vasu-blog-2-1

ಗೆಳೆಯ ವಾಸು – ಶಶಿಧರ ಭಾರಿಘಾಟ್

Last Updated: February 21, 2026By

ಗೆಳೆಯ ವಾಸು – ವಾಸುದೇವ ಶರ್ಮಾ ಅವರ ಬಗ್ಗೆ ಬರೆಯುವುದೆಂದರೆ ನಾಲ್ಕು ದಶಕಗಳಷ್ಟು ಹಿಂದಿನ ನೆನಪಿನ ಬುತ್ತಿಯನ್ನು ಬಿಚ್ಚಿ ಬರೆಯಬೇಕು. ಹಸನ್ಮುಖಿ ಹಾಗೂ ಗಂಭೀರವದನವನ್ನು  ಹೊತ್ತು, ಸಾಂದರ್ಭಾನುಸಾರ ತಮ್ಮ ಗಟ್ಟಿತನವನ್ನು ಪ್ರದರ್ಶಿಸುವ ವಾಸು ಅಪಾರ ದೃಢ ಮನಸ್ಸಿನ ವ್ಯಕ್ತಿ! ಸಾಮಾಜಿಕ ಹಾಗೂ ಸಾಂಸ್ಕೃತಿಕ ಬದ್ಧತೆ, ಕಾರ್ಯಾನುಷ್ಟಾನದಲ್ಲಿ ಕ್ಷಮತೆ ಎರಡೂ ಗುಣಗಳ ಸಮನ್ವಯ ಸಾಧಕ. ಕಾಲೇಜು ತರಗತಿಯಲ್ಲಿ, ವಯಸ್ಸಿನಲ್ಲಿ ನನಗಿಂತ ಕಿರಿಯನಾದರೂ ಹತ್ತು ಹಲವು ಸಾಂಸ್ಕೃತಿಕ ವಿದ್ಯಮಾನಗಳಿಗೆ ಮುಂಚೂಣಿಯಲ್ಲಿ ನಿಂತು ಸ್ಪೂರ್ತಿ ತುಂಬಿದ ನಾಯಕತ್ವದ ಹೊಣೆ ನಿಭಾಯಿಸಿದ ಛಲಗಾರ.  ಅವರ ಸಶಬ್ಧ ನಗುವಿನಲ್ಲಿ ತನ್ನ ಸುತ್ತಲಿನ ಪರಿಸರಕ್ಕೆ ಚೈತನ್ಯ ತುಂಬುವ ಶಕ್ತಿಯಿದೆ.  ಅಪಾರ ಓದು, ಸಮಾಜಕಾರ್ಯದ ಅನುಭವ ಅವರನ್ನು ‘ ಜಾಣರ ಗುರು’ವನ್ನಾಗಿಸಿದೆ. ಅವರ ದೃಷ್ಟಿಯಲ್ಲಿ ಎಲ್ಲಾ ಮಕ್ಕಳು ಸಹಜ ಜಾಣರೇ ! ಆದರೂ ಮಕ್ಕಳು ಸಮಾಜದ ಸದಸ್ಯರಾಗಿ ಅನೇಕ ರೀತಿಯ ಅವಗಣನೆ, ವಂಚನೆಗೆ ಒಳಗಾಗಿ ಶೋಷಣೆಗೆ ಗುರಿಯಾದಾಗ, ಅಂತಹ ಮಕ್ಕಳ ಹಕ್ಕು ಬಾಧ್ಯತೆಗಳ ರಕ್ಷಣೆಗೆ ಮುಂದಾಗುತ್ತಾರೆ. ಒಟ್ಟಿನಲ್ಲಿ ಸರ್ಕಾರದ, ಸಮಾಜದ, ಪೋಷಕರಲ್ಲಿ ಮಕ್ಕಳ ಸಂಬಂಧಿತ ಎಲ್ಲಾ ರೀತಿಯ ತಿಳಿವಳಿಕೆ ಮೂಡಿಸುವ ನಿರಂತರ ಹೋರಾಟದಲ್ಲಿ ತೊಡಗಿದ್ದಾರೆ. ತಮ್ಮದೇ ಆದ ಕಾರ್ಯಕರ್ತರ ಪಡೆಯನ್ನು ರಚಿಸಿಕೊಂಡು ಆರೋಗ್ಯಪೂರ್ಣ ಸಮಾಜದ ನಿರ್ಮಾಣಕ್ಕೆ ಶ್ರಮಿಸುತ್ತಿದ್ದಾರೆ.

