ಅರೇ ಅವರೇ ವಾಸುದೇವ ಶರ್ಮ – ವಿಜಯಕುಮಾರ್ ಎನ್.

ಎಂಟನೇ ತರಗತಿ ಮಗುವೊಂದು ನನಗೆ ವಾಸುದೇವ ಶರ್ಮಾ ಅವರನ್ನ ಪರಿಚಯ ಮಾಡಿಸಿದ್ದು. ಅದೊಂದು ದಿನ ೮ ನೇ ತರಗತಿಯವರಿಗೆ ಪಾಠ ಮಾಡುತ್ತಾ ಇದ್ದೆ. ಒಬ್ಬ ಬಾಲಕ ಸಾರ್ ನಾನು ಎರಡು ದಿನ ಶಾಲೆಗೆ ಬರೋಲ್ಲಾ ಸಾರ್ ಅಂದ. ಯಾಕೆ ಎಂದು ಕೇಳಿದ್ದಕ್ಕೆ ಬೆಂಗಳೂರಿನಲ್ಲಿ ಕೃಷಿ ಮೇಳಕ್ಕೆ ನಮ್ಮಪ್ಪನ ಜೊತೆ ಹೋಗ್ತಾ ಇದೀನಿ ಸಾರ್ ಅಂದಿದ್ದ. ಅದಕ್ಕೆ ನಾನು ಗುಡ್, ಈ ತರಹದ ಕಾರ್ಯಕ್ರಮಗಳಿಗೆ ಹೋಗಬೇಕು. ನಿಮ್ಮ ಜ್ಞಾನ ಹೆಚ್ಚುತ್ತೆ. ಬಂದ ಮೇಲೆ ತರಗತೀಲಿ ಎಲ್ಲಾ ಸ್ನೇಹಿತರ ಜೊತೆ ಏನೇನು ನೋಡಿದೆ ಅಂತ ಹಂಚ್ಕೋಬೇಕು ಅಂತ ಹೇಳಿ ಕಳಿಸಿದ್ದೆ.
ಕೃಷಿ ಮೇಳಕ್ಕೆ ಹೋಗಿ ಬಂದವನು ಪುಟ್ಟ ಜೇಬಲ್ಲಿ ಹಿಡಿಸೋ ಅಂತ ಪುಸ್ತಕ ತಕ್ಕೊಂಡು ಬಂದಿದ್ದಾ. ನೋಡಿ ಸಾರ್ ಕೃಷಿ ಮೇಳದಲ್ಲಿ ಈ ಬುಕ್ ಫ್ರೀ ಆಗಿ ಕೊಡ್ತಾ ಇದ್ರು. ಇದೇನು ಅಂತ ಎಲ್ಲರಿಗೂ ಓದಿ ಹೇಳಿ ಅಂದಿದ್ದಾ. ಅರೇ! ಇವ ತಂದಿದ್ದ ಪುಸ್ತಕ, ಇವಾ ಮಾತ್ರಾ ಏನಿದು ಅಂತ ಕೇಳ್ಬೇಕು, ಆದ್ರೆ ಎಲ್ಲರಿಗೂ ಓದಿ ಹೇಳೋಕೆ ಹೇಳ್ತಾ ಇದಾನಲ್ಲಾ! ಅಂತ ಅನ್ನಿಸಿತು. ಅನ್ನಿಸಿದ್ದಕ್ಕೆ ಅಷ್ಟು ಗಮನ ಕೊಡದೇ, ಪುಟ್ಟ ನೀನೇ ಓದೋ ಪುಸ್ತಕಾ ಅನ್ನುತ್ತಲೇ, ಅದೇನು ಪುಸ್ತಕಾ ಅಂತ ಇಸ್ಕೊಂಡು ನೋಡ್ದೆ. ಇದು ತುಂಬಾ ಸರಳವಾಗಿದೆ ನೀನೇ ಓದಬಹುದು ಅಂತ ಹೇಳಿದ್ರೂ, ನೀವೇ ಎಲ್ಲರಿಗೂ ಓದಿ ಹೇಳಿ ಸಾರ್ ಅಂತ ಮುಗಿ ಬಿದ್ದವನ ತರಹ ಕೇಳ್ತಾ ಇದ್ದ. ಇಲ್ಲಾ ಅನ್ನೋದು ನನಗೆ ಸ್ವಲ್ಪ ಕಷ್ಟವೇ. ಅದ್ರಲ್ಲೂ ಓದಿ ಹೇಳಿದರೆ ನಾನು ಕಳ್ಕೋಳ್ಳೋದು ಏನೂ ಇರದಿದ್ದ ಕಾರಣಕ್ಕೆ ಆಯ್ತು ಮುಂದಿನ ತರಗತೀಲಿ ಹೇಳ್ತೀನಿ. ಈ ಪುಸ್ತಕಾ ನನ್ನ ಹತ್ರನೇ ಇರಲಿ ಕೂತು ನೋಡ್ತೀನಿ ಪೂರ್ತಿ ಅಂತ್ಹೇಳಿ ನನ್ನ ಟೇಬಲ್ ಹತ್ರ ಬಂದು ಕೂತವ್ನೇ ಪುಸ್ತಕದಲ್ಲಿರೋದನ್ನಾ ಹೇಗೆ ಹೇಳಬೇಕು ಾಂತ ಮನಸಲ್ಲೇ ಯೋಜನೆ ಹಾಕ್ತಾ, ಓದ್ತಾ ಹೋದೆ. ಅರೇ..! ಯಾರ publication ಇದು ಅಂತೆಲ್ಲಾ ತಿರುಗಿಸಿ ನೋಡಿದೆ. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಪುಸ್ತಕ. ಅದರಲ್ಲಿ ಆಯೋಗದ ಅಧ್ಯಕ್ಷರ ಹಾಗೂ ಸದಸ್ಯರುಗಳ ಹೆಸರುಗಳಿದ್ದವು. ಅದರಲ್ಲಿ ಒಂದು ಹೆಸರು ವಾಸುದೇವ ಶರ್ಮಾ. ಅಗ ಅದು ಪರಿಚಿತವಲ್ಲದ ಹೆಸರು. ಪುಸ್ತಕ ಓದಿದೆ, ಹೇಗೆ ಹೇಳಬೇಕು ಎನ್ನುವ ಯೋಜನೆಯನ್ನೂ ಹಾಕಿದೆ. ಆದರೆ ಶನಿವಾರ ಭಾನುವಾರ ಅಂತೇಳಿ ಎರಡು ಮೂರು ದಿನ ಕಳೆದುಹೋಯಿತು. ಆ ದಿನಗಳಂದು ಮತ್ತೇನೇನೋ ಓದುವಾಗ “ಶಿಕ್ಷೆರಹಿತ ಶಿಕ್ಷಣ” (ಬರಹದ ಶೀರ್ಷಿಕೆ ಸ್ವಲ್ಪ ಬೇರೆಯೇ ಇರಬಹುದು ನನ್ನ ನೆನಪಿನಿಂದ ಇಲ್ಲಿ ಬರೆದದ್ದು) ಎಂಬ ಒಂದು ಬರಹ ನಮ್ಮದೇ (ಶಿಕ್ಷಣ) ಇಲಾಖೆಯ ಮಾಸಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅರೇ ಅವರೇ ವಾಸುದೇವ ಶರ್ಮಾ ಎಂದು ಓದಿಕೊಂಡೆ.
