chandrashekhara-belagere

ನನಗೊಂದು ಎಚ್ಚರಿಕೆಯ ನೆರಳಾಗಿರುವ ವಾಸುದೇವ ಶರ್ಮಾ – ಚಂದ್ರಶೇಖರ ಬೆಳಗೆರೆ

Last Updated: February 21, 2026By

ಮೈಸೂರಿಗೆ ಬಂದು ತಿಂಗಳಾಗಿತ್ತು. ಮಹಾರಾಜಾ ಕಾಲೇಜಿಗೆ ಸೇರಿ ವಾರವೂ ಕಳೆದಿರಲಿಲ್ಲ. ಆಗೊಂದು ದಿನ ಕಾಲೇಜಿನ ಪ್ರಾಂಗಣದಲ್ಲಿ “ಧ್ವನಿ” ಎಂಬ ಗೋಡೆ ಪತ್ರಿಕೆಯಲ್ಲಿ ಚಂದವಾಗಿ ಕಾಣುವ ಅಕ್ಷರಗಳನ್ನು ನೋಡುತ್ತಾ ನಿಂತಿದ್ದೆ. ಹಿಂದಿನಿಂದ ಯಾರೋ ಭುಜ ಅಲುಗಿಸಿದ ಅನುಭವವಾಯಿತು. ತಿರುಗಿ ನೋಡಿದೆ ಬೆಳ್ಳನೆಯ ವ್ಯಕ್ತಿ. ಇವರ ಗಂಭೀರತೆ ಒಮ್ಮೆ ನನಗೆ ಗಾಬರಿ ಹುಟ್ಟಿಸಿತು. 

ಹಿಂದಿನಿಂದ ಭುಜದ ಮೇಲೆ ಕೈ ಇಟ್ಟ ವ್ಯಕ್ತಿ ʻಏನಪ್ಪಾ ನಿನ್ನ ಹೆಸರು?ʼ ಎಂದು ಕೇಳಿದಾಗ ಒಂದು ಕ್ಷಣ ನಾನು ಹೌಹಾರಿದ್ದೆ. ಕಾಲೇಜಿಗೆ ಸೇರಿ ಇನ್ನೂ ಒಂದು ವಾರ ಕಳೆದಿರಲಿಲ್ಲ ಎಂದೆನಲ್ಲ, ಯಾರೋ ಹಾಕಿದ್ದ ಪತ್ರಿಕೆ ನೋಡುತ್ತಿದ್ದರೆ, ಈ ಜುಬ್ಬ ಧರಿಸಿದ ಕನ್ನಡಕಧಾರಿ ಹೀಗೆ ಕಾರಣವಿಲ್ಲದೆ ಮಾತನಾಡಿಸಿದಾಗ ಕ್ಷಣ ಗಾಬರಿಯಾಗದೆ ಇದ್ದೀತೇ?

ಇವರು ಯಾರೋ ಪ್ರಾಧ್ಯಾಪಕರಿರಬೇಕು ಎಂದು ಮತ್ತಷ್ಟು ಗಾಬರಿಯಾಗಿ ಹೆಸರು ಹೇಳಿದ್ದೆ. ಆ ವ್ಯಕ್ತಿ ಕೆಲ ಕ್ಷಣದಲ್ಲೇ ನನ್ನ ತರಗತಿ ವಿವರ ಪಡೆದು ಗೋಡೆ ಪತ್ರಿಕೆಯ ಬಗ್ಗೆ ಕೆಲ ಮಾತು ಹೇಳಿದರು. ಗಂಟೆ ಬಾರಿಸಿತು. ಕುತೂಹಲ ಮೂಡಿಸಿದ ಆ ವ್ಯಕ್ತಿ ಸರಸರನೆ ಮುಂದೆ ಹೋಗಿ ಯಾವುದೋ ತರಗತಿ ಸೇರಿದರು. 

ರಸ್ತೆಗಳೇ ಇಲ್ಲದ ಊರಿನಿಂದ ಮೈಸೂರು ನಗರಕ್ಕೆ ಹೋಗಿ, ಮಹಾರಾಜಾ ಕಾಲೇಜು ಸೇರಿ ಹಲವಾರು ಕುತೂಹಲಗಳ ಸಂತೆಯಲ್ಲಿ ಕನಸುಗಳನ್ನು ಕಾಣುತ್ತಾ ಇದ್ದ ನನಗೆ ಅಂದು ಭುಜದ ಮೇಲೆ ಕೈ ಇಟ್ಟು ಮಾತನಾಡಿಸಿದ ವ್ಯಕ್ತಿ ಎನ್.ವಿ. ವಾಸುದೇವ ಶರ್ಮಾ. ಅಂದರೆ ನಮ್ಮೆಲ್ಲರ ಪ್ರೀತಿಯ ವಾಸು. 