ಎಂಬತ್ತರ ದಶಕದ ಮಧ್ಯ ಭಾಗದಲ್ಲಿ ನಾವು ಮೈಸೂರು ಮಹಾರಾಜ ಕಾಲೇಜಿನ ಅಂಗಳದಲ್ಲಿ ಎದುರುಬದುರಾಗುವ ಮುನ್ನ ಮೈಸೂರು ಹವ್ಯಾಸಿ ರಂಗದಲ್ಲಿ ಪರಿಚಿತರಾಗಿದ್ದೆವು. ವಾಸು ʻಅಂಕʼ ತಂಡದಲ್ಲಿ ನಾಟಕಗಳನ್ನು ಮಾಡುತ್ತಿದ್ದರು. ನಾನು ʻಸಮುದಾಯʼ ತಂಡದಲ್ಲಿ ಇದ್ದೆ. ಒಟ್ಟಿಗೆ ನಾಟಕ ಮಾಡಿದ್ದು, ನೋಡಿದ್ದು ಇತ್ತು.

ನಾವು ಹತ್ತಿರವಾಗಿದ್ದು ಮಹಾರಾಜ ಕಾಲೇಜಿನಲ್ಲಿ ರಂಗಚಟುವಟಿಕೆ ಆರಂಭಿಸಲು ಮುಂದಾದಾಗ. ನಾನು ಅಂತಿಮ ವರ್ಷದಲ್ಲಿದ್ದೆ. ವಾಸು ಎರಡನೇ ವರ್ಷ. ವಿದ್ಯಾರ್ಥಿ ನಾಟಕ ತಂಡವನ್ನು ಕಟ್ಟುವ ಪ್ರಸ್ತಾಪ ಅವರಿಂದ ಬಂತು. ನನಗೆ ಸ್ವಲ್ಪ ಹಿಂಜರಿಕೆ ಸ್ವಭಾವ. ಅವರ ಉತ್ಸಾಹ, ಕಾತುರ ಕಂಡು ನಾನು ಮಾಡಬಹುದು ಎಂದೆ. ನನ್ನ ಮೇಲೆ ನನಗೇ ಅಷ್ಟಾಗಿ ನಂಬಿಕೆ ಇಲ್ಲದಿದ್ದ ದಿನಗಳು ಅವು. ಅವರ ವಿಚಾರದಲ್ಲಿ ಇದ್ದ ಖಚಿತತೆ ಕಂಡು ಮುಂದಾದಾಗ ವಿದ್ಯಾರ್ಥಿ ರಂಗಚಳವಳಿಯೊಂದು ಸಶಕ್ತವಾಗಿ ರೂಪುಗೊಂಡಿದ್ದು ಇತಿಹಾಸ! 