ನನಗೆ ಇನ್ನೂ ನೆನಪಿದೆ. ತರಗತಿಗೆ ನಾನು ಹೋಗುವ ತನಕವೂ ಕಾಯದೆ, ಅರ್ಧ ದಾರಿಗೇ ಬಂದು ಮಕ್ಕಳು ನನ್ನನ್ನು ಕರೆದೊಯ್ಯುವುದು. ಕರೆದೊಯ್ಯುವಾಗಲೇ ಹಿಂದಿನ ತರಗತಿಯಲ್ಲಿ ಮಾಡಿದ promises ಬಗ್ಗೆ ನೆನಪಿಸುತ್ತಾ, ತಪ್ಪುವ ಹಾಗಿಲ್ಲ ಎಂದು ನಿರ್ಬಂಧಿಸುತ್ತಾ ಕರೆದೊಯ್ಯುವ ಪ್ರತಿ ದಿನದ ಪ್ರಕ್ರಿಯೆಯ ಭಾಗವಾಗಿ ಕೇಳಿದ, ʻನೋಡುದ್ರಾ ಸಾರ್ ಆ ಪುಸ್ತಕಾನಾ? ಇವತ್ತಾದ್ರೂ ಹೇಳ್ತೀರಾ?ʼ ಎಂದು ಕೇಳುತ್ತಲೇ ಜೊತೆ ಜೊತೆಯಲ್ಲಿ ನಡೆದು ಬಂದ. ತರಗತಿಯಲ್ಲಿ ಆ ಪುಸ್ತಕದ ಬಗ್ಗೆ ಹೇಳತೊಡಗಿದೆ. ಮೌನ ಆವರಿಸಿತ್ತು. ಆಗಾಗ ಮೌನ ಮುರಿದು ಗುರಿ ತಪ್ಪದ ಬಾಣದಂತೆ ಎರಗುವ ರೀತಿಯಲ್ಲಿ ಪ್ರಶ್ನೆಗಳನ್ನು ಕೇಳುತ್ತಿದ್ದರು ಮಕ್ಕಳು. ನಮಗೆ ಇಷ್ಟು ಅನ್ಯಾಯ ಆಗುತ್ತಿದೆಯೇ? ನೀವು ಹೇಳುತ್ತಿರುವುದು ನಿಜವಾ ಅಥವಾ ಇದುವರೆಗೂ ನಾವು ನಂಬಿರುವುದು (ನಮಗೆ ಇದುವರೆಗೂ ನಂಬಿಸಿರುವುದು) ನಿಜವಾ ಎಂದು ಪ್ರಶ್ನಿಸಿದಾಗ. ನೋಡಿ ನಮ್ಮ ಇಲಾಖೆಯ ಮಾಸಪತ್ರಿಕೆಯಲ್ಲೇ ಶಿಕ್ಷಕರಿಗೆಂದೇ ಇರುವ ಪತ್ರಿಕೆಯಲ್ಲಿ ವಾಸುದೇವ ಶರ್ಮಾ ಎನ್ನುವವರು ಬರೆದಿರುವ ʻಶಿಕ್ಷೆರಹಿತ ಶಿಕ್ಷಣʼ ಎಂಬ ಲೇಖನ ಬಂದಿದೆ. ಶಿಕ್ಷಕರಿಗೆ ತಿಳಿವಳಿಕೆ ಮೂಡಿಸುವ ಸಲುವಾಗಿ ಇರುವ ಮಾಸಪತ್ರಿಕೆಯಲ್ಲಿ ಬಂದಿದೆ ಎಂದೆ. ಅದನ್ನೂ ಓದಿ, ನಾವು ತಿಳಿಯಬೇಕು ಎಂದರು ಮಕ್ಕಳು.