ನನಗಿಂತಲೂ ಒಂದು ವರ್ಷ ಸೀನಿಯರ್‌ ಆದ ವಾಸು Criminology, Public Administration, Journalism (CPJ) ತೆಗೆದುಕೊಂಡಿದ್ದರು. ನಾನು ಸಹ ಇವರ ಜೂನಿಯರ್‌ ಆಗಿ ಅದೇ ವಿಷಯಗಳನ್ನು ಓದುತ್ತಿದ್ದೆ. ಅಂದು ಭುಜ ಹಿಡಿದು ಮಾತನಾಡಿಸಿದ ವಾಸು ನನಗೆ ಮತ್ತೆ ಎದುರಾದದ್ದು ಕಾಲೇಜಿನ ಮುಖ್ಯ ಕಟ್ಟಡದಿಂದ ಪ್ರತ್ಯೇಕವಾದ ಕಟ್ಟಡದಲ್ಲಿದ್ದ ʻಅಪರಾಧಶಾಸ್ತ್ರʼ ವಿಭಾಗದಲ್ಲಿ ತರಗತಿ ಮುಗಿಸಿಕೊಂಡು ಬರುತ್ತಿದ್ದಾಗ. ನನ್ನಂತಹ ಇತರ ವಿದ್ಯಾರ್ಥಿಗಳನ್ನು ಅಡ್ಡಗಟ್ಟಿ, ಸುಮ್ಮನೆ ಲೋಕಾಭಿರಾಮವಾಗಿ ಮಾತನಾಡುತ್ತಾ ಇದ್ದುದನ್ನು ನೋಡಿದೆ. ನಿಮ್ಮಲ್ಲಿ ಯಾರಾದರೂ ಭಾಷಣ ಮಾಡುತ್ತೀರಾ, ಲೇಖನ ಬರೆಯುತ್ತೀರಾ, ಹಾಡು ಹೇಳುತ್ತೀರಾ, ನಾಟಕದಲ್ಲಿ ಪಾತ್ರವಹಿಸಿದ್ದೀರಾ? ಹೀಗೆ ಏನೇನೋ ಕೇಳುತ್ತಿದ್ದರು. ಕೆಲವು ದಿನಗಳ ಕಾಲ ಹೀಗೆ ಅವರಿವರನ್ನು ಕೇಳುತ್ತಲೇ ಇದ್ದರು. 

ಇದಾದ ಕೆಲ ದಿನಗಳ ನಂತರ, ಕಾಲೇಜಿನ ಒಂದು ಭಾಗದಲ್ಲಿ ಅವರ ಜೊತೆಗಾರರೊಡನೆ ವಾಸು ಭಾಷಣ, ಚರ್ಚೆ ಎಂದೇನೋ ಮಾತನಾಡುತ್ತಿದ್ದರು. ಅಲ್ಲಿಂದ ಅವರೆಲ್ಲಾ ಮುಂದೆಲ್ಲಿಗೋ ನಡೆಯತೊಡಗಿದರು. ನಾನೂ ಕುತೂಹಲದಿಂದ ಇವರನ್ನು ಅನುಸರಿಸುತ್ತಾ ಪರಿಚಿತನಂತೆ ನಟಿಸುತ್ತಾ ಸಾಗಿದ್ದೆ. ಅಂದು ನಮ್ಮ ಹಾದಿ ಸಾಗಿದ್ದು ಮಹಾರಾಜಾ ಕಾಲೇಜು ಶತಮಾನೋತ್ಸವ ಭವನದ ಮುಂಭಾಗಕ್ಕೆ. ಅಲ್ಲಿಗೆ ಹೋದ ಕೂಡಲೇ ಒಂದು ಸಾಂಸ್ಕೃತಿಕ ಲೋಕವೇ ತೆರೆದುಕೊಂಡಿತು. ಅಲ್ಲಿಯವರೆಗೂ ನನಗೆ ಪರಿಚಯವಿಲ್ಲದ ಸ್ಕಿಟ್‌, ಮೈಮ್‌, ಕೊಲಾಜ್‌ ಮುಂತಾದ ಕಲಾತ್ಮಕ ಪ್ರಕಾರಗಳು ಪರಿಚಯಗೊಂಡವು. 

