ಕರ್ನಾಟಕದ ಮಕ್ಕಳ ಕ್ಷೇತ್ರದ ಧ್ರುವ ತಾರೆ – ರಾಜಶ್ರೀ ಬಿ ವಡ್ಲಿ

ಜೀವನವೆಂಬುದು ಸದಾ ಹರಿಯುವ ನೀರು ಎಂಬುವಂತೆ, ನಾವು ಸಾಗುವ ನಮ್ಮ ಜೀವನದ ಪಥದಲ್ಲಿ ಒಂದಿಷ್ಟು ಜನರು, ಸಂದರ್ಭ, ಸನ್ನಿವೇಶಗಳು, ನಾವು ನಮ್ಮ ಗುರಿಯತ್ತ ಸಾಗಲು ಮೈಲುಗಲ್ಲುಗಳಾಗಿ ಪರಿಣಮಿಸುತ್ತವೆ. ಒಂದಿಷ್ಟು ವ್ಯಕ್ತಿಗಳ ವ್ಯಕ್ತಿತ್ವ ಎಂದೂ ಮರೆಯಾದ ನೆನಪಾಗಿ ಬದುಕಿನಲ್ಲಿ ಹಾಸು ಹೊಕ್ಕಾಗಿರುತ್ತಾರೆ. ಕೆಲವು ವಿಷಯಗಳು, ಹೊಸ ಕಲಿಕೆಗಳು ಸಹ ಮನಸ್ಸಿನ ಆಳದಲ್ಲಿ ಬೇರೂರಿರುತ್ತವೆ. ನೆನಪಿನ ಪುಟದಲ್ಲಿ ಅಚ್ಚು ಮೂಡಿ, ಸದಾ ಕಾಲದಲ್ಲೂ ನೆನಪಾಗುವ ಒಂದು ವಿಶೇಷವಾದ ವ್ಯಕ್ತಿತ್ವವೆಂದರೆ, ಅದು ನನ್ನ ವೃತ್ತಿ ಜೀವನದ ಮಾರ್ಗದರ್ಶಕರಾದ ಗುರುಗಳಾದ, ಸ್ನೇಹಜೀವಿಗಳಾದ ಚೈಲ್ಡ್ ರೈಟ್ಸ್ ಟ್ರಸ್ಟ್ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕರಾದ ಡಾ. ಎನ್.ವಿ ವಾಸುದೇವ ಶರ್ಮಾ ಸರ್ ಅವರದು. ಕರ್ನಾಟಕದ ಉದ್ದಗಲಕ್ಕೂ ಮಕ್ಕಳ ಹಕ್ಕುಗಳನ್ನು ಪಸರಿಸಿದ ಹಾಗೂ ಗ್ರಾಮೀಣ ಪ್ರದೇಶದ ಸ್ಥಳೀಯ ಸರ್ಕಾರದಿಂದ ವಿಧಾನ ಸೌಧದ ವರೆಗೆ ಮಕ್ಕಳ ಹಕ್ಕುಗಳನ್ನು ಎತ್ತಿ ಹಿಡಿದ ಕೀರ್ತಿ ವಾಸು ಸರ್ ಹಾಗೂ ಚೈಲ್ಡ್ ರೈಟ್ಸ್ ಟ್ರಸ್ಟ್ ಸಂಸ್ಥೆಯ ತಂಡಕ್ಕೆ ಸಲ್ಲುತ್ತದೆ.
ಬಾಯಾರಿದ ಜಿಂಕೆ ನೀರನ್ನು ಅರಸಿ ಬಂದಾಗ ಅಮೃತವೇ ದೊರೆತಂತೆ, ವೃತ್ತಿಪರ ಸಮಾಜಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸಹೋದ್ಯೋಗಿಗಳು, ಮಕ್ಕಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಆಶಯದಂತೆ ಮಕ್ಕಳ ಹಕ್ಕುಗಳು ಹಾಗೂ ಮಕ್ಕಳಿಗೆ ಸಂಬಂಧಿಸಿದ ಬರವಣಿಗೆಯ ಹೊತ್ತಿಗೆಗಳನ್ನು ನೀಡಿ, ಜ್ಷಾನ ಸುಧೆಯನ್ನು ಹರಿಸಿದ್ದಾರೆ. ಆಡುಮುಟ್ಟದ ಸೊಪ್ಪಿಲ್ಲ, ಹಾಗೆಯೇ, ವಾಸು ಸರ್ ಮಕ್ಕಳ ಕ್ಷೇತ್ರಕ್ಕೆ ಸಂಬಂಧಿಸಿದ ಕ್ಷೇತ್ರದಲ್ಲಿ ಮಕ್ಕಳಿಗೆ ರಕ್ಷಣೆ, ಭದ್ರತೆ ಒದಗಿಸುವ ನಿಟ್ಟಿನಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಜೊತೆ ಜೊತೆಗೆ ಸಹಧರ್ಮಿಣಿಯಾದ ಲಕ್ಷ್ಮಿ ಮೇಡಂ ಅವರ ಬೆಂಬಲ, ಸಹಕಾರವೂ ಕೂಡ ಸದಾ ಸ್ಮರಣೀಯ.
ಸಮುದ್ರದ ಆಳದಷ್ಟು ಜ್ಷಾನವನ್ನು ಹೊಂದಿರುವ ವಾಸು ಸರ್, ಪ್ರತಿನಿತ್ಯ ತೊಡಗಿಸಿಕೊಂಡಿರುವ ಮಕ್ಕಳ ಅಭಿವೃದ್ಧಿಗೆ ಸಂಬಂಧಪಟ್ಟಂತಹ ಕಾರ್ಯಕ್ರಮಗಳು- ಬಾಲ್ಯವಿವಾಹ ನಿಷೇಧ, ದೇವದಾಸಿ ಪದ್ಧತಿ ನಿರ್ಮೂಲನೆ, ಬಾಲಕಾರ್ಮಿಕ ಪದ್ಧತಿ ನಿಷೇಧ, ಮಕ್ಕಳ ಕಳ್ಳಸಾಗಾಣಿಕೆ ನಿಷೇಧ, ಲೈಂಗಿಕ ಕಿರುಕುಳದಿಂದ ಮಕ್ಕಳ ರಕ್ಷಣೆ, ದತ್ತು ಪ್ರಕ್ರಿಯೆ, ಮಕ್ಕಳ ನ್ಯಾಯ ಹಾಗೂ ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ ಹೀಗೆ ಹೇಳುತ್ತಾ ಹೋದಂತೆ ಮುಂದುವರೆಯುತ್ತಾ ಸಾಗುತ್ತದೆ,
ಅನೇಕತೆಯಲ್ಲಿ ಏಕತೆಯನ್ನು ಕಂಡುಕೊಂಡಂತಹ ಮೇರು ವ್ಯಕ್ತಿತ್ವ. ವೃತ್ತಿ ಜೀವನದಲ್ಲಿ ಸಾಮಾಜಿಕವಾಗಿ ಎಲ್ಲರೂ ಒಂದೇ ಎಂಬ ಭಾವನೆ, ಹಳಬರಿಗೆ ಮಾದರಿಯಾಗಿ, ಹೊಸಬರಿಗೆ ಪ್ರೇರಣೆಯಾಗಿ, ರೂಪುಗೊಂಡ ವ್ಯಕ್ತಿತ್ವ. ಸದಾ ಶಿಸ್ತು, ಸಮಯಪ್ರಜ್ಷೆ, ತಾಳ್ಮೆ, ಕೆಲಸದಲ್ಲಿ ಬದ್ಧತೆ, ಅನುಭೂತಿ-ಪರಾನುಭೂತಿ, ಮಕ್ಕಳೊಂದಿಗೆ ಮಕ್ಕಳು, ಹಿರಿಯರೊಂದಿಗೆ ಸ್ನೇಹಿತರಾಗಿ, ಎದುರು ಕುಳಿತಿರುವ ಮಾತುಗಳನ್ನು ಅವಧಾನದಿಂದ ಆಲಿಸುವಂತಹ ವ್ಯಕ್ತಿತ್ವ ನಮ್ಮ ವಾಸು ಸರ್ ಅವರದು.
ಒಂದು ಹೂವು ಮತ್ತೊಂದು ಹೂವಿನೊಂದಿಗೆ ಸ್ಪರ್ಧೆಗೆ ಇಳಿಯುವುದಿಲ್ಲ, ಎಲ್ಲಿದ್ದರೂ, ಹೇಗಿದ್ದರೂ ತನ್ನ ಪರಿಮಳದ ಮೂಲಕ ಜನರ ಮನಸ್ಸನ್ನು ಗೆಲ್ಲುತ್ತದೆ. ಹಾಗೆಯೇ ವಾಸು ಸರ್ ಅವರು ಕೂಡ, ಯಾವುದೇ ಫಲಾನುಪೇಕ್ಷೆ ಇಲ್ಲದೇ ಮಕ್ಕಳ ಹಕ್ಕುಗಳ ಬಗ್ಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಎಲ್ಲಿಗೆ ಹೋದರೂ ಮಕ್ಕಳ ಹಕ್ಕುಗಳ ಕಲರವ ಕೇಳಿ ಬರುತ್ತದೆ. ಪ್ರಯಾಣ. ಕಾರ್ಯಕ್ರಮ, ತರಬೇತಿಗೆ ಹೋದಾಗ ಯಾವುದೇ ಹೊಸ ವ್ಯಕ್ತಿಗಳಿದ್ದರೂ, ಅವರಿಗೂ ಸಹ ಮಕ್ಕಳ ಹಕ್ಕುಗಳ ಆಳಗಲವನ್ನು ವಿವರಿಸುತ್ತಿದ್ದರು. ಸಾರ್ವಜನಿಕವಾಗಿ ಮಕ್ಕಳನ್ನು ಕಂಡಾಗ, ಅವರನ್ನು ಮಾತನಾಡಿಸಿ, ಅವರ ಬದುಕು, ಶಿಕ್ಷಣ, ಜೀವನದ ಸ್ಥಿತಿಗತಿಗಳನ್ನು ಅವಲೋಕಿಸುವುದು ತುಂಬಾ ವಿಶೇಷವಾದದ್ದು.