ಓದಿ ತಿಳಿಸಿದಾಗ ನಮಗೆ ಈ ಬರಹದ ಪ್ರತಿಗಳು ಬೇಕು, ನಾವು ನಮ್ಮದೇ ಸಂಘ ಕಟ್ಟಿಕೊಳ್ಳುತ್ತೇವೆ. ಕಲ್ಯಾಡಿ ಮಕ್ಕಳ ಸಂಘ ಎಂದು ಹೆಸರಿಡುವೆವು, ಬ್ಯಾನರ್ ಕೂಡ ಬೇಕು. ನಾವೇ ಐದೈದು ರೂಪಾಯಿ ಹಾಕುತ್ತೇವೆ ಎಂದೆಲ್ಲಾ ಹೇಳಿದರು. ಅಯ್ಯೋ ಬೇಡ. ನಾನೇ ನಿಮಗೆ ಎಲ್ಲವನ್ನೂ ಹಾಕಿಸಿಕೊಡುವೆ ಎಂದು ಹೇಳಿದೆ. ನಂತರ ತರಗತಿ ಮುಗಿದಿತ್ತು. ಆದರೆ ನಿಜವಾಗಿಯೂ ನನ್ನ ಮನಸ್ಸನ್ನು ಬಿಸಿಯಾಗಿಸಿದ್ದರು ಮಕ್ಕಳು. ಆ ಪುಸ್ತಕ, ವಾಸುದೇವ ಶರ್ಮಾರವರ ಲೇಖನ, ಮಕ್ಕಳು ಕೇಳಿದ ಪ್ರಶ್ನೆಗಳು, ಅವರ ಕಿಚ್ಚು, ಸಮಾಜ ಮತ್ತು ಶಿಕ್ಷಣ, ಶಿಕ್ಷಕರು, ಪೋಷಕರು ಅವರನ್ನು ನಡೆಸಿಕೊಂಡಿರುವ ರೀತಿ – ಎಲ್ಲವೂ ಸೇರಿ ಮನಸ್ಸೆಂಬುದು ಮೊಸರು ಕಡೆಯುವ ಗಡಿಗೆಯಾಗಿತ್ತು. ಮುಂದಾಗಬಹುದಾದ ಸನ್ನಿವೇಶಗಳ ಅಂದಾಜು ಸಿಕ್ಕೇ ಬಿಟ್ಟಿತ್ತು. ಮತ್ತೆ ಇನ್ನೂ ಯೋಚಿಸಿದೆ. ವಾಸುದೇವ ಶರ್ಮಾರವರ ಬರಹ ಸಮಾಜದಲ್ಲಿ ರೂಢಿಯಲ್ಲಿರುವ ಸಾಮಾಜಿಕ ಸಮಸ್ಯೆಗಳನ್ನು ಪ್ರಶ್ನಿಸಿರುವುದು ಮತ್ತು ಅದು ನಮ್ಮದೇ ಇಲಾಖೆಯಲ್ಲಿ ಪ್ರಕಟವಾಗಿರುವುದು ನನಗೊಂದು ಅಂದಾಜು ಸಿಗುವಂತೆ ಮಾಡಿತ್ತು. ಅದು ಇವರು ಮಕ್ಕಳ ಹಕ್ಕುಗಳನ್ನು ತುಂಬಾ ಗಂಭೀರವಾಗಿ ಪರಿಗಣಿಸುವವರಿರಬೇಕು, ಹಾಗಾಗಿಯೇ ಇವರ ಬರಹ ಇದರ ವಿರುದ್ಧದ ಅಲೆ ಹೆಚ್ಚಿರುವ ನಮ್ಮ ಇಲಾಖೆಯ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಇವರ ಬರಹವನ್ನು ಬಳಸುವ ಮುನ್ನ ಇವರನ್ನು ಒಮ್ಮೆ ಮಾತನಾಡಿಸುವ, ಅವರ ಮಾತು ಇನ್ನೊಂದು ಅಂದಾಜಿಗೆ ಸಹಾಯ ಮಾಡಿ ಕಾರ್ಯ ರೂಪಿಸಲು ಸಹಾಯವಾಗಬಹುದು ಎಂದೆನಿಸಿ ಕರೆ ಮಾಡಿಯೇ ಬಿಟ್ಟೆ. ಅವರು ಧಾರಾಳವಾಗಿ ಬಳಸಬಹುದು ಎಂದು ಹೇಳಿಬಿಟ್ಟರು. ಆಗಲೇ ನನಗೆ ಖಾತರಿಯಾಯಿತು ಇವರು ಮಕ್ಕಳ ಹಕ್ಕುಗಳನ್ನು ತುಂಬಾ ಗಂಭಿರವಾಗಿ ಪರಿಗಣಿಸುವವರು ಎಂದು. ಅವರ ಟೋನ್ ಮತ್ತೆ ಮತ್ತೆ ನನಗೆ ಖಾತರಿಪಡಿಸಿತ್ತು. ನಂತರ ನಡೆದ ವಿದ್ಯಮಾನಗಳು ಅದನ್ನು ಪುಷ್ಟೀಕರಿಸಿದವು. ಮಕ್ಕಳ ಹಕ್ಕಿಗೆ ಶಕ್ತಿ ತುಂಬುವ ರೀತಿಯಲ್ಲೇ ಸುಖಾಂತ್ಯವಾಯಿತು. ನಂತರದಲ್ಲಿ ಆ ಪ್ರಕರಣದಲ್ ನಂತರ ನಮ್ಮಲ್ಲಿ ಅಷ್ಟಾಗಿ ಮಾತುಕತೆ ಇರಲ್ಲಿಲ್ಲ. ಇಂದಿಗೂ ಅಷ್ಟೆ. ಆದರೆ ಮಾತನಾಡುವುದು ಎಂದರೆ ಪದಗಳ ಮುಖಾಮುಖಿ ಬದಲಾಯಿಸಿಕೊಳ್ಳುವಿಕೆಯಲ್ಲ. ಜವಾಬ್ದಾರಿಗಳನ್ನು ನಿಭಾಯಿಸಿಯೂ ಕೂಡಾ ಹೆಚ್ಚು ಬಲವಾದ ಸಂಬಂಧಗಳನ್ನು ಕಟ್ಟಬಹುದು ಎಂಬುದನ್ನು ಪರಿಚಯಿಸಿದ ವ್ಯಕ್ತಿ ವಾಸುದೇವ ಶರ್ಮಾರವರು. ಮಕ್ಕಳು ಉಗಿಬಂಡಿ ಆಟವಾಡುವಾಗ ಮುಂದಿನವರ ಅಂಗಿಯನ್ನು ಹಿಡಿಯುವಂತೆ ವಾಸುದೇವ ಶರ್ಮಾರವರನ್ನು ಹಿಡಿದಿದ್ದೀನೇನೋ ಕ್ಷಮೆಯಿರಲಿ. ಇಂತಹ ಪ್ರಕರಣಗಳಲ್ಲಿ ಒಬ್ಬರಿಗೊಬ್ಬರು ಹಿಡಿದುಕೊಂಡಾಗಲೇ ನ್ಯಾಯ ದೊರಕಿಸುವ ಪ್ರಕ್ರಿಯೆಗಳಲ್ಲಿ ತೊಡಕಾಗುವುದು. ಪ್ರತಿಯೊಬ್ಬರೂ ಒಬ್ಬರಿಗೊಬ್ಬರು ಅಂಟಿಕೊಳ್ಳದೇ ಅವರವರ ಕಾರ್ಯ ನಿಭಾಯಿಸುತ್ತಾ ಹೋಗಬೇಕು ಅನ್ನುವ ಪಾಠವನ್ನು ಕಲಿತುಕೊಂಡೆ. ಈ ನಡೆ ನನಗೆ ಹೆಚ್ಚು ಪ್ರಿಯವಾಯಿತು. ಏಕೆಂದರೆ ಇದರಲ್ಲಿ ರಕ್ಷಣೆಗಾಗಿ ಒಬ್ಬರನ್ನೊಬ್ಬರು ಹಿಡಿದುಕೊಂಡು ಪ್ರಕ್ರಿಯಯನ್ನು ದುರ್ಬಲಗೊಳಿಸದೆ, ಪ್ರತಿಯೊಬ್ಬರೂ ತಮ್ಮ ತಮ್ಮ ಜವಾಬ್ದಾರಿ ನಿಭಾಯಿಸಿ ದಮನಿತರಿಗೆ ನ್ಯಾಯ ಕೊಡಿಸಬಹುದು. ಇದು ನನಗೆ ವಾಸುದೇವ ಶರ್ಮಾ ರವರ ಮೇಲೆ ನಂಬಿಕೆ ಪ್ರೀತಿ ವಿಶ್ವಾಸವನ್ನು ಹೆಚ್ಚು ಮಾಡಿತು.