ಇವೆಲ್ಲವನ್ನೂ ಕುತೂಹಲದಿಂದ ನೋಡುತ್ತಿದ್ದ ನನಗೆ ವಾಸುದೇವ ಶರ್ಮರೇ ನಾಯಕರಂತೆ ಕಂಡರು. ವಾಸು ಮತ್ತು ಅವರಂತಹ ಇನ್ನಷ್ಟು ವಿದ್ಯಾರ್ಥಿಗಳ ಗುಂಪು ಜೇಸಿಯಾನಾ ಎಂಬ ಅಂತರಕಾಲೇಜು ನಾಟಕ ಮುಂತಾದ ಸ್ಪರ್ಧೆಗಳಲ್ಲಿ ಪಾಲ್ಗೊಂಡರು. ಅನೇಕ ಸ್ಪರ್ಧೆಗಳಲ್ಲಿ ವಿಜೇತರಾಗಿ ರೋಲಿಂಗ್‌ ಶೀಲ್ಡ್‌ ಕೂಡಾ ಮಹಾರಾಜಾ ಕಾಲೇಜಿಗೆ ಪಡೆದರು. ಇಂತಹ ಖುಷಿಯ ಸಂತೆಯಲ್ಲಿ ನಾನೂ ನನಗೆ ಗೊತ್ತಿಲ್ಲದಂತೆ ವಾಸು ಎಂಬ ಸಾಂಸ್ಕೃತಿಕ ಮತ್ತು ಸಾತ್ವಿಕ ಮನೋಭಾವದ ಮನುಷ್ಯನಿಗೆ ಆಕರ್ಷಿತನಾಗಿದ್ದೆ. 

ಮೈಸೂರು ಮಹಾರಾಜಾ ಕಾಲೇಜಿನಲ್ಲಿದ್ದ ಅನೇಕ ಸಾಂಸ್ಕೃತಿಕ ಮನಸ್ಸುಗಳನ್ನು ಒಗ್ಗೂಡಿಸುವಲ್ಲಿ ವಾಸುವಿನ ಜೊತೆ ನನ್ನಂತಹ ಅನೇಕರು ಜೊತೆಯಾದರೂ, ದೂರದೂರುಗಳಿಂದ ಬಂದ ನಾವು ಸಂಕೋಚದಿಂದ ಹಿಂದುಳಿದಾಗ, ವಾಸು ನಮ್ಮನ್ನು ಉತ್ತೇಜಿಸುತ್ತಿದ್ದ ಕಲೆಯನ್ನು ಈಗಲೂ ಯಾರಿಗೂ ನಕಲು ಮಾಡಲು ಸಾಧ್ಯವಿಲ್ಲ. 

ಮೊದಲ ವರ್ಷದ ನೆಳಲು-ಬೆಳಕು ಅನಾವರಣಗೊಳ್ಳುವವರೆಗೂ ಸಭಿಕನಾಗಿದ್ದ ನಾನು ಮತ್ತು ದೂರದಿಂದಲೇ ನೋಡುತ್ತಿದ್ದ ನನ್ನಂತಹ ಕೆಲವರು ಅಂತರ ಕಾಲೇಜು ನಾಟಕ ಸ್ಪರ್ಧೆ ಮತ್ತು ಶಶಿಧರ್‌ ಭಾರೀಘಾಟ್‌ (ಶಶಿ) ಅವರ ನಿರ್ದೇಶನದಲ್ಲಿ ಪ್ರದರ್ಶಿತವಾದ ʻಬಕʼ ನಾಟಕ ಪ್ರದರ್ಶನದ ವೇಳೆಗೆ ನೆಬೆಗೆ ಹತ್ತಿವಾದೆವು. ಆ ವೇಳೆಗೆ ಮಹಾರಾಜಾ ಕಾಲೇಜಿನಲ್ಲಿ ಮೊದಲ ಪದವಿಯ ವರ್ಷ ಮುಗಿದೇ ಹೋಗಿತ್ತು. 

ಶಶಿ ನೆಬೆಯ ಹಿರಿಯರಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದರಷ್ಟೇ. ವಾಸು ಎಂಬ ಜಿಂಕೆಮರಿ ಇಡೀ ಮಹಾರಾಜಾ ಕಾಲೇಜಿನ ಹುಲ್ಲುಗಾವಲನ್ನು ತನ್ನ ಕಾರ್ಯಕ್ಷೇತ್ರವನ್ನಾಗಿಸಿಕೊಂಡಿತ್ತು. 