ನಾನು 2018ರಲ್ಲಿ ಚೈಲ್ಡ್ ರೈಟ್ಸ್ ಟ್ರಸ್ಟ್ ಗೆ ಉದ್ಯೋಗಿಯಾಗಿ ಸೇರಿಕೊಂಡಾಗ ಸರ್ ಎಷ್ಟು ಸ್ಟ್ರಿಕ್ಟ್ ಇದಾರಪ್ಪ, ಆರ್ಮಿ ತರಬೇತಿದಾರರ ತರಹ ಅಂತಾ ಯೋಚನೆ ಮಾಡ್ತಾ ಇದ್ದೆ. ಆದರೆ ಕೆಲ ದಿನಗಳಲ್ಲೇ ನನಗೆ ಬೇರೆಯೇ ಜಗತ್ತು ಪರಿಸರ ಕಾಣಲಾರಂಭಿಸಿತು.
ಚೈಲ್ಡ್ ರೈಟ್ಸ್ ಟ್ರಸ್ಟ್ ನಲ್ಲಿ ನಾನು ಕೆಲಸ ಮಾಡಿದ 2-3 ವರ್ಷದಲ್ಲಿ ನನ್ನಲ್ಲಿ ಆದಂತಹ ಬದಲಾವಣೆಯೆಂದರೆ: ಹೊಸ ಕಲಿಕೆ, ವೈಚಾರಿಕತೆಯಲ್ಲಿ ಪ್ರೌಢತೆ, ಆಲೋಚನೆಯಲ್ಲಿ ವಿಭಿನ್ನತೆ, ಸಮಯ ಪ್ರಜ್ಞೆ, ಆತ್ಮವಿಶ್ವಾಸ, ಸಂವಹಣಾ ಕೌಶಲ್ಯಗಳು, ಕೆಲಸದಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ಅಂತರಾವಲೋಕನ ಎಲ್ಲವೂ ಅರಿವಿಲ್ಲದಂತೆ ಅಳವಡಿಕೆಯಾಗಿದ್ದವು. ನನ್ನ ವೃತ್ತಿಪರ ಜೀವನಕ್ಕೆ ವರವಾದವು.
ಒಬ್ಬ ಶಿಲ್ಪಿ ಒಂದು ಕಲ್ಲನ್ನು ಶಿಲೆಯಾಗಿಸಲು ಹೊರಟಾಗ, ಆ ಕಲ್ಲಿಗೂ ಕೂಡ ತನ್ನನ್ನು ತಾನು ತಿದ್ದಿಕೊಳ್ಳಲು, ಉಳಿಪೆಟ್ಟು ತಿನ್ನಲು ಸಿದ್ಧವಾಗಿರುವ ಮನಸ್ಥಿತಿ ಇರಬೇಕು, ಹಾಗಿದ್ದರೆ ಮಾತ್ರ ಅದು ಒಂದು ಸುಂದರ ಮೂರ್ತಿಯಾಗಿ ಮಾರ್ಪಾಡುಗೊಳ್ಳುತ್ತದೆ, ಪೂಜೆಗೆ ಒಳಪಡುತ್ತದೆ. ಕಳೆದ 23 ವರ್ಷಗಳಿಂದ ನೂರಾರು ಯುವಕರು ಚೈಲ್ಡ್ ರೈಟ್ಸ್ ಟ್ರಸ್ಟ್ ನಿಂದ, ವಾಸುದೇವ ಶರ್ಮಾ ಸರ್ ಅವರ ಮಾರ್ಗದರ್ಶನದಲ್ಲಿ ತಮ್ಮ ಬದುಕಿನ ದಿಕ್ಕುದೆಸೆಯನ್ನು ಬದಲಾಯಿಸಿಕೊಂಡು, ಇಂದು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿದ್ದು, ಮಕ್ಕಳ ಹಕ್ಕುಗಳ ರಾಯಭಾರಿಗಳಾಗಿದ್ದಾರೆ.
11/11/2025 ರಂದು ನಮ್ಮ ಆತ್ಮೀಯ ಗುರುಗಳಾದ ಡಾ.ವಾಸುದೇವ ಶರ್ಮಾ ಸರ್ ಅವರು, ತಮ್ಮ 60 ವಸಂತಗಳನ್ನು ಪೂರೈಸಿ 61ರ ನವ ವಸಂತಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ, ನಿಮ್ಮಿಂದ ಇನ್ನೂ ಹೆಚ್ಚಿನ ಸಮಾಜಮುಖಿ ಕಾರ್ಯಗಳು ನೆರವೇರಲಿ, ಇಂದಿನ ಯುವಕರಿಗೂ ನಿಮ್ಮ ಮಾರ್ಗದರ್ಶನ ಲಭಿಸಲಿ, ಶತಾಯುಷಿಯಾಗಲಿ ಎಂದು ಹಾರೈಸುತ್ತೇನೆ.
ರಾಜಶ್ರೀ ಬಿ ವಡ್ಲಿ, Trainer and EDP, Financial Literacy and Life skills