ವಾಸುದೇವ ಶರ್ಮಾರವರನ್ನು ನೋಡಿದ್ದು ಎರಡು ಬಾರಿ. ಒಮ್ಮೆ ಕೆಲಸದ ನಿಮಿತ್ತ ಅಂದು ಒಂದೇ ಒಂದು ಮಾತು. ಅದು ಅವಶ್ಯಕತೆ ಇರಲಿಲ್ಲವೆನ್ನುವಂತೆ, ಆದರೂ ಬಿಡಬಾರದು ಎನ್ನುವಂತ, ಅದರಲ್ಲಿ ಒಂದು ಪ್ರಶ್ನೆ, ನಾನು ಕೊಟ್ಟ, ನನಗೇ ಅಸಮಂಜಸವೆನಿಸಿದ ಉತ್ತರದಲ್ಲಿ ಮುಗಿದಿತ್ತು. ಇನ್ನೊಮ್ಮೆ ಹೆಗ್ಗೋಡಿನ ನಿನಾಸಂನಲ್ಲಿ ಅಕ್ಟೋಬರ್ ತಿಂಗಳಲ್ಲಿ ನಡೆಯುವ cultural course ಒಂದರಲ್ಲಿ. ಅದೂ ಬಹುತ್ವದ ಬಗ್ಗೆ ನಡೆದ ಕೋರ್ಸ್ ಒಂದರಲ್ಲಿ. ಅಲ್ಲೂ ಏನೂ ಮಾತಿಲ್ಲ. ಅವರು ನನ್ನ ಜೊತೆ ಮಾತು ಆಡದಿದ್ದರೂ, ಯಾರೋ ಹೀಗೆ ನನ್ನನ್ನು ಮಾತನಾಡಿಸುತ್ತಿದ್ದರು. ನಾನೂ ಮಾತನಾಡುತ್ತಿದ್ದೆ. ಅದು ಆಸುಪಾಸು ನನ್ನದೇ ವಯಸ್ಸಿನ ಯುವತಿ. ಕಣ್ಣ ಹುಬ್ಬು ಮೇಲೆತ್ತಿ ಏನು ನಡೆಯುತ್ತಿದೆ ಎಂದು ಪ್ರಶ್ನೆ ರೀತಿಯಲ್ಲಿ ಅನ್ನಿಸುವಂತೆ ನನ್ನತ್ತ ಮುಖಭಾವ ಮಾಡಿದ್ದರು. ನಾನು ಅದಕ್ಕೆ ಪ್ರತ್ಯುತ್ತರವಾಗಿ ಮಾತಿನಲ್ಲಿ ಅಲ್ಲ, ಚಿಕ್ಕದಾಗಿ ಅವರಿಗೆ ಮಾತ್ರ ಗೊತ್ತಾಗುವಂತೆ ಭುಜ ಮತ್ತು ಕತ್ತು ಅಲುಗಾಡಿಸಿ “nothing” ಎನ್ನುವಂತಹ ಸಂವಹನ ಬಿಟ್ಟರೆ ನಾವು ನೇರವಾಗಿ ಮಾತನಾಡಿದ್ದೇ ಇಲ್ಲ. ಇದು ಶರ್ಮಾ ಸರ್ ನಿಮ್ಮ ನೆನಪಿನಲ್ಲಿ ಉಳಿದಿರಲಿಕ್ಕಿಲ್ಲ, ನನಗೆ ಉಳಿದಿದೆ. ಆ ಯುವತಿ ನೆನಪಿಲ್ಲ, ಆದರೆ ವಾಸುದೇವ ಶರ್ಮಾರವರ ಆ ಕೇರಿಂಗ್ ಎನ್ನಿಸುವ gesture ನೆನಪಿನಲ್ಲುಳಿದುಬಿಟ್ಟಿದೆ. ನೆನಪಾದಾಗಲೆಲ್ಲಾ ನಗು ತರಿಸಿದೆ.