ಪತ್ರಿಕೋದ್ಯಮ ಪ್ರಾಧ್ಯಾಪಕರಾದ ಪದ್ಮನಾಭ ಮೇಷ್ಟ್ರು ಎಲ್ಲಕ್ಕೂ ಸೈ ಎನ್ನುತ್ತಿದ್ದರು. ವಾಸು ಇವರಿಗೂ ಮೋಡಿ ಮಾಡಿ ʻನೆಬೆʼಗೆ ಸಂಬಂಧಿಸಿದಂತೆ ಅನೇಕ ಒಪ್ಪಿಗೆಗಳು, ಸಹಕಾರಗಳಿಗೆ ಪ್ರಾಂಶುಪಾಲರ ಬಳಿ ಪದ್ಮನಾಭ ಅವರನ್ನು ಮುಂದಿಟ್ಟುಕೊಂಡು ಸಹಾಯ ಪಡೆಯುತ್ತಿದ್ದನು. 

ಶೈಕ್ಷಣಿಕ ವರ್ಷದ ಆರಂಭದಲ್ಲಿ ಅಂತಹ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಗಳಿಗೆ ತಾಲೀಮು ಆರಂಭವಾಗುತ್ತಿದ್ದು, ತದನಂತರ ʻನೆಬೆʼ ಉತ್ಸವಕ್ಕೆ ಸಿದ್ಧತೆಗಳು ನಡೆಯುತ್ತಿದ್ದವು.  

ನನ್ನ ಅರಿವಿಗೆ ಬಂದಂತೆ ವಾಸು, ಶಶಿ  ಮತ್ತು ಕವಿತಾ ರತ್ನ ಅವರ ಕಲ್ಪನೆಯ ಕೂಸು ʻನೆಳಲು-ಬೆಳಕುʼ. ಈ ದಿನಮಾನಗಳಲ್ಲಿ ನೆಳಲು-ಬೆಳಕು ಸಾಂಸ್ಕೃತಿಕ ತಂಡವಾಗಿ ಮಹಾರಾಜಾ ಕಾಲೇಜಿನ ಕೀರ್ತಿಗೆ ಶೋಭೆ ತಂದಿತು. 

ಕಾಲೇಜು ನಾಟಕ ಚಟುವಟಿಕೆಗಳನ್ನು ಉತ್ತೇಜಿಸಿ ಯುವಕರನ್ನು ಸಾಂಸ್ಕೃತಿಕವಾಗಿ ರೂಪುಗೊಳಿಸುವುದು ಇದರ ಉದ್ದೇಶವಾಗಿತ್ತು. ೧೯೮೬ರಲ್ಲಿ ಆರಂಭವಾದ ನೆಳಲು ಬೆಳಕು, ಆ ವರ್ಷದಿಂದಲೇ “ಅಂತರ ಕಾಲೇಜು” ನಾಟಕ ಸ್ಪರ್ಧೆ ನಡೆಸುವ ಮೂಲಕ ಮೈಸೂರಿನ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಂಚಲನ ಉಂಟುಮಾಡಿತು. ಕಾಲೇಜು ನಾಟಕ ರಂಗಕ್ಕೆ ಮತ್ತೊಂದು ಆಯಾಮ ಸಿಕ್ಕಿತು.

ಸುಮಾರು ಒಂದು ತಿಂಗಳ ಕಾಲ ನಾಟಕೋತ್ಸವಕ್ಕಾಗಿ ತಯ್ಯಾರಿ. ನಾವು ೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶತಮಾನೋತ್ಸವ ಭವನದ ಮುಂದೆ ಸೇರಿ ನಾಟಕದ ತಾಲೀಮು ನಡೆಸುವುದು, ನಾಟಕದ ಹಾಡು ಬರೆಯುವುದು, ಹೀಗೆ ಏನೇನೋ ಹಾಡುವುದು, ಕುಣಿಯುವುದು, ನಾಟಕೋತ್ಸವಕ್ಕಾಗಿ ಸಿದ್ಧತೆಗಳು, ಧನ ಸಂಗ್ರಹ, ವ್ಯವಸ್ಥೆಗಳನ್ನು ಮಾಡುವುದು, ಕಾಲೇಜುಗಳನ್ನು ಸಂಪರ್ಕಿಸುವುದು, ತೀರ್ಪುಗಾರರನ್ನು ಕರೆತರುವುದು, ಇತ್ಯಾದಿ ಕೆಲಸಗಳಲ್ಲಿ ಕ್ರಿಯಾಶೀಲರಾಗಿ ತೊಡಗುತ್ತಿದ್ದೆವು. ಹೀಗೆ ʻನೆಬೆʼ ಜಯರಾಮ ರಾಯಪುರ, ಆನಂದರಾಜೇ ಅರಸ್‌, ಪ್ರಕಾಶ್‌ ರಾವಂದೂರು, ಶಿವಸ್ವಾಮಿ ಸೇರಿದಂತೆ ಹಲವಾರು ಗೆಳೆಯರು ಜೀವದ ಗೆಳೆಯರಾಗಿರಲು ಕಾರಣವಾಯಿತು. 