ಈಗ ವಾಸು ಅವರಿಗೆ ವರ್ಷ ಅರವತ್ತು! ಅಂದು ಹುಟ್ಟಿದ ವಿದ್ಯಾರ್ಥಿ ರಂಗತಂಡಕ್ಕೆ ನಲವತ್ತು!!  ರಂಗತಂಡದ ಹುಟ್ಟಿನ ಕನಸು ಕಂಡ ವಾಸು ಅವರಿಗೆ ಆಗ ವರ್ಷ ಇಪ್ಪತ್ತು!!! ನನಗೂ ಅವರಿಗೂ ವಯಸ್ಸಿನ ಅಂತರವಿದ್ದರೂ, ಅವರ ಕನಸು ನನಸಾಗಿಸಲು ನಾನು ಕೈ ಜೋಡಿಸಲು ಮುಂದಾಗಿದ್ದು ನನ್ನ ರಂಗ ಒಲವಿನ ಕಾರಣಕ್ಕೆ. ಅವರು ಸಂಘಟನೆಗೆ ಮುಂದಾದರು! ಸಮಾನಮನಸ್ಕ ಗೆಳೆಯರನ್ನು ಒಟ್ಟುಗೂಡಿಸಿದರು. ಕಾಲೇಜು ಆಡಳಿತ ವರ್ಗವನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅಂತರ ಕಾಲೇಜು ನಾಟಕ ಸ್ಪರ್ಧೆಗೆ ಮುನ್ನುಡಿ ಬರೆದರು. ಮೈಸೂರು ರಂಗ ಇತಿಹಾಸದಲ್ಲಿ ಮಹಾರಾಜ ಕಾಲೇಜಿನ ‘ನೆಳಲು ಬೆಳಕು’ ತಂಡ ಮಹತ್ವದ ಸ್ಥಾನ ಪಡೆಯಿತು. ೪೦ ವರ್ಷಗಳ ನಂತರ ಈಗ ಮತ್ತೆ ವಾಸು ನೆಳಲು ಬೆಳಕು ತಂಡದ ಮರು ಸಂಘಟನೆಗೆ ಹಳೆಯ ಗೆಳೆಯರನ್ನೆಲ್ಲಾ ಒಟ್ಟುಗೂಡಿಸಲು ಹೊರಟಿದ್ದಾರೆ!

ವಿಶೇಷವೆಂದರೆ ಅವರೀಗ  ಮಕ್ಕಳ ಸಾಹಿತ್ಯ ರಚನೆಯಲ್ಲೂ ತೊಡಗಿದ್ದಾರೆ! ಕಥೆ, ಕವನ, ಲೇಖನಗಳು ಮೂಲಕ ಮಕ್ಕಳ ರಮ್ಯ ಮನೋಲೋಕವನ್ನು ಪ್ರವೇಶಿಸಿದ್ದಾರೆ. 

ನಿರಂತರ ಹೋರಾಟ, ಸಂಘಟನೆಗಳಲ್ಲಿ ತೊಡಗಿರುವ, ಬಸ್ಸು ರೈಲು ವಿಮಾನದ ಚಕ್ರವನ್ನೇ ಕಾಲಿಗೆ ಕಟ್ಟಿಕೊಂಡು ತಿರುಗುತ್ತಿರುವ ವಾಸುದೇವ ಶರ್ಮಾ ಅವರ ಕ್ರಿಯಾಶೀಲತೆ ಎಲ್ಲರಿಗೂ ಮಾದರಿ. ಮಗುವಿನ ಮುಗ್ಧ ಮನಸ್ಸಿನ ಪ್ರೌಢ ವ್ಯಕ್ತಿತ್ವದ ಸರಳ ಗುಣದ ವಿರಳ ಮನುಷ್ಯ ಜೀವಿ ಇವರು.

ಒಳಿತಾಗಲಿ.

  • ಶಶಿಧರ ಭಾರಿಘಾಟ್ ಅವರು ನಿವೃತ್ತ ನಾಟಕಕಲೆ ಪ್ರಾಧ್ಯಾಪಕರು, ಕೋಟೆ ಹೈಸ್ಕೂಲ್‌, ಬೆಂಗಳೂರು. ಪು ತಿ ನ ಪ್ರಶಸ್ತಿ ಪುರಸ್ಕೃತರು. ರಂಗಕರ್ಮಿ, ನಿರ್ದೇಶಕ, ರಂಗ ಸಂಘಟನೆಕಾರ, ನಾಟಕ ಅಕಾಡೆಮಿ ಸದಸ್ಯರಾಗಿದ್ದವರು.