ಇನ್ನೊಂದು ಪ್ರಕರಣದಲ್ಲಿ ನಾನು ಏನಾಗಿದೆ ಎಂಬ ಒಂದು ಅಂಶವನ್ನೂ ತಿಳಿಸಿದ್ದೆ. ಇಲ್ಲಿ ದಮನಿತರಿಗೆ (ಮಕ್ಕಳಿಗೆ) ನನ್ನದೇ ಆದ ರೀತಿಯಲ್ಲಿ ನ್ಯಾಯವನ್ನು ದೊರಕಿಸುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡೆ. ಎಲ್ಲಾ ಕಡೆಯಲ್ಲಿ ಜವಾಬ್ದಾರರಾದ ಎಲ್ಲರೂ ಅವರವರ ಜವಾಬ್ದಾರಿಯನ್ನು ನಿಭಾಯಿಸುವಂತಹ ಸನ್ನಿವೇಶವು ಸೃಷ್ಟಿಯಾಗುತ್ತಾ ಹೋಯಿತು. ನಿಭಾಯಿಸದವರು ನ್ಯಾಯದ ಮುಂದೆ ಸೋತು ಹೋದ ಸನ್ನಿವೇಶಗಳು ನಡೆದುಹೋದವು. ಆಪತ್ಕಾಲದಲ್ಲಿ ಒಬ್ಬರನ್ನು ಬಲಿಯಾಗಿಸಿ ತನ್ನ ಸಹಜ ಪ್ರಕ್ರಿಯೆಗಳನ್ನು ಉಳಿಸಿಕೊಳ್ಳುವ ಸಮಾಜದ ನಡೆಯನ್ನು ಹೇಗೆ ನಿಭಾಯಿಸಬೇಕು ಎನ್ನುವ ತಿಳಿವಳಿಕೆಯನ್ನು ನನ್ನ ಜೊತೆ ಮಾತನಾಡದೇ ಪರಿಚಯಿಸಿದವರು ವಾಸುದೇವ ಶರ್ಮಾರವರು. ಸಾಮೂಹಿಕವಾಗಿ ಬದಲಾವಣೆ ತರಬೇಕು, ಪ್ರತಿಯೊಬ್ಬರನ್ನೂ ಜವಾಬ್ದಾರರನ್ನಾಗಿಸುವ ಚಿಂತನೆ ಮತ್ತು ನಡೆಯನ್ನು ತಮ್ಮ ಜೀವನದ ನಡೆಯಾಗಿಸಿಕೊಂಡವರಂತೆ ನನಗೆ ಕಂಡವರು ವಾಸುದೇವ ಶರ್ಮಾರವರು. ಇಂದು ಆ ಪ್ರಕರಣ ವ್ಯವಸ್ಥೆಯಲ್ಲಿ ಬಹು ದೊಡ್ಡ ಮಟ್ಟದ ಬದಲಾವಣೆಯನ್ನು ತಂದಿದೆ. ಆ ಪ್ರಕರಣದಲ್ಲಿ ಪ್ರತಿಯೊಬ್ಬರೂ ನಿರ್ವಹಿಸಿದ ಜವಾಬ್ದಾರಿಯಿಂದಾಗಿ ತನಿಖಾ ವರದಿಯ ಶಿಫಾರಸ್ಸಿನಂತೆ ರಾಜ್ಯದಾದ್ಯಂತ ಮಕ್ಕಳ ನ್ಯಾಯ ಕಾಯಿದೆ, ಪೋಕ್ಸೋ, ಮಕ್ಕಳ ರಕ್ಷಣಾ ನೀತಿಯಂತಹ ತರಬೇತಿಗಳು ಎಲ್ಲಾ ಹಂತದಲ್ಲಿ ನಡೆಯುವಂತಾಯಿತು.
ಸಾಮಾಜಿಕವಾಗಿ ಆಗಬೇಕಾದ ಕಾರ್ಯಕ್ಕೆ ದೂರ ದೂರ ಇದ್ದುಕೊಂಡೇ, ದೊಡ್ಡ ವಿಚಾರಗಳಿಗೆ ಗಂಭೀರವಾಗಿ ಚಿಕ್ಕದಾಗಿ ಸಂವಹಿಸಿ ಇಷ್ಟು ವಿಶ್ವಾಸಾರ್ಹ ಸಂಬಂಧ ಬೆಳಸಬಹುದಾದರೆ, ಈ ರೀತಿಯ ಸಂಬಂಧಗಳು ಇನ್ನೂ ಗಟ್ಟಿಯಾಗಿ ಬೆಳೆಯಲಿ ಎನ್ನುವ ಅಲೋಚನೆಯನ್ನು ನನ್ನಲ್ಲಿ ಹುಟ್ಟುಹಾಕಿದ್ದೀರಿ. ನಿಮ್ಮ ಈ ನಡೆಯಿಂದಾಗಿ ಖುಷಿ ಇದೆ. ಜೀವನ ಸಾರ್ಥಕವಾಗಿದೆ.
- ವಿಜಯಕುಮಾರ್ ಎನ್. ಅರಸೀಕೆರೆ.