ಇದೆಲ್ಲದರ ಕಾರಣಕರ್ತನಾಗಿ, ಕಾರ್ಯಕರ್ತನಾಗಿ ಇರುತ್ತಿದ್ದ ವಾಸು ತನಗೇ ಗೊತ್ತಿಲ್ಲದಂತೆ ಇಡೀ ಸನ್ನಿವೇಶದ ಕೇಂದ್ರಬಿಂದುವಾಗುತ್ತಿದ್ದ. ಈವರೆಗೆ ಇದೇ ಇವರ ವ್ಯಕ್ತಿತ್ವದ ವೈಶಿಷ್ಟ್ಯವಾಗಿದೆ. 

ಇದಷ್ಟೇ ಅಗಿದ್ದರೆ ವಾಸು ನಮಗೆಲ್ಲಾ ಅಷ್ಟೇನೂ ಮುಖ್ಯವಾಗುತ್ತಿರಲಿಲ್ಲ. ಸಮಾನಮನಸ್ಕ ಗೆಳೆಯರನ್ನು ಯಾವುದೇ ಮುಲಾಜಿಲ್ಲದೆ ಮನೆಗೆ ಹೊತ್ತೊಯ್ಯುತ್ತಿದ್ದ. ಸಾತ್ವಿಕ ಬ್ರಾಹ್ಮಣ ಕುಟುಂಬದಲ್ಲಿ ನಮಗೆಲ್ಲಾ ಸಹಪಂಕ್ತಿಯಲ್ಲಿ ಮೃಷ್ಟಾನ್ನಭೋಜನ. ಅವನ ಅಪ್ಪ ಅಮ್ಮ ಸೋದರಿಯರ ಪ್ರೀತಿ, ದೂರದ ಊರಿನಿಂದ ಮೈಸೂರಿಗೆ ಬಂದಿದ್ದ ನನ್ನಂತಹವರಲ್ಲಿದ್ದ ಒಂದು ರೀತಿಯ ಅನಾಥಭಾವದ ಕೊರಗನ್ನು ಇಂತಹ ಆತ್ಮೀಯತೆ ಖಂಡಿತ ದೂರ ಮಾಡಿತ್ತು. ವಾಸು ಇಂದು ಸಾಮಾಜಿಕವಾಗಿ ಈ ಮಟ್ಟಿಗೆ ಬೆಳೆಯಲು ಅವನ ಪೋಷಕರು ವಾಸುವಿನ ಸ್ನೇಹಿತರಿಗೆ ತೋರುತ್ತಿದ್ದ ತಾಯಿ ಪ್ರೀತಿ, ಆತಿಥ್ಯವೇ ಕಾರಣ ಎಂಬುದು ನನ್ನ ಭಾವನೆ. 

ವಾಸು ಅವರ ನೇರ ನಡೆ-ನುಡಿ, ಪ್ರೀತಿ-ವಾತ್ಸಲ್ಯ ಅವನು ಎಲ್ಲರಿಗೂ ನೀಡುತ್ತಿದ್ದ ಪ್ರೋತ್ಸಾಹ ನನ್ನಂತಹ ನೂರಾರು ಜನರನ್ನು ಸಮಾಜಮುಖಿಯಾಗಿ ಬದುಕುವಂತೆ ಮಾಡಿದೆ. ನಮ್ಮ ಪಾಲಿಗೆ ವಾಸು ಅರಿವಿನ ಗೆಳೆಯ. ಜಾಗೃತಿ ಮೂಡಿಸುವ ಜೊತೆಗಾರ. ಅನಿಸಿದ್ದನ್ನು ಮಾಡಿಸುವ ಛಲಗಾರ. ಆತ್ಮೀಯ. 

