ಕಾಲು ಶತಮಾನವಾದರೂ ಮಾಸದ ನೆನಪುಗಳು – ಮಲ್ಲಿಕಾರ್ಜುನ ಹೊಸಪಾಳ್ಯ

ಸುಮಾರು ಕಾಲು ಶತಮಾನಗಳ ಹಿಂದೆ ನಾನು ಕೆಲಸ ಮಾಡುತ್ತಿದ್ದ ಗ್ರೀನ್ ಪ್ರತಿಷ್ಟಾನ ʻಬರೆಯೋಣ ಬನ್ನಿʼ ಕಾರ್ಯಾಗಾರ ಹಮ್ಮಿಕೊಂಡಿತ್ತು. ತಿಪಟೂರು ಬಳಿಯ ಬೈಫ್ ಸಂಸ್ಥೆಯಲ್ಲಿ ನಾವು ಸುಮಾರು 20 ಜನ ಸಹೋದ್ಯೋಗಿಗಳು ಸೇರಿದ್ದೆವು. ಆ ಮೂರು ದಿನಗಳ ಕಾರ್ಯಾಗಾರದ ಪ್ರತಿ ಚಟುವಟಿಕೆಯೂ ನನಗೆ ನೆನಪಿದೆ. ಅದಕ್ಕೆ ಕಾರಣ, ಸಂಪನ್ಮೂಲ ವ್ಯಕ್ತಿಯಾಗಿದ್ದ ಶ್ರೀ ವಾಸುದೇವ ಶರ್ಮಾ ಅವರು. ಅಲ್ಲಿ ವಿತರಿಸಿದ್ದ ತರಬೇತಿ ಮೆಟೀರಿಯಲ್ ಹಾಗೂ ಅವುಗಳನ್ನು ಇಟ್ಟುಕೊಳ್ಳಲು ಕೊಟ್ಟಿದ್ದ ಹಳದಿ ಬಣ್ಣದ ಫೈಲ್ ಇನ್ನೂ ನನ್ನ ಬಳಿ ಇವೆ. ನಾನದನ್ನು ಆಗಾಗ್ಗೆ ಗಮನಿಸುತ್ತಿರುತ್ತೇನೆ.
ಅದಾದ ವರ್ಷಗಳಲ್ಲಿ ನಾನು ನೂರಾರು ತರಬೇತಿಗಳಲ್ಲಿ ಭಾಗಿಯಾಗಿದ್ದೇನೆ. ಅದರಲ್ಲಿ ಬೆರಳೆಣಿಕೆಯಷ್ಟು ಮಾತ್ರ ನನ್ನ ನೆನಪಿನಲ್ಲುಳಿದಿವೆ. ಆದರೆ 25 ವರ್ಷ ಕಳೆದರೂ ಸ್ವಲ್ಪವೂ ಮರೆಯದ, ಫೈಲನ್ನೂ ಎಸೆಯದೆ ಇಟ್ಟುಕೊಳ್ಳುವಷ್ಟರ ಮಟ್ಟಿಗೆ ಪ್ರಭಾವಿಸಿದ್ದು ಶರ್ಮಾ ಅವರ ತರಬೇತಿ.
ಅಷ್ಟರಲ್ಲಾಗಲೇ ಕೃಷಿ ಬರವಣಿಗೆ ಶುರು ಮಾಡಿದ್ದ ನನಗೆ ಸ್ಪಷ್ಟ ದಿಕ್ಕು-ದೆಸೆ ತೋರಿಸಿದ ಕಾರ್ಯಾಗಾರ ಅದು. ಶರ್ಮಾ ಅವರು ಸೆಷನ್ಸ್‌ಗಳನ್ನು ನಡೆಸಿದ ರೀತಿ, ಅದಕ್ಕೆ ನಡೆಸಿದ್ದ ತಯಾರಿ, ಕಂಚಿನ ಧ್ವನಿಯಲ್ಲಿ ಸ್ಪಷ್ಟವಾಗಿ ತಿಳಿಸುತ್ತಿದ್ದ ವಿಷಯಗಳು, ಫಕ್ಕನೆ ನಗುವುದು, ಮಾತಿಗಿಂತ ಬರೆಯುವುದಕ್ಕೆ ಹೆಚ್ಚಿನ ಆದ್ಯತೆ, ಬರವಣಿಗೆಗೆ ಪೂರಕವಾಗಿ ಕೃಷಿಕರ ಹೊಲಗಳಿಗೆ ಭೇಟಿ … ಎಲ್ಲವೂ ಒಂದಕ್ಕೊಂದು ಬೆಸೆದುಕೊಂಡಿದ್ದವು ಹಾಗೂ ಪರಸ್ಪರ ಪೂರಕವಾಗಿದ್ದವು.
