಿಗೆ ತೆರಳಿದ. ಅವನೊಡನೆ ಸಂಪರ್ಕ ತಪ್ಪಿತು. ಈಗಿನಂತೆ ಆಗ ಮೊಬೈಲ್ ಫೋನ್ಗಳು ಇರಲಿಲ್ಲ. ನಾನು ಪತ್ರಿಕೋದ್ಯಮದಲ್ಲೇ ಬದುಕು ಕಟ್ಟಿಕೊಳ್ಳಬೇಕೆಂದು ನಿರ್ಧರಿಸಿ ಅದರಲ್ಲೇ ಸಂಪೂರ್ಣವಾಗಿ ಮುಳುಗಿದೆ.
ಸುಮಾರು ಹತ್ತು ವರ್ಷಗಳ ಕಾಲ ವಾಸುವಿನ ಸಂಪರ್ಕವಿರಲಿಲ್ಲ. ಬೆಂಗಳೂರಿನಲ್ಲಿ ಕನ್ನಡಪ್ರಭದ ಪ್ರಧಾನ ವರದಿಗಾರನಾಗಿದ್ದಾಗ ವಾಸು ಸಂಪರ್ಕ ಮತ್ತೆ ಸಾಧ್ಯವಾಯಿತು. ಚೈಲ್ಡ್ ರೈಟ್ಸ್ ಟ್ರಸ್ಟ್ ಸ್ಥಾಪಿಸಿ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಶ್ರಮಿಸುತ್ತಿದ್ದ ವಾಸು ಜೊತೆ ನನ್ನ ಇನ್ನೊಬ್ಬ ರಂಗ ಗೆಳೆಯ ನಾಗಸಿಂಹ ಜಿ.ರಾವ್ ಸೇರಿದ್ದ. ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ಕೆಲವು ವಿಶೇಷ ವರದಿಗಳನ್ನು ಮಾಡಲು ವಾಸು ವಿಷಯಗಳನ್ನು ನೀಡುತ್ತಿದ್ದ. ಮಕ್ಕಳ ಹಕ್ಕುಗಳ ಉಲ್ಲಂಘನೆ, ಕಾನೂನುಗಳು, ಸರಕಾರಗಳ ನೀತಿ, ನಿಯಮಗಳು, ಯೋಜನೆಗಳು, ಅವುಗಳಲ್ಲಿರುವ ಕೊರತೆಗಳು, ತೆಗೆದುಕೊಳ್ಳಬೇಕಿದ್ದ ಕ್ರಮಗಳು, ಸಾಧ್ಯತೆಗಳ ಬಗ್ಗೆ ವಾಸು ಜೊತೆ ಅನೇಕ ಬಾರಿ ಚರ್ಚಿಸಿದ್ದೇನೆ. ಆತನಿಂದ ಈ ಕುರಿತು ಅನೇಕ ಮಾಹಿತಿಗಳನ್ನು ಪಡೆದಿದ್ದೇನೆ.
ವಾಸು ಸಮಾಜಕಾರ್ಯ ಕ್ಷೇತ್ರದಲ್ಲಿ ತನ್ನ ಬದ್ಧತೆ, ಪ್ರಾಮಾಣಿಕತೆ, ಶಿಸ್ತಿನಿಂದಾಗಿ ಎತ್ತರದ ಸ್ಥಾನಕ್ಕೆ ಏರಿದ್ದಾನೆ. ವಾಸು ಹೈಸ್ಕೂಲ್ನಲ್ಲಿ ಹೇಗಿದ್ದನೋ ಇವತ್ತಿಗೂ ಅದೇ ಸ್ವಭಾವ. ಅದೇ ಶಿಸ್ತು, ಅದೇ ಪ್ರಾಮಾಣಿಕತೆ, ಅದೇ ನೇರ ನಡೆ, ನುಡಿ. ಯಾವುದಾದರೂ ಜವಾಬ್ದಾರಿ ಹೊತ್ತರೆ ಅದು ಆಗುಮಾಡುವ ತನಕ ವಿರಮಿಸದ ಜಾಯಮಾನ.
ಆತ್ಮೀಯ ದೋಸ್ತ್ ವಾಸುಗೆ ಈಗ ಅರವತ್ತು ವರ್ಷಗಳು. ಶುಭವಾಗಲಿ ಗೆಳೆಯ.
- ಡಾ ಕೂಡ್ಲಿ ಗುರುರಾಜ, ಪ್ರಸ್ತುತ ʻಜನಮಿತ್ರʼ ಪತ್ರಿಕೆಯಲ್ಲಿ ಪತ್ರಕರ್ತರು.