ವಾಸು ನಮ್ಮೊಂದಿಗೆ ಎರಡು ವರ್ಷ ಕಾಲೇಜಿನಲ್ಲಿ ಇದ್ದದ್ದು ನಾವೆಲ್ಲಾ ʻನೆಳಲು-ಬೆಳಕುʼ ಎಂಬ ಸಾಂಸ್ಕೃತಿಕ ಗುಂಪಿನಲ್ಲಿ ಬಂದದ್ದು ನಮ್ಮ ಬದುಕಿನ ದಿಕ್ಕನ್ನೇ ಬದಲಿಸಿತ್ತು. ಇನ್ನೂರು ಕಿಲೋ ಮೀಟರ್‌ ದೂರದಿಂದ ಮೈಸೂರಿಗೆ ಹೋಗಿದ್ದ ನಾನು ಕಾಲೇಜೆಂದರೆ ಬರೀ ಪಾಠ ಪಠ್ಯ ಮೇಜು ಎಂದು ತಿಳಿದಿದ್ದೆ. ಆದರೆ ʻನೆಳಲು ಬೆಳಕುʼ ಇದೆಲ್ಲಕ್ಕಿಂತ ಭಿನ್ನವಾದ ಬದುಕನ್ನು ನಮಗೆ ಕಲಿಸಿತು. ಹೀಗಾಗಿ ನನ್ನ ಬದುಕಿನ ಎಲ್ಲಾ ಒಳಿತಿನಲ್ಲೂ ನೆಳಲು-ಬೆಳಕಿನ ನೆರಳು, ಜೊತೆಗೆ ವಾಸುವಿನ ಛಾಪು ಕೂಡಾ ಇದೆ. 

ನಾನು ಎರಡನೆಯ ವರ್ಷದ ಬಿ.ಎ ನಲ್ಲಿದ್ದಾಗ ಜಯರಾಮ ರಾಯಪುರ ಟಿ.ಎನ್.‌ ಸೀತಾರಾಂ ಅವರ ʻಆಸ್ಫೋಟʼ ನಾಟಕ ನಿರ್ದೇಶಿಸಿದ್ದ. ಅದರಲ್ಲಿ ವಾಸು ಕಾರ್ಖಾನೆ ಮಾಲೀಕ. ಕಮಲಾಕರ ಭಟ್‌ ಕಾರ್ಮಿಕ ನಾಯಕ. ನನ್ನದು ನಾಲ್ಕು ಜನರ ಕಣ್ಣಿಗೆ ಕಾಣುವಂತೆ ನಾಗರಾಜಪ್ಪ ಎಂಬ ಪುಢಾರಿ ಪಾತ್ರ!

ಆ ನಾಟಕದಲ್ಲಿ ಅಭಿನಯಿಸಿದ ನನಗೆ ಅಂದು ಒಂದು ವೈಚಾರಿಕ ದೃಷ್ಟಿಕೋನವನ್ನು ಗಮನಿಸಲು ಸಾಧ್ಯವಾಯಿತು. ಅದೇ ವರ್ಷ ವಾಸು ʻಸಾಕ್ಷಿ ಕಲ್ಲುʼ ಎಂಬ ನಾಟಕ ನಿರ್ದೇಶಿಸಿದರು. ಯಾಕೋ ಆ ನಾಟಕ ಪ್ರದರ್ಶನವಾಗಲಿಲ್ಲ. ನಾನು ಮೂರನೆ ವರ್ಷದ ಬಿ. ಎ ನಲ್ಲಿ ಇದ್ದಾಗ ನಮ್ಮ ʻನೆಳಲು ಬೆಳಕುʼ ಕುಟುಂಬ ಇನ್ನಷ್ಟು ಹತ್ತಿರವಾಗಿ ಹೊಸ ರೂಪ ತಾಳಿತ್ತು. ವಾಸು ಸಮಾಜಕಾರ್ಯದಲ್ಲಿ ಸ್ನಾತಕೋತ್ತರ ಪದವಿಗಾಗಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಹೋಗಿದ್ದರು. ಶಶಿಧರ್‌ ಭಾರೀಘಾಟ್‌ ಹವ್ಯಾಸಿ ನಾಟಕಗಳೊಂದಿಗೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಕೊಂಡು ಮೈಸೂರಿನಲ್ಲೇ ಇದ್ದರು.  ಶಶಿ ನಮ್ಮನ್ನೆಲ್ಲಾ ಎಂ.ಪಿ. ಪ್ರಕಾಶ್‌ ಅವರ ʻಸೂರ್ಯ ಶಿಕಾರಿʼ ನಾಟಕದಲ್ಲಿ ತೊಡಗಿಸಿದರು. ಈ ನಾಟಕ ನಮ್ಮ ಸಾಂಸ್ಕೃತಿಕ ವೈಚಾರಿಕ ಆಲೋಚನೆಗಳಿಗೆ ಭದ್ರ ಬುನಾದಿ ಹಾಕಿತು.  ನಾಟಕ ನಿರ್ದೇಶಕ ಶಶಿಧರ್‌ ಭಾರೀಘಾಟ್‌ ನಮಗೆಲ್ಲಾ ಒಂದು ಬೌದ್ಧಿಕ ಜಗತ್ತಿಗೆ ಪ್ರವೇಶಿಕೆ ನೀಡಿದ್ದರು. ವಾಸು ಈ ನಾಟಕದ ತಾಲೀಮಿನ ಸಮಯದಲ್ಲಿ ಮತ್ತು ಅಭಿನಯಿಸಿದಾಗ ಜೊತೆಯಾಗಿದ್ದರು. ನಾಟಕಕ್ಕೆ ರಂಗಸಜ್ಜಿಕೆಯ ಕಲ್ಪನೆ ನೀಡಿ ತಯ್ಯಾರಿಗೆ ಕೈಜೋಡಿಸಿದ್ದರು.