ತರಬೇತಿಯ ಭಾಗವಾಗಿ ಪೋಸ್ಟ್ ಕಾರ್ಡ್ ಬರೆಸಿದ್ದರು. ಒಂದು ಪುಟ್ಟ ಪ್ರಬಂಧ ಬರೆಯಲು ಹೇಳಿದಾಗ ನಾನು ರೀಲ್ ಕ್ಯಾಮರಾ ಬಳಸುವಾಗ ಆದ ಫಜೀತಿಗಳ ಬಗ್ಗೆ ಬರೆದಿದ್ದೆ. ಆ ಪ್ರಬಂಧ ಕೂಡಾ ನನ್ನ ಫೈಲಿನಲ್ಲಿದೆ.
ಒಂದು ತರಬೇತಿಯನ್ನು ಹೇಗೆ ನಡೆಸಬೇಕು, ಸಮಯ ಪಾಲನೆ, ಏನೇನು ತಯಾರಿ ಮಾಡಿಕೊಳ್ಳಬೇಕು ಎಂಬುದಕ್ಕೆ ದಿಕ್ಸೂಚಿ ಅದು. ಎಲ್ಲೂ ಚೂರು ಗೊಂದಲವಿಲ್ಲ, ಅದು ತಂದಿಲ್ಲ, ಇದು ತಂದಿಲ್ಲ ಎಂಬ ಹುಡುಕಾಟವಿಲ್ಲ. ಫೈಲು, ಸ್ಟೆಪ್ಲರ್, ಟೇಪು, ಕತ್ತರಿ, ದಾರ ಇತ್ಯಾದಿ ಸಣ್ಣ ಸಣ್ಣ ವಸ್ತುಗಳನ್ನೂ ಅವರೇ ತಂದಿದ್ದರು ಅಥವಾ ಅಲ್ಲಿ ಇರುವಂತೆ ಜಾಗ್ರತೆ ವಹಿಸಿದ್ದರು.
ಅದು ನಮಗೆ ಬರೀ ಬರವಣಿಗೆಯ ಪಾಠವಷ್ಟೇ ಅಲ್ಲ, ಸ್ವಯಂಸೇವಾ ಸಂಸ್ಥೆಗಳಲ್ಲಿ ಹೇಗೆ ತರಬೇತಿಗಳನ್ನು ಆಯೋಜಿಸಬೇಕು ಎಂಬುದನ್ನೂ ಕಲಿಸಿತು.
ಅಂದು ತರಬೇತಿಯಲ್ಲಿ ಭಾಗವಹಿಸಿದ್ದವರ ಪೈಕಿ ಬರವಣಿಗೆಯನ್ನು ಗಟ್ಟಿಯಾಗಿ ಹಿಡಿದವನು ನಾನೊಬ್ಬನೇ ಅನಿಸುತ್ತದೆ. ಉಳಿದವರು ಈಗಲೂ ನನಗೆ ಪರಿಚಯವಿದ್ದು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಯಾವಾಗಲಾದರೊಮ್ಮೆ ಬರೆಯುವುದೂ ಉಂಟು.
2009ರಲ್ಲಿ ನನಗೆ ಚರಕ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಬಂದಿತು. ಸಮಾರಂಭದಲ್ಲಿ ಶರ್ಮಾ ಜೊತೆಯಾದರು. ಬರವಣಿಗೆಗೆ ಸಾಮು ಹಿಡಿದ ಗುರುಗಳ ಜೊತೆಗೆ ಪ್ರಶಸ್ತಿ ಸ್ವೀಕರಿಸುವ ಅವಕಾಶ ಒದಗಿತ್ತು. ಅದೊಂದು ಅತೀವ ಸಂತೋಷ ಕೊಟ್ಟ ಘಳಿಗೆ.
ಇತ್ತೀಚಿನ ವರ್ಷಗಳಲ್ಲಿ ಕೃಷಿ ಬರವಣಿಗೆಯ ಜೊತೆಗೆ ಪ್ರಬಂಧ ಹಾಗೂ ಕಥೆಗಳನ್ನು ಬರೆಯತೊಡಗಿದ್ದೇನೆ. ಅವು ಸುಧಾ, ಮಯೂರ ಪತ್ರಿಕೆಗಳಲ್ಲಿ ಪ್ರಕಟವಾದಾಗ ಶರ್ಮಾ ಅವರಿಂದ ತಪ್ಪದೇ ನಾಲ್ಕು ಸಾಲು ಮೆಚ್ಚುಗೆಯ ಸಂದೇಶ ಬಂದಿರುತ್ತದೆ. ಅದು ಕಿರಿಯರಿಗೆ ಅವರು ನೀಡುವ ಉತ್ತೇಜನ.
ಕಾಲು ಶತಮಾನಗಳಿಂದ ಶರ್ಮಾ ಅವರು ಚೂರೂ ಬದಲಾಗಿಲ್ಲ. ಅದೇ ನಗು, ಅದೇ ಆತ್ಮೀಯತೆ. ನೋಡಲಿಕ್ಕೂ ಹಾಗೇ ಇದ್ದಾರೆ.

- ಮಲ್ಲಿಕಾರ್ಜುನ ಹೊಸಪಾಳ್ಯ, ತುಮಕೂರು, ಕೃಷಿ ಸಂವಹನಕಾರರು