ನಾನು ಬಿ.ಎ ಮುಗಿಸಿದ ಮೇಲೆ ಮುಂದಿನ ಅಧ್ಯಯನಕ್ಕೆ ಬೆಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿಗಾಗಿ ಸಮಾಜಕಾರ್ಯಕ್ಕೆ ಸೇರಲು ಯತ್ನಿಸಿದೆ. ವಾಸು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಿ ನೆರವಾಗಿದ್ದರು. ಆದರೆ ನನಗೆ ಅಲ್ಲಿ ಸೀಟು ಸಿಕ್ಕಿರಲಿಲ್ಲ. ನಾನು ಮೈಸೂರು ವಿವಿಯಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಪದವಿ ತರಗತಿಗಳಿಗೆ ಸೇರಿದೆ. 

ಇದು ವಾಸುದೇವ ಶರ್ಮಾ ಅವರ ಬದುಕಿನ ಬಾಗಿಲನ್ನು ತೆರೆಯಿತು!

ಮೈಸೂರಿನ ಸಂಪರ್ಕವನ್ನು ಕಳೆದುಕೊಳ್ಳದ ವಾಸು ಬೆಂಗಳೂರಿನಲ್ಲಿದ್ದರೂ ಆಗಾಗ್ಗೆ ಮೈಸೂರಿಗೆ ಬರುತ್ತಿದ್ದರು. ಬಂದಾಗ ಮಾನಸ ಗಂಗೋತ್ರಿಗೆ ಬರುವುದನ್ನು ತಪ್ಪಿಸುತ್ತಿರಲಿಲ್ಲ. ಅಲ್ಲಿದ್ದ ಎಲ್ಲಾ ಗೆಳೆಯರ ಯೋಗಕ್ಷೇಮ ವಿಚಾರಿಸಿ, ಶೈಕ್ಷಣಿಕ, ನಾಟಕ, ಸಾಮಾಜಿಕ ವಿಚಾರಗಳನ್ನು ಕುರಿತು ಹರಟಿ, ಗಂಗೋತ್ರಿಯ ಕ್ಯಾಂಟೀನಿನಲ್ಲಿ ಎಲ್ಲರೊಡನೆ ಸೇರಿ ಕಾಫಿ ಕುಡಿದು ಕೆಲ ಹೊತ್ತು ಇದ್ದು ಹೋಗುತ್ತಿದ್ದರು. 

ಇಂತಹ ಭೇಟಿ ಮಾತುಕತೆಗಳ ನಡುವೆ ನನ್ನ ಸ್ನಾತಕೋತ್ತರ ಪದವಿ ಅಧ್ಯಯನ ಮುಗಿದು ಉದ್ಯೋಗದತ್ತ ಮುಖ ಮಾಡಿದ್ದೆ. ವಾಸು ಅರಸೀಕರೆಯಲ್ಲಿ ಕೆಲಸ ಮಾಡುತ್ತಿದ್ದರು. ಒಂದು ದಿನ ವಾಸು ಬೆಂಗಳೂರಿಗೆ ಬಂದಿದ್ದಾಗ ಚಾಮರಾಜಪೇಟೆಯಲ್ಲಿ ಶಶಿಧರ್‌ ಭಾರೀಘಾಟ್‌ ಮತ್ತು ನನ್ನನ್ನು ಭೇಟಿಯಾಗಿ ಒಂದು ಅಚ್ಚರಿಯ ವಿಷಯವನ್ನು ಎದುರಿಟ್ಟು.  

ಎಂ.ಎ ಪದವಿಯಲ್ಲಿ ನನ್ನ ಸಹಪಾಠಿಯಾಗಿದ್ದ ಲಕ್ಷ್ಮಿ ಅವರನ್ನು ಕುರಿತು ಪ್ರಸ್ತಾಪಿಸಿ, ಅವರ ವಿವರಗಳನ್ನು ಕೇಳಿದರು. ಇಂತಹ ವಿಷಯಗಳನ್ನು ಅರಿತುಕೊಳ್ಳುವಲ್ಲಿ ನಿಸ್ಸೀಮರಾಗಿದ್ದ ಶಶಿ ಕೂಡಲೇ ಕಾರ್ಯೋನ್ಮುಖರಾದರು. ಕೆಲವು ಗೆಳೆಯ ಗೆಳತಿಯರೊಂದಿಗೆ, ನನಗರಿವಿಲ್ಲದಂತೆ ನಾನು ಈ ವಿಷಯದಲ್ಲಿ ಹೇಗೆ ಸಹಾಯ ಮಾಡಿದೆ ಎಂದು ನೆನಪಿಲ್ಲ. ಆದರೆ ಲಕ್ಷ್ಮಿ ಮತ್ತು ನಾನು ಬೆಂಗಳೂರಿನಲ್ಲೇ ಇದ್ದು, ಆಗಾಗ್ಗೆ ಭೇಟಿ ಮಾಡುತ್ತಿದ್ದುದು ವಾಸುಗೆ ಸಹಾಯವಾಗಿತ್ತೇನೋ!

ಅಂತೂ ಇಂತೂ ವಾಸು-ಲಕ್ಷ್ಮಿ ಮದುವೆ ನೆರವೇರಿ ಸುಖಸಂಸಾರ ಸಾಗಿ ಬಂದಿದೆ. ಲಕ್ಷ್ಮಿ ವಾಸು ಅವರ ಕೈಹಿಡಿದ ಪರಿಣಾಮ ನಾನು ವಾಸು ಕುಟುಂಬಕ್ಕೆ ಇನ್ನೂ ಹೆಚ್ಚು ಹತ್ತಿರವಾದೆ. ಬೆಂಗಳೂರಿನಲ್ಲಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ನಾನು ವೃತ್ತಿ ಅರಸುತ್ತಿದ್ದ ಕಾಲದಲ್ಲಿ ವಾಸುವಿನ ಕುಟುಂಬದವರು ನನ್ನನ್ನು ಅವರ ಬಂಧುವಂತೆ ನೋಡಿಕೊಂಡರು. ಇವರೆಲ್ಲಾ ನೀಡಿದ ಪ್ರೋತ್ಸಾಹ ಮತ್ತು ಸಾಮಾಜಿಕ ಅರಿವು ನನ್ನ ಬದುಕು ಇಲ್ಲಿಯವರೆಗೆ ಸಾಗಲು ಸಹಾಯಕವಾಗಿದೆ. 

ನಾನು ಪತ್ರಕರ್ತನಾಗಲು, ನಾಟಕ ಸಂಗೀತ ಸಾಹಿತ್ಯದ ಅಭಿರುಚಿ ಬೆಳೆಸಿಕೊಳ್ಳಲು ಸಮಾಜಮುಖಿಯಾಗಿ ತೊಡಗಿಕೊಳ್ಳಲು ವಾಸು ಎಂಬ ʻಅರಿವೇʼ ಕಾರಣ.

ಗ್ರಾಮೀಣ ಪ್ರದೇಶದಲ್ಲಿ ಶಾಲೆ ನಡೆಸುತ್ತಿರುವ ನನ್ನಂತಹವನಿಗೆ ವಾಸುದೇವ ಶರ್ಮಾ ಸದಾ ಪ್ರೇರಣೆಯಾಗಿ ಎಚ್ಚರಿಕೆಯ ನೆರಳಾಗಿ ನಿಂತಿರುತ್ತಾರೆ.   

ಚಂದ್ರಶೇಖರ ಬೆಳಗೆರೆ, ಅಧ್ಯಕ್ಷರು, ಜಾಗೃತಿ ಎಜುಕೇಶನ್‌ ಟ್ರಸ್ಟ್, ಹಿರಿಯೂರು, ಚಿತ್ರದುರ್ಗ ತಾಲ್ಲೂಕು